ಕರ್ನಾಟಕ

ರಾಜ್ಯಸಭೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ವಿ.ಆರ್.ಸುದರ್ಶನ್…!

Pinterest LinkedIn Tumblr

sudarshan

ರಾಜ್ಯಸಭಾ ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್‌ನಲ್ಲಿ ಚಟುವಟಿಕೆಗಳು ಚುರುಕುಗೊಂಡಿದ್ದು, ಮೊದಲ ಅಭ್ಯರ್ಥಿಯಾಗಿ ಆಸ್ಕರ್ ಫರ್ನಾಂಡಿಸ್ ಆಯ್ಕೆ ಖಚಿತವಾಗಿದ್ದು, 2ನೆ ಅಭ್ಯರ್ಥಿಯಾಗಿ ವಿ.ಆರ್.ಸುದರ್ಶನ್ ಅವರನ್ನು ಆಯ್ಕೆ ಮಾಡಲು ಸರ್ಕಾರ ಒಲವು ವ್ಯಕ್ತಪಡಿಸಿರುವುದು ಕಂಡು ಬಂದಿದೆ. ಮೇಲ್ಮನೆ ಸಭಾಪತಿಯಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದ ವಿ.ಆರ್.ಸುದರ್ಶನ್ ಅವರು ಕಾಂಗ್ರೆಸ್‌ನ ವಕ್ತಾರರಾಗಿ ಕೆಲಸ ಮಾಡಿದ್ದರು. ಅತ್ಯಂತ ಪ್ರಾಮಾಣಿಕ ರಾಜಕಾರಣಿಗಳಲ್ಲಿ ಒಬ್ಬರು. ಕರ್ನಾಟಕ ಲೋಕಸೇವಾ ಆಯೋಗಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಸರ್ಕಾರ ಶಿಫಾರಸು ಮಾಡಿತ್ತು.

ಹಲವು ತಾಂತ್ರಿಕ ಕಾರಣಗಳು ಹಾಗೂ ಅವರ ಮೇಲೆ ಕೇಳಿಬಂದ ಸಣ್ಣಪುಟ್ಟ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯಪಾಲರು ಅವರ ಹೆಸರನ್ನು ತಿರಸ್ಕರಿಸಿದರು.

ಅಂದಿನಿಂದ ವಿ.ಆರ್. ಸುದರ್ಶನ್ ಅವರು ಕೆಪಿಸಿಸಿ ವಕ್ತರರಾಗಿ ಕಾರ್ಯ ನಿರ್ವಹಿ ಸುತ್ತಿದ್ದರು. ಈಗ ರಾಜ್ಯಸಭಾ ಚುನಾವಣೆ ಎದುರಾಗಿದ್ದು, ಎರಡು ಸ್ಥಾನಗಳನ್ನು ಬಹುಮತ ವಿರುವ ಕಾಂಗ್ರೆಸ್ ಪಕ್ಷ ಸುಲಭ ವಾಗಿ ಆರಿಸಿ ಕಳುಹಿಸಬಹು ದಾಗಿದೆ. ಹೈಕಮಾಂಡ್ ಆದೇಶದಂತೆ ಆಸ್ಕರ್ ಫರ್ನಾಂಡಿಸ್ ಅವರನ್ನು ಆಯ್ಕೆ ಮಾಡ ಬೇಕಿದೆ. ಮತ್ತೊಂದು ಸ್ಥಾನಕ್ಕೆ ಮುಖ್ಯಮಂತ್ರಿ ಗಳು ಹಾಗೂ ಮತ್ತವರ ಪಡೆ ಸುದರ್ಶನ್ ಅವರ ಹೆಸರನ್ನು ಶಿಫಾರಸು ಮಾಡುವ ಸಾಧ್ಯತೆಯಿದೆ. ಈ ಸಂಬಂಧ ಇದೇ 21ರಂದ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ನಡೆಸುವ ಮಾತುಕತೆ ಸಂದರ್ಭದಲ್ಲಿ ಈ ಪ್ರಸ್ತಾಪ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಉತ್ತಮ ವಾಗ್ಮಿ , ಸಂವಿಧಾನ ತಜ್ಞರೂ ಆಗಿರುವ ವಿ.ಆರ್. ಸುದರ್ಶನ್ ಅವರು ಅವಕಾಶ ವಂಚಿತರಾಗಿರುವುದರಿಂದ ಅವರನ್ನು ರಾಜ್ಯಸಭೆಗೆ ಆರಿಸಿ ಕಳುಹಿಸಬೇಕೆಂಬ ಇರಾದೆ ಮುಖ್ಯಮಂತ್ರಿಗಿದೆ. ಹೈಕಮಾಂಡ್ ಯಾವ ರೀತಿ ಪರಿಗಣಿಸುತ್ತದೆ ಎಂಬುದನ್ನು ಕಾದು ನೋಡಬೇಕು. ಹೆಚ್ಚುವರಿ ಮತಗಳ ಮೂಲಕ ಪಕ್ಷೇತರರ ಬೆಂಬಲದಿಂದ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಪ್ರಯತ್ನ ನಡೆಸಿದೆ ಎಂದು ಹೇಳಲಾಗುತ್ತಿದೆ. ಆದರೆ ಇನ್ನೂ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ.

