ಕರಾವಳಿ

ಚಿದು ಬರೆಯುವ ಪ.ಗೋ ಸರಣಿ-19: ಪೆದಂಬು ಮಾಡುವವರಿಗೆ ಭಯಂಕರ ಪೆದಂಬು

Pinterest LinkedIn Tumblr

Pa go photo

ನೀನು ಏನಾದರೂ ಆಗು ಮೊದಲು ಮಾನವನಾಗು ಎನ್ನುವುದು ಕವಿವಾಣಿ. ಮಾನವೀಯತೆ, ಅನುಕಂಪ ಮನುಷ್ಯನಿಗಿರಬೇಕಾದ ಸಹಜ ಗುಣಗಳು.ತಾಳ್ಮೆ ಬ್ರಹ್ಮಾಸ್ತ್ರ. ಹಾಗೆಂದು ಕೋಪ, ತಾಪಗಳಿರಬೇಡವೆಂಬ ಅರ್ಥವಲ್ಲ. ಎಷ್ಟು ಇರಬೇಕೋ ಅಷ್ಟು ಎಲ್ಲವೂ ಇರಬೇಕು. ಇದು ಒಬ್ಬ ಪರಿಪೂರ್ಣ ಮನುಷ್ಯನ ಒಂದು ಸ್ಥೂಲ ಚಿತ್ರಣ. ಎಲ್ಲರಲ್ಲಿ ಎಲ್ಲವೂ ಇರಲಾರವು. ಎಲ್ಲರಲೂ ಇದನ್ನು ನಿರೀಕ್ಷಿಸಲಾಗದು. ಅಂತೆಯೇ ಪ.ಗೋಪಾಲಕೃಷ್ಣರಲ್ಲೂ ಅನೇಕ ಗುಣಗಳಿದ್ದವು, ಆದರೆ ಅವರು ಅಗತ್ಯ ಬಂದಾಗ ಮಾತ್ರ ಬಳಕೆ ಮಾಡುತ್ತಿದ್ದರು. ಇಲ್ಲದಿದ್ದರೆ ಒಬ್ಬೊಬ್ಬರಿಗೆ ಪ.ಗೋ ಒಂದೊಂದು ರೀತಿಯಾಗಿ ಕಾಣಿಸುತ್ತಿದ್ದರು. ಆದ್ದರಿಂದಲೇ ಪ.ಗೋ ಅವರನ್ನು ಬಹಳ ಜನರಿಗೆ ಅರ್ಥಮಾಡಿಕೊಳ್ಳುವುದು ಬಹಳ ವರ್ಷ ಅವರ ಒಡನಾಟವಿದ್ದರೂ ಪ.ಗೋ ಅರ್ಥವೇ ಆಗುವುದಿಲ್ಲ, ಅವರು ಯಾವಾಗ ಸಿಟ್ಟಾಗುತ್ತಾರೆ?, ಯಾವಾಗ ಖುಷಿಯಾಗಿರುತ್ತಾರೆ ? ಎನ್ನುವುದೇ ಗೊತ್ತಾಗುವುದಿಲ್ಲ ಎನ್ನುವವರೇ ಬಹಳ ಮಂದಿ.

ಆದರೆ ಪ.ಗೋ ಅವರನ್ನು ಹತ್ತಿರದಿಂದ ಬಲ್ಲವನಾಗಿದ್ದ ಕಾರಣ ಒಬ್ಬ ಪತ್ರಕರ್ತ ಅದರಲ್ಲೂ ಹಿರಿಯರು ಜೀವನೋಲ್ಲಾಸವನ್ನು ಇಷ್ಟು ಕಾಲ ಉಳಿಸಿಕೊಂಡು ಬರಲು ಸಾಧ್ಯವೇ?, ಆದರೂ ಪ.ಗೋ ಹೇಗೆ ಉಳಿಸಿಕೊಂಡು ಬಂದರು ಎನ್ನುವುದು ನನಗೂ ಸೋಜಿಗವಾಗುತ್ತಿತ್ತು. ಅವರು ಮನೆಯಲ್ಲಿದ್ದಾಗ ಪತ್ನಿಯನ್ನು ಕಾಡುವ ಪರಿ ನೋಡಿದಾಗ ಆಕೆಯೂ ಅವರೊಂದಿಗೆ ಅದೆಷ್ಟು ಅನ್ಯೋನ್ಯತೆಯಿಂದ ಇವರ ಕಾಡುವ ಗುಣವನ್ನು ಸಹಿಸಿಕೊಂಡು ಇರುತ್ತಾರೆ ನಿಜಕ್ಕೂ ಗ್ರೇಟ್ ಅನ್ನಿಸುತ್ತಿತ್ತು.

