ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ
ಫೋಟೋ: ಅಶೋಕ್ ಬೆಳ್ಮಣ್
ದುಬೈ, ಫೆ.13: ದುಬೈಯ ಗಮ್ಮತ್ ಕಲಾವಿದೆರ್ ತಂಡದವರು ನಡೆಸಿಕೊಟ್ಟ ‘ನಂಕ್ ಮಾತೆರ್ಲಾ ಬೋಡು’ ತುಳು ಹಾಸ್ಯಮಯ ಸಾಂಸಾರಿಕ ನಾಟಕ ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದು, ಉತ್ತಮವಾಗಿ ಮೂಡಿಬಂತು.
ದುಬೈ ಜುಮೇರಾದ ಎಮಿರೇಟ್ಸ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಎಮಿರೇಟ್ಸ್ ಥಿಯೇಟರ್‌ನಲ್ಲಿ ಜನತುಂಬಿದ ಪ್ರದರ್ಶನವನ್ನು ಕಾಣುವ ಮೂಲಕ ಉದ್ಯೋಗರಸಿಕೊಂಡು ದುಬೈಯಲ್ಲಿ ಬೀಡುಬಿಟ್ಟಿರುವ ಸ್ಥಳೀಯ ಕಲಾವಿದರೆ ನಟಿಸಿ-ನಿದೇಶಿಸಿರುವ ನಾಟಕ ನೋಡುಗರನ್ನು ಹಾಸ್ಯದ ಜೊತೆ ಕಣ್ಣಲ್ಲಿ ನೀರು ಬರುವಂತೆ ಮಾಡುವ ಮೂಲಕ ಉತ್ತಮ ನಟನಾ ಕೌಶಲ್ಯಕ್ಕೆ ಸಾಕ್ಷಿಯಾದರು.
ಶುಕ್ರವಾರ ಸಂಜೆ ಪ್ರದರ್ಶನ ತಡರಾತ್ರಿ ವರೆಗೂ ಮುಂದುವರಿದರೂ, ಜನ ಆಸನಬಿಟ್ಟು ಕದಲಲಿಲ್ಲ. ಆರಂಭದಿಂದ ಕೊನೆಯ ವರೆಗೂ ಸ್ಥಳೀಯ ಕಲಾವಿದರ ಅಭಿನಯವಂತೂ ತಾವೇನೂ ಖ್ಯಾತ ರಂಗಭೂಮಿಯ ಕಲಾವಿದರಿಗೆ ಕಮ್ಮಿ ಇಲ್ಲ ಎಂಬುದನ್ನು ಈ ನಾಟಕ ಸಾಭೀತುಪಡಿಸಿತು.
ಎಲ್ಲ ಕಲಾವಿದರು ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದು, ನಾಟಕದಲ್ಲಿ ನಡೆಯುವ ಸಾಂಸಾರಿಕ ಜೀವನದ ಆಗುಹೋಗುಗಳ ಮಧ್ಯೆ ಹಾಸ್ಯಭರಿತ ಪಾತ್ರ, ನಡೆಯುವ ಸನ್ನಿವೇಶಗಳು ಕೂಡಾ ಜನರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಪಾತ್ರವಹಿಸುತ್ತದೆ.
ನಾಟಕದ ರಂಗಸಜ್ಜಿಕೆಯಂತೂ ನೋಡುಗರಿಗೆ ವಿಶೇಷವೆನಿಸುವಂತೆ ಮಾಡಿದೆ. ನಾಟಕದ ವೇದಿಕೆಯ ಮೇಲೆ ಒಂದೆಡೆ ಕರಾವಳಿಯ ಸಾಂಪ್ರದಾಯಿಕ ಮನೆ, ಇನ್ನೊಂದೆಡೆ ದೂರದ ಮುಂಬೈಯ ಫ್ಲಾಟ್‌ವೊಂದರ ಸನ್ನಿವೇಶ ನಾಟಕದಲ್ಲಿ ಮಾಡಿರುವ ರೀತಿ ಅದ್ಭುತ. ಅದೇ ರೀತಿ ನಾಟಕದ ಹಿನ್ನೆಲೆ ಸಂಗೀತ ಕೂಡಾ ನಾಟಕಕ್ಕೆ ಇನ್ನಷ್ಟು ಮೆರೆಗು ನೀಡಿದೆ.
