ಭಾರತದಲ್ಲಿ ಆಚರಿಸಲ್ಪಡುವ ಹಬ್ಬಗಳ ಸಾಲಿನಲ್ಲಿ ಪ್ರತಿವರ್ಷ ಶ್ರಾವಣ ಮಾಸದಲ್ಲಿ ಪೌರ್ಣಮಿಗೆ ಮುಂದಾಗಿ ಬರುವ ಶುಕ್ರವಾರದಂದು ವರಮಹಾಲಕ್ಷ್ಮೀ ವ್ರತವು ಈ ಬಾರಿ 2015 ಅಗಸ್ಟ್ 28 ನೇ ತಾರೀಕು ಶುಕ್ರವಾರ ನಡೆಯಲಿದೆ. ನಾಡಿನಾದ್ಯಂತ ಸುಮಂಗಲೆಯರು ಅತ್ಯಂತ ಶ್ರದ್ಧಾ ಭಕ್ತಿ ಭಾವದಿಂದಿಂದ ಆಚರಿಸುವ ವರಮಹಾಲಕ್ಷ್ಮೀ ವ್ರತದ ಪುರಾಣ ಕಥೆ ವಿಶೇಷ ಲೇಖನ.
ಶ್ರೀ ವರಮಹಾಲಕ್ಷ್ಮಿ ವ್ರತ, ಪುರಾಣ – ಕಥೆ
ಸಕಲ ಮುನಿಗಳಿಂದ ರಮ್ಯವಾಗಿರುವ ಕೈಲಾಸ ಪರ್ವತದಲ್ಲಿ ನಾನಾ ವಿಧಗಳಾದ ಮಣಿಗಳಿಂದ ಕೆತ್ತಲ್ಪಟ್ಟ, ಪಾಟಲ, ಅಶೋಕ, ದೇವಹೊನ್ನೆ, ಖರ್ಜೂರ, ಪಗಡೆ ಮೊದಲಾದ ಅನೇಕ ವೃಕ್ಷನಿಬಿಡವಾಗಿಯೂ, ಕುಬೇರ, ಇಂದ್ರ ಮೊದಲಾದ ದಿಕ್ಪಾಲಕರಿಂದಲೂ, ನಾರದ, ಅಗಸ್ತ್ಯ, ವಾಲ್ಮೀಕಿ ಮೊದಲಾದ ಋಷಿಗಳಿಗೆ ನೆಲೆಮನೆಯಾಗಿಯೂ ಇರುವ ಸ್ಥಳದಲ್ಲಿ ರತ್ನ ಸಿಂಹಾಸನಾಸೀನನಾಗಿರುವ ಲೋಕ ಶಂಕರನಾದ ಈಶ್ವರನನ್ನು ನೋಡಿ, ಪಾರ್ವತಿಯು ಓ ಕಾಂತನೆ! ಲೋಕ ಹಿತಾರ್ಥವಾಗಿಯೂ, ಪಾವನವಾಗಿರುವ ವ್ರತವೊಂದನ್ನು ದಯವಿಟ್ಟು ಹೇಳಬೇಕೆಂದು ಪ್ರಾರ್ಥಿಸಲು, ಈಶ್ವರನು ಓ ಪಾರ್ವತೀ! ವ್ರತಗಳಲ್ಲಿ ಒಂದು ಉತ್ತಮವಾದ ವ್ರತವೊಂದಿರುವುದು. ಅದು ಸಕಲ ಸಂಪತ್ತುಗಳಿಗೆ ಮೂಲವಾಗಿಯೂ, ಜಾಗೃತೆಯಾಗಿ ಪುತ್ರಪೌತ್ರ ಸುಖದಾಯಕವಾಗಿಯೂ ಇರುವುದು. ಈ ಪಾವನಕರವಾದ ವ್ರತಕ್ಕೆ ವರಲಕ್ಷ್ಮೀ ವ್ರತವೆಂದು ಹೆಸರು. ಶ್ರಾವಣ ಮಾಸದಲ್ಲಿ ಪೌರ್ಣಮಿಗೆ ಮೊದಲು ಬರತಕ್ಕ ಶುಕ್ರವಾರದ ದಿನ ಈ ವ್ರತವನ್ನು ಆಚರಿಸಬೇಕು.
