ಅಂತರಾಷ್ಟ್ರೀಯ

ಶುಂಠಿ ನೀರು: ಆರೋಗ್ಯವೃದ್ಧಿಗೆ ಪನ್ನೀರು

Pinterest LinkedIn Tumblr

ginger

ಶುಂಠಿಯಲ್ಲಿನ ಔಷಧಯುಕ್ತ ಗುಣಗಳ ಬಗ್ಗೆ ಬಹುತೇಕರಿಗೆ ತಿಳಿದೇ ಇರುತ್ತದೆ. ಹಸಿಶುಂಠಿ, ಒಣಶುಂಠಿ ಬಳಕೆ ಮಹತ್ವ ತಿಳಿದು ಉಪಯೋಗಿಸಿದಾಗ ಇನ್ನಷ್ಟು ಅರ್ಥಪೂರ್ಣವೆನಿಸುತ್ತದೆ ಅಲ್ಲವೆ….?

ಸಾಂಬಾರ ಪದಾರ್ಥಗಳಲ್ಲಿ ಗುರುತಿಸಿಕೊಂಡಿರುವ ಹಸಿಶುಂಠಿಯಲ್ಲಿ ಹಲವು ಬಗೆಯ ಔಷಧಯುಕ್ತ ಅಂಶಗಳಿರುವುದೂ ಗಮನಾರ್ಹ. ಶುಂಠಿ ಹಸಿಯಾಗಿದ್ದಾಗ ಇರುವ ಗುಣಗಳು, ಒಣಗಿದಾಗಲೂ ಕಡಿಮೆಯಾಗುವುದಿಲ್ಲ ಎಂಬುದು ಮಹತ್ವವಾದ ಅಂಶವಾಗಿದೆ.

ಹಸಿಶುಂಠಿಯನ್ನು ನೀರಿನಲ್ಲಿ ನೆನೆಸಿಟ್ಟರೆ ಅದರಲ್ಲಿನ ಶಕ್ತಿ ಮತ್ತಷ್ಟು ಹೆಚ್ಚಾಗಲಿದೆ. ಇದರಲ್ಲಿ ಹಲವು ಆರೋಗ್ಯಕರ ಗುಣಗಳಿದ್ದು, ಹಲವು ರೋಗ ರುಜಿನಗಳಿಗೆ ಔಷಧವಾಗಿ ಉಪಯೋಗಿಸಬಹುದಾಗಿದೆ.

ಶುಂಠಿಯಲ್ಲಿನ ಗುಣಗಳ ಗರಿಷ್ಠ ಲಾಭ ಪಡೆಯಬೇಕೆಂದರೆ, ಅದನ್ನು ನೀರಿನಲ್ಲಿ ನೆನೆಸಿಟ್ಟು ನಂತರ, ನೀರನ್ನು ಕುಡಿಯಬೇಕು. ದೇಹದ ತೂಕ ಇಳಿಸಿಕೊಳ್ಳಬೇಕು ಎಂದು ಬಯಸುವವರಿಗೆ ಇದು ಸುಲಭ ಮಾರ್ಗ.

ಶುಂಠಿ ನೆನೆಸಿದ ನೀರನ್ನು ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ. ವಿಶೇಷವಾಗಿ ಹೊಟ್ಟೆಯಲ್ಲಿ ಸಂಗ್ರಹವಾಗುವ ಕಲ್ಮಶಗಳನ್ನು ನಿವಾರಿಸುವಲ್ಲಿ ಹೆಚ್ಚು ಉಪಕಾರಿಯಾಗುತ್ತದೆ.

ದಿನವಿಡೀ ಲವಲವಿಕೆಯಿಂದ ಇರಲು ಹಾಗೂ ತಾಜಾತನ ಅನುಭವಿಸಲು ಶುಂಠಿ ನೀರು ನೆರವಾಗುತ್ತದೆ. ಶುಂಠಿ ನೆನೆಸಿದ ನೀರು ತಯಾರಿಕೆ ಅಷ್ಟೇನೂ ಕಷ್ಟವಲ್ಲ.

