ಕರಾವಳಿ

ಕುಖ್ಯಾತ ಮನೆಗಳ್ಳನ ಸೆರೆ : 7 ಲಕ್ಷ ರೂ. ಮೌಲ್ಯದ ಸೊತ್ತು ವಶ

Pinterest LinkedIn Tumblr

SP_Press_Meet_1

ಮಂಗಳೂರು, ಜೂ.6: ಪುತ್ತೂರು ಸೇರಿದಂತೆ ವಿವಿಧೆಡೆಗಳಲ್ಲಿ ರಾತ್ರಿ ವೇಳೆ ಮನಗಳಿಗೆ ಕನ್ನ ಹಾಕಿ ಕಳವು ಮಾಡುತ್ತಿದ್ದ ಕೇರಳದ ಕಾಸರಗೋಡು ಮೂಲದ ಆರೋಪಿಯನ್ನು ಪುತ್ತೂರು ಠಾಣಾ ಪೊಲೀಸರು ಬಂಧಿಸಿ, ಸುಮಾರು 7 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ರಾತ್ರಿ ವೇಳೆ ಯಾರೂ ಇಲ್ಲದ ಮನೆಗಳ ಹಿಂಬಾಗಿಲನ್ನು ಒಡೆದು ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದ ಆರೋಪಿ ಕೇರಳದ ತಂಗರಾಜ್ ಯಾನೆ ರಾಜು ಪಿ. (64) ನನ್ನು ಬಂಧಿಸಲಾಗಿದ್ದು, ಆರೋಪಿಯಿಂದ 6,20,000 ರೂ. ಮೌಲ್ಯದ 230.24 ಗ್ರಾಂ ಚಿನ್ನಾಭರಣ, 80,000 ರೂ. ಮೌಲ್ಯದ 2.285 ಕಿ.ಗ್ರಾಂ. ಬೆಳ್ಳಿ ಮತ್ತು 2 ಸೀರೆಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ದ.ಕ. ಜಿಲ್ಲಾ ಎಸ್ಪಿ ಭೂಷಣ್ ಗುಲಾಬ್‌ರಾವ್ ಬೊರಸೆ ತಿಳಿಸಿದ್ದಾರೆ.

SP_Press_Meet_2

ರವಿವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಆರೋಪಿಯ ವಿರುದ್ಧ ಉಡುಪಿಯಲ್ಲಿ 28, ಕುಶಾಲನಗರದಲ್ಲಿ 1, ಕೇರಳ ರಾಜ್ಯದ ಪಾಲಕ್ಕಾಡ್‌ನಲ್ಲಿ 10, ಪುತ್ತೂರು ನಗರದಲ್ಲಿ 7 ಮನೆ ಕಳವು ಪ್ರಕರಣಗಳು ದಾಖಲಾಗಿವೆ. ಮಾತ್ರವಲ್ಲದೆ 1988ರಲ್ಲ್ಲಿ ಚೆನ್ನೈ ಕೇಂದ್ರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಹೇಳಿದರು.

ಈ ವರ್ಷದ ಜನವರಿಯಿಂದ ಮೇ ತಿಂಗಳವರೆಗೆ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಕಳ್ಳತನಗಳು ನಡೆದಿರುವ ಬಗ್ಗೆ ಪ್ರಕರಣಗಳು ದಾಖಲಾಗಿವೆ. ರಾತ್ರಿ ವೇಳೆ ಯಾರೂ ಇಲ್ಲದ ಮನೆಗಳನ್ನು ಗೊತ್ತುಪಡಿಸಿಕೊಂಡು ಮನೆಯ ಹಿಂಬದಿ ಬಾಗಿಲನ್ನು ಒಡೆದು ನಗದು, ಚಿನ್ನಾಭರಣ, ಬೆಳ್ಳಿಯ ವಸ್ತುಗಳನ್ನು ಹಾಗೂ ಇತರ ವಸ್ತುಗಳನ್ನು ಕಳವು ಮಾಡಿ ಈತ ಪರಾರಿಯಾಗುತ್ತಿದ್ದ.

