ರಾಷ್ಟ್ರೀಯ

ಅಪಮಾನದ ಬೇಗುದಿ 40 ದಿನದಲ್ಲಿ ಬಾವಿ ತೋಡಿಸಿತು!

Pinterest LinkedIn Tumblr

Dalit-water

ನಾಗಪುರ್: ಅಪಮಾನಗಳಿಂದ ಬೇಸತ್ತು ಮನುಷ್ಯನಿಗೆ ರೋಷ ಎನ್ನುವುದು ಬಂತೆಂದರೆ, ಎಂತಹ ಸಾಹಸ ಮಾಡಲು ಹಿಂಜರಿಯುವುದಿಲ್ಲ ಎಂಬುದಕ್ಕೆ ಇಲ್ಲೊಂದು ಸಾಹಸಗಾಥೆ ನಡೆದಿದೆ.

ಮೇಲ್ವರ್ಗದವರಿಗೆ ಸೇರಿದ ಬಾವಿಯಿಂದ ನೀರು ತೆಗೆಯಲು ಪತ್ನಿಗೆ ಅವಕಾಶ ಕೊಡದೆ ಅಪಮಾನ ಮಾಡಿದ್ದರಿಂದ ಆಕ್ರೋಶಗೊಂ‌ಡ ದಲಿತ ಸಮುದಾಯದ ವ್ಯಕ್ತಿ 40 ದಿನಗಳಲ್ಲಿ ತಾನೇ ಒಂದು ಬಾವಿ ತೋಡಿ, ತನ್ನ ಸಮುದಾಯದವರಿಗೆ ನೀರುಣಿಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ವಾಷಿಂ ಜಿಲ್ಲೆಯ ಕಲಂಬೇಶ್ವರ ಗ್ರಾಮದ ದಲಿತ ಬಾಪುರಾವ್ ತಾಜ್ನೆ ಇಂತಹ ಸಾಧನೆ ಮಾಡಿದ್ದಾರೆ. ಊರಿನ ಜನರಿಗೆ ಉಪಕಾರ ಮಾಡಲೆಂದು ಬೆಟ್ಟ ಅಗೆದು ರಸ್ತೆ ಮಾಡಿದ ಬಿಹಾರದ ದಶರಥ್ ಮಾಂಜಿ ಅವರ ಮಾದರಿಯಲ್ಲಿ ತಾಜ್ನೆ, ಬಾವಿ ತೋಡಿ ಗೆದ್ದಿದ್ದಾರೆ.

ಸಾಮಾನ್ಯವಾಗಿ ಒಂದು ಬಾವಿ ತೋಡ‌ಬೇಕೆಂದರೆ, ಕನಿಷ್ಟ ನಾಲ್ಕೈದು ಮಂದಿ ಕೆಲಸ ಮಾಡಬೇಕು. ಆದರೆ ತಾಜ್ನೆ ಏಕಾಂಗಿಯಾಗಿ 40 ದಿನಗಳ ಕಾಲ ಬಾವಿ ತೋಡಿ, ನೀರು ಉಕ್ಕುವಂತೆ ಮಾಡಿದ್ದಾರೆ.

ಮೇಲ್ವರ್ಗದವರಿಗೆ ಸೇರಿದ ಬಾವಿಯಿಂದ ನೀರು ತೆಗೆಯಲು ತನ್ನ ಹೆಂಡತಿ ಸಂಗೀತ ಹೋದಾಗ ಆಕೆಗೆ ಅವಕಾಶ ನೀಡದೆ, ಅಪಮಾನ ಮಾಡಿದ್ದೇ ತಾಜ್ನೆ ಬಾವಿ ತೋಡುವ ಸಂಕಲ್ಪಕ್ಕೆ ನಾಂದಿಯಾಯಿತು.

ಬಡ ಕೂಲಿ ಕಾರ್ಮಿಕನಾದ ತಾಜ್ನೆ, ಹಿಂದೆಂದೂ ಬಾವಿ ತೋಡುವ ಕೆಲಸ ಮಾಡಿ ಅನುಭವ ಇರಲಿಲ್ಲ. ಆದರೂ ದಿಟ್ಟ ನಿರ್ಧಾರ ಮಾಡಿ, ದಿನಕ್ಕೆ ಆರು ಗಂಟೆ ಕಾಲ, ಬಾವಿ ತೋಡುವ ಕೆಲಸ ಮಾಡಿದ. ಈ ಕೆಲಸಕ್ಕೆ ಅವನ ಕುಟುಂಬ ಸದಸ್ಯರೂ ಸೇರಿದಂತೆ ಯಾರೊಬ್ಬರೂ ಸಹಾಯಕ್ಕೆ ಬಂದಿರಲಿಲ್ಲ.

ಪ್ರತಿಯೊಬ್ಬರೂ ಅವನನ್ನು ಹುಚ್ಚ ಎಂದೇ ಅಣಕಿಸುತ್ತಿದ್ದರು. ಅದಕ್ಕೆ ಅವನು ತಲೆಕೆಡಿಸಿಕೊಳ್ಳದೆ ತನ್ನ ಕೆಲಸ ಮುಂದುವರೆಸಿದ್ದರು.

