ಕರಾವಳಿ

ಚಿದು ಬರೆಯುವ ಪ.ಗೋ ಸರಣಿ – 18: ನಿಮ್ಮ ಹಳೇ ಸುಳ್ಳು ಬಿಟ್ಟು ಹೊಸ ಸುಳ್ಳಿದ್ದರೆ ಹೇಳಿ ?

Pinterest LinkedIn Tumblr

File Pic - 1990-Pa.Go along with guests in a family  function

ಜುಲೈ 1 ಪತ್ರಿಕಾ ದಿನಾಚರಣೆ. ಕನ್ನಡದ ಮೊಟ್ಟಮೊದಲ ಪತ್ರಿಕೆ ಮಂಗಳೂರ ಸಮಾಚಾರ ಮಂಗಳೂರಿನಿಂದ ಪ್ರಕಟಣೆ ಆರಂಭಿಸಿದ ದಿನ. ಡಾ.ಹರ್ಮನ್ ಮೊಗ್ಲಿಂಗ್ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡ ಈ ಪತ್ರಿಕೆಯನ್ನು ನೆಪವಾಗಿಟ್ಟುಕೊಂಡು ಆಚರಿಸುವ ಪತ್ರಿಕಾ ದಿನಾಚರಣೆಯಂದೇ ನಾಡು ಕಂಡ ಧೀಮಂತ ಪತ್ರಕರ್ತ ಪ.ಗೋಪಾಲಕೃಷ್ಣರ ಕುರಿತು ಅವರ ಪತ್ರಿಕಾ ವೃತ್ತಿಯ ಬದ್ಧತೆಯನ್ನು ಮನವರಿಕೆ ಮಾಡಿಕೊಡುವ ಸಣ್ಣಪ್ರಯತ್ನ ಮಾಡುತ್ತಿದ್ದೇನೆ.

ಪ.ಗೋ ಪತ್ರಿಕಾವೃತ್ತಿಗೆ, ತಮ್ಮ ಬರವಣಿಗೆ ಮತ್ತು ನಂಬಿಕೆಗಳಿಗೆ ಬದ್ಧರಾಗಿಯೇ ಕೊನೆತನಕವೂ ಕಸಬು ಮಾಡಿದರು. ಬಹುಷ ಇಂಥ ಬದ್ಧತೆ ಎಲ್ಲರಿಗೂ, ಎಲ್ಲ ಕಾಲಕ್ಕೂ ಸಾಧ್ಯವಾಗುತ್ತದೆ ಎಂದು ಖಚಿತವಾಗಿ ಹೇಳಲಾರೆ. ಆದರೆ ಒಂದು ಸಿದ್ಧಾಂತ ಎನ್ನುವುದಕ್ಕಿಂತಲೂ ತಾವು ನಂಬಿಕೊಂಡು ಬಂದ ಅಂಟಿಸಿಕೊಂಡು ಬಂದ ನಿಲುವುಗಳಿಗೆ ಚ್ಯುತಿ ಬಾರದಂತೆ ವ್ಯವಸಾಯ ಮಾಡಿದವರು ಎನ್ನುವುದನ್ನು ಮುಲಾಜಿಲ್ಲದೆ ಹೇಳಬಲ್ಲೆ.

