ಪಣಜಿ, ಮೇ 6-ಅಪ್ರಾಪ್ತ ಬಾಲಕಿ ಮೇಲೆ ಗೋವಾ ಶಾಸಕನ ಅತ್ಯಾಚಾರ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿಯಾಗಿರುವ ರೋಜಿ ಫೆರೋಸ್ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಗೋವಾ ಶಾಸಕ ಅಟಾನ್‌ಸಿಯೋ ಮಾನ್ಸೆರಟ್ ಅವರು 50 ಲಕ್ಷಕ್ಕೆ ಅಪ್ರಾಪ್ತ ಬಾಲಕಿಯೊಬ್ಬರನ್ನು ಮನೆಗೆಲಸಕ್ಕಾಗಿ ಖರೀದಿ ಮಾಡಿ, ಆಕೆ ಮೇಲೆ ಅತ್ಯಾಚಾರ ನಡೆಸಿರುವ ಆರೋಪಕ್ಕೆ ಗುರಿಯಾಗಿದ್ದರು. ಪ್ರಕರಣ ವಿಕೋಪಕ್ಕೆ ತಿರುಗುತ್ತಿದ್ದಂತೆ ಶಾಸಕ ಪೊಲೀಸರಿಗೆ ಶರಣಾಗಿದ್ದು, 50 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ ಬಾಲಕಿ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆದರೆ ಬಾಲಕಿಯನ್ನು ಮಾನವ ಕಳ್ಳ ಸಾಗಾಣಿಕೆ ಮೂಲಕ ಮಾರಾಟ ಮಾಡಿಸಿದ ಮಧ್ಯವರ್ತಿ ರೋಜಿ ಫೆರೋಸ್ ತಲೆಮರೆಸಿಕೊಂಡಿದ್ದು, ಆಕೆ ಯ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ ಎಂದು ಕ್ರೈಮ್ ಬ್ರ್ಯಾಂಚ್ ಎಸ್ಪಿ ಕಾರ್ತಿಕ್ ಕಶ್ಯಪ್ ತಿಳಿಸಿದ್ದಾರೆ. ರೋಜಿ ಫೆರೋಸ್ ಮಾನವ ಕಳ್ಳ ಸಾಗಾಣಿಕೆಯಲ್ಲಿ ತೊಡಗಿಸಿಕೊಂಡಿದ್ದು, ಆಕೆಯ ಮೇಲೆ ಇನ್ನಿತರ ಹಲವಾರು ಗಂಭೀರ ಆರೋಪಗಳಿದ್ದು, ಆಕೆಯನ್ನು ಆದಷ್ಟು ಬೇಗ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಫೆರೋಸ್ ಮಧ್ಯಸ್ಥಿಕೆಯಲ್ಲಿ ಬಾಲಕಿಯನ್ನು 50 ಲಕ್ಷಕ್ಕೆ ಖರೀದಿಸಿದ ಶಾಸಕ ತನ್ನ ಮನೆಯಲ್ಲಿ ಗೃಹಬಂಧನದಲ್ಲಿರಿಸಿ ಹಲವಾರು ಬಾರಿ ಅತ್ಯಾಚಾರ ನಡೆಸಿದ್ದಾನೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ. ಆದರೆ ಪೊಲೀಸರಿಗೆ ಶರಣಾಗಿರುವ ಶಾಸಕ ನಾನು ಯಾವುದೇ ತಪ್ಪು ಮಾಡಿಲ್ಲ. ಬಾಲಕಿ ನಮ್ಮ ಮನೆಯಲ್ಲಿ ಕಳ್ಳತನ ಮಾಡಿದ್ದು, ಆಕೆಯನ್ನು ಮನೆಯಿಂದ ಹೊರದಬ್ಬಿದ ಹಿನ್ನೆಲೆಯಲ್ಲಿ ಈ ರೀತಿ ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದಾಳೆ ಎಂದು ಹೇಳಿಕೆ ನೀಡಿದ್ದಾರೆ.