
ಬೆಂಗಳೂರು: ಹಳೇ ದ್ವೇಷ ಹಾಗೂ ಆಗಾಗ್ಗೆ ಕಿರುಕುಳ ನೀಡುತ್ತಿದ್ದ ರೌಡಿಶೀಟರ್ ಹರ್ಷ ಎಂಬಾತನನ್ನು ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆನಡೆಸಿ ಕೊಲೆ ಮಾಡಿದ್ದ 10 ಮಂದಿಯ ತಂಡವನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರವಿಕುಮಾರ್, ಸಂಜಯ್, ಸಾಗರ್, ಸಂಜಯ್, ಸಂತೋಷ್, ಶರವಣ, ನವೀನ್ ಮುನಿರತ್ನಂ, ಸುಧಾಕರ, ಅಭಿಷೇಕ್ ಮತ್ತು ಪ್ರಸಾದ್ ಬಂಧಿತ ಆರೋಪಿಗಳಾಗಿದ್ದು, ಇವರಿಂದ ಕೃತ್ಯಕ್ಕೆ ಬಳಸಿದ್ದ 4 ಬೈಕ್ ಹಾಗೂ 9 ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಏ.27ರಂದು ರಾತ್ರಿ 11.45ರಲ್ಲಿ ರೌಡಿಶೀಟರ್ ಹರ್ಷ ವಿಜಯನಗರದ ಮಾನಸ ಆಸ್ಪತ್ರೆ ಹತ್ತಿರ ಬೈಕ್‌ನಲ್ಲಿ ಬಂದು ರಸ್ತೆ ಬದಿ ನಿಲ್ಲಿಸುತ್ತಿದ್ದಂತೆ ಇವರನ್ನು ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಏಕಾಏಕಿ ಈತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ವಿಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿ 10 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹರ್ಷ ಆಗಾಗ್ಗೆ ತಮಗೆ ಕಿರುಕುಳ ನೀಡುತ್ತಿದ್ದುದ್ದರಿಂದ ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಉಪ ಪೊಲೀಸ್ ಕಮೀಷನರ್ ಅಜಯ್‌ಹಿಲೋರಿ, ಸಹಾಯಕ ಪೊಲೀಸ್ ಕಮೀಷನರ್ ಉಮೇಶ್, ಇನ್ಸ್‌ಪೆಕ್ಟರ್ ಸಂಜೀವಗೌಡ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಈ ಕಾರ್ಯಚರಣೆ ನಡೆಸಿತು.