ಪತ್ರಿಕಾ ವೃತ್ತಿಯಲ್ಲಿ ತನ್ನತನವನ್ನು ಗಳಿಸುವುದಕ್ಕೆ ಬಹಳ ಕಾಲ ದುಡಿಯಬೇಕಾಗುತ್ತದೆ, ಕಳೆದುಕೊಳ್ಳಲು ಒಂದು ಬರಹ ಸಾಕು. ಆದರೆ ನಾಲ್ಕು ದಶಕಗಳ ಕಾಲ ಪತ್ರಿಕಾ ವೃತ್ತಿ ನಿಭಾಯಿಸಿಯೂ ತಮ್ಮ ತನವನ್ನು ಹೇಗೆ ಉಳಿಸಿಕೊಂಡರು ಪ.ಗೋ ಎನ್ನುವುದು ಸೋಜಿಗವೇ ಸರಿ. ಯಾಕೆಂದರೆ ಆ ಕಾಲದಲ್ಲಿ ಪತ್ರಿಕಾ ವೃತ್ತಿಗೆ ಅಂಥ ಬೆಲೆಯಿತ್ತು, ಗೌರವಾದರಳಿದ್ದವು, ಸಾರ್ವಜನಿಕವಾಗಿ ಮನ್ನಣೆಯಿತ್ತು. ಇಷ್ಟೆಲ್ಲವೂ ಇದ್ದಾಗ ವ್ಯಕ್ತಿಗೆ ಅಹಂ, ತಾನು ನಡೆದದ್ದೇ ದಾರಿ, ತಾನು ಹೇಳಿದ್ದೇ ಸರಿ ಎನ್ನುವ ದಾರ್ಷ್ತ್ಯ ಬಲು ಬೇಗ ಆವರಿಸಿಕೊಂಡು ಬಿಡುತ್ತದೆ. ತನ್ನ ಸುತ್ತಲಿರುವುದೆಲ್ಲವೂ ತೃಣಸಮಾನ ಎನ್ನುವ ಪೊಗರು ಚಿಗುರಿಕೊಳ್ಳುತ್ತದೆ. ಇದರ ಪರಿಣಾಮವೆಂದರೆ ಪ್ರಶ್ನೆ ಮಾಡುವವರನ್ನು ದಮನಮಾಡುವುದು, ಸಮಾಜ ಹಿಂದೆ ತಾನು ಮುಂದೆ ಎನ್ನುವ ಮನಸ್ಥಿತಿಗೆ ಬರುವ ಸಾಧ್ಯತೆಗಳೇ ಹೆಚ್ಚು. ಇಷ್ಟೆಲ್ಲಾ ಸಾಧ್ಯತೆಗಳಿದ್ದಾಗಲೂ ಪ.ಗೋ ಮಾತ್ರ ವೃತ್ತಿ ಧರ್ಮವನ್ನು ಬಿಡದೆ ವೃತಿ ನಿಭಾಯಿಸಿದರು ಎನ್ನುವುದೇ ಅವರ ಇಡೀ ಬದುಕಿನ ಅದರಲ್ಲೂ ವೃತ್ತಿ ಬದುಕಿನ ಹೈಲೈಟ್ಸ್ ಎನ್ನುವುದು ನನ್ನ ಗ್ರಹಿಕೆ.

ಪ.ಗೋ ರಾಜಕಾರಣಿಗಳನ್ನು ಹೆದರಿಸುತ್ತಿರಲಿಲ್ಲ, ಆದರೆ ರಾಜಕಾರಣಿಗಳು ಹೆದರುತ್ತಿದ್ದರು. ಅಧಿಕಾರಿಗಳ ಮೇಲೆ ವೃತ್ತಿ ದಬ್ಬಾಳಿಕೆ ಮಾಡುತ್ತಿರಲಿಲ್ಲ, ಆದರೆ ಅಧಿಕಾರಿಗಳು ಭಯಪಡುತ್ತಿದ್ದರು. ಇದು ಹೇಗೆ ಸಾಧ್ಯವಾಗುತ್ತದೆ ಒಬ್ಬ ಸಾಮಾನ್ಯ ಪತ್ರಕರ್ತನಿಗೆ ?. ಪಕ್ಷ, ಜಾತಿ, ಧರ್ಮಗಳು ಥಳುಕು ಹಾಕಿಕೊಂಡಿರುವಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುತ್ತಾ, ಎಲ್ಲರಿಗೂ ಸಾಮಾಜಿಕ ನ್ಯಾಯಕೊಡುವ, ಎಲ್ಲರಿಗೂ ಸಲ್ಲುವಂಥ ರೀತಿಯಲ್ಲಿ ವೃತ್ತಿ ನಿಭಾಯಿಸುವುದು ಥಿಯರಿ ಆಗಬಹುದೇ ಹೊರತು ಪ್ರಾಕ್ಟಿಕಲ್ ಆಗುವುದು ಸುಲಭ ಸಾಧ್ಯವಲ್ಲ. ಇದನ್ನು ಪ.ಗೋ ನಿಭಾಯಿಸಿದ್ದರು.

