ಕರಾವಳಿ

ಬದಲಾಗದ ಯಡಿಯೂರಪ್ಪ ! ಮತ್ತೆ ಒಡೆದ ಮನೆಯಾದ ಬಿಜೆಪಿ

Pinterest LinkedIn Tumblr

yaddi-ananth

ರಾಜ್ಯ ಬಿಜೆಪಿ ಮತ್ತೆ ಒಡೆದ ಮನೆಯಾಗಿದೆ. ಹಿರಿಯ ನಾಯಕರ ನಡುವೆ ತಾಳ, ಮೇಳ ಎರಡೂ ತಪ್ಪಿರುವುದರಿಂದ ಎತ್ತು ಏರಿಗೆ ಕೋಣ ನೀರಿಗೆ ಎಂಬಂತಾಗಿದೆ ಪಕ್ಷದ ಸ್ಥಿತಿ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯಾಧ್ಯಕ್ಷರಾದ ಮೇಲೆ ಪಕ್ಷದೊಳಗಿನ ಬಣ ಒಂದಾಗಬಹುದೆಂಬ ನಿರೀಕ್ಷೆಯಿತ್ತು. ವರಿಷ್ಠರು ಕೂಡ ಇದೇ ಸಂದೇಶವನ್ನು ರವಾನಿಸಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಕ್ಷ ಸಂಘಟಿಸಬೇಕೆಂಬ ಸಲಹೆ ಮಾಡಿದ್ದರು. ಆದರೆ, ಇತ್ತೀಚೆಗೆ ಪಕ್ಷದೊಳಗೆ ನಡೆಯುತ್ತಿರುವ ಕೆಲವು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದೇ ರಾಗ ಅದೇ ಹಾಡು ಎನ್ನುವಂತಾಗಿದೆ.

ಪರಸ್ಪರ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗದು. ಕಾಲೆಳೆಯುವ ಇಲ್ಲವೆ ಮುಖ ಕೊಟ್ಟು ಮಾತನಾಡದಷ್ಟು ಹಿರಿಯ ನಾಯಕರು ದೂರವಾಗಿದ್ದಾರೆ. ನಾನೊಂದು ತೀರ ನೀನೊಂದು ತೀರ ಎನ್ನುವಂತೆ ಯಡಿಯೂರಪ್ಪ ಬಣ, ಜಗದೀಶ್ ಶೆಟ್ಟರ್ ಬಣ, ಜೋಷಿ ಬಣ ಹೀಗೆ ಹಲವು ಬಣಗಳ ನಡುವೆ ಕಮಲ ವಿಲವಿಲ ಎನ್ನುವಂತಾಗಿದೆ.

ಕಾರಣವೇನು..?

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಯಡಿಯೂರಪ್ಪ ಅವರಿಗೆ ಪಕ್ಷದ ಸಾರಥ್ಯ ವಹಿಸಿದ ಮೇಲೆ ವರಿಷ್ಠರು ಸೂಚಿಸಿದ ಒಂದೇ ಒಂದು ಅಂಶವೆಂದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಬಲಪಡಿಸಬೇಕು. ಯಾವುದೇ ಕಾರಣಕ್ಕೂ ಪಕ್ಷದೊಳಗೆ ಬಣಗಳಿಗೆ ಅವಕಾಶ ನೀಡಬಾರದು. ಪದಾಧಿಕಾರಿಗಳ ನೇಮಕಾತಿ ಸೇರಿದಂತೆ ಪ್ರತಿಯೊಂದು ವಿಷಯದಲ್ಲೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕೆಂದು ಸಲಹೆ ಮಾಡಿದರು. ಮೊದಲು ಈ ಎಲ್ಲ ಷರತ್ತುಗಳಿಗೆ ಒಪ್ಪಿಕೊಂಡೇ ಹುದ್ದೆ ಅಲಂಕರಿಸಿದ ಯಡಿಯೂರಪ್ಪ ಇದೀಗ ಆನೆ ನಡೆದದ್ದೇ ದಾರಿ ಎಂಬಂತೆ ಇಡೀ ಪಕ್ಷವನ್ನೇ ಆಪೋಷನ ತೆಗೆದುಕೊಂಡಿದ್ದಾರೆಂಬ ಮಾತುಗಳು ಪಕ್ಷದ ಕಚೇರಿಯಲ್ಲಿ ಕೇಳಿಬರುತ್ತಿವೆ.