ಶಿವನು ಪಾರ್ವತಿಯನ್ನು ಕುರಿತು ಈ ವ್ರತವನ್ನು ಆಚರಿಸತಕ್ಕ ಅಂಗನೆಗೆ ಉಂಟಾಗುವ ಪುಣ್ಯಫಲಗಳನ್ನು ಹೇಳುವೆನು ಕೇಳು ಎಂದು ಹೇಳಲಾಗಿ ಪಾರ್ವತಿಯು ಈಶ್ವರನನ್ನು ನೋಡಿ, ದೇವಾ! ಈ ವ್ರತವನ್ನು ಯಾವ ವಿಧಾನದಿಂದ ಮಾಡಬೇಕು? ಅದಕ್ಕೆ ದೇವತೆ ಯಾರು ? ಇದಕ್ಕೆ ಮೊದಲು ಯಾರು ಆ ವರಮಹಾಲಕ್ಷ್ಮಿಯನ್ನು ಆರಾಧಿಸಿ ಸಂತೋಷವನ್ನು ಹೊಂದಿದರು ? ಎಂದು ಕೇಳಲಾಗಿ ಈಶ್ವರನು ಪಾರ್ವತಿಯೊಂದಿಗೆ ಹೇಳುತ್ತಾನೆ: – ಪಾರ್ವತಿಯೇ ! ಪಾವನವಾದ ವರಮಹಾಲಕ್ಷ್ಮೀ ವ್ರತದ ಪ್ರಭಾವವನ್ನು ಹೇಳುವೆನು ಕೇಳು. ಕಥಾ ವೃತ್ತಾಂತವನ್ನು ವಿವರಿಸಿದನು.
ಬಂಗಾರದ ಪ್ರಾಕಾರಗಳಿಂದ ಕೂಡಿ ಸಕಲಭರಣಗಳಿಂದ ಅಲಂಕೃತವಾದ ಕುಂಡಿನ ಎಂಬ ಪಟ್ಟಣದಲ್ಲಿ ಚಾರುಮತಿಯೆಂಬ ಬ್ರಾಹ್ಮಣ ಸ್ತ್ರೀಯೊಬ್ಬಳಿದ್ದಳು. ಆಕೆಯು ಪತಿಭಕ್ತಿ ಪರಾಯಣಲಾಗಿಯೂ, ಅತ್ತೆ ಮಾವಂದಿರಿಗೆ ಶೂಶ್ರುಷೆ ಮಾಡುವುದರಲ್ಲಿ ನಿರತಳಾಗಿಯೂ ಇದ್ದಳು ಮತ್ತು ಸಕಲ ಶಾಸ್ತ್ರಜ್ಞಳು, ಯಾವಾಗಲೂ ಇಂಪಾಗಿ ಮಾತನಾಡುವವಳು, ನಿರ್ಮಲವಾದ ಮನಸ್ಸುಳ್ಳ ಚಾರುಮತಿಗೆ ಲಕ್ಷ್ಮೀದೇವಿಯು ಸ್ವಪ್ನದಲ್ಲಿ ಪ್ರಸನ್ನಳಾಗಿ, ಎಲೈ ಮಂಗಳಕರಳೇ ! ನಿನಗೆ ಶುಭವನ್ನುಂಟುಮಾಡಲು ವರಲಕ್ಷ್ಮೀಯಂಬ ನಾನು ಬಂದಿರುವೆನು, ಶ್ರಾವಣ ಮಾಸದಲ್ಲಿ ಪೌರ್ಣಮಿಗೆ ಮುಂದಾಗಿ ಬರುವ ಶುಕ್ರವಾರ ನನ್ನನ್ನು ಆರಾಧಿಸು, ನಿನ್ನ ಇಷ್ಟಾರ್ಥಗಳನ್ನು ಸಲ್ಲಿಸುವೆನು ಎಂದು ಹೇಳಿದಳು. ಚಾರುಮತಿಯು ಸ್ವಪ್ನದಲ್ಲಿಯೇ ಆ ದೇವಿಯನ್ನು ಕುರಿತು ತಾಯೇ ! ನೀನು ಜಗನ್ಮಾತೆಯು, ಪುಣ್ಯಸ್ವರೂಪಿಯು, ಶರಣರನ್ನು ಪಾಲಿಸತಕ್ಕವಳು! ಮೂರು ಲೋಕಗಳಿಂದಲೂ ಸ್ತುತಿಸಲ್ಪಡುವವಳು; ವಿಷ್ಣುವಿನ ವಕ್ಷಸ್ಥಲದಲ್ಲಿರತಕ್ಕವಳು. ನಿನ್ನ ಕಟಾಕ್ಷಕ್ಕೆ ಪಾತ್ರರಾದ ಮನುಷ್ಯನೇ ಧನ್ಯನು. ಅತನೇ ಸುಗುಣಿಯು ಮತ್ತು