ಕರಾವಳಿ

ಮೇ 13ಕ್ಕೆ ಮುಂಬೈಯಲ್ಲಿ ನಡೆಯಲಿದೆ ಪ್ರೊ ಕಬಡ್ಡಿ ಆಟಗಾರರ ಹರಾಜು; ಯು ಮುಂಬಾ ತಂಡದಲ್ಲೇ ಉಳಿದುಕೊಂಡ ಕನ್ನಡಿಗ ಸ್ಟಾರ್ ಆಟಗಾರ ರಿಷಾಂಕ್ ದೇವಾಡಿಗ

Pinterest LinkedIn Tumblr

rishank devadiga

ಬೆಂಗಳೂರು: ಮುಂಬರುವ 4ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಸಮೀಪಿಸುತ್ತಿದ್ದು, ಟೂರ್ನಿಯಲ್ಲಿ ಆಡಲಿರುವ ಆಟಗಾರರ ಹರಾಜು ಪ್ರಕ್ರಿಯೆ ಮೇ 13ರಂದು ಮುಂಬೈಯಲ್ಲಿ ನಡೆಯಲಿದೆ. ಈ ಬಾರಿ ಪ್ರತಿ ತಂಡದಲ್ಲಿ ತಲಾ ಇಬ್ಬರು ಪ್ರಮುಖ ಆಟಗಾರರನ್ನು ಪರಿಷ್ಕೃತ ಮೊತ್ತಕ್ಕೆ ಉಳಿಸಿಕೊಳ್ಳಲಾಗಿದ್ದು, ಇನ್ನುಳಿದಂತೆ ಎಲ್ಲ ಆಟಗಾರರು ಹೊಸದಾಗಿ ಹರಾಜಿಗೆ ಒಳಪಡಲಿದ್ದಾರೆ.

ಜೂನ್ 25ರಿಂದ ಜುಲೈ 31ರವರೆಗೆ ನಡೆಯಲಿರುವ ಮುಂದಿನ ಆವೃತ್ತಿಗೆ ಹಿಂದಿನ ತಂಡದಲ್ಲೇ ಉಳಿದುಕೊಂಡ ತಲಾ ಇಬ್ಬರು ಆಟಗಾರರು, ತಮ್ಮ ಹಿಂದಿನ ಸಂಭಾವನೆಗಿಂತ ಶೇ.20ರಷ್ಟು ಅಧಿಕ ಪಡೆಯಲಿದ್ದಾರೆ ಎಂದು ‘ವಿಜಯವಾಣಿ’ಗೆ ಪಿಕೆಎಲ್ ಮೂಲಗಳು ತಿಳಿಸಿದೆ.

ಟೈಟಾನ್ಸ್ನಲ್ಲಿ ಉಳಿದ ಸುಖೇಶ್, ರಾಹುಲ್: ಕಳೆದ 3 ಆವೃತ್ತಿಗಳಲ್ಲಿ ತೆಲುಗು ಟೈಟಾನ್ಸ್ ತಂಡದ ಪರ ಅತ್ಯುತ್ತಮ ನಿರ್ವಹಣೆ ತೋರುವ ಮೂಲಕ ಗಮನ ಸೆಳೆದ ನಾಯಕ ರಾಹುಲ್ ಚೌಧುರಿ ಮತ್ತು ಸ್ಟಾರ್ ರೈಡರ್ ಕನ್ನಡಿಗ ಸುಖೇಶ್ ಹೆಗ್ಡೆಯನ್ನು ಫ್ರಾಂಚೈಸಿ ಉಳಿಸಿಕೊಂಡಿದೆ. ಕಳೆದ ಬಾರಿ 15 ಲಕ್ಷ ರೂ.ಗೆ ಒಪ್ಪಂದ ಪರಿಷ್ಕೃತಗೊಳಿಸಿದ್ದ ಸುಖೇಶ್ ಮೌಲ್ಯ ಶೇ. 20 ಅಂದರೆ ಈ ಬಾರಿ 18 ಲಕ್ಷ ರೂ.ಗೆ ಏರಿದೆ. ರಾಹುಲ್ ಕೂಡ ಇಷ್ಟೇ ಮೊತ್ತದ ಸಂಭಾವನೆ ಏರಿಕೆ ಕಂಡಿದ್ದಾರೆ. ಕನ್ನಡಿಗ ರಿಷಾಂಕ್ ದೇವಾಡಿಗ ಕೂಡ ಯು ಮುಂಬಾ ತಂಡದಲ್ಲೇ ಉಳಿದುಕೊಂಡಿದ್ದಾರೆ.