SP_Press_Meet_3 SP_Press_Meet_4

ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ನಿರೀಕ್ಷಕ ಮಹೇಶ್ ಪ್ರಸಾದ್ ತನಿಖೆ ನಡೆಸುತ್ತಿದ್ದು, ಇಲಾಖಾ ಮೇಲಧಿಕಾರಿಗಳ ನಿರ್ದೇಶನದಂತೆ ಠಾಣಾ ಪೊಲೀಸ್ ಉಪ ನಿರೀಕ್ಷಕಕ ಅಬ್ದುಲ್ ಖಾದರ್ ಹಾಗೂ ಠಾಣಾ ಸಿಬ್ಬಂದಿಗೆ ಮಾರ್ಗದರ್ಶನ ನೀಡಿ ಪತ್ತೆ ಕಾರ್ಯ ನಡೆಸಿದರೂ ಆರೋಪಿ ಸುಳಿವು ಲಭ್ಯವಾಗಿರಲಿಲ್ಲ. ಮೇ 20ರಂದು ತನಿಖಾಧಿಕಾರಿಗಳು ಸಿಬ್ಬಂದಿ ಜತೆ ಪುತ್ತೂರು ಬೈಪಾಸ್ ರಾಡ್ಯ ಹೆದ್ದಾರಿ ಶಿವನಗರ ಕ್ರಾಸ್ ಬಳಿ ಸಂಚರಿಸುತ್ತಿದ್ದ ವೇಳೆ, ವ್ಯಕ್ತಿಯೊಬ್ಬ ಕೈಯ್ಯಲ್ಲಿ ಪ್ಲಾಸ್ಟಿಕ್ ಚೀಲ ಹಿಡಿದು ನಿಂತುಕೊಂಡಿದ್ದು, ಪೊಲೀಸ್ ಜೀಪನ್ನು ನೋಡಿ ಓಡಲು ಯತ್ನಿಸಿದಾಗ ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಈತ ಪುತ್ತೂರಿನಲ್ಲಿ ದಾಖಲಾಗಿರುವ ಏಳು ಮನೆ ಕಳ್ಳತನದ ಆರೋಪಿ ಎಂಬುದು ಪತ್ತೆಯಾಯಿತು.

ಆರೋಪಿಯಿಂದ ಕಳ್ಳತನಕ್ಕೆ ಉಪಯೋಗಿಸಿದ ಕಬ್ಬಿಣದ ರಾಡ್, ಟಾರ್ಚ್ ಲೈಟ್‌ನ್ನು ವಶಪಡಿ ಸಿಕೊಳ್ಳಲಾಗಿದೆ. ಆರೋಪಿ ಕಳವು ಮಾಡಿರುವ ಸೊತ್ತುಗಳನ್ನು ತಮಿಳುನಾಡು ರಾಜ್ಯದ ಈರೋಡ್, ಕೇರಳ ರಾಜ್ಯದ ತಿರೂರ್, ಕ್ಯಾಲಿಕಟ್, ಹೊಸದುರ್ಗ ಮಂಗಳೂರು ಹಾಗೂ ಪುತ್ತೂರು ನಗರಗಳಲ್ಲಿ ಬಚ್ಚಿಟ್ಟಿದ್ದ ಸ್ಥಳದಿಂದ ಮತ್ತು ಆರೋಪಿ ಮಾರಾಟ ಮಾಡಿರುವ ಜ್ಯುವೆಲ್ಲರಿಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್‌ರಾವ್ ಬೊರಸೆ ತಿಳಿಸಿದರು.