ಪ.ಗೋ ಯಾವುದೇ ಒಂದು ಪಕ್ಷದ ಪಕ್ಷಪಾತಿಯಾಗಿ, ಒಬ್ಬ ರಾಜಕಾರಣಿಯ ಪಕ್ಷಪಾತಿಯಾಗಿ, ಯಾವುದೇ ಒಂದು ಧರ್ಮ, ಜಾತಿಗೆ ಒತ್ತುಕೊಟ್ಟು ತಮ್ಮ ವೈಯಕ್ತಿಕ ನಂಬಿಕೆಗಳನ್ನು ತೋರ್ಪಡಿಸಿದ್ವರಲ್ಲ. ಒಂದು ಪಕ್ಷವನ್ನು ತಮ್ಮ ವೃತ್ತಿ ಮೂಲಕ ಎತ್ತಿಹಿಡಿಯುವ ಕೆಲಸ ಮಾಡಿದವರಲ್ಲ ಹಾಗೇ ತುಳಿದವರೂ ಅಲ್ಲ. ಕಿರಿಯನಾದ ನನಗೆ ವೃತ್ತಿಯ ಈ ಒಳಸುಳಿಗಳು ಅರ್ಥವಾಗಿರದ ಕಾಲದಲ್ಲೇ ಅವರ ಒಡನಾಟ ಸಿಕ್ಕಿದ ಕಾರಣ ಅವರನ್ನು ಅತ್ಯಂತ ಸೂಕ್ಷ್ಮವಾಗಿ ನೋಡಿದ್ದೇನೆ, ಅವರ ಬರವಣಿಗೆಯನ್ನು ಕಣ್ಣಲ್ಲಿ ಕಣ್ಣಿಟ್ಟು ವ್ಯಕ್ತಿ, ಪಕ್ಷದ ಪಕ್ಷಪಾತಿಯೇ ಎನ್ನುವುದನ್ನು ಉದ್ದೇಶಪೂರ್ವಕವಾಗಿ ಹುಡುಕಿದ್ದೇನೆ, ಕೆಣಕಿ ಮಾತನಾಡಿದ್ದೇನೆ. ನನ್ನ ಈ ಶೋಧನಾ ಪ್ರವೃತ್ತಿಯನ್ನು ಪ.ಗೋ ಬಹುಬೇಗ ಗುರುತಿಸಿದರು ಮಾತ್ರವಲ್ಲ ಅದು ಚಾಳಿಯಾಗದಂತೆ ತಡೆದರು.

ಪತ್ರಕರ್ತನಿಗೆ ಯಾವ ಗುಣ ಇರಬೇಕು, ಇರಬಾರದು ಎನ್ನುವ ಬಗ್ಗೆ ವಿಶ್ವವಿದ್ಯಾನಿಲಯಗಳಲ್ಲಿ ಹೇಗೆ ಹೇಳಿಕೊಡುತ್ತಾರೋ ಗೊತ್ತಿಲ್ಲ, ಅವುಗಳನ್ನು ತಿಳಿಯಲು ಅಂಥ ದೇಗುಲಗಳ ಮೆಟ್ಟಲೇರದ ನಾನು ಪ.ಗೋ ಕಾಟೇಜ್ ನಲ್ಲಿ ರಾತ್ರಿಯೆಲ್ಲ ನಿದ್ದೆ ಬಿಟ್ಟು ಅವರು ಹೇಳುವುದನ್ನು ಕೇಳಿಸಿಕೊಂಡು ನನಗೆ ಬೇಕಿತ್ತು ಜೀರ್ಣಿಸಿಕೊಂಡಿದ್ದೇನೆ.

