ಕರಾವಳಿ

ಮಾಬುಕಳದಲ್ಲಿ ಅವ್ಯಾಹತವಾಗಿ ಮರಳುಗಾರಿಕೆ: ಅಧಿಕಾರಿಗಳ ದಿಡೀರ್ ದಾಳಿ; ಟಿಪ್ಪರ್,ದೋಣಿ ವಶ

Pinterest LinkedIn Tumblr

ಉಡುಪಿ: ಐರೋಡಿ ಪಂಚಾಯಿತಿ ವ್ಯಾಪ್ತಿಯ ಮಾಬುಕಳ ಸೇತುವೆಯ ಅಡಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮರಳುಗಾರಿಕೆಯನ್ನು ಗಮನಿಸಿ, ಮಂಗಳವಾರದಂದು ಜಿಲ್ಲಾಧಿಕಾರಿಯವರ ನಿರ್ದೇಶನದ ಮೇರೆಗೆ ಬ್ರಹ್ಮಾವರ ವಿಶೇಷ ತಹಶೀಲ್ದಾರ್ ತಿಪ್ಪೆಸ್ವಾಮಿ ಮತ್ತು ತಂಡದವರು ಧಿಢೀರ್ ದಾಳಿ ಮಾಡಿ ಸುಮಾರು 12 ಟಿಪ್ಪರ್ ಮತ್ತು 36 ಮರಳು ದೋಣಿಗಳನ್ನು ವಶಕ್ಕೆ ಪಡೆದುಕೊಂಡರು.

Brahmavara_Sand_Mining Raid(3) Brahmavara_Sand_Mining Raid(4) Brahmavara_Sand_Mining Raid(5)

ಐರೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಮರಳು ಗಣಿಗಾರರಿಗೆ ಸ್ವರ್ಗವಾಗಿದ್ದು, ವರ್ಷವಿಡಿ ಪ್ರತಿಭಟನೆ ನಡೆಸಿದ್ದರು ಕೂಡ ಹೊರ ರಾಜ್ಯಕ್ಕೆ ಮರಳು ಸಾಗಾಟ ಮಾಡುವ ದಂಧೆಯನ್ನು ತಡೆಯುವವರಿರಲ್ಲಿಲ್ಲ. ಇದರಿಂದ ಸ್ಥಳೀಯವಾಗಿರುವ ಪ್ರಾಕೃತಿಕ ಸಂಪತ್ತು ನಾಶವಾಗಿರುವುದಲ್ಲದೆ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳು ಕೂಡ ಕಿತ್ತೇದ್ದು ಹೋಗಿದ್ದವು. ಇತ್ತೀಚೆಗೆ ಮರಳಿ ಗಣಿಗಾರಿಕೆಗೆ ಜಿಲ್ಲಾಡಳಿತ ನಿಷೇಧ ಹೇರಿದ ಬೆನ್ನಲ್ಲೆ ಐರೋಡಿಯ ಬಹುತೇಕ ಎಲ್ಲಾ ಮರಳು ಧಕ್ಕೆಗಳು ನಿಶ್ಯಬ್ಧವಾಗಿದ್ದವು. ಆದರೆ ಕೆಲವು ದಿನಗಳಿಂದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಯೇ, ಮಾಬುಕಳ ಸೇತುವೆಯ ಅಡಿಯಲ್ಲಿ ರಾಜಾರೋಷವಾಗಿ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಕೂಡ, ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಮಂಗಳವಾರದಂದು ಜಿಲ್ಲಾಧಿಕಾರಿಯವರು ಇಲ್ಲಿನ ಸಮಸ್ಯೆಯನ್ನು ಗಮನಿಸಿ, ಕುದ್ರುಗಳು ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಬುಕಳ ಸೇತುವೆಗೆ ಮರಳು ಗಣಿಗಾರಿಕೆಯಿಂದ ಹಾನಿಯಾಗುವುದನ್ನು ಗಮನಿಸಿ, ವಿಶೇಷ ತಹಶೀಲ್ದಾರ್ ತಿಪ್ಪೆಸ್ವಾಮಿ, ಕಂದಾಯ ಅಧಿಕಾರಿ ಸುಧಾಕರ್ ಶೆಟ್ಟಿ, ಐರೋಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯರಾಮ್ ಶೆಟ್ಟಿ, ಐರೋಡಿ ಪಂಚಾಯಿತಿ ಅಧ್ಯಕ್ಷ ಮೊಸೇಸ್ ರೊಡ್ರಿಗಸ್, ಗ್ರಾಮಲೆಕ್ಕಿಗ ಚೆಲುವರಾಜ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹೇಶ್ ಮತ್ತು ಕೋಟ ಪೊಲೀಸ್ ಸಿಬ್ಬಂದಿಗಳು ದಿಢೀರ್ ದಾಳಿ ನಡೆಸಿ. ಮರಳು ತುಂಬಿದ್ದ 8 ಟಿಪ್ಪರ್, ಮರಳು ತುಂಬಿಸಿಕೊಳ್ಳಲು ಸರತಿಯಲ್ಲಿದ್ದ 4 ಖಾಲಿ ಟಿಪ್ಪರ್ ಮತ್ತು ಮರಳು ಗಣಿಗಾರಿಕೆ ನಡೆಸುತ್ತಿದ್ದ 36 ದೋಣಿಗಳನ್ನು ವಶಕ್ಕೆ ಪಡೆದುಕೊಂಡರು.

ಈ ಸಂದರ್ಭ ಅಧಿಕಾರಿಗಳು ಮತ್ತು ಮರುಳು ಧಕ್ಕೆಯ ಮಾಲಕರಿಗೂ ಮಾತುಕತೆ ನಡೆದಿದ್ದು, ಜಿಲ್ಲಾಡಳಿತದ ಆದೇಶದ ಬಗ್ಗೆ ಮಾಹಿತಿ ಇಲ್ಲದ ಹಿನ್ನಲೆಯಲ್ಲಿ ಮರಳುಗಾರಿಕೆ ನಡೆಸುತ್ತಿರುವುದಾಗಿ ತಿಳಿಸಿದರು. ಮರಳು ಧಕ್ಕೆಯವರಲ್ಲಿ ಮರಳು ಗಣಿಗಾರಿಕೆ ಅನುಮತಿ ಇರುವ ಹಿನ್ನಲೆಯಲ್ಲಿ ಮತ್ತು ಜಿಲ್ಲಾಡಳಿತ ತಡೆಯಾಜ್ಞೆ ವಿಧಿಸಿದ್ದರು ಸೇತುವೆಯ ನೂರು ಮೀಟರ್ ಒಳಗೆ ಮರಳು ಗಣಿಗಾರಿಕೆ ನಡೆಸುತ್ತಿರುವ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮದಂತೆ ದಂಡ ವಿಧಿಸಿ. ಕಾನೂನು ಉಲ್ಲಂಘನೆಯಾಗದಂತೆ ಗಣಿಗಾರಿಕೆ ಮಾಡದಂತೆ ಎಚ್ಚರಿಕೆ ನೀಡಿ ಟಿಪ್ಪರ್ ಮತ್ತು ದೋಣಿಗಳನ್ನು ಬಿಡಲಾಯಿತು.

ಘಟನಾಸ್ಥಳದಲ್ಲಿ ಐರೋಡಿ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Comments are closed.