
ಹೈದರಾಬಾದ್: ಐಪಿಎಲ್-9ರ ಮೊದಲ ಪಂದ್ಯವಾಡಿದ ಸ್ಟಾರ್ ಆಲ್ರೌಂಡರ್ ಯುವರಾಜ್ ಸಿಂಗ್ ಬ್ಯಾಟಿಂಗ್-ಬೌಲಿಂಗ್ನಲ್ಲಿ ಮಿಂಚದಿದ್ದರೂ, ಸನ್ರೈಸರ್ಸ್ ಹೈದರಾಬಾದ್ ತಂಡ ಅವರಿಗೆ ಗೆಲುವಿನ ಸ್ವಾಗತ ನೀಡುವಲ್ಲಿ ಸಫಲವಾಗಿದೆ. ವೇಗಿಗಳಾದ ಭುವನೇಶ್ವರ್ ಕುಮಾರ್(28ಕ್ಕೆ 2) ಮತ್ತು ಮುಸ್ತಾಫಿಜುರ್ ರೆಹಮಾನ್(17ಕ್ಕೆ 2) ಸಂಘಟಿತ ದಾಳಿ ನೆರವಿನಿಂದ ಗುಜರಾತ್ ಲಯನ್ಸ್ ತಂಡದ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಕಟ್ಟಿಹಾಕಿದ ಸನ್ರೈಸರ್ಸ್ ತಂಡ, ಶಿಖರ್ ಧವನ್ (47*ರನ್, 40 ಎಸೆತ, 6 ಬೌಂಡರಿ) ಸಮಯೋಚಿತ ಬ್ಯಾಟಿಂಗ್ ಸಹಾಯದಿಂದ 5 ವಿಕೆಟ್ಗಳ ರೋಚಕ ಜಯ ದಾಖಲಿಸಿತು.
ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಸುರೇಶ್ ರೈನಾ ಸಾರಥ್ಯದ ಗುಜರಾತ್ ತಂಡ, ಆರನ್ ಫಿಂಚ್(51*ರನ್, 42 ಎಸೆತ, 3 ಬೌಂಡರಿ, 1 ಸಿಕ್ಸರ್) ಏಕಾಂಗಿ ಹೋರಾಟದ ನಡುವೆಯೂ 6 ವಿಕೆಟ್ಗೆ 126 ರನ್ ಗಳಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಸನ್ರೈಸರ್ಸ್ ತಂಡ ಕೂಡ ರನ್ ಗಳಿಸಲು ಪರದಾಡಿದರೂ, ಕೊನೆಗೆ 19 ಓವರ್ಗಳಲ್ಲಿ 5 ವಿಕೆಟ್ಗೆ 129 ರನ್ ಗಳಿಸಿ ಟೂರ್ನಿಯ 5ನೇ ಗೆಲುವು ಸಂಪಾದಿಸಿತು. ಈ ಮೂಲಕ ಡೇವಿಡ್ ವಾರ್ನರ್ ಪಡೆ ಟೂರ್ನಿಯಲ್ಲಿ ಲಯನ್ಸ್ ವಿರುದ್ಧದ ಎರಡೂ ಪಂದ್ಯಗಳಲ್ಲಿ ಗೆದ್ದ ಸಾಧನೆ ಮಾಡಿತು.
ಲಯನ್ಸ್ಗೆ ಫಿಂಚ್ ಆಸರೆ
ಸ್ಪೋಟಕ ಬ್ಯಾಟಿಂಗ್ ಪಡೆಯನ್ನೊಳಗೊಂಡ ಗುಜರಾತ್ ತಂಡ ಸನ್ರೈಸರ್ಸ್ ವೇಗದ ದಾಳಿ ಎದುರು ಆರಂಭದಲ್ಲೇ ಪರದಾಡಿತು. ಶಿಸ್ತಿನ ದಾಳಿ ಆರಂಭಿಸಿದ ಸನ್ರೈಸರ್ಸ್ ಮೊದಲೆರಡೂ ಓವರ್ ಮೇಡನ್ ಸಾಧಿಸಿತು. ಆರಂಭಿಕರಾದ ಡ್ವೇನ್ ಸ್ಮಿತ್(1) ಹಾಗೂ ಬ್ರೆಂಡನ್ ಮೆಕ್ಕಲಂ(7) ಮೊದಲ ರನ್ ಗಳಿಸಲು 14 ಎಸೆತ ಎದುರಿಸಿದರು. ಆರಂಭಿಕರ ಜತೆ ನಾಯಕ ಸುರೇಶ್ ರೈನಾ (20ರನ್, 10ಎಸೆತ, 1 ಬೌಂಡರಿ, 2 ಸಿಕ್ಸರ್) ಮತ್ತು ದಿನೇಶ್ ಕಾರ್ತಿಕ್(0) ವೈಫಲ್ಯ ಕಂಡಾಗ ಗುಜರಾತ್ 7.4 ಓವರ್ಗಳಲ್ಲಿ 34 ರನ್ಗೆ 4ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ ಆಸೀಸ್ ಸ್ಪೋಟಕ
ಬ್ಯಾಟ್ಸ್ಮನ್ ಆರನ್ ಫಿಂಚ್ ತಾಳ್ಮೆಯ ಆಟದೊಂದಿಗೆ ಆಸರೆಯಾದರು. ಡ್ವೇನ್ ಬ್ರಾವೊ(18) ಸಂದಿಗ್ಧ ಪರಿಸ್ಥಿತಿಯಲ್ಲಿ 5ನೇ ವಿಕೆಟ್ಗೆ 45 ರನ್ ಜತೆಯಾಟವಾಡಿ ನಿರ್ಗಮಿಸಿದರು. ಬಳಿಕ ಸ್ಲಾಗ್ ಓವರ್ನಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ(18) ಅಲ್ಪ ಕಾಣಿಕೆ ನೀಡಿದರೂ ಮುಸ್ತಾಫಿಜುರ್ ಓವರ್ನಲ್ಲಿ ವೈಫಲ್ಯ ಕಂಡರು.
