ಅಂತರಾಷ್ಟ್ರೀಯ

ಭೂಗತ ಪಾತಕಿ ದಾವುದ್‌ ಇಬ್ರಾಹಿಂನಿಂದ ಹತ್ಯೆಗೆ ಸಂಚು; ಜಸ್ಟ್ ಮಿಸ್ಸಾದ ಚೋಟಾ ರಾಜನ್‌

Pinterest LinkedIn Tumblr

rajan-dawood

ಹೊಸದಿಲ್ಲಿ: ಭೂಗತ ಪಾತಕಿ ದಾವುದ್ ಇಬ್ರಾಹಿಂ ಒಂದು ಕಾಲದ ಸಹವರ್ತಿಯಾಗಿದ್ದ ಇನ್ನೊಬ್ಬ ಭೂಗತ ಪಾತಕಿ ಚೋಟಾ ರಾಜನ್‌ ಹತ್ಯೆಗೆ ಇತ್ತೀಚೆಗೆ ನಡೆಸಿದ್ದ ಸಂಚು ವಿಫಲವಾಗಿದೆ.

ತನ್ನ ಬಹುಕಾಲದ ಶತ್ರುವಿನ ಕೊಲೆ ನಡೆಸುವ ಸಂಚಿನ ನೇತೃತ್ವವನ್ನು ವಹಿಸಿದ್ದ ದಾವುದ್‌ ಇಬ್ರಾಹಿಂ ತನ್ನ ಬಲಗೈಬಂಟ ಚೋಟಾ ಶಕೀಲ್‌ಗೆ ವಹಿಸಿದ್ದ. ಈ ವರ್ಷದ ಆರಂಭದಲ್ಲಿ ಈ ಕೃತ್ಯ ನಡೆಸಲು ಯೋಜನೆ ರೂಪಿಸಲಾಗಿತ್ತು. ಸದ್ಯ ಹಿಂದು ಡಾನ್‌ ಎನ್ನುವ ಮುಖವಾಡದಲ್ಲಿ ಓಡಾಡುತ್ತಿರುವ ಚೋಟಾ ರಾಜನ್‌ ಹತ್ಯೆಗೆ ನಿಖರವಾದ ಸ್ಥಳವನ್ನೂ ಗುರುತಿಸಲಾಗಿತ್ತು.

ಆದರೆ ಚೋಟಾ ರಾಜನ್‌ ಅದೃಷ್ಟ ಚೆನ್ನಾಗಿತ್ತು. ಬ್ಯಾಂಕಾಂಕ್‌ನಲ್ಲಿ ಕೆಲ ವರ್ಷಗಳ ಹಿಂದೆ ತನ್ನ ಮೇಲೆ ನಡೆದಿದ್ದ ದಾಳಿಯಂಥದ್ದೇ ಯೋಜನೆ ರೂಪಿಸಿದ ಬಗ್ಗೆ ಸುಳಿವು ಪಡೆದ ರಾಜನ್‌, ಕೂಡಲೇ ಎಚ್ಚೆತ್ತುಕೊಂಡು ತನ್ನ ಚಿಪ್ಪಿನೊಳಗೆ ಅವಿತುಕೊಂಡ ಎಂದು ಟೈಮ್ಸ್‌ ಆಪ್‌ ಇಂಡಿಯಾ ವರದಿ ಹೇಳಿದೆ.

ರಾಜನ್‌ ಕೊಂದು ತನ್ನ ಬಾಸ್‌ ಖುಷಿ ಪಡಿಸುವ ಯತ್ನದಲ್ಲಿದ್ದ ಶಕೀಲ್‌ಗೆ ಈ ವೈಫಲ್ಯ ನಿರಾಶೆ ಮೂಡಿಸಿದೆ. ಒಂದು ಕಾಲದಲ್ಲಿ ತನ್ನ ಪಾಳಯದಲ್ಲೇ ಇದ್ದು ಡಿ ಕಂಪನಿಯ ಎರಡನೇ ಮುಖ್ಯಸ್ಥನಾಗಿದ್ದ ಚೋಟಾ ರಾಜನ್‌ನನ್ನು ಮುಗಿಸುವುದು ಪಾತಕಿ ದಾವುದ್ ಇಬ್ರಾಹಿಂನ ಬಹುಕಾಲದ ಕನಸಾಗಿದೆ.

ಕರಾಚಿಯಿಂದ ಭಾರತದಲ್ಲಿರುವ ವ್ಯಕ್ತಿಗೆ ಕಳೆದ ಏಪ್ರಿಲ್‌ನಲ್ಲಿ ಭಾರಿ ಪ್ರಮಾಣದ ಕರೆಗಳು ಬಂದಿವೆ. ಹಿಂದಿ ಹಾಗೂ ಉರ್ದುವಿನಲ್ಲಿ ನಡೆಸಿದ್ದ ಸಂಭಾಷಣೆಯ ಬಗ್ಗೆ ಗುಪ್ತಚರ ಇಲಾಖೆಗಳು ಕಣ್ಣಿಟ್ಟಿದ್ದವು. ಏಕೆಂದರೆ ಅವು ದಾವುದ್‌ನ ಬಲಗೈ ಬಂಟನ ಕರೆಗಳಾಗಿದ್ದವು. ಚೋಟಾ ರಾಜನ್‌ನ ಅತಿ ನಂಬಿಕಸ್ಠನನ್ನು ಬುಟ್ಟಿಗೆ ಹಾಕಿಕೊಂಡಿದ್ದ ದಾವುದ್‌ ತಂಡ, ಆತನ ಹತ್ಯೆಗೆ ನಾಜೂಕಾದ ಬಲೆ ಹೆಣೆದಿತ್ತು. ಚೋಟಾ ರಾಜನ್‌ ಕೊಲೆ ಯಶಸ್ವಿಯಾದರೆ ನೆರವಾದ ವ್ಯಕ್ತಿಗೆ ದೊಡ್ಡ ಮೊತ್ತದ ಬಹುಮಾನ ಕೊಡುವ ಭರವಸೆಯನ್ನು ಅತ್ತ ಕಡೆಯ ವ್ಯಕ್ತಿ ನೀಡಿದ್ದ. ಆದರೆ ಈ ಸಂಚು ಚೋಟಾ ರಾಜನ್‌ಗೆ ಗೊತ್ತಾಗಿದ್ದರಿಂದ ಸದ್ಯ ಬಚಾವಾಗಿದ್ದಾನೆ.

Write A Comment