ಮೇಲ್ಮನೆಗೆ ಪೈಪೋಟಿ:

ವಿಧಾನಪರಿಷತ್‌ನಲ್ಲಿ ಖಾಲಿಯಾಗಿರುವ 7 ಸ್ಥಾನಗಳಿಗೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ತೀವ್ರ ಪೈಪೋಟಿ ಎದುರಾಗಿದೆ. ಬಹುಮತ ಹೊಂದಿರುವ ಕಾಂಗ್ರೆಸ್ ಪಕ್ಷ ನಾಲ್ಕು ಸ್ಥಾನಗಳನ್ನು ನಿರಾಯಾಸವಾಗಿ ಗೆಲ್ಲಬಹುದು. ಈ ಸ್ಥಾನಗಳಿಗೆ ಸುಮಾರು 20ಕ್ಕೂ ಹೆಚ್ಚು ಆಕಾಂಕ್ಷಿಗಳು ಪೈಪೋಟಿ ನಡೆಸಿದ್ದಾರೆ. ಮಾಜಿ ಮೇಯರ್ ರಾಮಚಂದ್ರಪ್ಪ , ಸೇವಾದಳದ ಅಧ್ಯಕ್ಷರಾಗಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಸುರೇಶ್, ಬಸವರಾಜು, ರಾಣಿ ಸತೀಶ್, ಮಲಾಜಮ್ಮ, ರತ್ನ ಪ್ರಭಾ, ರಮ್ಯಾ, ಭಾವನಾ, ಪ್ರೊ.ಬಿ.ಕೆ.ಚಂದ್ರಶೇಖರ್ ಸೇರಿದಂತೆ ಹಲವರು ಆಯ್ಕೆ ಬಯಸಿ ಲಾಬಿ ಶುರು ಮಾಡಿಕೊಂಡಿದ್ದಾರೆ. ಹಾಲಿ ಇರುವ ಆರ್.ವಿ.ವೆಂಕಟೇಶ್ ಮುಂತಾದವರು ಮರು ಆಯ್ಕೆ ಬಯಸಿದ್ದಾರೆ.

ಮೇಲ್ಮನೆಗೆ ನಾಮನಿರ್ದೇಶನ ಸದಸ್ಯತ್ವಕ್ಕೂ ಹಲವರ ಪೈಪೋಟಿ ಜೋರಾಗಿದೆ. ಬರಗೂರು ರಾಮಚಂದ್ರಪ್ಪ , ಎಸ್.ಜಿ. ಸಿದ್ದರಾಮಯ್ಯ, ಡಾ.ಕೆ.ಮರುಳಸಿದ್ದಪ್ಪ, ಪ್ರೊ.ಜಿ.ಕೆ.ಗೋವಿಂದರಾವ್ ಸೇರಿದಂತೆ ಹಲವಾರು ಮುಖಂಡರ ಹೆಸರುಗಳು ಕೇಳಿಬಂದಿವೆ.

Comments are closed.