ಕಾರ್ಕಳ, ಜೂ. 17: ಬೈಲೂರು ಜಿಲ್ಲಾ ಪಂಚಾಯತ್ ಸದಸ್ಯ ಸುಮಿತ್ ಶೆಟ್ಟಿ ಕೌಡೂರು ಎಂಬವರ ಹತ್ಯೆಗೆ ಸುಪಾರಿ ಪಡೆದಿದ್ದ ತಂಡವೊಂದು ಅವರ ಬೆಂಬಲಿಗರ ಮೇಲೆ ತಲವಾರು ದಾಳಿ ನಡೆಸಿದ ಘಟನೆ ಎರಡು ದಿನಗಳ ಹಿಂದೆ ಬೈಲೂರು ಪೇಟೆಯಲ್ಲಿ ನಡೆದಿದ್ದು, ಘಟನೆಯಲ್ಲಿ ಏಳು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಂಗ್ಲೆಗುಡ್ಡೆ ಸುಲೈಮಾನ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಒರುವಾಡಿ ಪ್ರವೀಣ್ ಕುಲಾಲ್ ಹಾಗೂ ಕೋಡಿಕೆರೆಯ ವಿಶ್ವ ಯಾನೆ ವಿಶ್ವನಾಥ ಪೂಜಾರಿ ನೇತೃತ್ವದ ತಂಡ ದಾಳಿ ನಡೆಸಿರುವುದು ಖಚಿತಪಟ್ಟಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಬಂಗ್ಲೆಗುಡ್ಡೆ ಸುಲೈಮಾನ್ ಕೊಲೆ ಪ್ರಕರಣದಲ್ಲಿ ಪಾಲ್ಗೊಂಡಿದ್ದ ಪ್ರವೀಣ್ ಕುಲಾಲ್ ಆ ಬಳಿಕ ಸ್ಥಳೀಯವಾಗಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ಜೈಲು ಪಾಲಾಗಿದ್ದ. ಕೆಲತಿಂಗಳ ಹಿಂದಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ ಪ್ರವೀಣ್, ಬೈಲೂರು ಪರಿಸರದಲ್ಲಿ ಭಜರಂಗದಳ ಹಾಗೂ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿರುವ ಜಿ.ಪಂ. ಸದಸ್ಯ ಸುಮಿತ್ ಶೆಟ್ಟಿ ಅವರ ಹತ್ಯೆಗೆ ಸ್ಕೆಷ್ ಹಾಕಿದ್ದ ಎನ್ನಲಾಗಿದೆ. ಇದಕ್ಕಾಗಿ ಕೋಡಿಕೆರೆ ನಿವಾಸಿ ವಿಶ್ವನ ಸಹಕಾರ ಪಡೆದಿದ್ದ ಆತ ಹಫ್ತಾ ಕೊಡುವಂತೆ ಒತ್ತಾಯಿಸಿ ಸುಮಿತ್ ಅವರಿಗೆ ಫೋನ್ ಮಾಡಿದ್ದ ಎನ್ನಲಾಗಿದೆ. ಇದಕ್ಕೆ ನಿರಾಕರಿಸಿದ್ದ ಸುಮಿತ್ ಅವರು ಹಿರಿಯಡ್ಕದಲ್ಲಿ ಪ್ರವೀಣ್ನನ್ನು ಭೇಟಿಯಾಗಿದ್ದರು. ಆಗ ಕೂಡಾ ಹಣ ಕೊಡುವಂತೆ ಪ್ರವೀಣ್ ಒತ್ತಾಯಿಸಿದ್ದ. ಆನಂತರ ಮತ್ತೊಬ್ಬ ರೌಡಿಶೀಟರ್ ತೆಳ್ಳಾರು ನಿವಾಸಿ ಸೋಮು ಎಂಬಾತ ಸುಮಿತ್ ಅವರಿಗೆ ಕರೆ ಮಾಡಿ ಹಫ್ತಾ ಹಣ ಕೊಡಬೇಕು ಎಂದು ಬೆದರಿಸಿ ರಾತ್ರಿ 8.30ಕ್ಕೆ ಬೈಲೂರಿಗೆ ಬರುವುದಾಗಿ ಹೇಳಿದ್ದ. ಹಾಗೆ ಬಂದ ಸೋಮುವನ್ನು ಸುಮಿತ್ ಶೆಟ್ಟಿ ಬೆಂಬಲಿಗರು ಹಿಡಿದಿಟ್ಟು ಪ್ರವೀಣ್ ಕುಲಾಲ್ನನ್ನು ಕರೆಯುವಂತೆ ಹೇಳಿದ್ದರು. ಆದರೆ ರಾತ್ರಿ 10.30 ತನಕ ಪ್ರವೀಣ್ ಬಾರದಿದ್ದರಿಂದ ಯುವಕರು ತಂತಮ್ಮ ಮನೆಗಳಿಗೆ ತೆರಳಿದ್ದರು.
