ಮಂಗಳೂರು, ಫೆ.13: ಕಾರ್ಪೊರೇಶನ್ ಬ್ಯಾಂಕ್ ಹಾಲಿ ಆರ್ಥಿಕ ವರ್ಷದ ಮೂರನೆ ತ್ರೈಮಾಸಿಕ ಅವಧಿ ಡಿಸೆಂಬರ್ 2015ರ ಅಂತ್ಯದಲ್ಲಿ ಕೊನೆಗೊಂಡಾಗ 3,40,199 ಕೋ.ರೂ. ಆರ್ಥಿಕ ವ್ಯವಹಾರ ನಡೆಸಿದೆ. ಇದರೊಂದಿಗೆ ಕಳೆದ ವರ್ಷಕ್ಕೆ ಹೋಲಿಸಿದಾಗ ಶೇ.3.83 ಪ್ರಗತಿ ಸಾಧಿಸಲಾಗಿದೆ ಎಂದು ಬ್ಯಾಂಕ್‌ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೈ ಕುಮಾರ್ ಗಾರ್ಗ್ ತಿಳಿಸಿದರು.
ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕಳೆದ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕ್‌ನ ಆರ್ಥಿಕ ವ್ಯವಹಾರ 3,27,654 ಕೋಟಿ ರೂ. ದಾಖಲಾಗಿತ್ತು. ಠೇವಣಿ ಸಂಗ್ರಹದಲ್ಲಿಯೂ ಕಳೆದ ವರ್ಷಕ್ಕಿಂತ ಶೇ 5.43 ಏರಿಕೆಯಾಗಿದೆ. ಈ ಬಾರಿ ಒಟ್ಟು 10,031 ಕೋ.ರೂ. ಠೇವಣಿ ಸಂಗ್ರಹಿಸಲಾಗಿದೆ. ಆದರೆ ನಿವ್ವಳ ಲಾಭಗಳಿಕೆಯಲ್ಲಿ ಕಳೆದ ಬಾರಿಗಿಂತ 99.17 ಶೇ. ಇಳಿಕೆಯಾಗಿದೆ. ನಿರ್ವಹಣಾ ಆದಾಯದಲ್ಲಿ ಶೇ.14.94 ಏರಿಕೆಯಾಗಿದೆ. ಉಳಿತಾಯ ಖಾತೆ ವಿಭಾಗದಲ್ಲಿ ಠೇವಣಿ ಸಂಗ್ರಹ ಶೇ. 14.30 ಏರಿಕೆಯಾಗಿದೆ ಎಂದರು.
ಬ್ಯಾಂಕ್‌ನ ಆದ್ಯತಾ ವಲಯಕ್ಕೆ ಸಂಬಂಧಿಸಿದಂತೆ 65,858 ಕೋಟಿ ರೂ. ಸಾಲ ನೀಡಲಾಗಿದೆ. ಕೃಷಿಸಾಲ ನೀಡಿಕೆಯಲ್ಲಿ ಬ್ಯಾಂಕ್ ಗಮನಾರ್ಹ ಸಾಧನೆ ಮಾಡಿದ್ದು, ಮೂರನೆ ತ್ರೈಮಾಸಿಕ ಅಂತ್ಯದಲ್ಲಿ 25,439 ಕೋಟಿ ರೂ. ಸಾಲ ನೀಡುವ ಮೂಲಕ ಕಳೆದ ಸಾಲಿಗಿಂತ ಶೇ. 35.68 ಪ್ರಗತಿ ಸಾಧಿಸಲಾಗಿದೆ ಎಂದು ಗಾರ್ಗ್ ತಿಳಿಸಿದ್ದಾರೆ.
ಬ್ಯಾಂಕ್‌ನ ಮೂಲಕ ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯದ ಉದ್ಯಮಿ ಗಳಿಗೆ ಸಾಲ ನೀಡಿಕೆಯಲ್ಲಿ ಶೇ. 10 ಪ್ರಗತಿ ಸಾಧಿಸಲಾಗಿದೆ. ಅತೀ ಸಣ್ಣ ಉದ್ಯಮಿಗಳಿಗೆ 10,337 ಕೋಟಿ ರೂ. ಸಾಲ ನೀಡಲಾಗಿದೆ. ಬ್ಯಾಂಕ್ ಮುದ್ರಾ ಯೋಜನೆಯ ಮೂಲಕ ಶೇ. 94.60 ಪ್ರಗತಿ ಸಾಧಿಸಿದೆ. 1.41 ಲಕ್ಷ ಫಲಾನುಭವಿಗಳಿಗೆ ಸಾಲ ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕ್‌ಗಳ ಮೂಲಕ ಆರ್ಥಿಕ ಪಾಲ್ಗೊಳ್ಳುವಿಕೆ ಯೋಜನೆಯ ಪ್ರಕಾರ ಗುರಿ ನೀಡಲಾದ ದೇಶದ 1,880 ಗ್ರಾಮಗಳಲ್ಲಿ ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದವರು ತಿಳಿಸಿದರು.
ಪ್ರಧಾನ ಮಂತ್ರಿ ‘ಜನಧನ್’ ಯೋಜನೆಯ ಮೂಲಕ 25.56 ಲಕ್ಷ ಬ್ಯಾಂಕ್ ಖಾತೆ ತೆರೆಯಲಾಗಿದೆೆ. ಬ್ಯಾಂಕ್ 2,399 ಶಾಖೆಗಳೊಂದಿಗೆ, 3,040 ಎಟಿಎಂ 70,597 ಪಿಒಎಸ್ ಮೆಶಿನ್, 43 ಕಿಯೋಸ್ಕ್ ಘಟಕಗಳೊಂದಿಗೆ ಕಾರ್ಯ ನಿರ್ವಹಿಸುತ್ತದೆ ಎಂದು ಗಾರ್ಗ್ ತಿಳಿಸಿದರು.
ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುನೀಲ್ ಮೆಹ್ತಾ, ಮಹಾ ಪ್ರಬಂಧಕ ಆರ್. ನಟರಾಜನ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.