ಕರಾವಳಿ

ರಾತ್ರಿ ಹೊತ್ತು ಗ್ಯಾಸ್ ಟ್ಯಾಂಕರ್‌ಗಳ ಸಂಚಾರಕ್ಕೆ ನಿರ್ಬಂಧವಿದ್ದರೂ ಸಾಗಾಟ ನಿರಾತಂಕ

Pinterest LinkedIn Tumblr

ಬಂಟ್ವಾಳ, ಜೂ.07: ಸೂರಿಕುಮೇರು ರಾಷ್ಟ್ರೀಯ ಹೆದ್ದಾರಿ 76ರಲ್ಲಿ ಇತ್ತೀಚೆಗೆ ಸಂಭವಿಸಿದ ಮತ್ತೊಂದು ಗ್ಯಾಸ್ ಟ್ಯಾಂಕರ್ ದುರಂತ ಇಡೀ ಜಿಲ್ಲೆಯನ್ನು ಮತ್ತೊಮ್ಮೆ ಬೆಚ್ಚಿಬೀಳುವಂತೆ ಮಾಡಿತ್ತು. ಈ ದುರಂತದ ಬಳಿಕ ಗ್ಯಾಸ್ ಟ್ಯಾಂಕರ್‌ಗಳಿಂದಾಗುತ್ತಿರುವ ಸಾವು ನೋವುಗಳ ಬಗ್ಗೆ ಜಿಲ್ಲೆಯಾದ್ಯಂತ ಚರ್ಚೆ, ಆಕ್ರೋಶ ವ್ಯಕ್ತವಾಗಿದ್ದವು. ಕೊನೆಗೂ ಎಚ್ಚೆತ್ತುಕೊಂಡ ಜಿಲ್ಲಾಡಳಿತ ರಾತ್ರಿ ಸಮಯ ಗ್ಯಾಸ್ ಟ್ಯಾಂಕರ್‌ಗಳ ಸಂಚಾರವನ್ನು ನಿರ್ಬಂಧಿಸಿ ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತೂ ಅಲ್ಲದೆ ಸುರಕ್ಷಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಗ್ಯಾಸ್ ಕಂಪೆನಿಗಳ ಅಧಿಕಾರಿಗಳಿಗೆ ಖಡಕ್ ಸೂಚನೆಯೂ ನೀಡಿದ್ದೂ ಎಲ್ಲರಿಗೂ ತಿಳಿದ ವಿಷಯವೇ ಆಗಿದೆ.

ಸಾರ್ವಜನಿಕ ಆಸ್ತಿಪಾಸ್ತಿಯ ಸುರಕ್ಷಾ ದೃಷ್ಟಿಯಿಂದ ಜಿಲ್ಲಾಡಳಿತ ತೆಗೆದುಕೊಂಡ ಈ ಕಟ್ಟುನಿಟ್ಟಿನ ಕ್ರಮಕ್ಕೆ ಸಾರ್ವಜನಿಕರಿಂದ ಪ್ರಶಂಸೆಗಳ ಮಹಪೂರ ಹರಿದು ಬಂದಿತ್ತಾದರೂ ’ಜಿಲ್ಲಾಡಳಿತದ ಈ ಆದೇಶ ಅದೆಷ್ಟು ದಿನ ಪಾಲನೆಯಾಗುತ್ತದೆಯೋ’ ಎಂಬ ಮಾತು ಕೂಡಾ ಇದೇ ಸಂದರ್ಭದಲ್ಲಿ ಸಾರ್ವಜನಿಕ ವಲಯದಿಂದ ಕೇಳಿ ಬಂದಿದ್ದೂ ಸುಳ್ಳಲ್ಲ.

