ಕರಾವಳಿ

ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಶಿರಸಿಯ ಮಹಿಮಾ

Pinterest LinkedIn Tumblr

mahima

ಶಿರಸಿ (ಉತ್ತರ ಕನ್ನಡ): ‘ರ್‍ಯಾಂಕ್ ಪಡೆಯಬೇಕೆಂದು ಯೋಚಿಸಿ ಎಂದಿಗೂ ಅಭ್ಯಾಸ ಮಾಡಿಲ್ಲ. ಉತ್ತಮ ಅಂಕ ಗಳಿಸುವುದು ನನ್ನ ಗುರಿಯಾಗಿತ್ತು ಅಷ್ಟೇ…’

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ (624 ಅಂಕ) ಪಡೆದಿರುವ ಶಿರಸಿ ತಾಲ್ಲೂಕಿನ ಹುಲೇಕಲ್ ಶ್ರೀದೇವಿ ಪ್ರೌಢಶಾಲೆ ವಿದ್ಯಾರ್ಥಿನಿ ಮಹಿಮಾ ಮಂಜುನಾಥ ಭಟ್ ಸಂತಸದ ನುಡಿಗಳಿವು.

ಈಕೆಯ ಅಪ್ಪ– ಅಮ್ಮ ಕುಗ್ರಾಮವಾಗಿರುವ ಬೆಣಗಾಂವದಲ್ಲಿ ರೈತರು. ಈ ಹಳ್ಳಿಯಲ್ಲಿ ಸಾರಿಗೆ, ದೂರವಾಣಿ ಸಂಪರ್ಕ ಕೊರತೆ ಕಾರಣ ಮಹಿಮಾ 1ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೂ ಅಜ್ಜನ ಮನೆ ಸೊಣಗಿಜಡ್ಡಿಯಲ್ಲಿ ಉಳಿದುಕೊಂಡು ಶಾಲೆಗೆ ಹೋದವಳು.

‘ಬೆಂಗಳೂರಿನಲ್ಲಿರುವ ಸಂಬಂಧಿಗಳು ದೂರವಾಣಿ ಕರೆ ಮಾಡಿ ರ್‍ಯಾಂಕ್‌ ಬಂದಿರುವ ವಿಷಯ ತಿಳಿಸಿದರು. ಆದರೆ ಅಪ್ಪ–ಅಮ್ಮನಿಗೆ ಇದನ್ನು ತಿಳಿಸಲು ಸಾಧ್ಯವಾಗಲಿಲ್ಲ. ನಮ್ಮ ಊರಿನಲ್ಲಿ ದೂರವಾಣಿ ಸಂಪರ್ಕ ಕಡಿತಗೊಂಡಿದೆ’ ಎಂದು ಅಜ್ಜನ ಜೊತೆ ಬಂದಿದ್ದ ಮಹಿಮಾ ನೋವಿನಿಂದ ಹೇಳಿದಳು.

‘ಅಜ್ಜನ ಮನೆಯಿಂದ 5 ಕಿ.ಮೀ ದೂರ ಇರುವ ಶಾಲೆಗೆ ನಿತ್ಯವೂ ಅಜ್ಜ ವಾಹನದಲ್ಲಿ ಬಿಟ್ಟುಬರುತ್ತಿದ್ದ. ಶಾಲೆಯಲ್ಲಿ ಶಿಕ್ಷಕರು ಕಲಿಸಿದ್ದನ್ನು ಸರಿಯಾಗಿ ಕೇಳುತ್ತಿದ್ದೆ. ಅಂದಿನ ಅಭ್ಯಾಸವನ್ನು ಅಂದೇ ಓದಿಕೊಳ್ಳುವ ಜತೆಗೆ ಶಾಲೆಯ ಆರಂಭದಿಂದ ಪ್ರತಿದಿನ ಪರೀಕ್ಷಾ ಸಿದ್ಧತೆಗೆಂದೇ ಒಂದು ತಾಸು ಮೀಸಲಿಡುತ್ತಿದ್ದೆ’ ಎಂದು ಹೇಳಿದ ಮಹಿಮಾಗೆ ಗಗನಯಾತ್ರಿಯಾಗುವ ಅಥವಾ ಕೃಷಿ ವಿಜ್ಞಾನಿಯಾಗುವ ಆಸೆಯಂತೆ.

Write A Comment