ಕರ್ನಾಟಕ

ಮದ್ದೂರಲ್ಲಿ ಸೋತಾಗಲೆಲ್ಲಾ ನನಗೆ ಅದೃಷ್ಟ: ಕೃಷ್ಣ

Pinterest LinkedIn Tumblr

krishnaಬೆಂಗಳೂರು: ಮದ್ದೂರು ಜನತೆ ಪ್ರತಿ ಬಾರಿ ನನ್ನನ್ನು ಸೋಲಿಸಿದ ಎರಡು ವರ್ಷದ ನಂತರ ನನಗೆ ಅದೃಷ್ಟ ಖುಲಾಯಿಸುತ್ತದೆ… ರಾಜ್ಯದಲ್ಲಿ ಉತ್ತಮವಾಗಿ ಮಳೆಯಾದಾಗ ಅದು ನನ್ನಿಂದಲೇ ಎನ್ನುವ ರಾಜಕಾರಣಿ, ಬರ ಬಂದಾಗಲೂ ಅದು ತನ್ನಿಂದ ಎಂದು ಹೇಳುವ ಮನೋಭಾವ ಹೊಂದಿರಬೇಕು…

ಸುದೀರ್ಘ‌ ಬ್ರೇಕ್‌ನ ನಂತರ ಮತ್ತೆ ರಾಜಕೀಯವಾಗಿ ಸಕ್ರಿಯವಾಗುವ ಲಕ್ಷಣ ತೋರಿಸುತ್ತಿರುವ ಕಾಂಗ್ರೆಸ್‌ ಹಿರಿಯ ನಾಯಕ ಹಾಗೂ ಮಾಜಿ ವಿದೇಶಾಂಗ ಸಚಿವ ಎಸ್‌. ಎಂ. ಕೃಷ್ಣ ಅವರು ನಗರದಲ್ಲಿ ಗುರುವಾರ ಸಮಾರಂಭವೊಂದರಲ್ಲಿ ಹೇಳಿದ ಈ ಎರಡು ಮಾತುಗಳು ಸಾರ್ವಜನಿಕ ವಲಯದಲ್ಲಿ ಮತ್ತೆ ಕುತೂಹಲ ಕೆರಳಿಸಿವೆ.

ರಾಜಕೀಯದಲ್ಲಿ ಅದೃಷ್ಟ ಖುಲಾಯಿಸುತ್ತದೆ ಎಂಬ ಅವರ ಹೇಳಿಕೆ ನಿಕಟ ಭವಿಷ್ಯದಲ್ಲಿ ಕೃಷ್ಣ ಅವರಿಗೆ ಮತ್ತೆ ಅದೃಷ್ಟ ಒದಗಿಬರುವ ಬೆಳವಣಿಗೆಯಿದೆಯೇ ಎಂಬ ಕುತೂಹಲ ಹುಟ್ಟು ಹಾಕಿದರೆ, ಮಳೆ ಹಾಗೂ ಬರದ ಬಗೆಗಿನ ಹೇಳಿಕೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಆದ ಕೂಡಲೇ ಉಂಟಾದ ಉತ್ತಮ ಮಳೆ ಹಾಗೂ ಈಗಿನ ಬರಗಾಲದ ಸಂದರ್ಭದಲ್ಲಿ ಸಿಎಂ ನಡವಳಿಕೆಗೆ ಪರೋಕ್ಷ ಟಾಂಗ್‌ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಹಳ್ಳಿ ಹಕ್ಕಿ ಪ್ರಕಾಶನವು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಅಡಗೂರು ಎಚ್‌.ವಿಶ್ವನಾಥ್‌ ಅವರ “ದಿ ಟಾಕಿಂಗ್‌ ಶಾಪ್‌- ಸಂಸತ್‌ ಸಲ್ಲಾಪಗಳು’ ಕೃತಿ ಲೋಕಾರ್ಪಣೆ ಮಾಡಿ
ಮಾತನಾಡಿದ ಕೃಷ್ಣ ಅವರ ಈ ಎರಡು ಹೇಳಿಕೆ ಹೊರತಾಗಿ ಮತ್ಯಾವುದೂ ಹಾಲಿ ರಾಜಕೀಯ ಪರಿಸ್ಥಿತಿಗೆ ಹೋಲಿಕೆಯಾಗುವ ಸೂಚ್ಯ ಸಂದೇಶ ಹೊಂದಿರಲಿಲ್ಲ.

