ಗಲ್ಫ್

ಪ್ರಧಾನಿ ಮೋದಿ ಭೇಟಿಯ ಬೆನ್ನಲ್ಲೇ 23 ಭಾರತೀಯ ಖೈದಿಗಳನ್ನು ಬಿಡುಗಡೆ ಮಾಡಿದ ಕತಾರ್

Pinterest LinkedIn Tumblr

modi-in-qatar

ನವದೆಹಲಿ: ಪ್ರಧಾನಿಯವರ ಐದು ದೇಶಗಳ ಪ್ರವಾಸದ ಭಾಗವಾಗಿ ನರೇಂದ್ರ ಮೋದಿ ಅವರು ಕತಾರ್ ಗೆ ಭೇಟಿ ನೀಡಿದ ನಂತರ 23 ಭಾರತೀಯ ಖೈದಿಗಳನ್ನು ಬಿಡುಗಡೆ ಮಾಡುವ ಮೂಲಕ ಕತಾರ್ ಸದ್ಭಾವನಾ ನಡೆಗೆ ಮುಂದಾಗಿದೆ.

ದೋಹಾದಲ್ಲಿ ಮೋದಿ ಅವರು ಕತಾರ್ ನ ಎಮೀರ್, ಶೇಕ್ ತಮೀಮ್ ಬಿನ್ ಹಮದ್ ಅಲ್-ತನಿ ಅವರನ್ನು ಭೇಟಿ ಮಾಡಿದ ಒಂದು ದಿನದ ನಂತರ ಸೋಮವಾರ ಖೈದಿಗಳ ಬಿಡುಗಡೆಯಾಗಿದೆ. ರಂಜಾನ್ ಸಮಯದಲ್ಲಿ ಪ್ರತಿ ವರ್ಷ ಕತಾರ್ ಸರ್ಕಾರ ನಡೆಸುವ ಕ್ಷಮೆಯ ಸಂಪ್ರದಾಯದಂತೆ ಈ ಬಿಡುಗಡೆ ನೆರವೇರಿಸಿದೆ.

“ವಿಶೇಷ ತಿಂಗಳು (ರಂಜಾನ್) ಪ್ರಾರಂಭಕ್ಕೆ ವಿಶೇಷ ನಡೆ. ಕತಾರ್ ಸರ್ಕಾರ 23 ಭಾರತೀಯ ಖೈದಿಗಳನ್ನು ಬಿಡುಗಡೆ ಮಾಡಿದ್ದು ಅವರೆಲ್ಲರೂ ಭಾರತಕ್ಕೆ ಹಿಂದಿರುಗಲಿದ್ದಾರೆ” ಎಂದು ಮೋದಿ ಮಂಗಳವಾರ ಟ್ವೀಟ್ ಮಾಡಿದ್ದಾರೆ.

“ಈ ನಡೆಗಾಗಿ ಕತಾರ್ ನ ಎಮೀರ್ ಅವರಿಗೆ ನನ್ನ ಧನ್ಯವಾದ ಹೇಳುತ್ತೇನೆ” ಎಂದು ಅಮೆರಿಕಾದಿಂದ ಮೋದಿ ಬರೆದಿದ್ದಾರೆ.

ಐದು ರಾಷ್ಟ್ರಗಳ ಪ್ರವಾಸದಲ್ಲಿ ಆಪ್ಘಾನಿಸ್ಥಾನ, ಕತಾರ್ ಮತ್ತು ಸ್ವಿಟ್ಸರ್ ಲ್ಯಾಂಡ್ ದೇಶಗಳ ಪ್ರವಾಸ ಮುಗಿಸಿ ಸದ್ಯ ಅಮೆರಿಕಾದಲ್ಲಿರುವ ಮೋದಿ ನಂತರ ಮೆಕ್ಸಿಕೋ ಪ್ರವಾಸ ಕೈಗೊಳ್ಳಲಿದ್ದಾರೆ.

ಈ ಬಿಡುಗಡೆಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ “ಕತಾರ್ ಗೆ ಧನ್ಯವಾದಗಳು. ಪ್ರಧಾನಿಯವರ ಕೋರಿಕೆ ಮೇರೆ 23 ಖೈದಿಗಳನ್ನು ಬಿಡುಗಡೆ ಮಾಡಿದ್ದಕ್ಕೆ ಧನ್ಯವಾದಗಳು” ಎಂದು ಅವರು ಬರೆದಿದ್ದಾರೆ.

Comments are closed.