ಪ.ಗೋ ಸ್ಕೂಟರ್ ಗೆ ಸ್ಟ್ಯಾಂಡ್ ಹಾಕಿ ಹೆಲ್ಮೆಟ್ ತೆಗೆದು ಮನೆ ಒಳಗೆ ಹೊಕ್ಕಿದರೆ ಸಾತೀ ಎಂದು ರಾಗವಾಗಿ ಕರೆಯುವುದೇ ಒಂದು ವಿಚಿತ್ರ ಅನ್ನಿಸಿತ್ತು. ಅವರ ಪತ್ನಿ ಸಾವಿತ್ರಿ. ಆದರೆ ಪ.ಗೋ ಕರೆಯುವಾಗ ಸಾತೀ ಎನ್ನುತ್ತಿದ್ದರೋ ಅಥವಾ ನನಗೆ ಸ್ವಾತಿ ಎಂದು ಕೇಳಿಸಿಕೊಂತಾಗುತ್ತಿತ್ತೋ ಮೊದ ಮೊದಲು ಗೊಂದಲ. ಆದರೆ ನಿರಂತರವಾಗಿ ಅವರ ಸಖ್ಯ ಬೆಳೆಸಿಕೊಂಡು ಕಾಟೇಜ್ ನನ್ನ ಬಿಡಾರ ಎನ್ನುವಷ್ಟು ಸಲುಗೆ ಬೆಳೆದ ಮೇಲೆ ಪ.ಗೋ ಸಾತೀ ಎನ್ನುವುದು ಬಹುಷ ಅವರ ಬದುಕಿನುದ್ದಕ್ಕೂ ಹೆಜ್ಜೆ ಹಾಕುತ್ತಲೇ ಬಂದ ಕಾರಣಕ್ಕೇ ಇರಬೇಕು ಸಂಗಾತಿ ಎನ್ನುವ ಅರ್ಥದಲ್ಲಿ ಕರೆಯುತ್ತಿದ್ದಾರೆ ಅಂದುಕೊಂಡು ಅದೊಂದು ದಿನ ನನ್ನ ಕುತೂಹಲ ತಣಿಸಿಕೊಳ್ಳಲು ಅಷ್ಟು ಒಳ್ಳೆ ಹೆಸರು ಅವರದು ಅದನ್ನು ಕರೆಯದೆ ವಿಕಾರವಾಗಿ ಕರೆದು ನನ್ನ ಮುಂದೆ ಅವಮಾನಿಸುತ್ತೀರಲ್ಲ ಇದು ಸರಿಯೇ? ಎಂದೆ ನಗುತ್ತಲೇ.

ಹೇ ಸಾತೀ ಕಾಫಿ ತಾ, ಅವನೂ ಇದ್ದಾನೆ ಅವನಿಗೂ ಕೊಡು, ಯಾಕೋ ಇವೊತ್ತು ಅವನು ನನ್ನ ಬುಡಕ್ಕೆ ಕೈ ಹಾಕುತ್ತಿದ್ದಾನೆ, ವಿಚಾರಿಸಿಕೊಳ್ತೀನಿ ಎಂದರಲ್ಲದೇ ನನ್ನ ಅರ್ಧಾಂಗಿಯನ್ನು ನಾನು ಹೇಗೆ ಬೇಕಾದರೂ ಕರೆಯುವ ಸ್ವಾತಂತ್ರ್ಯ ನನಗಿದೆ. ನನ್ನ ಸ್ವಾತಂತ್ರ್ಯವನ್ನು ಪ್ರಶ್ನಿಸುವ ಹಕ್ಕು ನಿನಗೆಲ್ಲಿಂದ ಬಂತು ಎಲೈ ಮರಿಯೇ ಹೇಳುವಂತವನಾಗು, ನಾನು ಕೇಳುವಂತವನಾಗುತ್ತೇನೆ?. ಎಂದು ಯಕ್ಷಗಾನ ಶೈಲಿಯಲ್ಲಿ ಹೇಳಿದರು.
ಆಗ ಒಳಗಿನಿಂದ ಬಿಸಿ ಕಾಫಿ ಜೊತೆ ಬಂದ ಅವರ ಪತ್ನಿ ಸುಮ್ಮನೆ ಯಾಕೆ ಅವನನ್ನು ಕಾಡುತ್ತೀರಿ, ಅವನಿಗೆ ನಿಮ್ಮ ಅಧಿಕಪ್ರಸಂಗ ಎಲ್ಲಾ ಇನ್ನೂ ಗೊತ್ತಾಗಿಲ್ಲ ಎಂದರು.

ಏನು ನೀನೂ ಅವನ ಪರವಾಗಿ ವಕಾಲತ್ತು ಮಾಡುವೆಯಾ ?, ನೀನು ಕೊಟ್ಟ ಕಾಫಿ ಬಿಸಿಯಿಲ್ಲದಿದ್ದರೆ ಅದಕ್ಕೆ ದಂಡವಾಗಿ ಮತ್ತೊಂದು ಕಪ್ ಕಾಫಿ ತರುವಂಥ ಶಿಕ್ಷೆ ಕೊಡಬೇಕಾಗುತ್ತದೆ ಎಚ್ಚರ…ಎಚ್ಚರ ಹೇಳಿ ನಕ್ಕು ಕಾಫಿ ಕುಡಿದು ಬೀಡಿಗೆ ಬೆಂಕಿ ಹಚ್ಚಿ ಹೊಗೆ ಬಿಟ್ಟ ಮೇಲೆ ಮತ್ತೆ ನನ್ನ ಪ್ರಶ್ನೆಗೆ ಹೊರಳಿದರು.