ನಿನಗೆ ಸಂಶಯ ಇರಬೇಕು ಆದರೆ ಅದೇ ನಿನ್ನ ಅಭ್ಯಾಸವಾಗಬಾರದು.ನ್ನ ಸಂಶಯಕ್ಕೆ ಉತ್ತರ ಸಿಕ್ಕಿದ ಮೇಲೆ ಸಂಶಯವನ್ನು ಮತ್ತೆ ತಲೆಯಲ್ಲಿ ಇಟ್ಟುಕೊಳ್ಳಬೇಡ. ಅವನು ಇಂಥನು ಹೌದೇ ಅಲ್ಲವೇ ಒಂದು ಉತ್ತರ ಸಿಕ್ಕಿದ ಮೇಲೆ ಮತ್ತೆ ಮತ್ತೆ ಪ್ರಶ್ನೆಗೆ ಗುರಿಪಡಿಸುವುದು ಸರಿಯಲ್ಲ ಸಾಧ್ಯವಾದರೆ ಅವನ ಒಳ್ಳೆಯತನವನ್ನು ಮಾದರಿಯೆಂದು ಇತರರಿಗೆ ತೋರಿಸಲು ಪ್ರಯತ್ನಿಸು. ನಿನ್ನ ಕೈನಲ್ಲಿರುವ ಪೆನ್ನು ಅದಕ್ಕೆ ಬಳಕೆಯಾಗಲಿ. ಒಂದು ವೇಳೆ ನಿನ್ನ ನಂಬಿಕೆಗೆ ವ್ಯಕ್ತಿ ಧಕ್ಕೆ ತಂದರೆ ಎಚ್ಚರಿಸು. ಇದು ಪ.ಗೋ ಹೇಳಿಕೊಟ್ಟ ಪಾಠ.

ಋಣಾತ್ಮಕವಾಗಿ ವ್ಯಕ್ತಿಯನ್ನು ನೋಡುವ ಉದ್ದೇಶ ಅದೇ ಆಗಿರಬೇಕೆಂದಲ್ಲ. ಋಣಾತ್ಮಕ ಗುಣಗಳನ್ನು ಯಾರೂ ತೋರಿಸಿಕೊಳ್ಳುವುದಿಲ್ಲ, ಧನಾತ್ಮಕವಾಗಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ನೀನೇ ಋಣಾತ್ಮಕವಾಗಿ ನೋಡಿದಾಗ ನನ್ನನ್ನು ಯಾಕೆ ಹಾಗೆ ಗುರುತಿಸಿದಿರಿ ಎನ್ನುವ ಮಾತು ಆ ವ್ಯಕ್ತಿಯಿಂದ ಬಂದರೆ ಅವನು ಆಂತರಿಕವಾಗಿ ಋಣಾತ್ಮಕವಾಗಿಯೇ ಇರುವವನು, ಮೇಲ್ನೋಟಕ್ಕೆ ಧನಾತ್ಮಕವಾಗಿ ಕಾಣಿಸಿಕೊಳ್ಳುತ್ತಿದ್ದಾನೆ, ಇಲ್ಲದಿದ್ದರೆ ಅವನಾಗಿಯೇ ಹಾಗೆ ಪ್ರಶ್ನೆ ಮಾಡುವುದಿಲ್ಲ. ಪ.ಗೋ ಅವರ ಈ ಥಿಯರಿಯನ್ನು ನಾನು ಗ್ರಹಿಸಬೇಕಾದರೆ ಯಾವ ಪುಸ್ತಕವನ್ನು ಓದಲಿಲ್ಲ, ಅವರ ಬರವಣಿಗೆ, ಅವರು ರಾಜಕಾರಣಿಗಳ ಜೊತೆ ಹೇಗೆ ನಡೆದುಕೊಳ್ಳುತ್ತಿದ್ದರು ಎನ್ನುವುದನ್ನು ಗಮನಿಸಿಯೇ ಅರ್ಥಮಾಡಿಕೊಂಡೆ.

