
ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಬಡವರಿಗೆ ಉಚಿತವಾಗಿ ಔಷಧ ಮತ್ತು ಚಿಕಿತ್ಸೆಗಾಗಿ ಕೇಂದ್ರ ಬಿಡುಗಡೆ ಮಾಡಿದ್ದ ಅನುದಾನ ದುರ್ಬಳಕೆಯಾಗಿದೆ ಎಂದು ಬಿಬಿಎಂಪಿ ಮಾಜಿ ಸದಸ್ಯ ಎನ್.ಆರ್.ರಮೇಶ್ ಆರೋಪ ಆಧಾರರಹಿತ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರೀತಿಯ ತಪ್ಪು ಮಾಹಿತಿ ನೀಡಿರುವ ಎನ್.ಆರ್.ರಮೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಜೊತೆಗೆ ಕಾನೂನು ಹೋರಾಟ ನಡೆಸಲು ಚಿಂತನೆ ನಡೆಸಲಾಗಿದೆ ಎಂದರು.
ಈ ಆರೋಪ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ವಿವರಣೆ ನೀಡಿದ್ದೇನೆ. ಪ್ರಚಾರಕ್ಕಾಗಿ ಈ ರೀತಿಯ ಸುಳ್ಳು ಆರೋಪ ಮಾಡಲಾಗುತ್ತಿದೆ. ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲ ನಿವಾರಣೆಗಾಗಿ ಯಾವುದೇ ರೀತಿಯ ತನಿಖೆಗೆ ತಾವು ಸಿದ್ಧ ಎಂದು ಘೋಷಿಸಿದ್ದಾರೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಸಿರುವ ಔಷಧಿಗಳನ್ನು 10 ರಿಂದ 15 ಪಟ್ಟು ದುಬಾರಿ ಬೆಲೆಗೆ ಖರೀದಿಸಲಾಗಿದೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪಾರದರ್ಶಕವಾಗಿ ನಡೆದುಕೊಂಡು ಬಂದಿದೆ. ಪ್ರತಿಯೊಂದು ಮಾಹಿತಿಯೂ ಲಭ್ಯವಾಗಲಿದೆ. ಆದರೆ ಯಾವುದೇ ಸೂಕ್ತ ಆಧಾರವಿಲ್ಲದೆ ತಪ್ಪು ಮಾಹಿತಿ ನೀಡಿ ಆರೋಪ ಮಾಡಲಾಗಿದೆ ಎಂದು ದೂರಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿರುವ ಶಾಲಿನಿ ರಜನೀಶ್ ಕೇವಲ 15 ದಿನಗಳ ಹಿಂದೆಯಷ್ಟೆ ಈ ಇಲಾಖೆಗೆ ಬಂದಿದ್ದಾರೆ. ಟೆಂಡರ್ ಆಗಿರುವುದು ಬೇರೆಯವರ ಕಾಲದಲ್ಲಿ. ದುರುದ್ದೇಶಪೂರ್ವಕವಾಗಿ ಈ ರೀತಿಯ ಆರೋಪ ಮಾಡಲಾಗುತ್ತಿದೆ ಎಂದರು.
Comments are closed.