ಕರಾವಳಿ

ಶಾಲಾ ಬಸ್‌ನ ಅಡಿಗೆ ಬಿದ್ದು ಜೀವ ಕಳೆದುಕೊಂಡ ಎಲ್‌ಕೆಜಿ ಪುಟಾಣಿ.

Pinterest LinkedIn Tumblr

School_Bus_1

ಬೆಳ್ತಂಗಡಿ, ಜೂ.17: ಶಾಲೆಗೆ ತೆರಳಿದ್ದ ಎಲ್‌ಕೆಜಿ ವಿದ್ಯಾರ್ಥಿನಿಯೋರ್ವಳು ಹಿಂಬದಿಯಿಂದ ಬಂದ ಶಾಲಾ ಬಸ್‌ನ ಅಡಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಸಂಜೆ ಚಾರ್ಮಾಡಿ ಸಮೀಪದ ಕಕ್ಕಿಂಜೆ ಎಂಬಲ್ಲಿ ಸಂಭವಿಸಿದೆ.

ಚಾರ್ಮಾಡಿಯ ಶಿವಬೆಟ್ಟು ರಸ್ತೆ ಮನೆಯ ಹಾಮದ್ ಕುಂಞ ಎಂಬುವರ ಪುತ್ರಿ ಕಕ್ಕಿಂಜೆಯ ಕಾರುಣ್ಯ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ವಿದ್ಯಾರ್ಥಿನಿ ಫಾತಿಮಾ ತೌಹೀದಾ (4) ಮೃತಪಟ್ಟ ಪುಟಾಣಿ.ಎಂದಿನಂತೆ ಶಾಲೆಗೆ ತೆರಳಿದ್ದ ಮಗು ಮರಳಿ ಮನೆಗೆ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಕ್ಕನೊಂದಿಗೆ ಶಾಲೆಗೆ ಹೋಗಿ ಆಕೆ ಶಾಲಾ ವಾಹನದಿಂದ ಇಳಿದಿದ್ದಾಳೆ. ಬಳಿಕ ಆಕೆ ಅದೇ ಬಸ್ಸಿನ ಅಡಿಗೆ ಬಿದ್ದಿದ್ದಾಳೆಂದು ತಿಳಿದುಬಂದಿದೆ.

ಶಾಲೆಯಿಂದ ಮಗು ಬಸ್ಸಿನಲ್ಲಿಯೇ ಬಂದಿದ್ದು ಚಾರ್ಮಾಡಿಯಲ್ಲಿ ಮನೆಗೆ ತೆರಳಲು ರಸ್ತೆ ಬದಿ ಇಳಿದಿದ್ದಳು. ಬಸ್‌ನ ಚಾಲಕ ಹಠಾತ್ತನೆ ಬಸ್ಸನ್ನು ಹಿಂದಕ್ಕೆ ಚಲಾಯಿಸಿದ ಕಾರಣ ಹಿಂದೆ ಇದ್ದ ಬಾಲಕಿಯ ಮೇಲೆ ಬಸ್ಸು ಹರಿದಿದೆ. ಇದರಿಂದ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಎನ್ನಲಾಗುತ್ತಿದೆ.

ukg_death_baby

ಬಸ್ ಚಾಲಕ ಇದನ್ನು ಗಮನಿಸದೆ ನೇರವಾಗಿ ಬಸ್ ಅನ್ನು ಚಲಾಯಿಸಿ ಶೆಡ್‌ಗೆ ತಂದು ನಿಲ್ಲಿಸಿದ್ದಾನೆ. ಮಗು ಬಿದ್ದಿರುವುದನ್ನು ಕಂಡು ಆಕೆಯ ಅಕ್ಕ ಅಳುವುದನ್ನು ನೋಡಿ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಈ ವೇಳೆಗೆ ಆಕೆ ಮೃತ ಪಟ್ಟಿದ್ದಳು ಎಂದು ತಿಳಿದುಬಂದಿದೆ.

ಕಾರುಣ್ಯ ಸ್ಕೂಲ್‌ನ ಬಸ್‌ನಲ್ಲಿ ಕೇವಲ ಚಾಲಕ ಮಾತ್ರ ಇದ್ದು ನಿರ್ವಾಹಕನಿರಲಿಲ್ಲ ಎನ್ನಲಾಗಿದೆ. ಇದರಿಂದಾಗಿ ಬಾಲಕಿ ಬಸ್ಸಿನಿಂದ ಇಳಿದ ಬಳಿಕ ಆಕೆಯನ್ನು ಯಾರೂ ಗಮನಿಸಿರಲಿಲ್ಲ. ಚಾಲಕ ನೇರವಾಗಿ ಬಸ್ ಚಲಾಯಿಸಿದ್ದು ಮಗು ಬಸ್ಸಿನ ಅಡಿಗೆ ಸಿಲುಕಿದ್ದಾಳೆ.

ಘಟನೆಯ ಬಳಿಕ ಸಾರ್ವಜನಿಕರು ಚಾಲಕನ ವಿರುದ್ಧ ಹಾಗೂ ಶಾಲೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲ ಕಾನೂನುಗಳನ್ನು ಗಾಳಿಗೆ ತೂರಿ ಶಾಲಾಡಳಿತ ಮಕ್ಕಳನ್ನು ವಾಹನದಲ್ಲಿ ಕೊಂಡೊಯ್ಯಲಾಗುತ್ತಿದೆ ಎಂದು ಆರೋಪಿಸಿದ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಧರ್ಮಸ್ಥಳ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ಬಳಿಕ ಚಾಲಕ ತಲೆ ಮರೆಸಿಕೊಂಡಿದ್ದು ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ

Comments are closed.