ಪ.ಗೋ ಎಲ್ಲಾ ರಾಜಕೀಯ ಪಕ್ಷದವರನ್ನೂ ಬೆವರಿಳಿಸುತ್ತಿದ್ದರು. ಕಾಂಗ್ರೆಸ್, ಬಿಜೆಪಿ, ಜನತಾ ಪರಿವಾರ, ಕಮ್ಯುನಿಸ್ಟ್ ಲೀಗ್ ಹೀಗೆ ನೀವು ಹೇಳುವ ಯಾರನ್ನೇ ಆದರೂ ಮುಲಾಜಿಲ್ಲದೆ ಟೀಕೆ ಮಾಡುತ್ತಿದ್ದರು, ಆ ಟೀಕೆಗಳು ಅವರ ಆ ದಿನದ ಕಾರ್ಯಕ್ರಮ, ಪತ್ರಿಕಾಗೋಷ್ಠಿ, ಅವರ ಹೇಳಿಕೆಗಳಿಗೆ ಮಾತ್ರ ಸೀಮಿತ. ಹಿಂದಿನದ್ದಕ್ಕೂ ಅಲ್ಲ ಮುಂದಿನದ್ದಕ್ಕೂ ಅಲ್ಲ. ಈಗ ನೀವು ಹೇಳುವುದನ್ನು ನಾನು ಬರೆದು ನನ್ನ ಪತ್ರಿಕೆ ಓದಿದವರನ್ನೂ ತಪ್ಪುದಾರಿಗೆ ಎಳೆಯಬೇಕೇ? ಪ.ಗೋ ಅವರ ಈ ಪ್ರಶ್ನೆಗೆ ಸುಲಭವಾಗಿ ಬಚಾವ್ ಆಗುವುದು ಸಾಧ್ಯವಿರಲಿಲ್ಲ. ತಪ್ಪನ್ನು ಸರಿಪಡಿಸಿಕೊಳ್ಳಬೇಕು ಇಲ್ಲವೇ ಅದೇ ಸರಿಯೆಂದು ಸಮರ್ಥಿಸಿಕೊಳ್ಳಬೇಕು. ತಪ್ಪನ್ನು ಸರಿಪಡಿಸಿಕೊಂಡರೆ ಒಳ್ಳೆಯದು, ಸಮರ್ಥಿಸಿಕೊಂಡರೆ ಅದು ನಿಮ್ಮ ಪ್ರಾರಾಬ್ಧ ಎಂದು ಬಿಡುತ್ತಿದ್ದರು. ಅದನ್ನು ಅಂತಿಮವಾಗಿ ಬರೆಯುವ ಬಿಡುವ ಅಧಿಕಾರ ಪ.ಗೋ ಅವರಿಗೆ ಮಾತ್ರ. ಇದು ನಾನು ಗ್ರಹಿಸಿದ ಅವರ ವೃತ್ತಿಯ ಹಲವು ಎಳೆಗಳಲ್ಲಿ ಒಂದು.

ಪ.ಗೋ ಅವರಿಗೆ ರಾಜಕಾರಣಿಗಳು ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ. ಇದನ್ನು ರಾಜಕಾರಣಿಗಳೇ ಹೇಳಿಕೊಳುತ್ತಾರೆ. ಯಾರೂ ಮಿತ್ರರೂ ಅಲ್ಲ, ಶತ್ರುಗಳು ಅಲ್ಲವೆಂದು. ವಿಚಿತ್ರ ಅನ್ನಿಸುವುದಿಲ್ಲವೇ ಇಂಥ ನಡವಳಿಕೆ. ನಿಮಗೆ ಏನನ್ನಿಸುವುದೋ ಗೊತ್ತಿಲ್ಲ ಪ.ಗೋ ಅವರ ಈ ನಿಲುವನ್ನು ಪ್ರಶ್ನೆ ಮಾಡಿ ಉತ್ತರ ಪಡೆದುಕೊಂಡಿದ್ದೇನೆ.