ತಂಡ ಬದಲಾವಣೆ ಕಾಣಲಿರುವ ಕನ್ನಡಿಗರು: ಯು ಮುಂಬಾ ಪರ ಆಡಿದ್ದ ಡಿಫೆಂಡರ್ ಜೀವಕುಮಾರ್ ಹರಾಜಿಗೆ ಎ ವರ್ಗದ ಬಿಡ್ಡಿಂಗ್ನಲ್ಲಿ ಉಳಿದುಕೊಂಡಿರುವ ಕರ್ನಾಟಕದ ಏಕೈಕ ಆಟಗಾರ. ಇನ್ನುಳಿದಂತೆ ರಾಜ್ಯದ ಆಟಗಾರರಾದ ಮುಂಬೈ ಪರ ಮಿಂಚಿನ ನಿರ್ವಹಣೆ ತೋರಿದ್ದ ಶಬ್ಬೀರ್ ಬಾಪು, ಪ್ರಶಾಂತ್ ಕುಮಾರ್ ರೈ(ಟೈಟಾನ್ಸ್), ರಾಜುಗುರು ಸುಬ್ರಹ್ಮಣ್ಯನ್(ದೆಹಲಿ) ಬಿ ಕೆಟಗರಿಯಲ್ಲಿದ್ದರೆ, ಸಚಿನ್ ವಿ(ಪುಣೆ) ಸಿ ವರ್ಗದಲ್ಲಿದ್ದು ಯಾವ ತಂಡ ಸೇರುವರೆಂಬ ಕುತೂಹಲ ಹರಡಿದೆ.

ಎ ವರ್ಗದ ಆಟಗಾರರು: ನಿತಿನ್ ಮದಾನೆ(ಬೆಂಗಾಲ್), ಜಂಗ್ ಕುನ್ ಲೀ(ಬೆಂಗಾಲ್), ಸುರ್ಜಿತ್ ನರ್ವಾಲ್(ಬೆಂಗಳೂರು), ರವೀಂದರ್ ಪಾಲ್(ದೆಹಲಿ), ಸಂದೀಪ್ ದಲ್(ದೆಹಲಿ), ವಜೀರ್ ಸಿಂಗ್(ದೆಹಲಿ), ರಾಣ್ ಸಿಂಗ್(ಜೈಪುರ), ರೋಹಿತ್ ರಾಣಾ(ಜೈಪುರ), ಸೋನು ನರ್ವಾಲ್(ಜೈಪುರ), ನವನೀತ್ ಗೌತಮ್ಜೈಪುರ), ಸಂದೀಪ್ ನರ್ವಾಲ್(ಪಾಟ್ನಾ), ಅಜಯ್ ಠಾಕೂರ್(ಪುಣೆ), ಧರ್ಮರಾಜ್ ಚೆರಾಲತನ್(ಟೈಟಾನ್ಸ್), ಸುರೇಂದ್ರ ನಾಡಾ(ಯು ಮುಂಬಾ), ಮೋಹಿತ್ ಚಿಲ್ಲರ್(ಯು ಮುಂಬಾ), ಜೀವಕುಮಾರ್(ಯು ಮುಂಬಾ), ವಿಶಾಲ್ ಮಾನೆ(ಯು ಮುಂಬಾ), ಫಜೆಲ್ ಅತ್ರಾಚಲಿ(ಯು ಮುಂಬಾ), ರಾಕೇಶ್ ಕುಮಾರ್(ಯು ಮುಂಬಾ).

