ಕರಾವಳಿ

ಮಾಜಿ ಮುಖ್ಯಂತಿಗಳಾದ ಮೊಯ್ಲಿ, ಡಿವಿಎಸ್‌ಗೆ ಮಂಗಳೂರಿನಲ್ಲಿ ಕರಿಪತಾಕೆ ಪ್ರದರ್ಶನಕ್ಕೆ ಸಿದ್ದತೆ

Pinterest LinkedIn Tumblr

netrvathi_meet_photo_1

ಮಂಗಳೂರು, ಜೂ 7: ಜಿಲ್ಲೆಗೆ ಮಾರಕವಾಗಿ ಪರಿಸಮಿಸಲಿರುವ ಎತ್ತಿನಹೊಳೆ ಯೋಜನೆಯನ್ನು ಬೆಂಬಲಿಸುವುದು ಮಾತ್ರವಲ್ಲದೇ ಯೋಜನೆಯನ್ನು ಪೂರ್ಣಗೊಳಿಸಿಯೇ ಸಿದ್ದ ಎಂದು ಹೊರಟಿರುವ ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಸದಾನಂದ ಗೌಡ ಮತ್ತು ಡಾ. ಎಂ ವೀರಪ್ಪ ಮೊಯ್ಲಿಯವರಿಗೆ ಮಂಗಳೂರಿಗೆ ಆಗಮಿಸುತ್ತಿರುವ ಸಂದರ್ಭ ಕರಿಪತಾಕೆ ಪ್ರದರ್ಶನ ಮಾಡಲು ತೀರ್ಮಾನಿಸಲಾಗಿದ್ದು, ಈ ಪ್ರತಿಭಟನೆಯಲ್ಲಿ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ವಿಜಯ್ ಕುಮಾರ್ ಶೆಟ್ಟಿ ಕರೆ ಕೊಟ್ಟಿದ್ದಾರೆ.

ಮಂಗಳವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,ಮಂಗಳೂರಿನ ಪುರಭವನದಲ್ಲಿ ಜೂ.11 ರಂದು ನಡೆಯಲಿರುವ ವಿ4   ಖಾಸಗಿ ಚಾನೆಲ್‌ನ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸುತ್ತಿರುವ ಮಾಜಿ ಮುಖ್ಯಮಂತ್ರಿಗಳಾದ ಸದಾನಂದ ಗೌಡ ಮತ್ತು ಎಂ ವೀರಪ್ಪ ಮೊಯ್ಲಿಯವರಿಗೆ ಕರಿಪತಾಕೆ ಪ್ರದರ್ಶನ ಮಾಡಲಾಗುವುದು. ಈ ಸಂದರ್ಭ ಮುಖ್ಯಮಂತ್ರಿಗಳಿಬ್ಬರಿಗೆ ಕರಿಪತಾಕೆ ಹಿಡಿದು ನಡೆಯಲಿರುವ ಪ್ರತಿಭಟನೆಯಲ್ಲಿ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಹೇಳಿದರು.

netrvathi_meet_photo_2

ವೀರಪ್ಪ ಮೊಯ್ಲಿ ಇತ್ತೀಚೆಗೆ ಎತ್ತಿನಹೊಳೆ ಯೋಜನೆ 2018 ಕ್ಕೆ ಪೂರ್ಣಗೊಳ್ಳುತ್ತದೆ ಎಂಬ ಹೇಳಿಕೆ ನೀಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಹಿಂದಿನ ಹಲವು ಯೋಜನೆಗಳು ಸೀಮಿತ ಕಾಲಾವಧಿಯಲ್ಲಿ ಮುಗಿದ ಉದಾಹರಣೆಯಿಲ್ಲ. 2018ಕ್ಕೆ ನಡೆಯುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದರು.

netrvathi_meet_photo_3

ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್‌ನಲ್ಲಿ ನಡೆದಿದ್ದ ವಿಚಾರಣೆಯ ತೀರ್ಪನ್ನು ಫೆಬ್ರವರಿಯಲ್ಲಿ ಪ್ರಕಟಿಸಬೇಕಿತ್ತು. ಎನ್‌ಜಿಟಿ ನಿಯಮದಂತೆ ನ್ಯಾಯಾಧೀಶರು ನೀಡಿದ ವರದಿಯ ಹಿನ್ನೆಲೆಯಲ್ಲಿ ಪರಿಸರ ತಜ್ಞರು ಅದಕ್ಕೆ ಸಹಿ ಮಾಡಬೇಕು. ನ್ಯಾಯಧೀಶ ಚೊಕ್ಕಲಿಂಗ ನೀಡಿದ 100 ಪುಟದ ವರದಿಗೆ ಪರಿಸರ ತಜ್ಞ ನಾಗೇಂದ್ರನ್ ಇದು ಪರಿಸರಕ್ಕೆ ವಿರುದ್ಧವಾಗಿದೆ ಎಂದು ಸಹಿ ಮಾಡದೆ ರಾಜೀನಾಮೆ ನೀಡಿದ್ದಾರೆ.

netrvathi_meet_photo_4

ಇದೀಗ ಚೊಕ್ಕಲಿಂಗ ಅವರ ಬದಲಿಗೆ ಜ್ಯೋತಿಲಿಂಗಂ ಎಂಬವರು ನ್ಯಾಯಾಧೀಶರಾಗಿ ಬಂದಿದ್ದು ಅವರು ಇಡೀ ವಿಚಾರಣೆಯನ್ನು ಮತ್ತೊಮ್ಮೆ ಮಾಡಬೇಕೆಂದು ಹೇಳಿದ್ದಾರೆ. ಇನ್ನು ವಿಚಾರಣೆ ನಡೆದು ತೀರ್ಪು ಬರಲು ಎರಡು ವರ್ಷ ತಗಲಬಹುದು. ಇದಕ್ಕೆ ಕಾನೂನು ಸಚಿವ ಡಿ.ವಿ. ಸದಾನಂದಗೌಡರೇ ನೇರ ಹೊಣೆ ಎಂದು ವಿಜಯ್ ಕುಮಾರ್ ಶೆಟ್ಟಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ಪಧಾದಿಕಾರಿಗಳಾದ ಸತ್ಯಜೀತ್ ಸುರತ್ಕಲ್, ಎಂ.ಜಿ.ಹೆಗ್ಡೆ, ಯೋಗೀಶ್ ಶೆಟ್ಟಿ ಜೆಪ್ಪು, ಆನಂದ್ ಶೆಟ್ಟಿ ಅಡ್ಯಾರ್, ಗಂಗಾಧರ ಹೊಸಬೆಟ್ಟು, ಸಂಪತ್, ಬಿ.ಎ.ರಹೀಂ, ಪ್ರಶಾಂತ್, ನವಾಝ್ ಉಳ್ಳಾಲ್, ಯಶವಂತ ಮೆಂಡನ್ ಮುಂತಾದವರು ಉಪಸ್ಥಿತರಿದ್ದರು.

Comments are closed.