ಕರಾವಳಿ

ಶಾಲಾ ಬಾಲಕನ ಮೇಲೆ ಹಲ್ಲೆ ಪ್ರಕರಣ : ಮಾತೆ ಚರ್ಚ್‌ನ ಧರ್ಮಗುರು ಆಂಡ್ರ್ಯೂ ಡಿ’ಕೋಸ್ತಾ ಗೆ ಎತ್ತಂಗಡಿ

Pinterest LinkedIn Tumblr

church_boy_assluted

ವಿಟ್ಲ, ಜೂ. 09: ಪೆರುವಾಯಿ ನಿವಾಸಿ 9ರ ಹರೆಯದ ಬಾಲಕನಿಗೆ ಚರ್ಚ್‌ನ ಪ್ರಾರ್ಥನೆ ಬಾಯಿಪಾಠ ಬಂದಿರಲಿಲ್ಲ ಎಂಬ ಕಾರಣಕ್ಕೆ ಅಪ್ರಾಪ್ತ ಬಾಲಕನ ಮೇಲೆ ಮಾರಣಾಂತಿಕ ಹಲ್ಲೆಗೈದಿದ್ದ ಪೆರುವಾಯಿ ಫಾತಿಮಾ ಮಾತೆ ಚರ್ಚ್‌ನ ಧರ್ಮಗುರು ಆಂಡ್ರ್ಯೂ ಡಿ’ಕೋಸ್ತಾ ಅವರನ್ನು ಕೊನೆಗೂ ಎತ್ತಂಗಡಿ ಮಾಡಲಾಗಿದೆ.

ಬಿಷಪ್ ಅವರ ಸೂಚನೆಯ ಮೇರೆಗೆ ಫಾದರ್ ಅವರನ್ನು ಜೆಪ್ಪುವಿನ ವರ್ಕ್‌ಶಾಪ್‌ಗೆ ವರ್ಗಾವಣೆ ಮಾಡಲಾಗಿದ್ದರೆ, ಫಾತಿಮಾ ಮಾತೆಯ ನೂತನ ಧರ್ಮಗುರುಗಳಾಗಿ ವಿನೋದ್ ಲೋಬೋ ಅವರು ಇಂದು ಸಂಜೆ ಅಧಿಕಾರ ಸ್ವೀಕರಿಸಲಿದ್ದಾರೆ.

ಪ್ರಕರಣದ ಹಿನ್ನೆಲೆ:
ಚರ್ಚ್‌ನ ಧರ್ಮಪ್ರಸಾದ ಸ್ವೀಕರಿಸಲು ಶಾಲಾ ಬಾಲಕರಿಗೆ ಪ್ರತೀವರ್ಷ ಚರ್ಚ್‌ನಲ್ಲಿ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದ್ದು, ಅದಕ್ಕೆ ಪೆರುವಾಯಿ ನಿವಾಸಿ ೯ರ ಹರೆಯದ ಬಾಲಕನೂ ಸೇರಿದ್ದ. ಆತನಿಗೆ ತರಗತಿಯಲ್ಲಿ ಕಲಿಸಲಾದ ಪ್ರಾರ್ಥನೆ ಬಾಯಿಪಾಠ ಬಂದಿರಲಿಲ್ಲ. ಇದನ್ನೇ ನೆಪವಾಗಿಟ್ಟುಕೊಂಡ ಫಾದರ್ ಆತನ ಮೇಲೆ ಬಾರುಕೋಲು ಮತ್ತು ಕೈಯಿಂದ ಹಲ್ಲೆಗೈದಿದ್ದರು. ಫಾದರ್ ರೌದ್ರಾವತಾರದಿಂದ ಹೈರಾಣಾದ ಬಾಲಕ ಮನೆಗೆ ಬಂದು ಹೆತ್ತವರಲ್ಲಿ ನಡೆದ ವಿಷಯವನ್ನು ಹೇಳಿದ್ದ. ಫಾದರ್ ವಿರುದ್ಧ ಬಿಷಪ್ ಅವರಿಗೆ ದೂರು ನೀಡಲಾಗಿತ್ತು. ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿದ ಕ್ರೈಸ್ತ ಸಂಘಟನೆಗಳು ಫಾದರ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದವು. ಪೊಲೀಸ್ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಫಾದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೆಪದಲ್ಲಿ ದಾಖಲಾಗಿದ್ದೂ ನಡೆದಿತ್ತು.