ಸಿಕ್ಕಿದವರ ಮೇಲೆಲ್ಲಾ ಹಾರಾಡಿ ಯಾಕೆ ನಿಷ್ಠುರ ಕಟ್ಟಿಕೊಳ್ಳುತ್ತೀರಿ ?, ಅದರಿಂದ ನಿಮಗೇನು ಲಾಭ ? ಕೇಳಿದ್ದೆ. ಪ.ಗೋ ಬೀಡಿಗೆ ಬೆಂಕಿ ಹಚ್ಚಿ ಪುಸ್ ಪುಸ್ ಎಂದು ಎರಡು ಸಲ ಹೊಗೆ ಬಿಟ್ಟು ನನ್ನ ನಿಲುವಿನಿಂದ ನಿನಗೇನು ನಷ್ಟ ? ಕೇಳಿದರು.

ನನಗೆ ನಷ್ಟವಲ್ಲ ನಿಮಗೆ ನಷ್ಟ ಸುಮ್ಮನೆ ಯಾಕೆ ಅಂತ ಅಷ್ಟೇ ಎಂದೆ. ನನಗೆ ಎಷ್ಟೆಲ್ಲಾ ನಷ್ಟವಾಗಿದೆ ಎನ್ನುವ ಲೆಕ್ಕಾಚಾರ ಇಟ್ಟಿದ್ದೀಯಾ ? ಮರು ಪ್ರಶ್ನೆ ಕೇಳಿದರು. ನಿಮಗೆ ಕೇಳಿದೆನಲ್ಲಾ ನನ್ನ ತಲೆಗೆ ನಾನು ಹೊಡೆದುಕೊಳ್ಳಬೇಕು ಎಂದೆ. ನಿನಗೆ ಕಷ್ಟವಾದರೆ ಹೇಳು ನಾನೇ ಹೋಡೀತೀನಿ. ಇದರ್ಥ ಮೊದಲೇ ಹೊಡೆದುಕೊಳ್ಳಬಹುದಿತ್ತಲ್ಲಾ ಪ್ರಶ್ನೆ ಕೇಳುವ ಬದಲು ಎನ್ನುವುದು.

ನಾನು ತುಂಬಾ ಸೀರಿಯಸ್ಸಾಗಿ ಸಿಕ್ಕಿಸಿಕ್ಕಿದವರ ಮೇಲೆ ಹಾರಾಡಬೇಡಿ ಅಂತ ಅಷ್ಟೇ ಹೇಳಿದ್ದು ಏನು ಬೇಕಾದರೂ ಮಾಡ್ಕೊಳ್ಳಿ ಎಂದೆ. ನನ್ನಪ್ಪ ಹೇಳಿದಾಗಲೇ ಕೇಳಲಿಲ್ಲ, ಇನ್ನು ನೀನು ಹೇಳಿದ್ದನ್ನು ಕೇಳುತ್ತೇನೆಯೇ? ಅದನ್ನೆಲ್ಲಾ ಬಿಡು ಬಾ ಕಾಫಿ ಕುಡಿಯುವಾ ಎಂದು ಕೈಹಿಡಿದು ಎಳೆಯತೊಡಗಿದರು. ಇದು ಪ.ಗೋ ಅವರ ಸ್ವಭಾವ. ಬಹುಷ ನನಗೆ ಸಿಟ್ಟು ಬಂತು ಎನ್ನುವ ಕಾರಣಕ್ಕೆ ಕಾಫಿ ಕುಡಿಸುವ ಆಮಿಷ. ಅವರು ಕೈಹಿಡಿದು ಎಳೆಯುವುದು ಎಂದರೆ ಒಳಸುಳಿಯನ್ನು ಬಿಟ್ಟುಕೊಡುತ್ತಾರೆ ಎಂದೇ ಅರ್ಥ.