ಯಡಿಯೂರಪ್ಪ ಹಿಂದಿನಂತೆ ತಪ್ಪು ಮಾಡದೆ ಎಲ್ಲರನ್ನೂ ಒಗ್ಗೂಡಿಸಿಕೊಂಡೇ ಪಕ್ಷ ಸಂಘಟನೆ ಮಾಡುತ್ತಾರೆಂಬ ವಿಶ್ವಾಸ ಹುಸಿಯಾಗಿದೆ ಎನ್ನುವ ಅಸಮಾಧಾನ ಪ್ರತಿಯೊಬ್ಬರಲ್ಲೂ ಕೇಳಿಬರುತ್ತಿದೆ. ಈ ಮೊದಲು ಯಡಿಯೂರಪ್ಪ ಎಂದರೆ ಬಿಜೆಪಿ, ಬಿಜೆಪಿ ಎಂದರೆ ಯಡಿಯೂರಪ್ಪ ಎಂಬ ಮಾತಿತ್ತು. ಕಾಲ ಬದಲಾದರೂ ಬಿಎಸ್‌ವೈ ಇನ್ನೂ ಅದೇ ಗುಂಗಿನಲ್ಲಿ ಇದ್ದಾರೆ ಎನ್ನುವುದು ಕೆಲವರ ಆರೋಪವಾಗಿದೆ. ರಾಜ್ಯಾಧ್ಯಕ್ಷರಾದ ಬಳಿಕ ಯಡಿಯೂರಪ್ಪ ಪಕ್ಷದ ಹಿರಿಯರನ್ನೊಳಗೊಂಡ ಕೋರ್ ಕಮಿಟಿ ಸಭೆಯನ್ನೂ ನಡೆಸಲಿಲ್ಲ. ಕೇವಲ ಔಪಚಾರಿಕವೆಂಬಂತೆ ಜಿಲ್ಲಾವಾರು ಸಭೆಗಳನ್ನು ನಡೆಸಿದ್ದನ್ನು ಹೊರತುಪಡಿಸಿದರೆ ಪಕ್ಷ ಸಂಘಟನೆ ಕುರಿತಂತೆ ಹಿರಿಯರ ಮತ್ತು ಎರಡನೆ ಹಂತದ ನಾಯಕರ ಸಲಹೆ-ಸೂಚನೆ, ನಿರ್ದೇಶನಗಳನ್ನು ಪಾಲನೆ ಮಾಡಲಿಲ್ಲ.

ಶೆಟ್ಟರ್-ಬಿಎಸ್‌ವೈ ದೂರಾದೂರ:

ಇನ್ನು ಯಡಿಯೂರಪ್ಪ ಮತ್ತು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ನಡುವಿನ ಸಂಬಂಧ ಹಾವು-ಮುಂಗುಸಿಯಂತಿದೆ. ಶೆಟ್ಟರ್ ಎಂದರೆ ಬಿಎಸ್‌ವೈ ದೂರಾದೂರ. ಇನ್ನು ಬಿಎಸ್‌ವೈ ಎಂದರೆ ಶೆಟ್ಟರ್‌ಗೂ ಅಷ್ಟೆ. ಎಣ್ಣೆ-ಸೀಗೆಕಾಯಿ ಎನ್ನುವಂತಿದೆ. ಇತ್ತೀಚೆಗೆ ರಾಜ್ಯದಲ್ಲಿ ಬರ ಪ್ರವಾಸ ಕೈಗೊಳ್ಳಲಾಗಿತ್ತು. ಈ ಸಂಬಂಧ ಪಕ್ಷದ ವತಿಯಿಂದ ಸಿದ್ಧಪಡಿಸಿದ್ದ ವರದಿಯನ್ನು ರಾಜ್ಯಪಾಲರಿಗೆ ನೀಡಲು ತೀರ್ಮಾನಿಸಲಾಗಿತ್ತು. ಸ್ವತಃ ಹಿರಿಯ ನಾಯಕರ ನಿಯೋಗ ರಾಜ್ಯಪಾಲರಿಗೆ ವರದಿ ನೀಡಬೇಕೆಂಬ ತೀರ್ಮಾನವನ್ನು ಪಕ್ಷದ ವಲಯದಲ್ಲಿ ಕೈಗೊಳ್ಳಲಾಗಿತ್ತು. ಆದರೆ, ಈ ನಿಯೋಗಕ್ಕೆ ಬಿಎಸ್‌ವೈ ಶೆಟ್ಟರ್ ಅವರನ್ನು ಆಹ್ವಾನಿಸಲಿಲ್ಲ. ಬದಲಿಗೆ ತಮ್ಮ ಹಿಂದೆ ಮುಂದೆ ಜೈಕಾರ ಹಾಕುವ ನಾಯಕರನ್ನೇ ಕರೆದೊಯ್ದರು.

ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸರ್ಕಾರದ ವೈಫಲ್ಯಗಳನ್ನು ಒಳಗೊಂಡ ಪಟ್ಟಿಯನ್ನು ಶೆಟ್ಟರ್ ಕಿರುಹೊತ್ತಿಗೆ ಮೂಲಕ ಬಿಡುಗಡೆ ಮಾಡಲು ಮುಂದಾದರು.

ಈ ಪತ್ರಿಕಾಗೋಷ್ಠಿಗೆ ಶೆಟ್ಟರ್ ಬಿಎಸ್‌ವೈ ಅವರನ್ನು ಆಹ್ವಾನಿಸಿದ್ದರು ಎನ್ನಲಾಗಿದೆ. ಆದರೆ, ಉದ್ದೇಶಪೂರ್ವಕವಾಗಿಯೇ ಯಡಿಯೂರಪ್ಪ ಅಂದು ಲೋಕಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿದ್ದರು.

ಪದಾಧಿಕಾರಿಗಳ ನೇಮಕದಲ್ಲೂ ಬಿಎಸ್‌ವೈ ಹಸ್ತಕ್ಷೇಪ: ಇನ್ನು ಪದಾಧಿಕಾರಿಗಳ ನೇಮಕಾತಿಯಲ್ಲಿ ಬಿಎಸ್‌ವೈ ತಮ್ಮ ಆಪ್ತರನ್ನೇ ನೇಮಕ ಮಾಡಲು ಮುಂದಾಗಿರುವುದು ಪಕ್ಷದಲ್ಲಿ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿದೆ.

ಪಕ್ಷಕ್ಕೆ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪದಾಧಿಕಾರಿಗಳನ್ನಾಗಿ ನೇಮಕ ಮಾಡುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಆದರೆ, ಇದಕ್ಕೆ ಬಿಎಸ್‌ವೈ ತಿಲಾಂಜಲಿ ನೀಡಿದ್ದಾರೆ.

ಬದಲಿಗೆ ಈ ಹಿಂದೆ ಪಕ್ಷ ಬಿಟ್ಟು ಕೆಜೆಪಿ ಜತೆ ಗುರುತಿಸಿಕೊಂಡಿದ್ದ ಬೆಂಬಲಿಗರನ್ನೇ ನೇಮಕ ಮಾಡಲು ಮುಂದಾಗಿರುವುದು ಮೂಲ ಬಿಜೆಪಿಗರ ಕಣ್ಣು ಕೆಂಪಾಗುವಂತೆ ಮಾಡಿದೆ.

ಒಟ್ಟಿನಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಿ ಅಧಿಕಾರ ಹಿಡಿಯುತ್ತೇವೆಂಬ ರಣೋತ್ಸಾಹದಲ್ಲಿ ಕಮಲ ಪಡೆ ದಿನದಿಂದ ದಿನಕ್ಕೆ ನೂರೆಂಟು ಬಣಗಳಾಗುತ್ತಿವೆಯೇ ಹೊರತು, ಇತಿಹಾಸದಿಂದ ಪಾಠ ಕಲಿತಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ.

Comments are closed.