ನಿನ್ನಕುತ್ತಿಗೆಗೆ ಅಲ್ಲಾ ನಿನ್ನಿಂದ ಅವಳ ಕುತ್ತಿಗೆಗೆ ಗಂಟು ಬೀಳಲೀ ಮರೀ ಎಲ್ಲಾ ಗೊತ್ತಾಗುತ್ತೆ, ಯಾರು ಯಾರನ್ನು ಎಷ್ಟು ಕಾಡುತ್ತಾರೆಂದು ತಾಳು ತಾಳು ತಾಳು ಮನವೇ ಎಂದು ರೇಗಿಸುತ್ತಿದ್ದಾಗಲೇ ಒಳಗಿಂದ ಪ್ರತ್ಯಕ್ಷರಾದ ಅವರ ಪತ್ನಿ ಇಗೋ ಒಂದೇ ದೋಸಿ ಉಳಿದಿತ್ತು ನೀನು ತಿನ್ನು, ಅವರು ತಿನ್ನುವುದರಲ್ಲಿ ಅಷ್ಟೇ ಇದೆ ಎಂದರು. ಸಾತೀ ಸಾತೀ ಬೇಡಾ ಬೇಡಾ ಎಂದು ಅವರನ್ನು ರೇಗಿಸಿ ನಡೀಲೀ ನಡೀಲೀ ಎನ್ನುತ್ತಾ ಸುದ್ದಿ ಟೈಪ್ ಹೊಡೆಯಲು ಶುರು. ಮಧ್ಯೆಮಧ್ಯೆ ವಿರಾಮ ಬೀಡಿಸೇದಲು ಹೀಗೆ ಪ.ಗೋ ಮನೆಯಲ್ಲಿ ನಾನು ಕಾಣುತ್ತಿದ್ದ, ಅನುಭವಿಸುತ್ತಿದ್ದ ಘಟನಾವಳಿಗಳ ಒಂದು ಝಲಕ್. ಇಂಥ ಮನುಷ್ಯ ಪ.ಗೋ ಸುದ್ದಿ ಸ್ಥಳಗಳಲ್ಲಿ ಅದೆಷ್ಟೂ ಮಗುಮ್ಮಾಗಿರುತ್ತಿದ್ದರೆಂದರೆ ಅದೂ ಒಂದು ವಿಚಿತ್ರವೇ ಸರಿ.

ಮಾನವೀಯತೆಯನ್ನು ಬರವಣಿಗೆಯಲ್ಲಿ ಅದೆಷ್ಟು ಸೊಗಸಾಗಿ ಚಿತ್ರಿಸುತ್ತಿದ್ದರೆಂದರೆ ಹಾಡನ್ನು ಅನುಭವಿಸಿ ಹಾಡ ಬೇಕು ಎನ್ನುವಂತೆ ಬರವಣಿಗೆಯನ್ನೂ ಕೂಡಾ ಅವರು ಅನುಭವಿಸಿಯೇ ಬರೆಯುತ್ತಿದ್ದರೇನೋ ಎನಿಸುತ್ತಿತ್ತು. ಆತ್ಮಹತ್ಯೆ ಸುದ್ದಿ ಬರೆಯುವಾಗ ಅವರು ಮಾತ್ರ ಎರಡು ಅಥವಾ ಮೂರು ಪ್ಯಾರಗಳಲ್ಲಿ ಬರೆದು ಮುಗಿಸಿ ಬಿಡುತ್ತಿದ್ದರು, ನಾನು ಬರೆದಿದ್ದ ಸುದ್ದಿ ಓದಿ ಮರುದಿನ ಕ್ಲಾಸ್ ಮಾಡುತ್ತಿದ್ದರು. ಅವರದ್ದೇ ಮಾತಿನಲ್ಲಿ ಹೇಳುವುದಾದರೆ ಆತ್ಮಹತ್ಯೆ ಕಾರಣವಿಲ್ಲದೆ ನಡೆಯುವುದಿಲ್ಲ, ಆ ಕಾರಣವನ್ನು ಹೇಳುವುದರ ಜೊತೆಗೆ ಆತ್ಮಹತ್ಯೆಯ ನಂತರ ಆ ಮನೆಯಲ್ಲಿರುವ ಮಕ್ಕಳು, ಅವರ ಪ್ರತಿಕ್ರಿಯೆಯನ್ನು ಕೊಡಬೇಕು ಎನ್ನುತ್ತಿದ್ದರು.

ಆಗ ನನ್ನ ಕಿರಿಕ್ ಪ್ರಶ್ನೆ ನೀವು ಎರಡು ಪ್ಯಾರಾದಲ್ಲಿ ಬರೆದು ಬಿಸಾಡಿ ನನಗೆ ಕತೆ ಬರೆಯಲು ಹೇಳುತ್ತೀರಲ್ಲಾ ಎನ್ನುವುದು. ನನ್ನ ಪತ್ರಿಕೆಯಲ್ಲಿ ಆತ್ಮಹತ್ಯೆ ಸುದ್ದಿ ಬರದಿದ್ದರೂ ಅಚರಿಯಿಲ್ಲ. ನಿನ್ನ ಪತ್ರಿಕೆಯನ್ನು ಓದುವವರು ತಿಳಿಯಲಿ. ನೀನು ಬರೆದುಕೊಟ್ಟದ್ದನ್ನು ಕ,ಬು ಗೆ ಹಾಕುವವರಿಲ್ಲ. ಇದು ನಿನಗೆ ಇರುವ ಅವಕಾಶ. ಮಾನವೀಯತೆ ಬರವಣಿಗೆಯಲ್ಲಿ ಸ್ವಲ್ಪವಾದರೂ ಇರಲಿ. ಆತ್ಮಹತ್ಯೆ ಮಾಡಿಕೊಂಡವ ಹೋದ, ಹೋದಳು. ಆದರೆ ಬದುಕಿರುವವರ ಗತಿಯೇನು?. ಇದನ್ನು ಬರೆದರೆ ನಿನ್ನ ಗಂಟು ಏನು ಹೋಗುತ್ತೇ?. ಪಗೋ ಅವರ ಈ ಥಿಯರಿ ಆರಂಭದಲ್ಲಿ ನನಗೆ ಅಷ್ಟೇನೂ ಗಂಭೀರ ಅನ್ನಿಸದಿದ್ದರೂ ವೃತ್ತಿಯಲ್ಲಿ ವರ್ಷ ಉರುಳುತ್ತಾ ಹೋದ ಹಾಗೆ ನನಗೂ ಆಸಕ್ತಿ ಕುದುರಿತು. ಪ.ಗೋ ಹೇಳಿದ್ದ ಮಾನವೀಯತೆಯ ಸುಳಿಯನ್ನು ಹಿಡಿದು ಕೊಂಡು ವಿಸ್ತೃತ ಸುದ್ದಿ ಲೇಖನ ಬರೆದಾಗಲೆಲ್ಲಾ ಓದುಗರು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾಗ ಹಾಗೆ ಸುದ್ದಿ ಬರೆಯುವುದೂ ಕೂಡಾ ಒಂದು ಕಲೆ ಅನ್ನಿಸಿದ್ದು ಮಾತ್ರವಲ್ಲ ನನ್ನ ಬರವಣಿಗೆಯಲ್ಲೂ ಅದು ಅನಿವಾರ್ಯವೆನಿಸುವಷ್ಟು ಹಿತಾನುಭವಕೊಡುತ್ತಿತ್ತು.

