ಕರಾವಳಿ

ದ್ವಿಚಕ್ರ ಚೋರರ ಬಂಧನ :ಹನ್ನೊಂದು ಬೈಕ್‌ ವಶ – ಪ್ರಕರಣ ಭೇದಿಸಿದ ಪೊಲೀಸರಿಗೆ ರೂ.10 ಸಾವಿರ ಬಹುಮಾನ

Pinterest LinkedIn Tumblr

SP_Bhushan_gulab_1

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕಾರ್ಯವ್ಯಾಪ್ತಿಯ ಅಧೀನ ಪೊಲೀಸ್ ಠಾಣೆಯಾದ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧೆಡೆ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವ ನಾಲ್ವರು ಆರೋಪಿಗಳನ್ನು ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸರು ಬಂಧಿಸಿ, ಹನ್ನೊಂದು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ದ.ಕ.ಜಿಲ್ಲಾ ಎಸ್ಪಿ ಭೂಷನ್ ಗುಲಾಬ್ ರಾವ್ ಬೊರಸೆ ತಿಳಿಸಿದ್ದಾರೆ.

ಮಂಗಳೂರಿನ ತಮ್ಮ ಕಚೇರಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಟ್ಲದ ಕುಕ್ಕರಬೆಟ್ಟು ಎಂಬಲ್ಲಿ ಪೊಲೀಸರನ್ನು ಕಂಡು ಯದ್ವಾತದ್ವಾ ಬೈಕ್ ಚಲಾಯಿಸುತ್ತಿದ್ದ ಮನ್ಸೂರ್ ಹಾಗೂ ಶಬೀರ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇವರ ಬೈಕ್ ಕಳ್ಳತನದ ಜಾಲ ಬಯಲಾಗಿದೆ.

ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪುತ್ತೂರು ಕಸ್ಬಾದ ಮನ್ಸೂರ್ (19), ಪುತ್ತೂರು ಪೆರ್ಲಡ್ಕದ ಶಬೀರ್ (19), ಪುತ್ತೂರು ಕಬಕದ ತೌಫಿಕ್ (22) ಹಾಗೂ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರದ ಮಜೀದ್ (25) ಎಂಬವರನ್ನು ಬಂಧಿಸಲಾಗಿದೆ ಎಂದು ಹೇಳಿದರು.

SP_Bhushan_gulab_2

ಆರೋಪಿಗಳು ಈಗಾಗಲೇ ಪುತ್ತೂರು, ಸುಳ್ಯ, ಬೆಳ್ತಂಗಡಿ, ಮಡಿಕೇರಿ ಮುಂತಾದ ಕಡೆಗಳಿಂದ ಬೈಕ್ ಕದ್ದು ಮಾಡಿ ಅವುಗಳಲ್ಲಿ ಐದನ್ನು ಮಾರಲು ಕುಂಬಳಬೆಟ್ಟು ಪರಿಸರದಲ್ಲಿ ಪಾಳು ಬಿದ್ದ ಮನೆಯಲ್ಲಿ ಇರಿಸಿದ್ದರು. ವಿಚಾರಣೆ ವೇಳೆ ಮತ್ತಿಬ್ಬರು ಆರೋಪಿಗಳಾದ ತೌಫಿಕ್ ಹಾಗೂ ಮಜೀದ್‌ನನ್ನೂ ಬಂಧಿಸಲಾಗಿದೆ ಎಂದವರು ಹೇಳಿದರು.

ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕರಾದ ಕೆ.ಯು.ಬೆಳ್ಳಿಯಪ್ಪ, ವಿಟ್ಲ ಪಿ.ಎಸ್.ಐ ಪ್ರಕಾಶ್ ದೇವಾಡಿಗ, ಎ.ಎಸ್.ಐ. ಜಿ ರುಕ್ಮಯ ಮೂಲ್ಯ ಹಾಗೂ ಸಿಬ್ಬಂದಿಗಳಾದ ಜಿನ್ನಪ್ಪ ಗೌಡ, ಜಯಕುಮಾರ್, ರಾಮಚಂದ್ರ, ಪ್ರವೀಣ್ ರೈ, ರಕ್ಷಿತ್ ರೈ, ರಮೇಶ್, ಭವಿತ್ ರೈ, ಪ್ರವೀಣ್ ಕುಮಾರ್, ಲೋಕೇಶ್, ಸತೀಶ್, ಶ್ರೀಧರ್, ಕೆ.ಎಸ್.ರಘುರಾಮ್, ಯೋಗೀಶ್, ಸಂಪತ್, ದಿವಾಕರ್ ಹಾಗೂ ಮಹಿಳಾ ಪಿಸಿಗಳಾದ ಗೀತಾ, ಪ್ರಮೀಳಾ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ ಕಳವು ಪ್ರಕರಣ ಭೇದಿಸಿದ ತಂಡಕ್ಕೆ ರೂ. 10.000 ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಎಸ್ಪಿಯವರು ತಿಳಿಸಿದರು.

Comments are closed.