ತಡರಾತ್ರಿ 11 ಗಂಟೆಯ ಸುಮಾರಿಗೆ ಬೈಲೂರಿಗೆ ಬಂದ ಪ್ರವೀಣ್ ಅಲ್ಲಿದ್ದ ಯುವಕರನ್ನು ಬೆದರಿಸಿದ್ದಲ್ಲದೆ ಸುಮಿತ್ ಶೆಟ್ಟಿ ಎಲ್ಲಿ ಎಂದು ಕೇಳಿದ್ದಾನೆ, ಮಾತ್ರವಲ್ಲದೆ ತನ್ನ ಬಳಿಯಿದ್ದ ಕಂಟ್ರಿಮೇಡ್ ರಿವಾಲ್ವರ್ನಿಂದ ನೆಲಕ್ಕೆ ಗುಂಡು ಹಾರಿಸಿದ್ದಾನೆ. ಈ ವೇಳೆ ಆತನ ಜೊತೆ ಓಮ್ನಿ ಕಾರಿನಲ್ಲಿ ಬಂದಿದ್ದ ಸಹಚರರು ತಲವಾರಿನಿಂದ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ದೀಪಕ್ ನಕ್ರೆ, ಸುಧೀರ್ ನಿಟ್ಟೆ, ದೇವದಾಸ್ ಜೋಡುರಸ್ತೆ, ಅಮಿತ್ ಶೆಟ್ಟಿ ಜೋಡುರಸ್ತೆ, ವಾಸು ರಾವ್ ಕಾರ್ಕಳ, ರಾಕೇಶ್ ಹಾಗೂ ಸಂದೀಪ್ ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸುಲೈಮಾನ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರವೀಣ್ ಕುಲಾಲ್, ಸುಮಿತ್ ಶೆಟ್ಟಿಯ ಹತ್ಯೆಗೆ ಸುಪಾರಿ ಪಡೆದಿದ್ದಾನೆ ಎನ್ನಲಾಗಿದ್ದು ಸುಪಾರಿ ಕೊಟ್ಟವಾರರು ಎನ್ನುವುದು ಪೊಲೀಸ್ ತನಿಖೆಯಲ್ಲಿ ತಿಳಿದುಬರಬೇಕಿದೆ. ಸುಮಿತ್ ಶೆಟ್ಟಿ ಬೈಲೂರು ಪೇಟೆಗೆ ಆಗಮಿಸುವ ಸಂದರ್ಭ ಅವರನ್ನು ಕಾದುಕುಳಿತು ಹತ್ಯೆಗೈಯಲು ತಂಡ ಸಿದ್ಧವಾಗಿದ್ದು ಸುಮಿತ್ ಅವರು ಅಪಾಯದಿಂದ ಪಾರಾಗಿದ್ದಾರೆ. ಕೋಡಿಕೆರೆ ವಿಶ್ವನ ಮೇಲೂ ಸುರತ್ಕಲ್ ಹಾಗೂ ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಇವರಿಬ್ಬರೂ ಸೇರಿಕೊಂಡು ಸುಮಿತ್ ಅವರನ್ನು ಮುಗಿಸಲು ಮುಂದಾಗಿದ್ದರು ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಕೆಲದಿನಗಳ ಹಿಂದಷ್ಟೇ ದಾರವಾಡದಲ್ಲಿ ಜಿ.ಪಂ. ಸದಸ್ಯ ಯೋಗೀಶ್ ಗೌಡರ್ ಅವರನ್ನು ಹತ್ಯೆಗೈಯಲಾಗಿದ್ದು, ಈ ಘಟನೆಯ ಬೆನ್ನಿಗೇ ಕಾರ್ಕಳದಲ್ಲಿ ದುಷ್ಕರ್ಮಿಗಳು ಜಿ.ಪಂ. ಸದಸ್ಯರನ್ನು ಗುರಿಯಾಗಿಸಿ ದಾಳಿ ನಡೆಸಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಮಟ್ಟಾರ್ ರತ್ನಾಕರ ಹೆಗ್ಡೆ ಖಂಡನೆ
ಬೈಲೂರು ಜಿಲ್ಲಾ ಪಂಚಾಯತ್ ಸದಸ್ಯ ಸುಮಿತ್ ಶೆಟ್ಟಿ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಹತ್ಯೆಗೈಯಲು ಯತ್ನಿಸಿರುವುದನ್ನು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ತೀವ್ರವಾಗಿ ಖಂಡಿಸಿದ್ದಾರೆ.
ಕೃತ್ಯ ನಡೆಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರೊಂದಿಗೆ ಮಾತನಾಡಿದ್ದು, ತಪ್ಪಿತಸ್ಥರನ್ನು ಬಂಧಿಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ. ಯಾವುದೇ ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳದೆ ಶಾಂತ ರೀತಿಯಿಂದ ಸಹಕರಿಸುವಂತೆ ಮಟ್ಟಾರ್ ಬಿಜೆಪಿ ಕಾರ್ಯಕರ್ತರಲ್ಲಿ ವಿನಂತಿಸಿದ್ದಾರೆ.

Comments are closed.