ಸ್ತೋತ್ರಾರ್ಹನು, ಭಾರ್ಯಾಪುತ್ರಾಧಿಗಳುಳ್ಳವನೂ, ಶೂರನು, ಪಂಡಿತನು, ಓ ಹರಿಪ್ರಿಯೇ ! ಹಿಂದಣ ಜನ್ಮದಲ್ಲಿ ನಾನು ಆನೇಕ ಪುಣ್ಯಕಾರ್ಯಗಳನ್ನು ಮಾಡಿರುವುದರಿಂದಲೇ ತಮ್ಮ ದರ್ಶನ ಲಭಿಸಿತೆಂದು ಹೇಳುವುದರಲ್ಲಿ ಸಂದೇಹವೇ ಇಲ್ಲವೆಂಬುದಾಗಿ ಸ್ತೋತ್ರವನ್ನು ಮಾಡಿದಳು. ಆಗ ವರಲಕ್ಷ್ಮೀಯು ಆಕೆಗೆ ವರಗಳನ್ನು ಕೊಟ್ಟು ಅಂತರ್ಧಾನಳಾದಳು.
ಸುಸ್ವಪ್ನವನ್ನು ಕಂಡ ಚಾರುಮತಿಯೂ ನಿದ್ರೆ ಹೋಗದೆ ಸೂರ್ಯೋದಯವಾದ ನಂತರ ತನ್ನ ಸ್ವಪ್ನ ವೃತ್ತಾಂತವನ್ನು ಬಂಧುಗಳೊಡನೆ ಅತ್ಯಂತ ಉತ್ಸಾಹದಿಂದ ಹೇಳಿದಳು. ಅವರೆಲ್ಲರೂ ಕೇಳಿ ಚಾರುಮತಿ ನಿನ್ನ ಸ್ವಪ್ನ ಬಹಳ ಶುಭಕರವಾದುದು. ನಾವುಗಳೆಲ್ಲರೂ ಈ ವ್ರತವನ್ನು ಆಚರಿಸೋಣ ಎಂದು ಹೇಳಿದರು. ಎಂದಿಗೆ ವರಲಕ್ಷ್ಮೀ ವ್ರತವು ಪ್ರಾಪ್ತವಾಗುವುದೋ ಎಂದು ಹಂಬಲಿಸುತ್ತ ಇದ್ದಂತೆ. ಶ್ರಾವಣ ಮಾಸದಲ್ಲಿ ವರಲಕ್ಷ್ಮೀ ವ್ರತದ ದಿನವು ಪ್ರಾಪ್ತಿಯಾಯಿತು.
ಸ್ತ್ರೀಯರೆಲ್ಲರೂ ಅತ್ಯುತ್ಸಾಹದಿಂದ ನಿರ್ಮಲ ಮನಸ್ಕರಾಗಿ ಸ್ನಾನವನ್ನು ಮಾಡಿ ವಿಧ ವಿಧವಾದ ವಸ್ತ್ರಗಳಿಂದ ಅಲಂಕರಿಸಿಕೊಂಡು ಹೊಸದಾದ ಅಕ್ಕಿಯಿಂದಲೂ ಆಲದ ಬಳ್ಳಿಯಿಂದಲೂ ಪರಿವೃತಳಾದ ಕಲಶದಲ್ಲಿ ವರಮಹಾಲಕ್ಷ್ಮೀಯನ್ನು ಆವಾಹನೆ ಮಾಡಿ ಚಾರುಮತಿ ಮತ್ತು ಇನ್ನಿತರ ಸುಮಂಗಲೆಯರು ಭಕ್ತಿಯಿಂದ ವ್ರತವನ್ನು ಆಚರಿಸಿದರು. “ಪದ್ಮಾಸನೇ ಪದ್ಮಕರೇ” ಎಂಬ ಶ್ಲೋಕವನ್ನು ಹೇಳಿ ವರಲಕ್ಷ್ಮೀಯನ್ನು ಆವಾಹನೆ ಮಾಡಿ ಕಲ್ಪೋಕ್ತಪ್ರಕಾರ ಅರ್ಚಿಸಿ, ಬಲ ಹಸ್ತದಲ್ಲಿ ದಾರವನ್ನು ಕಟ್ಟಿಕೊಂದು ತುಪ್ಪದಿಂದ ಮಾಡಿದ ಭಕ್ಷ್ಯಗಳನ್ನು ನಿವೇದನ ಮಾಡಿ ವೇದಶಾಸ್ತ್ರ ಪಾರಂಗತನಾದ ಪುರೋಹಿತನಿಗೆ ಭಕ್ಷ್ಯ ತಾಂಬೂಲ, ಬಾಗಿನ ಕೊಟ್ಟು ದೇವಿಯ ಸನ್ನಿದಿಯಲ್ಲಿ ತಾವು ಮಾಡಿದ ಭಕ್ಷ್ಯ ಭೋಜ್ಯಾದಿಗಳನ್ನು ಭುಂಜಿಸಿದರು.
