ಕರಾವಳಿ

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಲು ವಕೀಲರ ಆಗ್ರಹ.

Pinterest LinkedIn Tumblr

loywr_protest_pic_1

ಮಂಗಳೂರು, ಜು.15: ಡಿವೈಎಸ್ಪಿ ಎಂ.ಕೆ. ಗಣಪತಿ ಅವರ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ಆಗ್ರಹಿಸಿ ಇಂದು ಮಂಗಳೂರು ವಕೀಲರ ಸಂಘದ ಸದಸ್ಯರು ಕಪ್ಪು ಬ್ಯಾಡ್ಜ್ ಧರಿಸಿ ಮಂಗಳೂರಿನ ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸುವ ಮೂಲಕ ವಿನೂತನ ರೀತಿಯ ಪ್ರತಿಭಟನೆಯನ್ನು ನಡೆಸಿದ್ದಾರೆ.

ಈ ಸಂದರ್ಭ ಸುದ್ಧಿಗಾರರ ಜೊತೆ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಎಸ್.ಪಿ. ಚೆಂಗಪ್ಪ ಅವರು, ಗಣಪತಿ ಅವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯನ್ನು ಡೆತ್ ಡಿಕ್ಲರೇಶನ್ ಎಂದು ಪರಿಗಣಿಸಬೇಕು. ಗಣಪತಿ ಆರೋಪ ಮಾಡಿರುವ ಸಚಿವ ಕೆ.ಜೆ. ಜಾರ್ಜ್, ಅಧಿಕಾರಿಗಳಾದ ಎ.ಎಂ. ಪ್ರಸಾದ್, ಪ್ರಣವ್ ಮೊಹಂತಿ ಮತ್ತು ಕೆಂಪಯ್ಯ ಅವರ ಮೇಲೆ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು.

loywr_protest_pic_2 loywr_protest_pic_3

ಡಿವೈಎಸ್‌ಪಿ ಗಣಪತಿ ಅವರು ಆತ್ಮಹತ್ಯೆಗೆ ಮುನ್ನ ಮಾಧ್ಯಮಕ್ಕೆ ನೀಡಿದ ಹೇಳಿಕೆಯ `ಡೈಯಿಂಗ್ ಡಿಕ್ಲರೇಶನ್’ನ್ನು ನ್ಯಾಯಾಂಗ ತನಿಖೆಗೊಳಪಡಿಸದೆ ಎಫ್ಐಆರ್ ದಾಖಲಿಸಬೇಕು. ನ್ಯಾಯಾಂಗ ತನಿಖೆಯಲ್ಲಿ ನಮಗೆ ವಿಶ್ವಾಸವಿಲ್ಲ. ನಿವೃತ್ತ ನ್ಯಾಯಾಧೀಶರು ಈ ತನಿಖೆಯನ್ನು ನಡೆಸುತ್ತಿದ್ದು, ಬಹುತೇಖ ಪ್ರಕರಣಗಳು ಹಳ್ಳ ಹಿಡಿದಿದೆ. ಆದ್ದರಿಂದ ಗಣಪತಿ ಪ್ರಕರಣವನ್ನು ಸಿಬಿಐ ತನಿಖೆಗೊಳಪಡಿಸ ಬೇಕು ಎಂದು ಅವರು ಹೇಳಿದರು.

ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಅವರು ದಾಖಲೆ ಸಹಿತ ದೂರಿದ್ದಾರೆ. ಆದರೆ ಸಾಕ್ಷಿ ನಾಶವಾಗಿದೆ. ಪೊಲೀಸರೇ ಖಿನ್ನತೆ ಸೃಷ್ಟಿಮಾಡಿದ್ದಾರೆ. ಹೀಗಾಗಿ ಆತ್ಮಹತ್ಯೆಗೆ ಪ್ರೇರಣೆ ಹಾಗೂ ಸಾಕ್ಷಿನಾಶಗಳಡಿ ಪ್ರಕರಣ ದಾಖಲಿಸಿಕೊಳ್ಳಬೇಕು. ನ್ಯಾಯಾಂಗ ತನಿಖೆಯಿಂದ ಸರಿಯಾದ ಫಲಿತಾಂಶ ಬರಲು ಸಾಧ್ಯವಿಲ್ಲ. ಅದರಲ್ಲಿ ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಯಂತೆ ವಿಚಾರಣೆ ಆಗುವುದಿಲ್ಲ. ಸಿಐಡಿಯಿಂದಲೂ ಸತ್ಯಾಂಶ ಹೊರಬರುವುದಿಲ್ಲ. ಆದ ಕಾರಣ ಸಿಬಿಐ ತನಿಖೆಯೇ ಸೂಕ್ತ ಎಂದು ಎಸ್. ಪಿ.ಚಂಗಪ್ಪ ಅವರು ಹೇಳಿದರು.

ಬೆಳಗ್ಗೆ 10:30ರಿಂದ 11 ಗಂಟೆಯವರೆಗೆ ವಕೀಲರ ಸಂಘದ ಮುಂಭಾಗದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ ವಕೀಲರ ಸಂಘದ ಸದಸ್ಯರು ಬಳಿಕ ಕಕ್ಷಿದಾರರಿಗೆ ಮತ್ತು ನ್ಯಾಯಾಲಯದ ಕಲಾಪಕ್ಕೆ ತೊಂದರೆಯಾಗದಂತೆ ಕಪ್ಪು ಬ್ಯಾಡ್ಜ್ ಧರಿಸಿ ನ್ಯಾಯಾಲಯದ ಕಲಾಪದಲ್ಲಿ ಪಾಲ್ಗೊಂಡರು.

ಮಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಎಚ್.ವಿ., ಖಜಾಂಚಿ ಯತೀಶ್ ಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯ ರಾಹುಲ್ ಡಿಸಿಲ್ವ ಹಾಗೂ ಮತ್ತಿತರ ಪಧಾಧಿಕಾರಿಗಳು, ಸದಸ್ಯರು ಈ ವೇಳೆ ಉಪಸ್ಥಿತರಿದ್ದರು.

Comments are closed.