ಕರಾವಳಿ

ಕೇರಳ ಭಾರತದಲ್ಲಿದೆಯೇ ಎಂಬ ಅನುಮಾನ: ಮೋದಿ

Pinterest LinkedIn Tumblr

pm-narendra-modi

ಕಾಸರಗೋಡು: ಕೇರಳ ಹಿಂಸಾ ರಾಜಕೀಯದಲ್ಲಿ ಮುಳುಗಿದೆ. ಹಲವಾರು ಮಂದಿ ರಾಜಕೀಯ ನಾಯಕರ ಹತ್ಯೆಗಳು ನಡೆದಿವೆ. ಬಿಜೆಪಿ ಪಕ್ಷದ ೧೫೦ಕ್ಕೂ ಹೆಚ್ಚು ಮಂದಿ ದಾರುಣ ಕೊಲೆಯಾಗಿದ್ದಾರೆ. ಪಶ್ಚಿಮ ಬಂಗಾಲದ ರಾಜಕೀಯ ಹಿಂಸಾಚಾರ ಇಲ್ಲೂ ತಾಂಡವವಾಡುತ್ತಿದ್ದು, ಇದೆಲ್ಲವನ್ನು ನೋಡುತ್ತಿದ್ದರೆ ಕೇರಳ ಭಾರತದಲ್ಲಿದೆಯೇ ಎಂಬ ಸಂಶಯ ಮೂಡುತ್ತಿದೆ ಎಂದು ಪ್ರಧಾನಿ ಮೋದಿ ಆತಂಕ ವ್ಯಕ್ತಪಡಿಸಿದ್ದಾರೆ. ಅವರು ಕೇರಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಕಾಸರಗೋಡಿನ ನಗರಸಭಾ ಕ್ರೀಡಾಂಗಣದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

‘ಈ ಚುನಾವಣೆ ಕೇರಳವನ್ನು ರಕ್ಷಿಸುವವರ, ಯುವಜನರ, ಭವಿಷ್ಯ ನಿರ್ಧರಿಸುವವರ ಚುನಾವಣೆಯಾಗಲಿದೆ. ಅಡಿಕೆ ಕೃಷಿಕರ ಸಮಸ್ಯೆಗೆ ಕೇಂದ್ರ ಸರಕಾರ ಸ್ಪಂದಿಸಿದೆ. ಅಡಿಕೆ, ತೆಂಗು ಕೃಷಿಕರ ಸಮಸ್ಯೆಗೆ ಪರಿಹಾರ ನೀಡಲಾಗುವುದು. ಭಾರತಕ್ಕೆ ಸ್ವಾತ೦ತ್ರ್ಯ ಲಭಿಸಿದ ೭೫ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ೨೦೨೨ರ ವೇಳೆಗೆ ಕೃಷಿಕರ ಆದಾಯ ಇಮ್ಮಡಿಗೊಳಿಸಲು ಕೇಂದ್ರ ಸರಕಾರ ಯೋಜನೆ ಹಾಕಿಕೊಂಡಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.

ಇಂದು ಮುಂಜಾನೆ ವಿಶೇಷ ವಿಮಾನದ ಮೂಲಕ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಬಳಿಕ ಹೆಲಿಕಾಪ್ಟರ್ ಮೂಲಕ ಕಾಸರಗೋಡಿಗೆ ತೆರಳಿದರು. ಮೋದಿ ಅವರನ್ನು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಪುಷ್ಪಗುಚ್ಛವನ್ನು ಕೊಟ್ಟು ಬರಮಾಡಿಕೊಂಡರು. ಬಿಜೆಪಿ ಹಿರಿಯ ನಾಯಕರು, ಕಮಿಷನರ್ ಚಂದ್ರಶೇಖರ್ ಹಾಗೂ ಇತರರು ಈ ವೇಳೆ ಹಾಜರಿದ್ದರು. ಪ್ರಚಾರ ಕಾರ್ಯಕ್ರಮದ ಸಂದರ್ಭ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನಸಭಾ ಅಭ್ಯರ್ಥಿಗಳಾದ ಕೆ.ಸುರೇಂದ್ರನ್, ಕುಂಟಾರು ರವೀಶ್ ತಂತ್ರಿ, ಕೆ.ಶ್ರೀಕಾಂತ್, ಎಂ.ಭಾಸ್ಕರನ್, ಎಂ.ಪಿ.ರಾಘವನ್, ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಪ್ರಮೀಳಾ ಸಿ.ನಾಯಕ್, ಸಿ.ಕೆ. ಪದ್ಮನಾಭನ್ ಉಪಸ್ಥಿತರಿದ್ದರು.

Write A Comment