ನಂತರ ವರಮಹಾಲಕ್ಷ್ಮೀಯ ಅನುಗ್ರಹದಿಂದ ಚಾರುಮತಿ ಮತ್ತಿ ಇನ್ನಿತರ ಸುಮಂಗಲೆಯರು ಐಶ್ವರ್ಯ, ಧನ ಧಾನ್ಯ ಸಮೃದ್ಧಿ, ಆರೊಗ್ಯ ನೆಮ್ಮದಿಯನ್ನು ಪಡೆದರು. ಸದಾಕಾಲದಲ್ಲಿ ಅನ್ನದಾನವನ್ನು, ಬಂದು ಮಿತ್ರರಿಗೆ ಕಷ್ಟಕಾಲದಲ್ಲಿ ನೆರವು ನೀಡುತ್ತಾ ಅತ್ಯಂತ ಭಯ ಭಕ್ತಿಯಿಂದ ತಮ್ಮ ತಮ್ಮ ಮನೆಗಳಲ್ಲಿ ಸುಖವಾಗಿದ್ದರು.
ಚಾರುಮತಿಯ ವರಮಹಾಲಕ್ಷ್ಮೀ ವ್ರತದ ಮಹಿಮೆಯನ್ನು ಈಶ್ವರನು ಪಾರ್ವತಿಯಲ್ಲಿ ಹೇಳುತ್ತಾ ಚಾರುಮತಿದೇವಿಯ ಈ ವ್ರತಕಥಾ ಭಕ್ತಿಯಿಂದ ಕೇಳಿ, ವ್ರತವನ್ನು ಆಚರಿಸಿ, ಇಲ್ಲವೆ ಇತರರಿಂದ ಹೇಳಿಸಿ ನಿರ್ಮಲ ಮನಸ್ಕರಾಗಿ ಕೇಳುವರೂ, ವರಮಾಲಕ್ಷ್ಮೀ ವ್ರತವನ್ನು ಆಚರಿಸುವವರಿಗೆ ಸಕಲ ಇಷ್ಟಾರ್ಥಗಳು ವರಮಾಹಾಲಕ್ಷ್ಮೀಯ ಅನುಗ್ರಹದಿಂದ ಸಕಲ ಕಾರ್ಯಗಳು ಸಿದ್ದಿಸುವು ಎಂದು ಪಾರ್ವತಿ ದೇವಿಗೆ ಈಶ್ವರನು ಹೇಳಿದನು.
ಇತಿ ಭವಿಷ್ಯೋತ್ತರ ಪುರಾಣದ ಪಾರ್ವತಿ-ಪರಮೇಶ್ವರ ಸಂವಾದದಲ್ಲಿ ವರಮಹಾಲಕ್ಷ್ಮೀ ವ್ರತಕಥೆ ಸಂಪೂರ್ಣವಾದುದು.
ಸಕಲರಿಗೂ ಸನ್ಮಂಗಳವಾಗಲಿ
ಬಿ. ಕೆ. ಗಣೇಶ್ ರೈ
ಕೃಪೆ : ಸ್ಪಟಿಕಾ ವ್ರತಾರತ್ನ ಪುರಾಣ