ಕಾಫಿಯ ಜೊತೆಗೆ ಪಾಠವೂ ಇರುತ್ತದೆ ಎನ್ನುವ ಗ್ಯಾರಂಟಿಯೊಂದಿಗೆ ಹಿಂಬಾಲಿಸಿದೆ. ನಾನು ಹಾರಾಡುವುದು ಯಾಕೆ ಎಂದೆಯಲ್ಲಾ ನಾನು ಯಾಕೆ ಹಾರಾಡಲಿ, ಅವನು ಹೇಳುವುದು ಸುಳ್ಳು, ಮತ್ತೆ ಮತ್ತೆ ಸುಳ್ಳು ಹೇಳಬೇಡ ಎನ್ನುವ ಎಚ್ಚರಿಕೆ ಕೊಡುವುದು ನನ್ನ ಕೆಲಸ. ಒಂದು ವೇಳೆ ಅವನು ಸುಳ್ಳು ಹೇಳಿದರೆ ನಾನು ಅದನ್ನು ಯಾಕೆ ಬರೆಯುತ್ತೇನೆ?. ನನ್ನ ಮನಸ್ಸಿಗೆ ಸರಿಯೆಂದು ಕಂಡರೆ ಮಾತ್ರ ಬರೆಯುತ್ತೇನೆ ಹೊರತು ಅವನು ಹೇಳಿದ್ದಾನೆ ಎನ್ನುವ ಕಾರಣಕ್ಕೆ ಬರೆಯುವ ಜಾಯಮಾನ ನನ್ನದಲ್ಲ ತಿಳ್ಕೋ. ನೀನು ಅವನಿಗೆ ಬಿಸಿ ಮುಟ್ಟಿಸದಿದ್ದರೆ ಸುಳ್ಳು ಹೇಳುವುದೇ ಅಭ್ಯಾಸವಾಗಿ ಬಿಡುತ್ತದೆ. ಈಗಲೇ ಬಿಸಿ ಮುಟ್ಟಿದರೆ ಮತ್ತೆ ಸುಳ್ಳು ಹೇಳುವ ಧೆರ್ಯ ಮಾಡುವುದಿಲ್ಲ.

ನೀನು ಏನು ಬೇಕಾದರೂ ಕೇಳು?, ಅವನು ಏನು ಬೇಕಾದರೂ ಹೇಳಲಿ. ನಿನಗೆ ಅವನು ಹೇಳಿರುವುದರಿಂದ ನಿನ್ನ ಪತ್ರಿಕೆ ಓದುವವರಿಗೆ ಪ್ರಯೋಜನವಾಗುತ್ತದೆ ಎನ್ನುವುದು ಗ್ಯಾರಂಟಿಯಾದರೆ ಮಾತ್ರ ಸುದ್ದಿ ಬರೆದು ಹಾಕು, ಇಲ್ಲದಿದ್ರೆ ಕ.ಬುಗೆ ಹಾಕು.