ಮಂಗಳೂರಿನ ಸೇವಾಭಾವಾ ಚಾರಿಟೇಬಲ್ ಟ್ರಸ್ಟ್‌ಗೆ ಸಹಾಯಧನ ನೀಡುವ ಉದ್ದೇಶದಿಂದ ದುಬೈ ಗಮ್ಮತ್ ಕಲಾವಿದೆರ್ ತಂಡದವರು ತಮ್ಮ ಐದನೆ ವರ್ಷದ ಕಿರುಕಾಣಿಕೆಯಾಗಿ ಆಯೋಜಿಸಿದ್ದ ನಾಟಕವನ್ನು ಕಿಶೋರ್ ಡಿ.ಶೆಟ್ಟಿ ಸಾರಥ್ಯದಲ್ಲಿ ಮಂಗಳೂರಿನ ಲಕುಮಿ ತಂಡದ ನವೀನ್ ಶೆಟ್ಟಿ ಅಳಕೆ ರಚಿಸಿದ್ದು, ದುಬೈ ಗಮ್ಮತ್ ಕಲಾವಿದೆರ್ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ ನಿರ್ದೇಶಿಸಿದ್ದರು. ಸಂಗೀತ ರಾಜೇಶ್ ಭಟ್ ನೀಡಿದ್ದರು.
ಮಹಿಳೆಯರಿಂದ ಉದ್ಘಾಟನೆ
ನಾಟಕಕ್ಕೂ ಮೊದಲು ನಡೆದ ಸಮಾರಂಭವನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯಾಥಿಗಣ್ಯ ಮಹಿಳೆಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ವೇಳೆ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ದುಬೈ ಆ್ಯಕ್ಮೆ ಬಿಲ್ಡಿಂಗ್ ಮೆಟಿರಿಯಲ್ಸ್‌ನ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್, ದುಬೈ ಫೋರ್ಚುನ್ ಗ್ರೂಪ್ ಆಫ್ ಹೊಟೇಲ್ಸ್‌ನ ಮಾಲಕ ಪ್ರವೀಣ್ ಕುಮಾರ್ ಶೆಟ್ಟಿ, ಅವರ ಧರ್ಮಪತ್ನಿ ರೂಪಾಲಿ ಶೆಟ್ಟಿ, ಗಮ್ಮತ್ ಕಲಾವಿದೆರ್‌ನ ಪೋಷಕರಾದ ಹರೀಶ್ ಬಂಗೇರಾ, ಅವರ ಧರ್ಮಪತ್ನಿ ಲತಾ, ಉದ್ಯಮಿ ಗುಣಶೀಲ ಶೆಟ್ಟಿ, ಅವರ ಧರ್ಮಪತ್ನಿ ಸಹನಾ, ಭಾಗ್ಯ ಪ್ರೇಮನಾಥ ಶೆಟ್ಟಿ, ಗಮ್ಮತ್ ಕಲಾವಿದೆರ್ ಇದರ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತಮ ಶೆಟ್ಟಿ, ಅವರು ಧರ್ಮಪತ್ನಿ ಉಷಾ ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನ
ರಂಗಭೂಮಿ, ಕ್ರೀಡೆ, ವೈದ್ಯಕೀಯ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶಶಿ ಶೆಟ್ಟಿ ಹಾಗೂ ಅವರ ಪತಿ ರವಿರಾಜ ಶೆಟ್ಟಿ, ಡೋನಾಲ್ಡ್ ಕೋರಿಯಾ ಹಾಗೂ ಅವರ ಪತ್ನಿ ಆಶಾ ಕೋರಿಯಾ, ಗೀತಾ ಆರ್.ಶೆಟ್ಟಿ ಹಾಗೂ ಅವರ ಪತಿ ಡಾ.ರತ್ನಾಕರ ಶೆಟ್ಟಿ, ಕಿಷೋರ್ ಡಿ.ಶೆಟ್ಟಿ, ನವೀನ್ ಶೆಟ್ಟಿ ಅಳಕೆ, ರಾಜೇಶ್ ಭಟ್‌ರನ್ನು ವೇದಿಕೆಯಲ್ಲಿದ್ದ ಗಣ್ಯರು ಸನ್ಮಾನಿಸಿ ಗೌರವಿಸಿದರು.
ನಾಟಕಕ್ಕೂ ಮೊದಲು ದುಬೈ ಆ್ಯಕ್ಮೆ ಬಿಲ್ಡಿಂಗ್ ಮೆಟಿರಿಯಲ್ಸ್‌ನ ಆಡಳಿತ ನಿರ್ದೇಶಕ ಹಾಗೂ ಖ್ಯಾತ ಗಾಯಕ ಹರೀಶ್ ಶೇರಿಗಾರ್ ಹಾಗೂ ಸಾಯಿಮಲ್ಲಿಕಾ ಮನಸೂರೆಗೊಳಿಸುವಂಥ ಹಾಡನ್ನು ಹಾಡಿ ರಂಜಿಸಿದರು.