ಬೆಂಗಳೂರು, ಫೆ.12- ಯೋಧ ಹನುಮಂತಪ್ಪ ಅವರ ಅಂತ್ಯಕ್ರಿಯೆಯ ದುಃಖದಲ್ಲಿ ಇಡೀ ದೇಶ ಮುಳುಗಿರುವ ಸಂದರ್ಭದಲ್ಲೇ ಸಿಯಾಚಿನ್‌ನಲ್ಲಿ ಮೃತಪಟ್ಟಿದ್ದಾರೆ ಎನ್ನಲಾದ ಇನ್ನಿಬ್ಬರು ಕರ್ನಾಟಕ ಯೋಧರ ಬಗ್ಗೆ ಸ್ಪಷ್ಟ ಮಾಹಿತಿ ಸಿಗದೆ ಕುಟುಂಬದ ಸದಸ್ಯರಲ್ಲಿ ಆಕ್ರೋಶ ಮಡುಗಟ್ಟಿದೆ. ಕಳೆದ 10 ದಿನಗಳ ಹಿಂದೆ ಸಿಯಾಚಿನ್‌ನಲ್ಲಿ ಹಿಮಪಾತಕ್ಕೆ ಸಿಲುಕಿ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಯ ಯೋಧ ಮಹೇಶ್, ಹಾಸನ ಜಿಲ್ಲೆಯ ತೇಜೂರು ಗ್ರಾಮದ ಟಿ.ಟಿ.ನಾಗೇಶ್ ಅವರು ಮೃತಪಟ್ಟಿದ್ದಾರೆ ಎಂದು ಸೇನಾಧಿಕಾರಿಗಳು ಘೋಷಿಸಿದ್ದಾರೆ. ಪಾರ್ಥಿವ ಶರೀರಗಳನ್ನು ಮಂಜುಗಡ್ಡೆಯಿಂದ ಹೊರ ತೆಗೆಯಲಾಗಿದೆ ಎಂದು ಹೇಳಲಾಗುತ್ತಿದ್ದರೂ ಯಾವುದೇ ಖಚಿತ ಮಾಹಿತಿ ಸಿಕ್ಕಿಲ್ಲ.
ರಾಜ್ಯ ಸರ್ಕಾರದ ಅಧಿಕಾರಿಗಳಿಗೂ ಈ ಬಗ್ಗೆ ಅಸ್ಪಷ್ಟ ಮಾಹಿತಿ ಇದ್ದು, ಹವಾಮಾನದ ವೈಪರೀತ್ಯದಿಂದಾಗಿ ಮಹೇಶ್ ಮತ್ತು ನಾಗೇಶ್ ಅವರ ಪಾರ್ಥಿವ ಶರೀರಗಳನ್ನು ನಮ್ಮ ವಶಕ್ಕೆ ಪಡೆಯಲಾಗಿಲ್ಲ ಎಂದು ಹೇಳಲಾಗುತ್ತಿದೆ.
ಹನುಮಂತಪ್ಪ ಅವರ ಅಂತ್ಯಕ್ರಿಯೆ ದುಃಖದಲ್ಲಿ ಇಡೀ ರಾಜ್ಯ ಮುಳುಗಿದೆ. ಈ ನಡುವೆ ಇನ್ನಿಬ್ಬರು ಯೋಧರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಸಿಯಾಚಿನ್‌ನಲ್ಲಿ ಕೆಟ್ಟ ಹವಮಾನದಿಂದ ಹೆಲಿಕಾಪ್ಟರ್‌ಗಳು ಸಂಚರಿಸಲು ಆಗುತ್ತಿಲ್ಲ. ಹೀಗಾಗಿ ಪಾರ್ಥಿವ ಶರೀರಗಳನ್ನು ದೆಹಲಿಗೆ ತರಲು ಸಾಧ್ಯವಾಗುತ್ತಿಲ್ಲ ಎಂದು ದೆಹಲಿಯ ಕರ್ನಾಟಕ ಸ್ಥಾನಿಕ ಆಯುಕ್ತರಾದ ಅತುಲ್ ಕುಮಾರ್ ತಿವಾರಿ ಪತ್ರಿಕೆಗೆ ತಿಳಿಸಿದ್ದಾರೆ.