ಫಾದರ್ ಆಂಡ್ರ್ಯೂ ಡಿ’ಕೋಸ್ತಾ ವಿರುದ್ಧ ಪ್ರತಿಭಟನೆ ಬಲಗೊಳ್ಳುತ್ತಲೇ ಬಿಷಪ್ ಅವರು ಫಾದರ್ ಎತ್ತಂಗಡಿ ಮಾಡಲು ನಿರ್ಧರಿಸಿದ್ದು, ಅದರಂತೆ ಅವರನ್ನು ಜೆಪ್ಪುವಿನ ವರ್ಕ್‌ಶಾಪ್‌ಗೆ ವರ್ಗಾವಣೆ ಮಾಡಲಾಗಿದೆ. ಇಂದು ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ನೂತನ ಫಾದರ್ ಅಧಿಕಾರ ಸ್ವೀಕರಿಸಲಿರುವುದು ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಫಾದರ್ ಆಂಡ್ರ್ಯೂ ಅವರ ವರ್ತನೆ ಫಾತಿಮಾ ಮಾತೆ ಚರ್ಚ್‌ನ ಭಕ್ತರಲ್ಲಿ ಆಕ್ರೋಶ ಹುಟ್ಟುಹಾಕಿದ್ದರೆ, ಒಂದು ವರ್ಗ ಫಾದರ್ ಬೆಂಬಲಕ್ಕೂ ನಿಂತಿತ್ತು. ಬಾಲಕನ ಹೆತ್ತವರಿಗೆ ಬೆದರಿಕೆ ನೀಡಿ ಪೊಲೀಸ್ ದೂರನ್ನು ವಾಪಸ್ ಪಡೆಯುವಂತೆ ಒತ್ತಡ ಹೇರಿತ್ತು. ಆದರೆ ಸಕಾಲದಲ್ಲಿ ಸ್ಪಂದಿಸಿದ್ದ ಯುನೈಟೆಡ್ ಕ್ರಿಸ್ಚಿಯನ್ ಅಸೋಸಿಯೇಶನ್ ಪದಾಧಿಕಾರಿಗಳು ಬಾಲಕನ ಹೆತ್ತವರನ್ನು ಭೇಟಿಯಾಗಿ ಧೈರ್ಯ ತುಂಬಿದ್ದಲ್ಲದೆ ಫಾದರ್ ವರ್ಗಾವಣೆ ಮಾಡಿ ಕ್ರಮ ಕೈಗೊಳ್ಳುವಂತೆ ಬಿಷಪ್ ಅವರಿಗೂ ಮನವಿಯನ್ನು ಸಲ್ಲಿಸಿತ್ತು.

ನಂತರ ನಡೆದ ಬೆಳವಣಿಗೆಯಲ್ಲಿ ಚೈಲ್ಡ್‌ಲೈನ್ ಮುಖ್ಯಸ್ಥ ರೆನ್ನಿ ಡಿಸೋಜಾ ಅವರು ಸಂತ್ರಸ್ತ ಬಾಲಕನನ್ನು ಭೇಟಿಯಾಗಿ ಹೇಳಿಕೆಯನ್ನು ಪಡೆದುಕೊಂಡಿದ್ದರು. ರಾಬರ್ಟ್ ರೊಸಾರಿಯೋ ಅವರು ಫಾದರ್ ವಿರುದ್ಧ ಗೃಹ ಸಚಿವರು ಸೇರಿದಂತೆ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಘಟನೆ ನಡೆದ ಬಳಿಕ ತಲೆಮರೆಸಿಕೊಂಡಿದ್ದ ಫಾದರ್ ಬಳಿಕ ಬಿಷಪ್ ಅವರನ್ನು ಭೇಟಿಯಾಗಿದ್ದರು ಎನ್ನಲಾಗಿದೆ. ಅಪ್ರಾಪ್ತ ಬಾಲಕನ ಮೇಲೆ ನಡೆದಿರುವ ದೈಹಿಕ ಹಲ್ಲೆ ಗಂಭೀರ ಪ್ರಮಾಣದ ಪ್ರಕರಣ ಎನ್ನುವುದನ್ನು ಮನಗಂಡ ಬಿಷಪ್ ಅವರು ತಕ್ಷಣವೇ ಅವರನ್ನು ಅಲ್ಲಿಂದ ವರ್ಗಾವಣೆ ಮಾಡಲು ಆದೇಶಿಸಿದ್ದರು.

Comments are closed.