ಕರಾವಳಿ

ಹದಗೆಟ್ಟ ರಸ್ತೆ : ನಾಗರೀಕರಿಂದ ರಸ್ತೆಗೆ ಬಾಳೆ ಗಿಡ ನೆಟ್ಟು ವಿನೂತನ ರೀತಿಯಲ್ಲಿ ಪ್ರತಿಭಟನೆ

Pinterest LinkedIn Tumblr

vittal_road_repare

ವಿಟ್ಲ, ಜೂ.21 : ಇಡ್ಕಿದು ಗ್ರಾ.ಪಂ. ವ್ಯಾಪ್ತಿಯ ಕುಳ -ಓಜಾಲ- ಸಂಪರ್ಕ ಕಲ್ಪಿಸುವ ಜಿಲ್ಲಾ ಪಂಚಾಯಿತಿ ರಸ್ತೆ ಸಂಪೂರ್ಣ ಹದ ಗೆಟ್ಟು ಸಂಚಾರಕ್ಕೆ ತೊಂದರೆ ಉಂಟಾಗಿದೆ ಎಂದು ಆರೋಪಿಸಿ ಕುಳ-ಕೊಡಿಪಾಡಿ ತೆರಳುವ ನಾಗರಿಕರು ಕುಳ ಗ್ರಾಮದ ಕುಡ್ವರಪಡ್ಪು ಎಂಬಲ್ಲಿ ನಿನ್ನೆ ರಸ್ತೆಗೆ ಬಾಳೆ ಗಿಡಗಳನ್ನು ನೆಟ್ಟು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಬಂಟ್ವಾಳ ತಾಲ್ಲೂಕು ಪುಣಚ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ರಸ್ತೆ ಡಾಂಬರು ಕಾಣದೆ ಹಲವು ವರ್ಷಗಳೇ ಕಳೆದಿದ್ದು, ರಸ್ತೆ ಹೊಂಡಗಳಿಂದ ಕೂಡಿದ್ದು ಮಳೆ ನೀರು ಹರಿದು ಹೋಗಲು ಚರಂಡಿಗಳಿಲ್ಲ. ಈ ರಸ್ತೆಯಲ್ಲಿ ವಾಹನ ಹಾಗೂ ಪಾದಚಾರಿಗಳಿಗೆ ಸಂಚರಿಸಲು ಅಸಾಧ್ಯವಾಗಿದೆ ಎಂದು ಆರೋಪಿಸಿದರು. ಇಡ್ಕಿದು ಪಿ.ಡಿ.ಒ. ಗೋಕುಲ್ ದಾಸ್ ಭಕ್ತ, ವಿಟ್ಲ ಪೋಲೀಸರು ಸ್ಥಳಕ್ಕೆ ಆಗಮಿಸಿ ಮಾತನಾಡಿ ಸರ್ಕಾರಿ ಇಲಾಖೆಗೆ ಮಾಹಿತಿ ನೀಡದೇ ರಸ್ತೆ ತಡೆ ನಡೆಸುವುದರಿಂದ ಎಲ್ಲರಿಗೂ ತೊಂದರೆ ಉಂಟಾಗುತ್ತದೆ. ರಸ್ತೆ ತಡೆ ತೆರವುಗೊಳಿಸುವಂತೆ ಸೂಚಿಸಿದರು.

ಗ್ರಾ.ಪಂ. ಪಿ.ಡಿ.ಒ ಸ್ಥಳಕ್ಕೆ ಆಗಮಿಸಿ ಮಾತನಾಡಿ ಚರಂಡಿ ವ್ಯವಸ್ಥೆ ಗ್ರಾ.ಪಂ. ವತಿಯಿಂದ ಸರಿಪಡಿಸಲಾಗುವುದು ಮತ್ತು ರಸ್ತೆಯ ಬಗ್ಗೆ ಜಿಲ್ಲಾ ಪಂಚಾಯಿತಿಗೆ ತಿಳಿಸಲಾಗಿದೆ ಎಂದು ತಿಳಿಸಿದರು. ಶಾಲೆ ಬಿಡುವ ವೇಳೆ ಪ್ರತಿಭಟನೆ ನಡೆಸಿದರಿಂದ ಕೊಡಿಪಾಡಿ ಮಾರ್ಗವಾಗಿ ಕಬಕ ಬರುವ ಶಾಲಾ ವಾಹನಗಳಿಗೆ ತೊಂದರೆ ಉಂಟಾಯಿತು. ಪ್ರತಿಭಟನಾ ಸ್ಥಳದಿಂದ ಮತ್ತೆ ತಿರುಗಿ ಮಂಜಲ್ಪಡ್ಪು ಮೂಲಕ ಕಬಕ ಬರಬೇಕಾಯಿತು. ರಸ್ತೆ ತಡೆಯಂತಹ ಪ್ರತಿಭನೆ ನಡೆಸುವಾಗ ಠಾಣೆಗೆ ಮುಂಚಿತವಾಗಿ ತಿಳಿಸಬೇಕು ಸಾರ್ವಜನಿಕರಿಗೂ ಮಾಹಿತಿ ನೀಡಬೇಕು ಎಂದು ವಿಟ್ಲ ಪೊಲೀಸ್ ಠಾಣೆ ಎಎಸೈ ಕೊರಗಪ್ಪ ತಿಳಿಸಿದರು.

ರಿಕ್ಷಾ ಚಾಲಕ ಚಂದ್ರಶೇಖರ ಕೊಡಿಪಾಡಿ, ಮುರಳಿ, ಮೂಸೆಕುಂಞ, ಡಾ. ಗೋಪಾಲ ಕೃಷ್ಣ ಭಟ್ ಉಪಸ್ಥಿತರಿದ್ದರು. ಬಳಿಕ ಅಧಿಕಾರಿಗಳು ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿ ರಸ್ತೆ ತಡೆ ತೆರವು ಮಾಡಲಾಯಿತು.

Comments are closed.