ಒಂದು ಲೀಟರ್‌ನಷ್ಟು ನೀರನ್ನು ಪಾತ್ರೆಗೆ ತುಂಬಿ ಬಿಸಿ ಮಾಡಬೇಕು. ನೀರು ಕುದಿಯುವ ಹೊತ್ತಿಗೆ ಒಂದಿಚಿನಷ್ಟು ಹಸಿಶುಂಠಿಯನ್ನು ಚೆನ್ನಾಗಿ ಜಜ್ಜಿ ನೀರಿಗೆ ಹಾಕಬೇಕು. 15-20 ನಿಮಿಷ ಕುದಿಸಿದ ನಂತರ, ತಣ್ಣಗೆ ಮಾಡಿ ಕುಡಿಯಲಾರಂಭಿಸಬೇಕು.

ಕುದಿಸಿದ ನೀರಿಗೆ ನಿಂಬೆಹಣ್ಣಿನ ರಸ ಬೆರೆಸಿ ಕುಡಿದರೆ, ನಮ್ಮ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತದೆ. ಗಮನಿಸಬೇಕಾದ ಅಂಶವೆಂದರೆ, ಕುದಿಸಿದ ದಿನದಂದು ಮಾತ್ರ ಈ ನೀರು ಬಳಸಿದರೆ ಒಳ್ಳೆಯದು, ಮರುದಿನ ಬಳಸಬಾರದು.

ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗಿದೆ ಎಂಬ ಆತಂಕ ಇದ್ದವರು ನಿತ್ಯ ಇಂತಹ ನೀರನ್ನು ಕುಡಿಯಬೇಕು. ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತದೆ.
ಅಧಿಕ ರತ್ತದೊತ್ತಡ ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ಜತೆಗೆ ಕ್ಯಾನ್ಸರ್‌ನಂತಹ ರೋಗ ಬರುವುದನ್ನು ತಡೆಯಲಿದೆಯಂತೆ. ಕ್ಯಾನ್ಸರ್‌ಗೆ ಕಾರಣವಾಗುವ ಕಣಗಳನ್ನು ನಿಯಂತ್ರಿಸಬಲ್ಲ ಶಕ್ತಿಸಾಮರ್ಥ್ಯ, ಶುಂಠಿ ನೀರಿನಲ್ಲಿದೆ.

ಉರಿಯೂತದ ಕಾರಣ, ಮೂಳೆಗಳ ಸಂಧುಗಳಲ್ಲಿ ಉರಿ, ಸಂಧಿವಾತದ ತೊಂದರೆ ಇರುವವರು ಈ ನೀರನ್ನು ನಿಯಮಿತವಾಗಿ ಕುಡಿಯುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.
ಪ್ರತಿನಿತ್ಯ ಈ ನೀರನ್ನು ಸೇವಿಸಿದರೆ, ವಾಕರಿಕೆ, ಸುಸ್ತು, ಮುಂತಾದ ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ. ಸ್ನಾಯುಗಳ ನೋವು ಮತ್ತು ಅನಾಸಕ್ತಿಯನ್ನು ನಿವಾರಿಸುತ್ತದೆ ಎಂದೂ ಹೇಳಲಾಗಿದೆ.

ದೇಹದಲ್ಲಿನ ರೋಗ ನಿರೋಧಕ ಶಕ್ತಿ ವೃದ್ಧಿಸುವ ಅಂಶಗಳು ಇದರಲ್ಲಿರುವುದರಿಂದ ಪ್ರತಿನಿತ್ಯ ನಿಯಮಿತವಾಗಿ ಉಪಯೋಗಿಸಿ ಆರೋಗ್ಯವೃದ್ಧಿ ಮಾಡಿಕೊಳ್ಳಬಹುದಲ್ಲವೆ……?

Comments are closed.