ಕರಾವಳಿ

ಕುಂದಾಪುರದಲ್ಲಿ ಗುಟ್ಕಾ, ಪಾನ್ ಮಸಾಲ ಉತ್ಪನ್ನಕ್ಕೆ ಕನ್ನ ಹಾಕುವ ಜಾಲ; ಪೊಲೀಸರಿಂದ ಆಟೋ ರಿಕ್ಷಾ,ಬೈಕ್ ವಶ

Pinterest LinkedIn Tumblr

ಕುಂದಾಪುರ: ಗೋಡೌನ್‌ನಲ್ಲಿ ಸಂಗ್ರಹಿಸಿಡಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಪಾನ್ ಮಸಾಲ ಉತ್ಪನ್ನಗಳನ್ನು ಕಳ್ಳರ ತಂಡ ವ್ಯವಸ್ಥಿತವಾಗಿ ಕಳವುಗೈಯುತ್ತಿದ್ದ ಜಾಲವೊಂದು ಕುಂದಾಪುರದ ಪ್ರಭಾತ್ ಸ್ಟೋರ್‍ಸ್ ಗೂ ಕನ್ನ ಹಾಕಿದ್ದು ಈ ವೇಳೆ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಕುಂದಾಪುರ ಪೊಲೀಸರು ಕೃತ್ಯಕ್ಕೆ ಬಳಸಿದ್ದ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Gutka_Theft Case_Kundapur (3) Gutka_Theft Case_Kundapur (2) Gutka_Theft Case_Kundapur (1) Gutka_Theft Case_Kundapur (6) Gutka_Theft Case_Kundapur (5) Gutka_Theft Case_Kundapur (4)

ಪ್ರಭಾತ್ ಸ್ಟೋರ್ ಮಾಲಕರು ಹೋಲ್ ಸೇಲ್ ದರದಲ್ಲಿ ವ್ಯಾಪಾರ ಮಾಡುತ್ತಿದ್ದು, ತಮ್ಮ ಅಂಗಡಿಯ ಹಿಂಭಾಗದಲ್ಲಿ ಸ್ವಂತ ಗೋಡೌನ್‌ನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಪಾನ್ ಮಸಾಲ ಉತ್ಪನ್ನಗಳನ್ನು ಸಂಗ್ರಹಿಸಿಟ್ಟಿದ್ದರು. ಒಂದೂವರೆ ತಿಂಗಳ ಹಿಂದೆ ಗೋಡೌನ್‌ನಲ್ಲಿಡಲಾಗಿದ್ದ ಅಂದಾಜು ಒಂದು ಲಕ್ಷ ರೂಪಾಯಿ ಮೌಲ್ಯದ ಮಸಾಲಾ ಉತ್ಪನ್ನಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿತ್ತು. ಆದರೇ ಯಾವುದೇ ಸುಳಿವು ಮಾತ್ರ ಈ ಬಗ್ಗೆ ಲಭ್ಯವಾಗದ ಹಿನ್ನೆಲೆ ಗೊಡೌನಿಗೆ ಕೊಂಚ ಭದ್ರತೆ ಜಾಸ್ಥಿಗೊಳಿಸಿ ಸುಮ್ಮನಾಗಿದ್ದರು.

ರಾತ್ರಿ ಅಂಗಡಿ ಮಾಲಕರು ಹೊರಗಡೆ ಸುತ್ತಾಡಿಕೊಂಡು ಬರಲೆಂದು ಹೊರಗಡೆ ಬರುತ್ತಿರುವಾಗ ಅನುಮಾನಾಸ್ಪದವಾಗಿ ಒಂದು ಆಟೋ ರಿಕ್ಷಾ ನಿಂತಿರುವುದನ್ನು ಗಮನಿಸಿದ್ದು, ಸಮೀಪ ಹೋಗಿ ಆಟೋ ನಂಬರ್ ಬರೆದಿಟ್ಟುಕೊಂಡಿದ್ದಾರೆ. ಇದನ್ನು ಗಮನಿಸಿದ ಆಟೋ ಚಾಲಕ ತಕ್ಚಣ ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ. ಅನುಮಾನಗೊಂಡ ಮಾಲಕರು ಗೋಡೌನ್‌ಗೆ ಬಂದು ನೋಡಿದಾಗ ಕಳವು ಪ್ರಕರಣ ಪತ್ತೆಯಾಗಿದೆ.

ಕಳ್ಳರು ಗೋಡೌನ್ ಹಿಂಭಾಗಕ್ಕೆ ಸರಿದು ಅಲ್ಲಿರುವ ಕಾಂಕ್ರೀಟ್ ಕಟ್ಟಡಕ್ಕೆ ಹತ್ತಿ ಗೋಡೌನ್ ಮೇಲಿನ ಛಾವಣಿಗೆ ಹಾಕಲಾದ ಹೆಂಚು ಸರಿಸಿ ಒಳನುಸುಳಿ ಲಕ್ಷಾಂತರ ರೂ ಮೌಲ್ಯದ ಉತ್ಪನ್ನಗಳನ್ನು ಹೊರತೆಗೆದಿದ್ದು, ಒಂದಷ್ಟನ್ನು ಆಟೋದಲ್ಲಿ ತುಂಬಿಸಿ ಸಾಗಿಸಲಾಗಿದೆ. ಉಳಿದಂತೆ ಸುಮಾರು ೧೫ಕ್ಕೂ ಹೆಚ್ಚು ಚೀಲಗಳನ್ನು ಗೋಡೌನ್ ಹಿಂದೆಯೇ ಬಿಡಲಾಗಿದೆ. ನಾಲ್ಕು ಚೀಲಗಳನ್ನು ಗೋಡೌನ್ ಪಕ್ಕದ ಕಾಂಕ್ರೀಟ್ ಛಾವಣಿಯ ಮೇಲಿಡಲಾಗಿದೆ. ಆದರೆ ಅಂಗಡಿ ಮಾಲಕರಿಗೆ ಅನುಮಾನ ಬಂದಿದೆ ಎನ್ನುವುದು ಗೊತ್ತಾಗುತ್ತಲೇ ದುಷ್ಕರ್ಮಿಗಳ ತಂಡ ಆಟೋವನ್ನು ಒಂದೆಡೆ ನಿಲ್ಲಿಸಿ ಪರಾರಿಯಾಗಿದ್ದಾರೆ.

ತಕ್ಷಣ ಮಾಹಿತಿ ಪಡೆದ ವೃತ್ತ ನಿರೀಕ್ಷಕ ಪಿ‌ಎಂ ದಿವಾಕರ ಸ್ಥಳಕ್ಕೆ ಬೇಟಿ ನೀಡಿ ಕಳ್ಳರನ್ನು ಬೆನ್ನಟ್ಟಿದ್ದು, ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಆಟೋ ಹಾಗೂ ಬೈಕನ್ನು ವಶಪಡಿಸಿಕೊಂಡಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಅನುಮಾನಿತ ವ್ಯಕ್ತಿಗಳನ್ನು ತನಿಖೆಗೊಳಪಡಿಸಿದ್ದಾರೆ.

Comments are closed.