ಕರ್ನಾಟಕ

ಒತ್ತುವರಿದಾರರಿಗೆ ಕಾದಿದೆ ಸಂಕಷ್ಟ; ಕೆರೆ ಉಳಿಸುವ ಖಡಕ್‌ ತೀರ್ಪು

Pinterest LinkedIn Tumblr

06-ANKANA-3ಈ ತೀರ್ಪನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂಬುದು ಜಲಮೂಲಗಳ ರಕ್ಷಣೆಯ ದೃಷ್ಟಿಯಿಂದ ಆಗಲೇಬೇಕಾದ ಕೆಲಸ. ಆದರೆ, ಹಳೆ ನಿಯಮದನ್ವಯ ಸೂಕ್ತ ಅನುಮತಿ ಪಡೆದೇ ನಿರ್ಮಾಣಗೊಂಡ ಕಟ್ಟಡಗಳಿಗೆ ಈಗ ಹೊಸ ನಿಯಮ ಅನ್ವಯಿಸುವಾಗ ಆತುರ ಸಲ್ಲದು.

ಬೆಂಗಳೂರಿನ ಬೆಳ್ಳಂದೂರು ಹಾಗೂ ಅಗರ ಕೆರೆಗಳ ದಂಡೆಯನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ನಿರ್ಮಾಣ ಕಾಮಗಾರಿ ಕೈಗೊಂಡ ವಿಷಯದಲ್ಲಿ ಹಸಿರು ನ್ಯಾಯಾಧಿಕರಣದ ಮುಖ್ಯ ಪೀಠ ನೀಡಿದ ಆದೇಶ ಈಗಾಗಲೇ ನಶಿಸುತ್ತಿರುವ ಜಲಮೂಲಗಳನ್ನು ಕಾಪಾಡುವ ಹಾಗೂ ಪರಿಸರ ಸಂಬಂಧಿ ವಿಷಯಗಳನ್ನು ಬೇಕಾಬಿಟ್ಟಿಯಾಗಿ ತೆಗೆದುಕೊಳ್ಳುವ ಬಿಲ್ಡರ್‌ಗಳು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಪಾಠ ಕಲಿಸುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ್ದು. ಬಹಳ ದೂರಗಾಮಿ ಪರಿಣಾಮಗಳನ್ನು ಹೊಂದಿರುವ ಈ ತೀರ್ಪಿನ ಪಾಲನೆ ಎಷ್ಟರ ಮಟ್ಟಿಗೆ ಆಗುತ್ತದೆ ಎಂಬುದು ಸದ್ಯಕ್ಕೆ ಕುತೂಹಲದ ಸಂಗತಿ. ಏಕೆಂದರೆ, ಹಸಿರು ನ್ಯಾಯಾಧಿಕರಣದ ತೀರ್ಪುಗಳು ಇಲ್ಲಿಯವರೆಗೆ ಸಾಮಾನ್ಯವಾಗಿ ಆಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತ್ರ ಪಾಲನೆಯಾಗುತ್ತ ಬಂದಿವೆ. ಸಂಬಂಧಪಟ್ಟ ಸರ್ಕಾರ ಅಥವಾ ಸರ್ಕಾರಿ ಸಂಸ್ಥೆಗಳು ನಿರ್ದಿಷ್ಟ ಆದೇಶವನ್ನು ಮಾತ್ರ ಪಾಲಿಸಿ, ಇನ್ನುಳಿದ ವ್ಯವಹಾರಗಳಲ್ಲಿ ಅದನ್ನು ಮರೆತುಬಿಡುತ್ತಿವೆ. ಈ ಬಾರಿ ಹಾಗಾಗದಂತೆ ಕನಿಷ್ಠ ನಮ್ಮ ರಾಜ್ಯದ ಮಟ್ಟಿಗೆ ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ನೋಡಿಕೊಳ್ಳುವ ಅಗತ್ಯವಿದೆ.