ರಾತ್ರಿ 10 ಗಂಟೆಯಿಂದ ಬೆಳಗ್ಗೆ ಬೆಳಕು ಮೂಡುವವರೆಗೆ ಗ್ಯಾಸ್ ಟ್ಯಾಂಕರ್‌ಗಳ ಸಂಚಾರವನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದ ಜಿಲ್ಲಾಡಳಿತ ಈ ಸಮಯದಲ್ಲಿ ಸಂಚಾರಿಸುವ ಟ್ಯಾಂಕರ್‌ಗಳನ್ನು ವಶಪಡಿಸುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಜಿಲ್ಲಾಡಳಿತದ ಆದೇಶದ ಬಳಿಕ ಕೆಲವು ಸಮಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿಹೊತ್ತು ಟ್ಯಾಂಕರ್‌ಗಳ ಸಂಚಾರವಿರಲಿಲ್ಲ ಎನ್ನುವುದು ನಿಜ. ಆದರೆ, ಘಟನೆಯ ನೆನಪು ಜನಮಾನಸದಿಂದ ಮಾಸುತ್ತಿದ್ದಂತೆ ಮತ್ತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಹೊತ್ತು ಒಂದೆರಡು ಟ್ಯಾಂಕರ್‌ಗಳ ಸಂಚಾರ ಆರಂಭಗೊಂಡಿರುವ ಬಗ್ಗೆ ಆರೋಪ ಕೇಳಿ ಬಂದಿದ್ದು ಜಿಲ್ಲಾಡಳಿತದ ಆದೇಶ ಅದೆಷ್ಟು ದಿನ ಪಾಲನೆಯಾಗುತ್ತೋ ಎಂಬ ಸಾರ್ವಜನಿಕರ ಅಭಿಪ್ರಾಯ ಸತ್ಯವಾಗತೊಡಗಿದೆ.

ರಾತ್ರಿಹೊತ್ತು ಗ್ಯಾಸ್ ಟ್ಯಾಂಕರ್‌ಗಳ ಸಂಚಾರಕ್ಕೆ ನಿರ್ಬಂಧವಿರುವುದರಿಂದ ರಸ್ತೆ ಬದಿಯ ಸಿಕ್ಕ ಸಿಕ್ಕ ಕಡೆ ಟ್ಯಾಂಕರ್‌ಗಳನ್ನು ನಿಲ್ಲಿಸುವುದರಿಂದ ಉಂಟಾಗುವ ಅನಾಹುತಗಳನ್ನು ತಪ್ಪಿಸುವ ಸಲುವಾಗಿ ಗ್ಯಾಸ್ ಟ್ಯಾಂಕರ್‌ಗಳನ್ನು ರಾತ್ರಿಹೊತ್ತು ಪಾರ್ಕಿಂಗ್ ಮಾಡಲು ವಿಶಾಲ ಜಾಗವೊಂದನ್ನು ಗುರುತಿಸುವಂತೆ ಜಿಲ್ಲಾಡಳಿತ ಅಧಿಕಾರಿಗಳಿಗೆ ಸೂಚಿಸಿತ್ತು. ಅದರಂತೆ ಮಂಗಳೂರು – ಬಿ.ಸಿ.ರೋಡ್ – ಮಾಣಿ – ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿಯಾಗಿ ಸಂಚಾರಿಸುವ ಟ್ಯಾಂಕರ್‌ಗಳನ್ನು ನಿಲ್ಲಿಸಲು ಉಪ್ಪಿನಂಗಡಿಯ ಗೋಳಿತೊಟ್ಟಿನಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗಿದೆ.

ಈ ಪಾಕಿಂಗ್ ವ್ಯವಸ್ಥೆ ರಾತ್ರಿ 10 ಗಂಟೆಯ ವೇಳೆಗೆ ಅರ್ಧ ದಾರಿಯಲ್ಲಿರುವ ಟ್ಯಾಂಕರ್‌ಗಳನ್ನು ನಿಲ್ಲಿಸಲು ಮಾಡಿರುವುದು ಹೊರತು ಮಂಗಳೂರು ಗ್ಯಾಸ್ ಫಿಲ್ಲಿಂಗ್ ಕೇಂದ್ರದಿಂದ ರಾತ್ರಿವೇಳೆ ಟ್ಯಾಂಕರ್‌ಗಳು ಹೊರಟು ಇಲ್ಲಿ ಪಾರ್ಕಿಂಗ್ ಮಾಡಲು ಅಲ್ಲ ಎಂಬುದು ಅಧಿಕಾರಿಗಳು ತಿಳಿಯಬೇಕಾಗಿದೆ. ಇಂತದೊಂದು ತಪ್ಪು ಕಲ್ಪನೆ ಅಧಿಕಾರಿಗಳಲ್ಲೂ ಇದೆ. ಪೆರ್ನೆ, ಸೂರಿಕುಮೇರು ಸಹಿತ ತುಂಬೆ, ಉಪ್ಪಿನಂಗಡಿಯಲ್ಲಿ ಇತ್ತೀಚೆಗೆ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಸಂಭವಿಸಿದ ಎಲ್ಲ ದುರಂತಗಳೂ ಗೋಳಿತೊಟ್ಟು ಪಾರ್ಕಿಂಗ್ ಜಾಗಕ್ಕಿಂತ ಮುಂದೆಯಾಗಿದೆ ಎಂಬುದನ್ನು ಆಧಿಕಾರಿಗಳು ಮನಗಾಣಬೇಕಾಗಿದೆ. ಸಂಜೆ 6 ಗಂಟೆಯ ಬಳಿಕ ಗ್ಯಾಸ್ ಫಿಲ್ಲಿಂಗ್ ಕೇಂದ್ರದಿಂದ ಗ್ಯಾಸ್ ಟ್ಯಾಂಕರ್‌ಗಳು ಹೊರಡದಂತೆ ಕ್ರಮ ವಹಿಸಬೇಕಾಗಿದೆ.

