ರಾಷ್ಟ್ರೀಯ

ವೇತನ ಶೇ.100, ಪಿಂಚಣಿ ಶೇ.75 ಹೆಚ್ಚಳಕ್ಕೆ ಸಂಸದರ ಆಗ್ರಹ

Pinterest LinkedIn Tumblr

Parliamen

ಹೊಸದಿಲ್ಲಿ: ಸಂಸದರ ವೇತನವನ್ನು ದುಪ್ಪಟ್ಟುಗೊಳಿಸುವ ಜತೆಗೆ ಮಾಜಿ ಸಂಸದರ ಪಿಂಚಣಿಯನ್ನು ಶೇ.75 ಹೆಚ್ಚಿಸುವಂತೆ ಸಂಸದೀಯ ಸಮಿತಿ ಶಿಫಾರಸು ಮಾಡಿದೆ. ಸರಕಾರಿ ನೌಕರರ ವೇತನ ಪರಿಷ್ಕರಣೆಗೆ ಇರುವಂಥ ವೇತನ ಆಯೋಗದಂಥ ವ್ಯವಸ್ಥೆ ಸಂಸದರಿಗೂ ಇರಲಿ ಎಂದು ಸರಕಾರಕ್ಕೆ ಸಲ್ಲಿಸಿರುವ ಶಿಫಾರಸಿನಲ್ಲಿ ಜಂಟಿ ಸಮಿತಿ ತಿಳಿಸಿದೆ.

‘ಹಿಂದೆ 2010ರಲ್ಲಿ ಸಂಸದರ ವೇತನ ಪರಿಷ್ಕರಣೆ ಆಗಿತ್ತು. ಸರಕಾರಿ ನೌಕರರಂತೆ ಸಂಸದರಿಗೆ ತುಟ್ಟಿಭತ್ಯೆ ಇರುವುದಿಲ್ಲ,’ ಎಂದಿರುವ ಸಮಿತಿ ಒಟ್ಟು 60 ಶಿಫಾರಸುಗಳನ್ನು ಮುಂದಿಟ್ಟಿದೆ.

ಪ್ತಸ್ತುತ ಹಾಲಿ ಸಂಸದರ ತಿಂಗಳ ಪಗಾರ 50,000ರೂ., ಸಂಸತ್‌ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ನೀಡುತ್ತಿರುವ 2000ರೂ.ದಿನ ಭತ್ಯೆಯನ್ನೂ ಹೆಚ್ಚಿಸುವಂತೆಯೂ ಸಮಿತಿ ಶಿಫಾರಸು ಮಾಡಿದೆ.

‘ವೇತನ ಪರಿಷ್ಕರಣೆ ಬಾಕಿ ಇದ್ದು, ಸಂಸದರನ್ನು ಭೇಟಿ ಆಗಲು ಬರುವ ಜನರಿಗೆ ಚಹಾ ಕಡಿಸಲು ದಿನಕ್ಕೆ 1000 ರೂ. ಬೇಕಾಗುತ್ತದೆ. ನಮ್ಮನ್ನು ಆರಿಸಿ ಕಳುಹಿಸಿದ ಜನರಿಗೆ ಕನಿಷ್ಠ ಸೌಜನ್ಯ ತೋರದಿರಲು ಸಾಧ್ಯವೇ,?’ ಎಂದು ಬಿಜೆಪಿ ಸಂಸದರು ಪ್ರಶ್ನಿಸಿದ್ದಾರೆ.

ಮಾಜಿ ಸಂಸದರು ವರ್ಷದಲ್ಲಿ 20-25 ಬಾರಿ ಉಚಿತ ವಿಮಾನ ಪ್ರಯಾಣ ಮಾಡಲು ಅನುವುಮಾಡಿಕೊಡಬೇಕು. ಅವರಿಗೆ ದೊರೆಯುತ್ತಿರುವ ಪಿಂಚಣಿಯನ್ನು 20,000ರೂ.ಇಂದ 35,000ರೂ.ಗೆ ಹೆಚ್ಚಿಸಬೇಕು ಎಂದು ಬಿಜೆಪಿ ಸಂಸದ ಯೋಗಿ ಆದಿತ್ಯಾನಥ್‌ ನೇತೃತ್ವದ ಈ ಸಮಿತಿ ಶಿಫಾರಸು ಮಾಡಿದೆ.

ಸದ್ಯ ಸಂಸದರು ಹಾಗೂ ಅವರ ಸಂಗಾತಿ ರೈಲಿನಲ್ಲಿ ಉಚಿತವಾಗಿ ಮೊದಲ ದರ್ಜೆಯಲ್ಲಿ ಪ್ರಯಾಣಿಸಬಹುದಾಗಿದ್ದು, ಮತ್ತೊಬ್ಬ ಸಹಪ್ರಯಾಣಿಕರು (ಆಪ್ತಕಾರ್ಯದರ್ಶಿ)ಗೂ ಈ ಸೌಲಭ್ಯ ಲಭ್ಯವಾಗಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಇದಲ್ಲದೇ ಪಾಕೆಟ್‌ ಮನಿ ರೂಪದಲ್ಲಿ ಮೊದಲ ದರ್ಜೆಯ ರೈಲು ಟಿಕೆಟ್‌ ದರವನ್ನು ಸಂಸದರಿಗೆ ನೀಡಬೇಕು ಎಂಬ ಪ್ರಸ್ತಾವನೆಯನ್ನೂ ಮುಂದಿಟ್ಟಿದೆ. ಅದೇ ರೀತಿ ವಿಮಾನ ಪ್ರಯಾಣದ ವೇಳೆಯೂ ಒಂದು ಟಿಕೆಟ್‌ ದರದ ಮೊತ್ತವನ್ನು ಭತ್ಯೆಯಾಗಿ ನೀಡಬೇಕು ಎಂದು ಹೇಳಲಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ವಿಮಾನ ನಿಲ್ದಾಣಗಳಲ್ಲಿ ಸಂಸದರಿಗೆ ವಿವಿಐಪಿ ಸೌಲಭ್ಯ ಬೇಕೆಂಬ ಬೇಡಿಕೆಯೂ ಇದೆ. ಜತೆಗೆ, ಕೇಂದ್ರ ಸರಕಾರದ ಆರೋಗ್ಯ ಯೋಜನೆಗಳು ಮಕ್ಕಳು ಹಾಗೂ ಮೊಮ್ಮಕ್ಕಳಿಗೂ ಲಭ್ಯವಾಗಬೇಕು ಎಂದು ಸಮಿತಿ ಹೇಳಿದೆ. ಸಂಸದರ ಕೆಲವು ಬೇಡಿಕೆಗಳು ಅತಿಯಾಗಿದ್ದು, ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

Write A Comment