ಬೆಂಗಳೂರಿನ ಈ ಕೆರೆಗಳಲ್ಲಿ ಬೆಂಕಿ ಬಿದ್ದು, ವಿಷಪೂರಿತ ನೊರೆ ಉಕ್ಕಿ ರಸ್ತೆಗೆ ಹಾಗೂ ಅಕ್ಕಪಕ್ಕದ ಮನೆಗಳಿಗೆ ಹಾರುವ ವಿಷಯ ಕೆಲ ತಿಂಗಳ ಹಿಂದೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಅದಕ್ಕೆ ಪಕ್ಕದ ವಿಶೇಷ ಆರ್ಥಿಕ ವಲಯದಿಂದ ಹರಿದುಬಿಡುವ ತ್ಯಾಜ್ಯವೇ ಕಾರಣ ಎಂದು ತಜ್ಞರು ಹೇಳಿದ್ದರು. ನ್ಯಾಯಾಧಿಕರಣದ ಈಗಿನ ತೀರ್ಪಿನಿಂದಾಗಿ ಆ ವಿಶೇಷ ಆರ್ಥಿಕ ವಲಯ ಹಾಗೂ ಮಂತ್ರಿ ಮುಂತಾದ ಡೆವಲಪರ್‌ಗಳು ಹೊಸತಾಗಿ ತಮ್ಮ ಯೋಜನೆಗಳಿಗೆ ಪರಿಸರ ಇಲಾಖೆಯ ಅನುಮತಿ ಪಡೆಯಬೇಕಾಗುತ್ತದೆ. ಅನುಮತಿ ನೀಡುವಾಗ ಪರಿಸರ ಇಲಾಖೆಯು ನ್ಯಾಯಾಧಿಕರಣದ ತೀರ್ಪನ್ನು ಗಮನದಲ್ಲಿರಿಸಿಕೊಳ್ಳಬೇಕಾಗುತ್ತದೆ. ರಾಜ್ಯಾದ್ಯಂತ ಜಲಮೂಲಗಳು ನಶಿಸಿ, ಈ ವರ್ಷದ ಭೀಕರ ಬರಗಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿರುವ ಹೊತ್ತಿನಲ್ಲೇ ನ್ಯಾಯಾಧಿಕರಣದ ಮಹತ್ವದ ಆದೇಶ ಪ್ರಕಟಗೊಂಡಿರುವುದು ಸಮಯೋಚಿತವೂ ಆಗಿದೆ. ಪರಿಸರ ರಕ್ಷಣೆಯ ವಿಷಯದಲ್ಲಿ ಜನಸಾಮಾನ್ಯರು ಒಗ್ಗೂಡಿ ಹೋರಾಡಿದರೆ ಜಯ ಸಿಗುತ್ತದೆ ಎಂಬುದಕ್ಕೂ ಈ ಪ್ರಕರಣ ದ್ಯೋತಕ.

ಬೆಂಗಳೂರಿನಲ್ಲಿ ಕೆರೆಗಳನ್ನು ಒತ್ತುವರಿ ಮಾಡಿ ಹಾಗೂ ಮಳೆ ನೀರಿನ ಮೋರಿ (ರಾಜಕಾಲುವೆ)ಗಳ ಅಕ್ಕಪಕ್ಕ ನಿರ್ಮಾಣಗೊಂಡಿರುವ ಅಕ್ರಮ ಕಟ್ಟಡಗಳಿಗೆ ಲೆಕ್ಕವಿಲ್ಲ. ನ್ಯಾಯಾಧಿಕರಣದ ತೀರ್ಪಿನಲ್ಲಿ ಹೊಸ ಬಫ‌ರ್‌ ಜೋನ್‌ ಗುರುತಿಸಲಾಗಿದ್ದು, ಅದರಂತೆ ರಾಜಕಾಲುವೆಗಳ ಅಕ್ಕಪಕ್ಕ 50 ಮೀಟರ್‌ ಹಾಗೂ ಕೆರೆ ದಂಡೆಗಳಲ್ಲಿ 75 ಮೀಟರ್‌ವರೆಗೆ ಯಾವುದೇ ನಿರ್ಮಿತಿ ಇರುವಂತಿಲ್ಲ. ಈಗಾಗಲೇ ನಕ್ಷೆ ಮಂಜೂರು ಮಾಡಿದ್ದರೆ ಸಂಬಂಧಪಟ್ಟ ಪ್ರಾಧಿಕಾರಗಳು ಅವುಗಳನ್ನು ರದ್ದುಪಡಿಸಬೇಕು. ನಿರ್ಮಾಣ ಕಾಮಗಾರಿ ಶುರುವಾಗಿದ್ದರೆ ಅದನ್ನು ನೆಲಸಮಗೊಳಿಸಬೇಕು. ನಿರ್ಮಾಣ ಕಾಮಗಾರಿ ಪೂರ್ಣಗೊಂಡು, ಅದು ಬಳಕೆಯೂ ಆಗುತ್ತಿದ್ದರೆ ಅಂತಹ ಪ್ರಕರಣಗಳಲ್ಲಿ ನ್ಯಾಯಾಲಯದ ಅನುಮತಿ ಪಡೆದು ಅವುಗಳನ್ನು ನೆಲಸಮಗೊಳಿಸಬೇಕಾಗುತ್ತದೆ ಎಂದು ತಜ್ಞರು ಈ ತೀರ್ಪನ್ನು ವಿಶ್ಲೇಷಿಸಿದ್ದಾರೆ.