SP_Press_Meet_5

14 ಮಂದಿ ಸಿಬ್ಬಂದಿಗೆ 25,000 ರೂ. ನಗದು ಬಹುಮಾನ ಪ್ರಕಟ :

ಪುತ್ತೂರು ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ರಿಷ್ಯಂತ್ ಮಾರ್ಗದರ್ಶನದಲ್ಲಿ ತನಿಖಾ ತಂಡವು ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದು, ತನಿಖಾಧಿಕಾರಿ ಮಹೇಶ್ ಪ್ರಸಾದ್ ಹಾಗೂ ಪತ್ತೆ ಕಾರ್ಯದಲ್ಲಿ ಕರ್ತವ್ಯದಲ್ಲಿದ್ದ 14 ಮಂದಿ ಸಿಬ್ಬಂದಿಗೆ 25,000 ರೂ. ನಗದು ಬಹುಮಾನವನ್ನು ಎಸ್ಪಿಯವರು ಈ ಸಂದರ್ಭ ಪ್ರಕಟಿಸಿದರು.

SP_Press_Meet_6

ಬಾಗಿಲು ಹಾಕಿ ಹೋಗುವ ಸಂದರ್ಭ ಪೊಲೀಸರಿಗೆ ಮಾಹಿತಿ ನೀಡಿ : ಎಸ್ಪಿ

ಕೆಲ ದಿನಗಳ ಕಾಲ ಮನೆಗಳಿಗೆ ಬಾಗಿಲು ಹಾಕಿ ಹೋಗುವ ಸಂದರ್ಭ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದ್ದಲ್ಲಿ ರಾತ್ರಿ ಗಸ್ತು ಕಾರ್ಯದ ವೇಳೆ ಅಂತಹ ಮನೆಗಳ ಬಗ್ಗೆ ಪೊಲೀಸರು ಹೆಚ್ಚಿನ ನಿಗಾ ವಹಿಸಲು ಸಾಧ್ಯವಾಗುತ್ತದೆ. ಮನೆಗಳಲ್ಲಿ ಸಿಸಿ ಕ್ಯಾಮರಾ, ಬರ್ಗ್ಲರ್ ಅಲರಾಂಗಳನ್ನು ಅಳವಡಿಸುವಂತಹ ಮುನ್ನೆಚ್ಚರಿಕಾ ಕ್ರಮಗಳನ್ನು ಕೂಡಾ ವಹಿಸುವುದು ಸೂಕ್ತ ಎಂದು ಎಸ್ಪಿ ಭೂಷಣ್ ಗುಲಾಬ್‌ರಾವ್ ಬೊರಸೆ ತಿಳಿಸಿದರು.

SP_Press_Meet_7

ಶನಿವಾರ ರಾತ್ರಿ ಮಾತ್ರ ಕಳ್ಳತನ :

ಶನಿವಾರ ರಾತ್ರಿಯನ್ನೇ ಆರೋಪಿ ಕಳ್ಳತನಕ್ಕಾಗಿ ಆಯ್ದುಕೊಳ್ಳುತ್ತಿದ್ದ. ಮನೆಗಳಲ್ಲಿ ಯಾರೂ ಇಲ್ಲದಿರುವುದನ್ನು ಖಾತರಿಪಡಿಸಿಕೊಂಡು ಶನಿವಾರ ರಾತ್ರಿ ಹೊತ್ತು ಹೊಂಚು ಹಾಕಿ ಮನೆಯ ಹಿಂಬದಿ ಬಾಗಿಲನ್ನು ಕಬ್ಬಿಣದ ರಾಡ್‌ನಿಂದ ಒಡೆದು ಕಪಾಟಿನಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದ ಎಂದು ಎಸ್ಪಿಯವರು ಹೇಳಿದರು. ಈ ವೇಳೆ ಪೊಲೀಸ್ ಅಧಿಕಾರಿಗಳಾದ ರಿಷ್ಯಂತ್ ಹಾಗೂ ಮಹೇಶ್ ಪ್ರಸಾದ್ ಉಪಸ್ಥಿತರಿದ್ದರು.

Comments are closed.