ಈ ಥಿಯರಿಯನ್ನು ಪ.ಗೋ ತಮ್ಮ ವೃತ್ತಿ ಜೀವನದುದ್ದಕ್ಕೂ ಪಾಲಿಸಿದರು, ನನ್ನ ತಲೆ ಮೇಲೂ ಕೈಯಿಟ್ಟರು. ಪತ್ರಿಕಾಗೋಷ್ಠಿಗಳಲ್ಲಿ ಅವರು ಸುಳ್ಳು ಹೇಳುವವರನ್ನು ಪ್ರಶ್ನೆ ಮಾಡುತ್ತಿದ್ದ ಬಗೆ ಹೇಗೆಂದರೆ
ಸ್ವಾಮೀ ನೀವು ಎಷ್ಟು ಸುಳ್ಳು ಹೇಳುತ್ತೀರೀ, ಅದನ್ನು ನಮ್ಮಿಂದ ಎಷ್ಟು ಸಲ ಬರೆಸುತ್ತೀರಿ. ನಿಮ್ಮ ಸುಳ್ಳನ್ನು ಬರೆದು ಬರೆದು ಜನಕ್ಕೆ ಪತ್ರಿಕೆಯವರೇ ಸುಳ್ಳು ಬರೆಯುತ್ತಿದ್ದಾರೆ ಎನ್ನುವಂತೆ ಮಾಡುತ್ತೀರಿ ? ನಿಮ್ಮ ಹಳೆ ಸುಳ್ಳು ಬಿಟ್ಟು ಹೊಸ ಸುಳ್ಳು ಇದ್ದರೆ ಹೇಳಿ?.

ಇದು ಕರಾವಳಿಯ ಸಮುದ್ರ ಕೊರೆತ ತಡೆಗಟ್ಟಲು ಶಾಶ್ವತ ಯೋಜನೆ ಮಾಡುತ್ತೇವೆ, ಯೋಜನೆ ಕೇಂದ್ರಕ್ಕೆ ಸಲ್ಲಿಕೆಯಾಗಿದೆ ಎನ್ನುವ ಮಂತ್ರಿಗಳ ಮಾಹಿತಿಗೆ ಪ.ಗೋ ಹೇಳುತ್ತಿದ್ದರು. ಅದೆಂಥಾ ವಾಸ್ತವ ನೋಡಿ ಈಗಲೂ ಸಮುದ್ರ ಕೊರೆತ ತಡೆಗಟ್ಟಲು ಶಾಶ್ವತ ಯೋಜನೆಗೆ ಈಗಿನ ಮಂತ್ರಿಗಳು ಹೇಳುವುದೂ ಇದನ್ನೇ ಅಲ್ಲವೇ?. ಪ.ಗೋ 1994ರಲ್ಲಿ ನಿವೃತ್ತರಾದರು. ಈಗಲೂ ಪತ್ರಿಕಾಗೋಷ್ಠಿಗಳಲ್ಲಿ ಅದೇ ಸುಳ್ಳನ್ನು ಹೇಳುತ್ತಿದ್ದಾರೆ ಅನ್ನಿಸುವುದಿಲ್ಲವೇ?.

Chidambara-Baikampady

-ಚಿದಂಬರ ಬೈಕಂಪಾಡಿ

(ಪ.ಗೋ ಎಲ್ಲರಿಗೂ ಬೇಕಾದವರು ಎನ್ನುವುದಕ್ಕೆ ಈ ಚಿತ್ರದಲ್ಲಿರುವವರನ್ನು ನೋಡಿ. ಇದು ಪ.ಗೋ ಅವರ ಪುತ್ರ ಪ.ರಾಮಚಂದ್ರ ಅವರ ವಿವಾಹದ ಸಂದರ್ಭದಲ್ಲ್ಲಿ. ವಿ.ಧನಂಜಯ ಕುಮಾರ್-ಮಾಜಿ ಕೇಂದ್ರ ಸಚಿವ ಆಗ ಬಿಜೆಪಿ, ಮೊಹಮ್ಮದ್ ಹುಸೇನ್ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಜನತಾಪಕ್ಷ, ಬಿ.ಜನಾರ್ದನ ಪೂಜಾರಿ, ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್, ಪ.ಗೋ, ಡಾ.ಅಮ್ಮೆಂಬಳ ಬಾಳಪ್ಪ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಎಂ.ಸಂಜೀವ- ಜನತಾಪಕ್ಷ ಹಾಗೂ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಬಿ.ಅಪ್ಪಣ್ಣ ಹೆಗ್ಡೆ ಮಾಜಿ ಶಾಸಕ, ಜನತಾಪಕ್ಷ.)

Write A Comment