ಆದರೆ, ರಾಜಕಾರಣಿಗಳ ದ್ವಿಮುಖ ಮನಸ್ಥಿತಿಯ ಬಗ್ಗೆ ಅವರು ಸುದೀರ್ಘ‌ ವಿವರಣೆ ನೀಡಿದರು. ರಾಜಕಾರಣಿಗಳು ಮಳೆ
ಬಂದರೆ ಮಳೆ ಬರಲು ನಾನೇ ಕಾರಣ ಎಂದು ಹೇಳುತ್ತಾರೆ. ಬರ ಬಂದಾಗ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ. ಇಂತಹ ದ್ವಿಮುಖ ರಾಜಕಾರಣ ನಮ್ಮಲ್ಲಿ ಕಾಣುತ್ತಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗಲೂ ಸತತ ಮೂರು ವರ್ಷ ಬರಗಾಲ ಬಂದಿತ್ತು ಎಂದರು. ನಮ್ಮಲ್ಲಿ ಒಬ್ಬ ಒಮ್ಮೆ ಶಾಸಕನಾದರೆ ಸಾಕು ತಮಗೆ ಎಲ್ಲಾ ಗೊತ್ತು ಎಂಬ ಮನಃ
ಸ್ಥಿತಿ ಬೆಳೆಸಿಕೊಂಡು ಅಧ್ಯಯನದಿಂದ ದೂರವಿರುತ್ತಾರೆ. ಆದರೆ, ವಿಶ್ವನಾಥ್‌ ಅವರು ಅಧ್ಯಯನ ಶೀಲ ರಾಜಕಾರಣಿಗಳ ಸಾಲಿನಲ್ಲಿ ಮಿಂಚುತ್ತಿದ್ದಾರೆ. ಮತ್ತೂಂದೆಡೆ ರಾಜಕಾರಣಕ್ಕೆ ಅಭ್ಯಾಸ, ತಯಾರಿ ಎರಡೂ ಬೇಕಾಗಿಲ್ಲ.

ಸನ್ನಿವೇಶಕ್ಕೆ ತಕ್ಕಂತೆ ಹುಟ್ಟುವ ಕೂಸು ಎಂಬ ಮಾತು ನಿಜವಾಗುತ್ತಿರುವುದು ಬೇಸರದ ಸಂಗತಿ ಎಂದರು.
ಹಿರಿಯ ಪತ್ರಕರ್ತ ಹಾಗೂ ಪಬ್ಲಿಕ್‌ ಟಿ.ವಿ. ಮುಖ್ಯಸ್ಥ ಎಚ್‌.ಆರ್‌. ರಂಗನಾಥ್‌ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕೂ ಅಂಗಗಳು ಒಂದೊಂದು ದಿಕ್ಕಿಗೆ ಹೋಗುವ ಮೂಲಕ ಪ್ರಜಾಪ್ರಭುತ್ವ ವಿಫ‌ಲವಾಗಿದೆ. ಬ್ರಿಟಿಷರ ಅವಧಿಯ ದಾಸ್ಯ
ಇಂದಿಗೂ ಮುಂದುವರೆದಿದ್ದು, ಪ್ರತಿಯೊಬ್ಬ ರಾಜಕಾರಣಿಯು ಪಕ್ಷ ಹಾಗೂ ಹೈಕಮಾಂಡ್‌ನ‌ ದಾಸನಾಗಿ ಬದುಕುತ್ತಿದ್ದಾನೆ. ಪಕ್ಷಭೇದವಿಲ್ಲದೆ ಪ್ರತಿಯೊಬ್ಬ ರಾಜಕಾರಣಿಯೂ ಶಿಸ್ತಿನ ಹೆಸರಿನಲ್ಲಿ ದಾಸ್ಯ ಅನುಭವಿಸುತ್ತಿದ್ದಾನೆ ಎಂದರು.

ಕೀಳರಿಮೆ ಬೇಡ: ಶಾಸಕ ವೈಎಸ್‌ವಿ ದತ್ತ ಮಾತನಾಡಿ, ಟೀಕೆ ಮಾಡಬೇಕು ಎಂದರೆ ಅಂಬಿಗರ ಚೌಡಯ್ಯ ಮೈ ಮೇಲೆ ಬಂದಂತೆ ಕಟುವಾಗಿ ಟೀಕಿಸುವ ವಿಶ್ವನಾಥ್‌ ಈ ಕೃತಿಯಲ್ಲಿ ಅಚ್ಚರಿ ಎಂಬಂತೆ ಗಂಭೀರವಾಗಿ ಬರೆದಿದ್ದಾರೆ.
ಆದರೆ, ಬ್ರಿಟನ್‌ ಪಾರ್ಲಿಮೆಂಟರಿ ವ್ಯವಸ್ಥೆಯನ್ನು ಕೊಂಡಾಡಿರುವ ಅವರು ನಮ್ಮ ಸಂಸದೀಯ ವ್ಯವಸ್ಥೆ ಬಗ್ಗೆ ಹತಾಶ ಮನೋಭಾವನೆ ವ್ಯಕ್ತಪಡಿಸಿದ್ದಾರೆ. ಇದು ಅಗತ್ಯವಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
-ಉದಯವಾಣಿ

Write A Comment