ಇಂಥ ಬರವಣಿಗೆ ಓದಿದಾಗಲೆಲ್ಲಾ ಪ.ಗೋ ಬೆರಳು ತೋರಿಸಿದರೆ ಹಸ್ತ ನುಂಗುವವ ಎಂದು ಛೇಡಿಸುತ್ತಿದ್ದರು. ಕನ್ನಡ ಭಾಷೆ ಪತ್ರಿಕೆಯಲ್ಲಿ ಮಾನವೀಯತೆ ಕಾಣಬಹುದು, ಆದರೆ ನಿಮ್ಮ ಇಂಗ್ಲೀಷ್ ಭಾಷೆ ಪತ್ರಿಕೆಗಳಲ್ಲಿ ದುರ್ಬೀನು ಹಾಕಿ ನೋಡಿದರೂ ಸಿಗುವುದಿಲ್ಲ ಎಂದು ರೇಗಿಸುತ್ತಿದ್ದೆ. ಆಗ ಪ.ಗೋ ಬರವಣಿಗೆ ಸುಮ್ಮನೆ ಬರುವುದಿಲ್ಲ, ಮಾನವೀಯತೆ ಒಳಗಿದ್ದರೆ ಮಾತ್ರ ಬರುತ್ತೆ ಸಾಕು ನಿನ್ನ ಪುರಾಣ ಈಗ ಚಾ ಕುಡಿಸ್ತೀಯಾ ಕುಡಿತೀಯಾ ಎನ್ನುತ್ತಿದ್ದರು. ಮತ್ತೆ ಅದೇ ಕತೆ ಚಹಾ ಕುಡಿಯುವುದು ಹಣ ಕೊಡಲು ಇಬ್ಬರೂ ತಕರಾರು ಮಾಡಿ ಅಂತಿಮವಾಗಿ ನಾವೇ ಬಗೆಹರಿಸಿಕೊಂಡು ಬರುತ್ತಿದ್ದೆವು. ನಮ್ಮ ಇಂಥ ತಕರಾರು ಗುಡಂಗಡಿ, ಕ್ಯಾಂಟೀನ್ ಗಳಲ್ಲೂ ಫೇಮಸ್ ಆಗಿತ್ತು ಬಿಡಿ.

ಪ.ಗೋ ಪತ್ರಕರ್ತ ಮಾತ್ರವಲ್ಲಾ ಮಾನವೀಯತೆಯನ್ನು ಅದೆಷ್ಟು ಮೈಗೂಡಿಸಿಕೊಂಡಿದ್ದಾರೆನ್ನುವುದು ವೈಯಕ್ತಿಕವಾಗಿ ನಾನೇ ಫಲಾನುಭವಿಯಾದಾಗ ಹೆಚ್ಚು ಅರಿವಾಯಿತು. ನಾನು ವೈಯಕ್ತಿಕವಾಗಿ ನನ್ನನ್ನು ಹೆಚ್ಚು ತೆರೆದುಕೊಳ್ಳುತ್ತಿದ್ದುದ್ದು ಆಗ ಪ.ಗೋ ಅವರ ಮುಂದೆ ಮಾತ್ರ. ಉಳಿದಂತೆ ಬಿಗುಮಾನ ಬಹುಷ ಪ.ಗೋ ಅವರ ಪ್ರೇರಣೆಯೂ ಇರಬಹುದು. ಮನೆಯಿಂದ ಮಂಗಳೂರಿಗೆ ಬಸ್ಸಿನಲ್ಲಿ ಬರುತ್ತಿದ್ದೆ. ಮಂಗಳೂರಿಗೂ ಬೈಕಂಪಾಡಿಗೂ ಸುಮಾರು ಅರ್ಧಗಂಟೆ ಬಸ್ ಪ್ರಯಾಣ. ನಾನು ಮುಂಗಾರು ಪತ್ರಿಕೆಯಲ್ಲಿದ್ದ ಕಾಲ. ಉರ್ವಾಸ್ಟೋರ್ ಗೆ ಬಸ್ ತಲುಪಿತ್ತು. ಅಲ್ಲಿಂದ ಮತ್ತೆ ಹೆಚ್ಚೆಂದರೆ ಏಳೆಂಟು ನಿಮಿಷ ಹಂಪನಕಟ್ಟೆ ಕ್ಲಾಕ್ ಟವರ್ ತಲುಪಲು. ಆದರೆ ಆ ಹೊತ್ತಿಗೆ ಸಹಿಸಲಾಗದಂಥ ನೋವು ಶುರುವಾಯಿತು. ಹಿಂದೆ ಒಮ್ಮೆ ಹೀಗೇ ನೋವು ಶುರುವಾಗಿದ್ದಾಗ ಪರೀಕ್ಷೆ ಮಾಡಿಸಿದ್ದೆ. ಕಿಡ್ನಿಯಲ್ಲಿ ಸಣ್ಣ ಕಲ್ಲಿದೆ ಎಂದಿದ್ದರು ವೈದ್ಯರು. ಆದರೆ ಅದು ಈಗಷ್ಟೇ ಆರಂಭವಾಗುತ್ತಿರುವುದರಿಂದ ಹೆಚ್ಚು ನೀರು ಕುಡಿಯಬೇಕು, ಅದು ತನ್ನಷ್ಟಕ್ಕೇ ಹೋಗುತ್ತದೆ, ಯಾವ ಆಪರೇಷನ್ ಬೇಕಾಗಿಲ್ಲ ಎಂದಿದ್ದರು. ಇದು ಎರಡು ವರ್ಷಗಳ ಹಿಂದೆ. ಆ ನಂತರ ಹೆಚ್ಚೆಚ್ಚು ನೀರು ಕುಡಿಯುತ್ತಿದ್ದೆ ಯಾವ ಸಮಸ್ಯೆಯೂ ಇರಲಿಲ್ಲ.