ರಾಜ್ಯ ಗೃಹ ಇಲಾಖೆಗೂ ಈ ಇಬ್ಬರು ಯೋಧರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂದು ಹೇಳಲಾಗಿದೆ.ಸೇನಾ ಅಧಿಕಾರಿಗಳ ಜತೆ ಸಮನ್ವಯ ಸಾಧಿಸಿದ್ದು, ರಾಜ್ಯ ಸರ್ಕಾರದ ಯಾವ ಅಧಿಕಾರಿಗಳನ್ನು ನಿಯೋಜಿಸಿಲ್ಲ. ದೆಹಲಿಯ ಸ್ಥಾನಿಕ ಆಯುಕ್ತರೇ ಸ್ವಯಂ ಪ್ರೇರಿತರಾಗಿ ಸೇನಾಧಿಕಾರಿಗಳ ಜತೆ ಸಂಪರ್ಕದಲ್ಲಿದ್ದು, ಯೋಧರ ಕುರಿತು ಮಾಹಿತಿ ಪಡೆಯಲು ಹರಸಾಹಸ ನಡೆಸುತ್ತಿದ್ದಾರೆ.
ಆರು ದಿನಗಳ ಕಾಲ ಮಂಜುಗಡ್ಡೆಗಳಲ್ಲಿ ಸಿಲುಕಿದ್ದ ಹನುಮಂತಪ್ಪ ಅವರನ್ನು ಕ್ಷಿಪ್ರ ಕಾರ್ಯಾಚರಣೆ ಮಾಡಿ ರಕ್ಷಿಸಲಾಗಿತ್ತು. ಪ್ರತಿಕೂಲ ಹವಾಮಾನದಲ್ಲೂ ಆಹಾರ, ನೀರು ಇಲ್ಲದೆ ಬದುಕುಳಿದ ಹನುಮಂತಪ್ಪ ಅವರಿಗೆ ದೆಹಲಿಯ ಆರ್.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತಾದರೂ ನಿನ್ನೆ ಅದು ಫಲಕಾರಿಯಾಗದೆ ಹನುಮಂತಪ್ಪ ಇಹಲೋಕ ತ್ಯಜಿಸಿದರು. ಹನುಮಂತಪ್ಪ ಅವರ ಜತೆಯಲ್ಲೇ ಕೆಲಸ ಮಾಡುತ್ತಿದ್ದ ಮಹೇಶ್ ಹಾಗೂ ನಾಗೇಶ್ ಅವರ ಸ್ಥಿತಿ-ಗತಿ ತಿಳಿಯದೆ ಕುಟುಂಬದ ಸದಸ್ಯರು ಚಿಂತಾಕ್ರಾಂತರಾಗಿದ್ದಾರೆ. ಈ ಯೋಧರ ಊರುಗಳಲ್ಲೂ ಆಕ್ರಂದನ ಮುಗಿಲು ಮುಟ್ಟಿದೆ.
ಇಬ್ಬರು ಯೋಧರ ಪಾರ್ಥಿವ ಶರೀರಗಳು ಇಂದು ಕರ್ನಾಟಕಕ್ಕೆ ತಲುಪಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಇದನ್ನು ಮೈಸೂರು ಮತ್ತು ಹಾಸನ ಜಿಲ್ಲಾಧಿಕಾರಿಗಳು ಯೋಧರ ಕುಟುಂಬಗಳಿಗೆ ರವಾನಿಸಿದ್ದರು. ಆದರೆ, ಇಂದು ಮಧ್ಯಾಹ್ನದವರೆಗೂ ಸಿಯಾಚಿನ್‌ನಿಂದಲೇ ಪಾರ್ಥಿವ ಶರೀರಗಳನ್ನು ಹೊರ ತರಲಾಗಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಬಹುಶಃ ನಾಳೆ (ಶನಿವಾರ) ಪಾರ್ಥಿವ ಶರೀರಗಳು ತವರಿಗೆ ಮರಳಬಹುದು ಎಂಬ ನಿರೀಕ್ಷೆಗಳಿವೆ.