ಸನ್ರೈಸರ್ಸ್ಗೆ ಶಿಖರ್ ಧವನ್ ರಕ್ಷಣೆ
ಸಾಧಾರಣ ಮೊತ್ತ ಬೆನ್ನಟ್ಟಲಾರಂಭಿಸಿದ ಸನ್ರೈಸರ್ಸ್ ತಂಡ, ಲಯನ್ಸ್ ತಂಡದ ಬೌಲಿಂಗ್ ತಿರುಗೇಟಿನೆದುರು ನಿರಂತರ ವಿಕೆಟ್ ಕಳೆದುಕೊಳ್ಳುತ್ತ ಸಾಗಿತು. ಆದರೆ ಒಂದೆಡೆ ಭದ್ರವಾಗಿ ತಳವೂರಿದ ಶಿಖರ್ ಧವನ್ ತಂಡಕ್ಕೆ 19ನೇ ಓವರ್ನ ಕೊನೇ 2 ಎಸೆತಗಳಲ್ಲಿ ಬೌಂಡರಿ ಸಿಡಿಸಿ ಗೆಲುವು ತಂದುಕೊಡುವವರೆಗೂ ವಿರಮಿಸಲಿಲ್ಲ. ನಾಯಕ ವಾರ್ನರ್ (24) ಆರಂಭಿಕ ಪ್ರತಾಪ ತೋರಿ ಔಟಾದ ಬಳಿಕ ಕೇನ್ ವಿಲಿಯಮ್ಸನ್ (6), ಹೆನ್ರಿಕ್ಸ್ (14) ವೈಫಲ್ಯದಿಂದ ಸನ್ರೈಸರ್ಸ್ ಇಕ್ಕಟ್ಟಿಗೆ ಸಿಲುಕಿತು. ಆಗ ಯುವಿ, ಧವನ್ ಜತೆಗೂಡಿ ಕೆಲಕಾಲ ತಂಡಕ್ಕೆ ಆಸರೆಯಾದರು. ಧವಳ್ ಎಸೆತದಲ್ಲಿ ಯುವಿ ಎಡವಿದ ಬಳಿಕ ದೀಪಕ್ ಹೂಡಾ (18) ಬಿರುಸಿನ ಆಟವಾಡಿ ನಿರ್ಗಮಿಸಿದರೆ, 10 ಎಸೆತಗಳಲ್ಲಿ 12 ರನ್ ಅಗತ್ಯವಿದ್ದಾಗ ನಮನ್ ಓಜಾ (9*) ಪ್ರವೀಣ್ಕುಮಾರ್ ಎಸೆತದಲ್ಲಿ ಬೌಂಡರಿ ಬಾರಿಸಿ ತಂಡದ ಒತ್ತಡ ಕುಗ್ಗಿಸಿದರು.
ಕಣಕ್ಕಿಳಿದ ಯುವಿ
ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಯುವರಾಜ್ ಸಿಂಗ್ ಸನ್ರೈಸರ್ಸ್ ತಂಡದ ಪರ ಕಣಕ್ಕಿಳಿಯುವ ಮೂಲಕ ಪ್ರಸಕ್ತ ಆವೃತ್ತಿಯ ಮೊದಲ ಪಂದ್ಯವಾಡಿದರು. ಆಶಿಶ್ ರೆಡ್ಡಿ ಬದಲು ಯುವಿಗೆ ಮಣೆ ಹಾಕಲಾಯಿತು. ಕಳೆದ ಟಿ20 ವಿಶ್ವಕಪ್ನ ಆಸ್ಟ್ರೇಲಿಯಾ ವಿರುದ್ಧದ ಲೀಗ್ನಲ್ಲಿ ಗಾಯಗೊಂಡಿದ್ದ ಬಳಿಕ ಮೊದಲ ಪಂದ್ಯವಾಡಿದ ಯುವರಾಜ್ (ಬೌಲಿಂಗ್: 2 ಓವರ್ಗಳಲ್ಲಿ 13 ರನ್, ಬ್ಯಾಟಿಂಗ್: 14 ಎಸೆತಗಳಲ್ಲಿ 5 ರನ್) ನಿರಾಸೆ ಮೂಡಿಸಿದರು.
14 ಮೊದಲ ರನ್ ಗಳಿಸಲು ಗುಜರಾತ್ ತಂಡ ಬರೋಬ್ಬರಿ 14 ಎಸೆತಗಳನ್ನು ಎದುರಿಸಬೇಕಾಯಿತು. ಇದು ಐಪಿಎಲ್ನಲ್ಲಿ ಅತಿ ದೊಡ್ಡ ತಿಣುಕಾಟವಾಗಿದೆ. 2011ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಂಜಾಬ್ ವಿರುದ್ಧ 10 ಎಸೆತ ಎದುರಿಸಿತ್ತು.