ಆದರೆ ಬಸ್ಸಿನಲ್ಲಿ ಏಕಾ ಏಕಿ ನೋವು ಕಾಣಿಸಿಕೊಂಡಾಗ ಇದು ಕಿಡ್ನಿ ಸ್ಟೋನ್ ಎನ್ನುವುದು ಖಾತ್ರಿಯಾಗಿತ್ತು. ಕಚೇರಿ ತಲುಪಿದರೆ ಮತ್ತೆ ಅಲ್ಲಿಂದ ವೈದ್ಯರಲ್ಲಿಗೆ ಹೋಗುವುದು ನನ್ನ ಉದ್ದೇಶ. ಆದರೆ ಬಸ್ ಚಲಿಸುತ್ತಿತ್ತು, ನಾನು ಮಾತ್ರ ಕುಳಿತಲ್ಲೇ ಅಸಹನೀಯ ನೋವಿನಿಂದ ಬಳಲುತ್ತಿದ್ದೆ. ಬಸ್ ಬೆಸೆಂಟ್ ಕಾಲೇಜು ಸಮೀಪಿಸುತ್ತಿದ್ದಂತೆಯೇ ಸಹಿಸಲು ಸಾಧ್ಯವೇ ಇಲ್ಲ ಎನ್ನುವಂತಾದಾಗ ಅಲ್ಲೇ ಇಳಿದೆ. ಆಗ ಬೆಸೆಂಟ್ ಕಾಲೇಜ್ ಪಕ್ಕದಲ್ಲೇ ಡಾ.ಪಿ.ಎನ್.ಆರಿಗಾ ಅವರ ನರ್ಸಿಂಗ್ ಹೋಮ್ ಇತ್ತು. ಡಾ.ಆರಿಗಾ ಸರ್ಜನ್. ನೇರವಾಗಿ ನರ್ಸಿಂಗ್ ಹೋಂ ಗೆ ಹೋದೆ. ಡಾಕ್ಟರ್ ಇರಲಿಲ್ಲ. ನರ್ಸ್ ವಿಷಯ ಕೇಳಿ ತಕ್ಷಣ ಇಂಜೆಕ್ಷನ್ ಕೊಟ್ಟರು, ನೋವು ಶಮನವಾಯಿತು. ಅಷ್ಟರಲ್ಲಿ ಡಾ.ಅ ಆರಿಗಾ ಬಂದರು. ನನ್ನನ್ನು ಚೆಕ್ ಅಪ್ ಮಾಡಿ ಕೂಡಲೇ ಅಡ್ಮಿಟ್ ಆಗಬೇಕು ಎಂದರು. ಯಾಕೆ ಕೇಳಿದೆ. ಗ್ಲೋಕೋಸ್ ಕೊಡಬೇಕು ಎಂದರು.

ಈಗ ನನಗೆ ಭಯ ಮತ್ತೆ ಕೇಳಿದೆ ಆಪರೇಷನ್ ಮಾಡಬೇಕಾಗುವುದೇ ಎಂದು. ಇಲ್ಲ ಇಲ್ಲಾ ಐದಾರು ಬಾಟ್ಲಿ ಗ್ಲೋಕೋಸ್ ಕೊಟ್ಟರೆ ಗೊತ್ತಾಗುತ್ತದೆ, ನಿಮ್ಮ ಮನೆ ಎಲ್ಲಿ ಕೇಳಿದರು, ಹೇಳಿದೆ, ನಿಮಗೆ ಬೇಕಾದವರು ಹತ್ತಿರದಲ್ಲಿ ಯಾರಾದರೂ ಇದ್ದಾರೆಯೇ ಕೇಳಿದರು. ಇದ್ದಾರೆ ಎಂದೆ. ಆದರೂ ಮತ್ತೆ ಪ್ರಶ್ನೆ, ಯಾಕೆ ಸಾರ್. ನಿಮ್ ಕೇರ್ ಟೇಕರ್ ಬೇಕಲ್ಲ, ಇವೊತ್ತು ರಾತ್ರಿ ಇಲ್ಲೇ ಇರಬೇಕಾಗುವುದು ಎಂದರು.

