*ಯೋಗೀಶ್ ಕುಂಭಾಸಿ
ಕುಂದಾಪುರ: 200 ಕಾಲೇಜುಗಳ ವ್ಯಾಪ್ತಿಯನ್ನು ಹೊಂದಿರುವ ಮಂಗಳೂರು ವಿಶ್ವ ವಿದ್ಯಾನಿಲಯ ಈ ವರ್ಷ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ನಿರ್ಲಕ್ಷ್ಯದ ಧೋರಣೆ ಅನುಸರಿಸುತ್ತಿದ್ದು, ವಿವಿಯ ಗೊಂದಲದ ನಿಲುವಿನಿಂದ ಅಂಕಪಟ್ಟಿಯಲ್ಲಿ ವ್ಯತ್ಯಾಸ, ಫಲಿತಾಂಶದಲ್ಲಿ ಗೊಂದಲ ಮೊದಲಾದ ಅವಾಂತರಗಳಿಂದ ಹಲವಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ ಎಂದು ಕುಂದಾಪುರ ಭಂಡಾರ್ಕಾಸ್ ಕಾಲೇಜು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿ ಶ್ರೀರಾಜ್ ಕೆಲವು ಕಾಲೇಜು ವಿದ್ಯಾರ್ಥಿಗಳ 1ನೇ, 3ನೇ ಸೆಮಿಸ್ಟರ್‌ನ ಫಲಿತಾಂಶ ನೀಡದೇ ವಿದ್ಯಾರ್ಥಿಗಳ ಭವಿಷ್ಯದ ನಡುವೆ ಚೆಲ್ಲಾಟವಾಡಲಾಗುತ್ತಿದೆ. ಈ ತನಕ ೨ನೇ ಮತ್ತು ೪ನೇ ಸೆಮಿಸ್ಟರ್ ಪರೀಕ್ಷೆ ಮುಗಿದು 3ನೇ ಮತ್ತು 5ನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸರಿಯಾದ ಮತ್ತು ಸೂಕ್ತ ರೀತಿಯ ಫಲಿತಾಂಶ ವಿದ್ಯಾರ್ಥಿಗಳ ಕೈಗೆ ಬಂದಿಲ್ಲ. ಇದರಿಂದ ವಿದ್ಯಾರ್ಥಿಗಳು ತುಂಬಾನೇ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದರು.

ವಿದ್ಯಾರ್ಥಿನಿ ಜ್ಯೋತಿ ಮಾತನಾಡಿ, 1ನೇ, 3ನೇ, 5ನೇ ಸೆಮಿಸ್ಟರ್ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಕೆಲವರ ಫಲಿತಾಂಶ ಈ ತನಕ ಬಂದಿಲ್ಲ, ವಿ.ವಿಯ ವೆಬ್ ಸೈಟ್‌ನಲ್ಲಿ ಕೂಡ ಸ್ಪಷ್ಟವಾಗಿಲ್ಲ. ಪರೀಕ್ಷೆಗೆ ಹಾಜರಾದವರ ಫಲಿತಾಂಶ ಇಲ್ಲ, ಗೈರು ಹಾಜರಾದವರ ಫಲಿತಾಂಶ ದೊರಕುತ್ತಿದೆ. ಉದಾಹರಣೆ ಓರ್ವ ವಿದ್ಯಾರ್ಥಿ ಪರೀಕ್ಷೆಗೆ ಗೈರು ಹಾಜರಾದರೂ ಸುಮಾರು 90 ಅಂಕಗಳು ಬಂದಿವೆ. ಆದರೆ ನಿಜಕ್ಕೂ ಪರೀಕ್ಷೆ ಬರೆದವರಿಗೆ ಗೈರು ಎಂದು ತೋರಿಸುತ್ತದೆ. ಕೆಲವರ ಆಂತರಿಕ ಅಂಕಗಳು ಆಯಾ ವಿಷಯಗಳ ಥಿಯರಿಯೊಂದಿಗೆ ಸೇರದೆ ಜೀರೋ ಎಂದು ತೋರಿಸಲಾಗುತ್ತಿದೆ. ಕೇಳಿದರೆ ಕಾಲೇಜು ಕಳುಹಿಸಿಲ್ಲ ಎನ್ನುವ ಉತ್ತರ ಸಿಗುತ್ತಿದೆ. ಕಾಲೇಜಿನಿಂದ ಕಳುಹಿಸಿದ ಬಗ್ಗೆ ದಾಖಲೆಗಳಿವೆ. ಇನ್ನೂ ಕೆಲವರ ಅಂಕಗಳಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ. ಕೆಲವರ ಅಂಕಗಳು ಉತ್ತೀರ್ಣವಾದರೂ ಅನುತೀರ್ಣವೆಂದು ಅಂಕಪಟ್ಟಿಯಲ್ಲಿ ತೋರಿಸುತ್ತಿದೆ ಎಂದರು.