ಈತ ಬಾವಿ ತೋಡಲು ಶುರು ಮಾಡಿದ ಜಾಗಕ್ಕೆ ಹತ್ತಿರವಿದ್ದ ಮೂರು ತೆರೆದ ಬಾವಿ ಹಾಗೂ ಒಂದು ಕೊಳವೆ ಬಾವಿ ನೀರಿಲ್ಲದೆ ಬತ್ತಿ ಹೋಗಿದ್ದವು. ಪರಿಸ್ಥಿತಿ ಹೀಗಿದ್ದರೂ ತಾಜ್ನೆ ಮೊಂಡುತನದಿಂದ ಮುನ್ನುಗ್ಗಿದ್ದನ್ನು ಗ್ರಾಮದ ಜನ ಅಣಕಿಸುತ್ತಿದ್ದರು.

ಮಾಲೀಕನಲ್ಲ
ಈ ಬಾವಿಗೆ ನಾನೇ ಮಾಲೀಕ ಎಂದು ಹೇಳಲು ಬಯಸುವುದಿಲ್ಲ. ಆ ಮೂಲಕ ಗ್ರಾಮದ ಜನರಲ್ಲಿ ಕೆಟ್ಟ ಭಾವನೆ ಬಿತ್ತಲು ಬಯಸುವುದಿಲ್ಲ. ನಾವು ಬಡವರು ಹಾಗೂ ದಲಿತರು ಎಂಬ ಕಾರಣಕ್ಕೆ ಮೇಲ್ವರ್ಗದವರು ನಮ್ಮನ್ನು ಹೀಯಾಳಿಸಿದರು. ಅದೇ ದಿನ ಮನೆಗೆ ಬಂದು ಕಣ್ಣೀರಿಟ್ಟೆ. ಆಗಲೇ ಕುಡಿಯುವ ನೀರಿಗಾಗಿ ಇನ್ನೊಬ್ಬರನ್ನು ಬೇಡುವುದು ಬೇಡ ಎಂಬ ತೀರ್ಮಾನಕ್ಕೆ ಬಂದೆ ಎನ್ನುತ್ತಾರೆ ತಾಜ್ನೆ.

ಮಾಲೆಗಾಂವ್ ಪಟ್ಟಣಕ್ಕೆ ಹೋಗಿ ಬಾವಿ ತೋಡಲು ಬೇಕಾದ ಸಾಮಗ್ರಿ ಖರೀದಿಸಿ ತಂದ ಒಂದು ಗಂಟೆಯಲ್ಲೇ ಕೆಲಸ ಶುರುಮಾಡಿದೆ ಎಂದು ಹೇಳಿಕೊಂಡಿದ್ದಾರೆ.

ಬಾವಿ ತೋಡಲು ನೀರು ಪತ್ತೆಯಾಗುವ ಬಗ್ಗೆ ಅಧ್ಯಯನ ಮಾಡಿರಲಿಲ್ಲ. ಏಕಾಏಕಿ ಬಂದು ಜಾಗ ಆಯ್ಕೆ ಮಾಡಿಕೊಂಡೆ. ತನ್ನ ಇಷ್ಟದೇವರನ್ನು ಮನದಲ್ಲಿ ನೆನೆದು, ಕೆಲಸ ಪ್ರಾರಂಭಿಸಿದೆ. ಕೊನೆಗೂ ತನ್ನ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿತು. ಅದಕ್ಕಾಗಿ ದೇವರಿಗೆ ಕೃತಜ್ಞನಾಗಿದ್ದೇನೆ ಎಂದು ಆತ ವಿನಮ್ರವಾಗಿ ನುಡಿದಿದ್ದಾನೆ.

ತಾಜ್ನೆ ದಿನಗೂಲಿ ನೌಕರ. ಬಾವಿ ತೋಡುವುದಕ್ಕೆ ಸೀಮಿತವಾಗಿದ್ದರೆ, ಬದುಕು ಸಾಗಿಸುವುದು ಕಷ್ಟವಾಗಿತ್ತು. ಅದಕ್ಕಾಗಿ ಅವನು ಕೂಲಿ ಕೆಲಸಕ್ಕೆ ಹೋಗುವ ಮುನ್ನ ಬೆಳಿಗ್ಗೆ 4 ಗಂಟೆಗೆ ಹಾಗೂ ಕೆಲಸದಿಂದ ಹಿಂತಿರುಗಿದ ನಂತರ 2 ಗಂಟೆ ಕೆಲಸ ಮಾಡಿದ್ದ. 40 ದಿನಗಳ ಕಾಲ ಹೀಗೇ ದುಡಿದು ಗುರಿಸಾಧಿಸಿದ. ಈಗ ಹಿಂದೆ ಅಣಕಿಸಿದ್ದ ಆತನ ಹೆಂಡತಿ ಸೇರಿದಂತೆ, ಊರಿನ ಜನರೆಲ್ಲಾ ಪ್ರಶಂಸಿಸುತ್ತಿದ್ದಾರೆ!.

ಸರಪಂಚ್, ತಹಶೀಲ್ದಾರ್ ಸೇರಿ ಹಲವು ಗಣ್ಯರು ಗುಣಗಾನ ಮಾಡುತ್ತಿದ್ದಾರೆ. ಬಹುಮಾನ ನೀಡುತ್ತಿದ್ದಾರೆ. ಚಿತ್ರನಟ ನಾನಾ ಪಾಟೇಕರ್ ದೂರವಾಣಿ ಮೂಲಕ ಸಂಪರ್ಕಿಸಿ ಅಭಿನಂದಿಸಿದ್ದಾರೆ.

Write A Comment