ಗೋಪಾಲಕೃಷ್ಣ ಇದ್ದಾರೆ ಎಂದೆ. ಏನು ಮಾಡ್ತಾರೆ ಕೇಳಿದರು. ಟೈಮ್ಸ್ ಆಫ್ ಇಂಡಿಯಾ ರಿಪೋರ್ಟರ್ ಎಂದೆ. ಓಹೋ ಗೋಪಾಲಕೃಷ್ಣರೋ ಎಂದವರೇ ನಕ್ಕರು. ಅವರ ಆ ನಗುವಿನಿಂದಲೇ ಇವರಿಗೆ ಪರಿಚಯ ಇದೆ ಎನ್ನುವುದು ಗೊತ್ತಾಯಿತು. ಸಾರ್ ಫೋನ್ ಮಾಡಬೇಕೇ ಎಂದೆ, ನಿಮಗೆ ಬೇಕಾದರೆ ಮಾಡಿ ಎಂದರು. ಇದು ಸುಮಾರು ಬೆಳಿಗ್ಗೆ ಹತ್ತು ಗಂಟೆ ಹೊತ್ತಿಗೆ. ಮನೆಗೆ ಫೋನ್ ಮಾಡಿದೆ.

ಸಾಮಾನ್ಯವಾಗಿ ಈ ಹೊತ್ತಿಗೆ ಫೋನ್ ಮಾಡುವ ಸಂದರ್ಭ ಇರುತ್ತಿರಲಿಲ್ಲ. ನನ್ನ ಸ್ವರದಲ್ಲೇ ಗುರುತಿಸಿದ ಪ.ಗೋ ಏನ್ ಮರೀ ಏನಾದ್ರೂ ಭೂಕಂಪ ಆಯಿತೇ ? ಕೇಳಿದರು. ನಾನೀಗ ಡಾ. ಆರಿಗಾ ಅವರ ನರ್ಸಿಂಗ್ ಹೋಮ್ ನಲ್ಲಿದ್ದೇನೆ, ಅಡ್ಮಿಟ್ ಆಗುತ್ತಿದ್ದೇನೆ ಎಂದೆ. ಏನಾಯ್ತು ಕೇಳಿದರು. ಕಿಡ್ನಿಯಲ್ಲಿ ಸ್ಟೋನ್ ಇದೆಯಂತೆ ನೋವು ಎಂದೆ. ಆಯ್ತು ಬಿಡು ನಿನಗೂ ಕಿಡ್ನಿ ಇದೆ ಅಂತಾಯ್ತು. ಇಡು ಫೋನ್ ನಾನು ಅಲ್ಲಿಗೇ ಬರ್ತೀನಿ ಹೇಳಿದರು.

ಯಾವ ವೇಗದಲ್ಲಿ ಬಂದರೋ ಹತ್ತು ನಿಮಿಷಕ್ಕೂ ಮೊದಲೇ ಹಾಜರಾದರು. ರಿಸೆಪ್ಷನ್ ಪಕ್ಕದಲ್ಲೇ ನನಗೆ ರೂಮು. ಬಂದವರೇ ಕೌಂಟರ್ ನಲ್ಲಿ ಕೇಳಿ ರೂಮಿಗೆ ಬಂದು ಗ್ಲೂಕೋಸ್ ಹಾಕಿಸಿಕೊಂಡು ಮಲಗಿದ್ದ ನನ್ನನ್ನು ನೋಡಿ ಏನಂತೇ ಎಂದವರೇ ಪಕ್ಕದಲ್ಲಿ ಕುಳಿತರು. ಅಷ್ಟರಲ್ಲಿ ರೂಮಿಗೆ ಬಂದ ಡಾ.ಆರಿಗಾ ಏನ್ ಗೋಪಾಲಕೃಷ್ಣರು ನೋಡ್ಲಿಕ್ಕೇ ಇಲ್ಲಾ ಎಂದರು. ಸ್ವಾಮೀ ಡಾಕ್ಟ್ರೇ ನಾನು ಆರೋಗ್ಯವಾಗಿದ್ದೇನೆ, ಆದ್ದರಿಂದಲೇ ನಿಮ್ಮಲ್ಲಿಗೆ ಬರ್ಲಿಲ್ಲ ಎಂದರು.

ಛೇ..ಛೇ ಹಾಗಲ್ಲ ಬಹಳ ವರ್ಷಗಳೇ ಆಯ್ತು ನಿಮ್ಮನ್ನು ನೋಡಿ ಅದಿಕ್ಕೇ ಕೇಳ್ದೆ ಎಂದು ನಕ್ಕರು. ಇವನ ಪರಿಚಯ ಆಯ್ತೇ ಡಾಕ್ಟ್ರೇ ಕೇಳಿದರು. ಕಿಡ್ನಿ ಸ್ಟೋನ್ ಫಾರ್ಮೇಶನ್ ಆಗ್ತಾ ಇದೆ, ನೋಡುವಾ ಗ್ಲೂಕೋಸ್ ಕೊಟ್ಟು ಎಂದರು. ಅದಲ್ಲ ಡಾಕ್ಟ್ರೇ ಕಿಡ್ನಿ ಇವನಿಗೆ ಇದೆ ಅನ್ನುವುದಂತೂ ಖಾತ್ರಿಯಾಯ್ತು ಟ್ರೀಟ್ ಮೆಂಟ್ ನೀವು ಕೊಡ್ತೀರಿ ಆದರೆ ಇವನು ಯಾರು ಗೊತ್ತೋ?. ಇಲ್ಲ ಎಂದರು.