ನ್ಯಾಯಾಧಿಕರಣದ ತೀರ್ಪನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂಬುದು ಜಲಮೂಲಗಳ ರಕ್ಷಣೆಯ ದೃಷ್ಟಿಯಿಂದ ಆಗಲೇಬೇಕಾದ ಕೆಲಸ. ಆದರೆ, ಈಗಾಗಲೇ ಸಂಬಂಧಿತ ಸರ್ಕಾರಿ ಪ್ರಾಧಿಕಾರಗಳಿಂದ ಸೂಕ್ತ ಅನುಮತಿ ಪಡೆದು ನಿರ್ಮಾಣಗೊಂಡಿರುವ ಕಟ್ಟಡಗಳಿಗೂ ಇದನ್ನು ಅನ್ವಯಿಸಿದರೆ, ಆಗ ನ್ಯಾಯಾಧಿಕರಣ ನೀಡಿದ ತೀರ್ಪಿನಲ್ಲಿರುವ ಹೊಸ ಬಫ‌ರ್‌ ಜೋನ್‌ ಪ್ರಕಾರ ಲಕ್ಷಾಂತರ ಕಟ್ಟಡಗಳು ಬೆಂಗಳೂರೊಂದರಲ್ಲೇ ನೆಲಸಮ ಆಗಬೇಕಾಗುತ್ತದೆ. ಸರ್ಕಾರದಿಂದಲೇ ಅನುಮತಿ ಪಡೆದು, ಹಳೆಯ ನಿಯಮಗಳ ಪ್ರಕಾರ ನಿರ್ಮಿಸಿದ ಕಟ್ಟಡಗಳನ್ನು ಈಗ ಹೊಸ ನಿಯಮ ಬಂದ ಮೇಲೆ ಒಡೆದು ಹಾಕಬೇಕು ಎಂಬುದು ಸಂಪೂರ್ಣ ನ್ಯಾಯೋಚಿತವಲ್ಲ. ಆಗ ಆ ಕಟ್ಟಡಗಳ ಮಾಲಿಕರಿಗೆ ಯಾರು ಪರಿಹಾರ ಕೊಡುತ್ತಾರೆ? ಬೆಂಗಳೂರಿನಲ್ಲಿ ಬಿಡಿಎ ಮಾಡಿದ ತಪ್ಪಿಗೆ ಈಗಾಗಲೇ ಹೀಗೆ ಮನೆ-ಮಠ ಕಳೆದುಕೊಂಡ ಸಾವಿರಾರು ಜನರ ಉದಾಹರಣೆ ಕಣ್ಮುಂದೆ ಇದೆ.

ಪ್ರಸ್ತುತ ಮಂತ್ರಿ ಡೆವಲಪರ್ಸ್‌ ಹಾಗೂ ಕೋರ್‌ವೆುçಂಡ್‌ ಪ್ರಕರಣದಲ್ಲಿ ಈ ತೀರ್ಪು ಕಟ್ಟುನಿಟ್ಟಾಗಿ ಪಾಲನೆಯಾಗಲಿ. ನಿರ್ಮಾಣ ಹಂತದಲ್ಲಿರುವ ಅಥವಾ ನಕ್ಷೆ ಮಂಜೂರಾತಿಯಷ್ಟೇ ಆಗಿರುವ ಪ್ರಕರಣಗಳಲ್ಲೂ ಇದು ಪಾಲನೆಯಾಗಲಿ. ಆದರೆ, ಹಳೆಯ ನಿಯಮದನ್ವಯ ನಿರ್ಮಾಣಗೊಂಡ ಕಟ್ಟಡಗಳ ವಿಷಯದಲ್ಲಿ ಆತುರದ ಕ್ರಮ ಸಲ್ಲದು.
-ಉದಯವಾಣಿ

Write A Comment