ರಾತ್ರಿ ಟ್ಯಾಂಕರ್‌ಗಳ ಸಂಚಾರಕ್ಕೆ ನಿರ್ಬಂಧ ಹೇರಿರುವುದು ಸರಿಯಾದ ಕ್ರಮವಾದರೂ ಈ ಕ್ರಮದಿಂದಾಗಿ ಈ ಹಿಂದೆ ರಾತ್ರಿ ಸಂಚಾರಿಸುತ್ತಿದ್ದ ಎಲ್ಲ ಟ್ಯಾಂಕರ್‌ಗಳು ಪ್ರಸ್ತುತ ದಿನಗಳಲ್ಲಿ ಹಗಲಿನಲ್ಲಿ ಸಂಚಾರಿಸತೊಡಗಿದೆ. ರಾತ್ರಿಗಿಂತ ಹಗಲು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಿರುತ್ತವೆ. ಹಾಗಾಗಿ ಹಗಲು ಸಮಯ ಗ್ಯಾಸ್ ಟ್ಯಾಂಕರ್‌ಗಳ ಸಂಚಾರ ಇನ್ನಷ್ಟು ಅಪಾಯಕಾರಿಯಾಗಿದೆ. ಜಿಲ್ಲೆಯನ್ನೇ ನಡುಗಿಸಿದ ಪೆರ್ನೆ ಗ್ಯಾಸ್ ಟ್ಯಾಂಕರ್ ಸ್ಫೋಟ ದುರಂತ ಹಾಡಹಗಲೇ ಸಂಭವಿಸಿ ಹತ್ತಾರು ಜೀವಗಳು ಬಲಿಯಾಗಿದ್ದವು. ಆ ಬಳಿಕ ತುಂಬೆ, ಉಪ್ಪಿನಂಗಡಿಯಲ್ಲಿಯಲ್ಲೂ ಹಗಲಿನಲ್ಲೇ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಬಿದ್ದಿರುವುದನ್ನೂ ಮರೆಯುವಂತ್ತಿಲ್ಲ. ಇದರಿಂದ ಇತರ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ದ್ವಿಪಥ ರಸ್ತೆಗಳಿರುವ ಹೆದ್ದಾರಿಯಲ್ಲಿ ನಾಲ್ಕೈದು ಒಟ್ಟಾಗಿ ಸಂಚಾರಿಸುವ ಟ್ಯಾಂಕರ್‌ಗಳನ್ನು ಓವರ್‌ಟೇಕ್ ಮಾಡುವುದೇ ಇತರ ವಾಹನಗಳಿಗೆ ಸವಾಲಾಗಿ ಮಾರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸುರಕ್ಷಾ ದೃಷ್ಟಿಯಿಂದ ದಿನವೊಂದಕ್ಕೆ ಇಂತಿಷ್ಟು ಟ್ಯಾಂಕರ್‌ಗಳು ಸಂಚಾರಿಸಬೇಕೆಂಬ ನಿಯಮವೂ ಜಾರಿಯಾಗಬೇಕಿದೆ.

Comments are closed.