ಹಿಂದಿನ ತಂಡಗಳಲ್ಲೇ ಉಳಿದ ಆಟಗಾರರು

ಬೆಂಗಾಲ್ ವಾರಿಯರ್ಸ್: ನೀಲೇಶ್ ಶಿಂಧೆ, ಗಿರೀಶ್ ಮಾರುತಿ ಎರ್ನಾಕ್ ಬೆಂಗಳೂರು ಬುಲ್ಸ್: ಪವನ್ ಕುಮಾರ್, ಆಶಿಶ್ ಕುಮಾರ್ ಸಂಗ್ವಾನ್ ದಬಾಂಗ್ ದೆಹಲಿ: ಕಾಶಿಲಿಂಗ ಅಡಕೆ, ಸೆಲ್ವಮಣಿ ಕೆ ಜೈಪುರ ಪಿಂಕ್ ಪ್ಯಾಂಥರ್ಸ್: ರಾಜೇಶ್ ನರ್ವಾಲ್, ಜಸ್ವೀರ್ ಸಿಂಗ್ ಪಾಟ್ನಾ ಪೈರೇಟ್ಸ್: ಪ್ರದೀಪ್ ನರ್ವಾಲ್, ರಾಜೇಶ್ ಮೊಂಡಲ್ ಪುಣೇರಿ ಪಲ್ಟಾನ್: ಮಂಜೀತ್ ಚಿಲ್ಲರ್, ದೀಪಕ್ ಹೂಡಾ ತೆಲುಗು ಟೈಟಾನ್ಸ್: ರಾಹುಲ್ ಚೌಧುರಿ, ಸುಖೇಶ್ ಹೆಗ್ಡೆ ಯು ಮುಂಬಾ: ಅನೂಪ್ ಕುಮಾರ್, ರಿಷಾಂಕ್ ದೇವಾಡಿಗ

ಮೂಲಬೆಲೆಯಲ್ಲಿ 3 ವಿಭಾಗ

ಹರಾಜು ಪ್ರಕ್ರಿಯೆಗೆ ಆಟಗಾರರ ಮೂಲಬೆಲೆಯನ್ನು ಎ, ಬಿ ಮತ್ತು ಸಿ ಎಂದು ಮೂರು ವಿಭಾಗ ಮಾಡಲಾಗಿದೆ. ಆದರೆ ಹರಾಜಿನಲ್ಲಿ ಕೆಲ ಆಟಗಾರರು ಬಂಪರ್ ಮೊತ್ತಕ್ಕೆ ಫ್ರಾಂಚೈಸಿ ಪಾಲಾದರೂ ಅಚ್ಚರಿಯಿಲ್ಲ. ಎ ಶ್ರೇಣಿಯ ಆಟಗಾರನ ಮೂಲಬೆಲೆ 12 ಲಕ್ಷ ರೂ, ಬಿ ಮತ್ತು ಸಿ ಶ್ರೇಣಿಯ ಆಟಗಾರನ ಮೂಲಬೆಲೆ ಕ್ರಮವಾಗಿ 8 ಮತ್ತು 5 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ.

ಬುಲ್ಸ್ನಲ್ಲಿ ಉಳಿದ ಆಶಿಶ್, ಪವನ್

ಕಳೆದ ಆವೃತ್ತಿಯಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದ ಬೆಂಗಳೂರು ಬುಲ್ಸ್ ಈ ಬಾರಿ ಬಲಿಷ್ಠ ತಂಡ ಕಟ್ಟುವ ಲೆಕ್ಕಾಚಾರದಲ್ಲಿದ್ದು, ಇದಕ್ಕೆ ನಾಯಕ ಸುರ್ಜಿತ್ ನರ್ವಾಲ್ರನ್ನೇ ಕೈಬಿಟ್ಟಿದೆ. ಯುವ ಆಟಗಾರರಾದ ಆಶಿಶ್ ಸಂಗ್ವಾನ್ ಮತ್ತು ಪವನ್ ಕುಮಾರ್ ಸ್ಥಾನ ಉಳಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. 13 ಪಂದ್ಯಗಳನ್ನಾಡಿರುವ ರೈಡರ್ ಪವನ್ 45 ಅಂಕ ಗಳಿಸಿದ್ದರೆ, 18 ಪಂದ್ಯಗಳನ್ನಾಡಿರುವ ಹರಿಯಾಣದ ಆಶಿಶ್ 27 ಟ್ಯಾಕಲ್ ಮಾಡಿದ್ದಾರೆ.

1 Comment

Write A Comment