ರಾಷ್ಟ್ರೀಯ

ಕೇಂದ್ರ ಸಚಿವ ರಿಜಿಜುಗೆ ಆಸನದ ವ್ಯವಸ್ಥೆ ಕಲ್ಪಿಸಲು ಮಗು ಸೇರಿ ಮೂವರನ್ನು ಹೊರದಬ್ಬಿದ ಏರ್‌ ಇಂಡಿಯಾ

Pinterest LinkedIn Tumblr

rijju-air

ಹೊಸದಿಲ್ಲಿ: ಕೇಂದ್ರ ಸಚಿವ ಕಿರಣ್‌ ರಿಜಿಜು ಹಾಗೂ ಜಮ್ಮು ಕಾಶ್ಮೀರದ ಉಪಮುಖ್ಯಮಂತ್ರಿ ನಿರ್ಮಲ್‌ ಸಿಂಗ್‌ ಅವರಿಗೆ ಆಸನದ ವ್ಯವಸ್ಥೆ ಕಲ್ಪಿಸಲು ಮಗು ಸೇರಿ ಮೂವರನ್ನು ಏರ್‌ ಇಂಡಿಯಾ, ವಿಮಾನದಿಂದ ಹೊರಹಾಕಿದ ಘಟನೆ ವರದಿಯಾಗಿದೆ.

ವಿಐಪಿ ಸಂಸ್ಕೃತಿಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಯುತ್ತಿರುವ ಸಮಯದಲ್ಲಿ, ಜೂನ್ 24ರಂದು ಏರ್ ಇಂಡಿಯಾ ವಿಮಾನ ಸಚಿವರಿಗಾಗಿ ಅರ್ಧ ತಾಸು ತಡವಾಗಿ ಪ್ರಯಾಣ ಆರಂಭಿಸಿದೆ. ‘ಸಿಂಧು ದರ್ಶನ್‌’ಉತ್ಸವದಲ್ಲಿ ಪಾಲ್ಗೊಂಡ ರಿಜಿಜು ಹಾಗೂ ಸಿಂಗ್‌ ಅವರಿಗೆ ಸ್ಥಳಾವಕಾಶ ಕಲ್ಪಿಸಲು ವಾಯುಪಡೆ ಅಧಿಕಾರಿ ಹಾಗೂ ಅವರ ಕುಟುಂಬ ಸದಸ್ಯರನ್ನು ವಿಮಾನದಿಂದ ಕೆಳಗಿಳಿಯುವಂತೆ ಸೂಚಿಸಲಾಗಿತ್ತು.

ವಿಮಾನ ತಡವಾಗಿ ಪ್ರಯಾಣ ಆರಂಭಿಸಿದ ವಿಷಯವನ್ನು ಇಬ್ಬರೂ ನಿರಕಾರಿಸಿದ್ದಾರೆ. ಪ್ರಯಾಣಕ್ಕೆ ಕೆಲವೇ ತಾಸು ಮೊದಲು ಸಮಯವನ್ನು ಬದಲಿಸಲಾಗಿತ್ತು. ನಿಗದಿತ ಸಮಯಕ್ಕಿಂತ ಮೊದಲೇ ಪ್ರಯಾಣ ಆರಂಭವಾಗಿತ್ತು ಎಂದಿದ್ದಾರೆ. ಜತೆಗೆ,ಪೈಲಟ್‌ ನಮ್ಮೊಂದಿಗೆ ಬಹಳ ಕಠಿಣವಾಗಿ ವರ್ತಿಸಿ, ನೋಯಿಸಿದರು ಎಂದು ಸಿಂಗ್‌ ಆರೋಪಿಸಿದ್ದಾರೆ.

‘ನಮಗೆ ಸ್ಥಳಾವಕಾಶ ಕಲ್ಪಿಸಲು ಮೂವರು ಪ್ರಯಾಣಿಕರನ್ನು ಕೆಳಗಿಸಿದ ವಿಷಯವೇ ಗೊತ್ತಿಲ್ಲ,’ಎಂದಿದ್ದಾರೆ ಗೃಹ ಖಾತೆಯ ಸಹಾಯಕ ಸಚಿವ ರಿಜಿಜು. ‘ಒಂದು ವೇಳೆ ಹಾಗೆ ಆಗಿದ್ದರೆ. ಅದು ತಪ್ಪು, ಒಪ್ಪುವಂಥದ್ದಲ್ಲ,’ ಎಂದು ಹೇಳಿದ್ದಾರೆ.

Write A Comment