ಇವನು ವರಶೆ ಶಿಷ್ಯ ಜನಶಕ್ತಿ ಬೆಳೆತೆಗೆವ ಮುಂಗಾರು ವಡ್ಡರ್ಸೆ ರಘುರಾಮ ಶೆಟ್ರ ಶಿಷ್ಯಾ ಹೌದಾ. ಶೆಟ್ರು ಏನ್ ಬರೀತಾರೆ ತುಂಬಾ ಡೀಪ್ ಥಿಂಕಿಂಗ್ ಎಂದರು ಡಾ.ಆರಿಗಾ. ಇವನೂ ಒಂಥಾರಾ ಅವರ ಗರಡಿಯಲ್ಲಿರುವುದರಿಂದ ಅವರದ್ದೇ ಗಾಳಿ ಬೀಸಿದೆ ಎಂದವರೇ ನನ್ನ ಹೆಸರು ಹೇಳಿ ಡಾಕ್ಟ್ರೇ ಕಲ್ಲು ಎಷ್ಟು ಕಿಲೋ ಇದೆ ಎಂದರು. ಡಾಕ್ಟ್ರು ನಗುತ್ತಾ ಯಾಕೆ ಅದೇನು ಮನೆ ಕಟ್ಟುವ ಕಲ್ಲಾ ಎಂದು ರೇಗಿಸಿ ರೌಂಡ್ಸ್ ಹೋಗಬೇಕು ಬರ್ತೀನಿ ಎಂದವರೇ ಡಾಕ್ಟ್ರು ತೆರಳಿದರು.

ನಂತರ ಪ.ಗೋ ನಾನು ತೀರಾ ಮೌನಿಯಾಗಿದ್ದ ಕಾರಣ ನೀನೇನು ಹೆದರಬೇಡ, ಡಾ.ಆರಿಗಾ ಸ್ಪೆಷಲಿಸ್ಟ್ ಎಂದವರೇ ನಿನಗೆ ಹಣ ಬೇಕೇ ಕೇಳಿದರು. ಈಗ ಬೇಡ ಎಂದೆ. ಆದರೂ ಕಿಸೆಯಿಂದ ನೂರರ ನಾಲ್ಕು ನೋಟು ತೆಗೆದು ನನ್ನ ಕಿಸೆಗೆ ಹಾಕಿ ಟೆಲಿಗ್ರಾಂ ಕೊಟ್ಟು ಬರ್ತೀನಿ ಎಂದವರೇ ಹೋದರು. ಇನ್ನತ್ತು ನಿಮಿಷಗಳಲ್ಲಿ ಮತ್ತೆ ಹಾಜರ್. ನಾನು ಡಾಕ್ಟ್ರ ಜೊತೆ ಮಾತಾಡಿ ಬರ್ತೀನಿ ಎಂದವರೇ ಹೋಗಿ ಹತ್ತು ಹದಿನೈದು ನಿಮಿಷಗಳ ಬಳಿಕ ಬಂದು ಮನೆಯವರಿಗೆ ಫೋನ್ ಮಾಡಿದ್ದೀಯಾ ಕೇಳಿದರು. ಇಲ್ಲ ಎಂದೆ. ಮಾಡಬೇಡ ಸಂಜೆ ಹೇಳು ಎಂದವರೇ ಮನೆಗೆ ಹೋಗಿ ಬರುತ್ತೇನೆ ಎಂದು ಹೋದರು.

ಅರ್ಧಗಂಟೆಯಲ್ಲಿ ಒಂದು ಟವೆಲ್, ಒಂದು ಲುಂಗಿ, ಸ್ನಾನದ ಸೋಪ್ ತೆಗೆದುಕೊಂಡು ಬಂದರು. ನೀವು ಮನೆಯಲ್ಲಿ ಹೇಳಿದ್ದೀರಾ ಕೇಳಿದೆ, ಇಲ್ಲ ಎಂದರು. ಲುಂಗಿ, ಟವೆಲ್ ತರುವಾಗ ಕೇಳಲಿಲ್ಲವೇ ಎಂದೆ. ನನಗೆ ಬೇಕು ಕೊಡು ಎಂದೆ ತಂದೆ ನಿನಗೆ ಯಾಕೆ ಅದೆಲ್ಲಾ ಕೇಳಿದರು. ಸುಮ್ಮನೆ ಅವರಿಗೆ ಗೊತ್ತಾದರೆ ಗಾಬರಿಯಾದರೆ ಎಂದೆ.ಯಾರಿಗೂ ಹೇಳಿಲ್ಲ, ಹೇಳಲ್ಲ, ಸುಮ್ಮನಿರು ಎಂದರು. ಪ.ಗೋ ಮಧ್ಯಾಹ್ನದವರೆಗೂ ಅಲ್ಲೇ ಕುಳಿತು ಪೇಪರ್ ಓದಿಕೊಂಡಿದ್ದರು ನಾನು ಹಾಗೇ ನಿದ್ದೆಗೆ ಜಾರಿದ್ದೆ. ಎಚ್ಚರವಾದಾಗ ಪ.ಗೋ ನನಗಾಗಿ ಊಟ ತರಿಸಿಟ್ಟಿದ್ದರು. ಏನ್ ಮಾರಾಯ ರಾತ್ರಿ ಬೇಟೆಗೆ ಹೋಗಿದ್ದೆಯಾ ಭಯಂಕರ ನಿದ್ದೆಯಲ್ಲಿದ್ದೆ ಎಂದರು. ಪೈನ್ ಕಿಲ್ಲರ್ ಇಂಜೆಕ್ಷನ್ ಪ್ರಭಾವ ಎಂದೆ.
ಊಟ ಮಾಡಿದೆ, ಆ ತಟ್ಟೆಯನ್ನು ಪ.ಗೋ ಹೊರಗಿಟ್ಟು ಬಂದು ನೀನು ರೆಸ್ಟ್ ಮಾಡು ಸಂಜೆಗೆ ಬರುತ್ತೇನೆಂದು ಹೇಳಿ ಹೋದರು. ಮನೆಗೆ ಬರದಿದ್ದರೆ ಗಾಬರಿಯಾಗುವ ಸಂದರ್ಭವೂ ಇರಲಿಲ್ಲ, ನಾನು ಆಗಾಗ ರಾತ್ರಿ ಮನೆಗೆ ಹೋಗದೆ ಇರುತ್ತಿದ್ದ ದಿನಗಳವು.