ವಿದ್ಯಾರ್ಥಿನಿ ಸಂಗೀತಾ ಮಾತನಾಡಿ,ಸರಿಯಾದ ಅಂಕಪಟ್ಟಿ ಬಾರದೇ ಈಗಾಗಲೇ ಅಂತಿಮ ಪದವಿಯನ್ನು ಮುಗಿಸಿ ಹೋದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆಯಾಗುತ್ತಿದೆ. ಕೆಲವು ವಿದ್ಯಾರ್ಥಿಗಳು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾರೆ. ವಿ.ವಿಯ ಬೇಜವ್ದಾರಿಯಿಂದ ವಿದ್ಯಾರ್ಥಿವೇತನ, ವಸತಿ ನಿಲಯ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಅಂಕದಲ್ಲಿನ ವ್ಯತ್ಯಾಸದ ಬಗ್ಗೆ ಕೇಳಿದರೆ ಮರು ಮೌಲ್ಯಮಾಪನಕ್ಕೆ ಕೊಡಿ ಎನ್ನುತ್ತಿದ್ದಾರೆ. ವಿಷಯಕ್ಕೆ ತಲಾ 500 ಮರುಮೌಲ್ಯಮಾಪನಕ್ಕೆ ನೀಡಬೇಕಾಗುತ್ತದೆ ವಿವಿಯ ತಪ್ಪಿಗೆ ಪ್ರತಿ ವಿಷಯಕ್ಕು 500 ರೂ.ಕೊಡಲು ವಿದ್ಯಾರ್ಥಿಗಳು ಹಣದ ಗಿಡ ನೆಟ್ಟಿದ್ದಾರ ಎಂದು ಖಾರವಾಗಿ ಪ್ರಶ್ನಿಸಿದ ಅವರು ಈಗಾಗಲೆ ಪ್ರತಿಭಟನೆಗಳನ್ನು ನಡೆಸಿದರೂ ಪ್ರಯೋಜನಶೂನ್ಯವಾಗಿದೆ. ತಕ್ಷಣ ವಿವಿ ಸ್ಪಂದಿಸದೇ ಇದ್ದರೆ ವಿಶ್ವವಿದ್ಯಾನಿಯಲಕ್ಕೆ ಹೋಗಿ ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ವಿದ್ಯಾರ್ಥಿ ಶ್ರವಣ್ ಮಾತನಾಡಿ, ವಿವಿಯ ಬೇಜಬ್ದಾರಿಯಿಂದ ಆನೇಕ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಗೆ ಸಿಲುಕಿದೆ. ದೂರವಾಣಿ ಕರೆ ಮಾಡಿದರೆ ಸರಿಯಾದ ಪ್ರತಿಕ್ರಿಯೆ ಸಿಗುತ್ತಿಲ್ಲ. ಅಂಕಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯತ್ಯಾಸವಾಗಲು ಕಾರಣದ ಬಗ್ಗೆ ಆತಂಕಗಳು ಹುಟ್ಟಿಕೊಂಡಿವೆ. ಖಾಸಗಿಯಾಗಿ ಮೌಲ್ಯ ಮಾಪನಕ್ಕೆ ನೀಡಿದ್ದರಿಂದಲೂ ಈ ಸಮಸ್ಯೆ ಉಂಟಾಗಿದೆ. ತಕ್ಷಣ ವಿವಿ ಸ್ಪಂದಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.
Comments are closed.