ಜುಬೈಲ್, ಆಗಸ್ಟ್ 21: ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ರಾಜ್ಯ ದ.ಕ.ಮತ್ತು ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಸೌದಿಅರೇಬಿಯದ ಜುಬೈಲ್ ನಗರದ ಅಲ್ ಫಲಾಹ್ ಕ್ರೀಡಾಂಗಣದಲ್ಲಿ ಸೋಶಿಯಲ್ ಫೋರಮ್ ಸದಸ್ಯರಿಗಾಗಿ 30 ಗಜಗಳ ಅಂಡರ್ ಆರ್ಮ್ ಕ್ರಿಕೆಟ್ ಟೂರ್ನಿಯನ್ನು ಆಗಸ್ಟ್ 21ರಂದು ಆಯೋಜಿಸಲಾಯಿತು.
ಟೂರ್ನಿಯ ಚಾಂಪಿಯನ್ ಆಗಿ ತೋಡಾರ್ ಫ್ರೆಂಡ್ಸ್ ತಂಡವು ಮೂಡಿಬಂದರೆ, ರನ್ನರ್ ಅಪ್ ಆಗಿ ಜುಬೈಲ್ ಅಟ್ಯಾಕರ್ಸ್ ತಂಡವು ಪ್ರಶಸ್ತಿ ಪಡೆದುಕೊಂಡಿತು. ಅತ್ಯುತ್ತಮ ಬ್ಯಾಟ್ಸ್ಮ್ಯಾನ್ ಪ್ರಶಸ್ತಿಯನ್ನು ಜುಬೈಲ್ ಅಟ್ಯಾಕರ್ಸ್ ತಂಡದ ನಾಯಕ ಆಸಿಫ್ ಕೊಂಚಾರ್ ಅವರು ಪಡೆದುಕೊಂಡರು, ಅತ್ಯುತ್ತಮ ಬೌಲರ್ ಹಾಗೂ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತೋಡಾರ್ ತಂಡದ ಆಸಿಫ್ ಪಡೆದುಕೊಂಡರೆ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತೋಡಾರ್ ತಂಡದ ಸಿದ್ದೀಕ್ ಅವರು ಪಡೆದುಕೊಂಡರು.
ಪ್ರಶಸ್ತಿ ಪ್ರದಾನ ಮತ್ತು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಇಂಡಿಯನ್ ಸೋಶಿಯಲ್ ಫೋರಮ್ ಈಸ್ಟರ್ನ್ ಪ್ರೊವಿನ್ಸ್ ಕರ್ನಾಟಕ ರಾಜ್ಯಾಧ್ಯಕ್ಷ ಶರೀಫ್ ಅಡ್ಡೂರು ಅವರು ಅಧ್ಯಕ್ಷೀಯ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸೋಶಿಯಲ್ ಫೋರಮ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಫಯಾಜ಼್ ಎನ್., ಕರ್ನಾಟಕ ರಾಜ್ಯ ಉಪಾಧ್ಯಕ್ಷ ಸಲೀಮ್ ದಾವಣಗೆರೆ, ಗಲ್ಫ್ ಪೈಪ್ ಟ್ರೇಡಿಂಗ್ ಮ್ಯಾನೇಜರ್ ಮುಹಮ್ಮದ್ ಸರ್ತಾಜ್ ಖಾನ್ ಅವರು ಕ್ರೀಡಾಪಟುಗಳಿಗೆ ಕ್ರೀಡಾಸಂದೇಶ ನೀಡಿ, ಸ್ಫೂರ್ತಿ ತುಂಬಿದರು.
ಸೋಶಿಯಲ್ ಫೋರಮ್ ನ ಉಡುಪಿ ಜಿಲ್ಲಾ ಸಮಿತಿಯ ಅಧ್ಯಕ್ಷ ಸಲೀಮ್ ಉಡುಪಿ, ದ.ಕ. ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಸತ್ತಿಕಲ್ಲು, ಕಾರ್ಯದರ್ಶಿ ಮುನೀರ್ ವೇಣೂರು ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಶ್ರಫ್ ಕುಕ್ಕಾಜೆ ಅವರು ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಲ್ಲಿಸಿದರು.
ಇಂಡಿಯನ್ ಸೋಶಿಯಲ್ ಫೋರಮ್ ನ ಸದಸ್ಯರಿಗಾಗಿ ಆಯೋಜಿಸಲಾಗಿದ್ದ ಹೊನಲು ಬೆಳಕಿನ ಚುಟುಕು ಕ್ರಿಕೆಟ್ ಟೂರ್ನಿಯಲ್ಲಿ ಸೋಶಿಯಲ್ ಫೋರಮ್ ನ ಒಟ್ಟು 19 ತಂಡಗಳು ಭಾಗವಹಿಸಿದ್ದವು. ಕ್ರೀಡಾಕೂಟದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಹೊಸ ಸದಸ್ಯತ್ವ ನೋಂದಣಿಗೆ ಕ್ರೀಡಾಪಟುಗಳಿಂದ ಅತ್ಯುತ್ತಮ ಸಹಕಾರ ದೊರೆತಿದ್ದು, 54 ಮಂದಿ ಅನಿವಾಸಿ ಕನ್ನಡಿಗರು ಇಂಡಿಯನ್ ಸೋಶಿಯಲ್ ಫೋರಮ್ ಗೆ ಸೇರ್ಪಡೆಗೊಂಡರು. ಭಾಗವಹಿಸಿದ ಕ್ರೀಡಾಪಟುಗಳಿಗೆ ತಂಪುಪಾನೀಯ ಮತ್ತು ಊಟೋಪಚಾರ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಟೂರ್ನಿಯ ಪ್ರಾಯೋಜಕತ್ವವನ್ನು ಗಲ್ಫ್ ಪೈಪ್ ಟ್ರೇಡಿಂಗ್ ವಹಿಸಿಕೊಂಡಿತ್ತು.