ಮುಸಂಜೆ ಹೊತ್ತಿಗೆ ಪ.ಗೋ ಬಂದರು. ಆದರೆ ಅವರು ಮಾತ್ರ ಮನೆಯಲ್ಲಿ ಬೇರೆ ಕಾರಣಕೊಟ್ಟು ಬರುವುದಿಲ್ಲವೆಂದು ಹೇಳಿ ಬಂದಿದ್ದರಂತೆ. ಮತ್ತೆ ರಾತ್ರಿ ಅವರೇ ಊಟ ತಂದುಕೊಟ್ಟು ನನ್ನೊಂದಿಗೆ ಆಸ್ಪತ್ರೆಯಲ್ಲಿ ರಾತ್ರಿ ಕಳೆದರು. ಮತ್ತೆ ಯಥಾಸ್ಥಿತಿ ರಾತ್ರಿ ಬಹಳ ಹೊತ್ತಿನತನಕವೂ ಮಾತನಾಡಿಕೊಂಡಿದ್ದೆವು. ಮರುದಿನ ಸಂಜೆ ಹೊತ್ತಿಗೆ ಡಾ.ಆರಿಗಾ ಅವರು ಮತ್ತೆ ಚೆಕ್ ಅಪ್ ಮಾಡಿ ಏನು ತಿನ್ನಬಾರದು, ಏನು ತಿನ್ನಬಹುದು ಎನ್ನುವುದನ್ನು ಹೇಳಿ ಬಿಡುಗಡೆ ಮಾಡಿದರು.

ಮತ್ತೆ ಮರುದಿನದಿಂದ ಕಚೇರಿಗೆ ಬರತೊಡಗಿದೆ. ಉಗ್ರಪ್ಪ ಯಾನೇ ಯು.ನರಸಿಂಹ ರಾವ್ ಜೊತೆ ನಾನು ಆಸ್ಪತ್ರೆಯಲ್ಲಿದ್ದುದನ್ನು ಹೇಳಿದೆ. ಅವರ ಮನೆ ಕರಂಗಲಪಾಡಿಯಲ್ಲಿ, ಅದು ನರ್ಸಿಂಗ್ ಹೋಮ್ ಗೆ ಸಮೀಪದಲ್ಲಿದೆ. ನನಗೆ ಯಾಕೆ ಫೋನ್ ಮಾಡಲಿಲ್ಲ ಕೇಳಿದರು. ಪ.ಗೋ ರಾತ್ರಿಯೆಲ್ಲಾ ನನ್ನೊಂದಿಗಿದ್ದರು ಎಂದೆ. ಆಗ ನರಸಿಂಹ ರಾವ್ ಹೇಳಿದರು ಅವನು ಭಯಂಕರ ಪೆದಂಬು. ಯಾರಿಗೆ ಅಂದರೆ ಪೆದಂಬು ಮಾಡುವವರಿಗೆ, ಆದರೆ ನಂಬಿಕೆಗೆ ಆರ್ಹ. ಅವನ ಹಾರ್ಟ್ ಅವನು ಹೇಳಿದಂತೆ ಕೇಳುತ್ತೆ. ಮೃಧುವಾಗಲೂ ಗೊತ್ತು, ಗಟ್ಟಿಯಾಗಲೂ ಗೊತ್ತು, ಪ್ರಾಣಿ ನನ್ನ ಮನೆಗೆ ಬಂದು ವಾರ್ತಾ ಇಲಾಖೆ ಕವರ್ ಕೊಂಡು ಹೋದ, ಆದರೆ ನಿನ್ನ ವಿಷಯ ಹೇಳಲಿಲ್ಲ ಗೊಣಗಿದರು.

ಈ ಘಟನೆಯ ಮೂಲಕ ಪ.ಗೋ ಅವರ ಅನುಕಂಪ, ಮಾನವೀಯತೆ, ಸ್ನೇಹವನ್ನು ಅರ್ಥಮಾಡಿಕೊಂಡೆ. ನನಗಾಗಿ ಪ.ಗೋ ತೆಗೆದುಕೊಂಡು ಶ್ರಮ, ಕಾಳಜಿಯನ್ನು ಮೆಲುಕು ಹಾಕಿದಾಗಲೆಲ್ಲಾ ಕಣ್ಣಿಗೆ ಕೈಹಾಕಿ ಮಾತನಾಡುವಂಥ ಸ್ವಭಾವದ ಪ.ಗೋ ಒಳಗೆ ಅದೆಂಥಾ ಮನುಷ್ಯತ್ವ ಅಡಗಿದೆ ಅನ್ನಿಸಿತು ಆಗ, ಈಗಲೂ.

Chidambara-Baikampady

-ಚಿದಂಬರ ಬೈಕಂಪಾಡಿ

Write A Comment