ಕರಾವಳಿ

ಚಿದು ಬರೆಯುವ ಪ.ಗೋ ಸರಣಿ-17: ಆಟವನ್ನು ಘಟ್ಟದಾಟಿಸಿದ ಮೋಡಿಗಾರ

Pinterest LinkedIn Tumblr

01 Pa go with DV Heggade

ಪ.ಗೋಪಾಲಕೃಷ್ಣ ಅವರು ಪತ್ರಕರ್ತ, ಕಲಾವಿದ ಜೊತೆಗೆ ಯಕ್ಷಗಾನದ ಬಗ್ಗೆ ಅಪಾರ ಒಳನೋಟವಿದ್ದ ಕಲಾರಾಧಕ ಎನ್ನುವುದು ಈಗಿನ ತಲೆಮಾರಿನವರಿಗೆ ಗೊತ್ತೇ ಇಲ್ಲ. ಹಾಗೆಂದು ಅವರು ಯಾವುದನ್ನೂ ಹೇಳಿಕೊಂಡು ತಿರುಗಾಡುವ ಜಾಯಮಾನದವರಲ್ಲದ ಕಾರಣವೇ ಅವರೊಳಗಿದ್ದ ಯಕ್ಷಗಾನ ಕಲೆ ಗುಪ್ತಗಾಮಿನಿಯಾಗಿಯೇ ಹರಿಯುತ್ತಿತ್ತು. ಇಷ್ಟು ವರ್ಷಗಳ ಒಡನಾಟವಿದ್ದರೂ ಪ.ಗೋ ತನಗಿರುವ ಯಕ್ಷಗಾನದ ಅರಿವನು ಹೇಳಿಕೊಂಡಿರಲಿಲ್ಲ. ಅವರು ಕರಾವಳಿಯ ಗಂಡುಮೆಟ್ಟಿನ ಕಲೆ ಯಕ್ಷಗಾನವನ್ನು ನೋಡುವ ಹವ್ಯಾಸವನ್ನು ಇಟ್ಟುಕೊಂಡವರೂ ಅಲ್ಲ. ಅವರಿಗೆ ಆ ಕಲೆಯ ಒಳತಿರುಳು ಗೊತ್ತಿತ್ತು ಮತ್ತು ತಾನು ಯಕ್ಷಗಾನವನ್ನು ಪ್ರೀತಿಸಿ ಅದನ್ನು ಪರಿಚಯಿಸಬೇಕಾದಲ್ಲಿ ಪರಿಚಯಿಸಿ.ನಿರ್ಲಿಪ್ತವಾಗಿದ್ದರು.

ಒಬ್ಬ ಪತ್ರಕರ್ತರಾಗಿ ಯಕ್ಷಗಾನ ಕಲೆಯನ್ನು ಅಷ್ಟೊಂದು ಹಚ್ಚಿಕೊಂಡಿದ್ದರು ಎನ್ನುವುದಕ್ಕೆ ಅವರು 1955ರಲ್ಲೇ ಯಕ್ಷಗಾನವನ್ನು ದೇಶ ವಿದೇಶಗಳ ಗಣ್ಯಾತಿಗಣ್ಯರಿಗೂ ತೋರಿಸಿಕೊಟ್ಟಿದ್ದರು ಎನ್ನುವುದೇ ಸಾಕ್ಷಿ.. ಆ ಕಲೆಯನ್ನು ಕರಾವಳಿಯ ಗಡಿದಾಟಿಸಿ ಘಟ್ಟದ ಮೇಲಿನವರಿಗೂ ರುಚಿ ತೋರಿಸಿದ್ದರೆ ಅದು ಪ.ಗೋ ಎನ್ನುವುದು ಗೊತ್ತಾಗಬೇಕಾದರೆ ಆ ಕಾಲದಲ್ಲಿ ಅವರು ಮಾಡಿರುವ ಸಾಹಸವನ್ನು ಅರ್ಥಮಾಡಿಕೊಳ್ಳಲೇ ಬೇಕು. ಯಕ್ಷರಂಗದ ದಿಗ್ಗಜ ಪೆರುವೋಡಿ ನಾರಾಯಣ ಭಟ್ಟರು ಪ.ಗೋ ಅವರು ಯಕ್ಷಗಾನ ಕಲೆಯನ್ನು ಹೇಗೆ ಅರ್ಥಮಾದಿಕೊಂಡಿದ್ದರು ಮತ್ತು ಅದನ್ನು ಜಗತ್ತಿಗೆ ಹೇಗೆ ಪರಿಚಯಿಸಿದರು ಎನ್ನುವುದನ್ನು ಪ.ಗೋ ಸಂಸ್ಮರಣ ಗ್ರಂಥದಲ್ಲಿ ಖುದ್ದು ಹೇಳಿಕೊಂಡಿದ್ದಾರೆ.

02-Invitation from mysore govt for Yakshagana at Bangalore  on 26 Nov 1955 - (1)

03- Schedule of Cultural Programme 26 Nov 1955 (1)

1955ರ ಸೆಪ್ಟಂಬರ್ ತಿಂಗಳಲ್ಲಿ ಕುರಿಯಾ ವಿಠಲ ಶಾಸ್ತ್ರಿಗಳಾದಿಯಾಗಿ ಧರ್ಮಸ್ಥಳ ಮೇಳದ ಅತಿರಥ ಮಹಾರಥ ಕಲಾವಿದರನು ಭೇಟಿ ಮಾಡಿಕೊಂಡು ಪೆರೋಡಿಯವರ ಮನೆಗೆ ಬಂದರಂತೆ. ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ತಯಾರಿಮಾಡಿದ್ದು ನೀವೂ ಬರಬೇಕೆಂದು ಆಹ್ವಾನಿಸಿದರಂತೆ. ವಾಸ್ತವವಾಗಿ ಯಕ್ಷಗಾನ ಮೇಳಗಳು ತಿರುಗಾಟ ಮುಗಿಸಿ ಗೆಜ್ಜೆ ತೆಗೆದ ಮೇಲೆ (ಪತ್ತನಾಜೆ) ತಿರುಗಾಟಕ್ಕೆ ಹೋಗುವ ಸಂಪ್ರದಾಯವಿಲ್ಲ. ಆದರೆ ಪ.ಗೋ ಪೆರುವೋಡಿಯವರು ಬರುವುದಿಲ್ಲವೆಂದಾಗ ಇದು ಮೇಳವೂ ಅಲ್ಲ, ಯಕ್ಷಗಾನದ ತಿರುಗಾಟವೂ ಅಲ್ಲ. ಕೆಲವು ಆಯ್ದ ಕಲಾವಿದರ ಕೂಡುವಿಕೆಯೊಂದಿಗೆ ನೀಡುವ ಪ್ರದರ್ಶನ ಎಂದರಂತೆ.

ಇಲ್ಲಿ ಬಹಳ ಮುಖ್ಯವಾಗುವುದು ಯಕ್ಷಗಾನ ಕಲೆಯ ಸಂಪ್ರದಾಯ, ನಂಬಿಕೆ, ಅದನ್ನು ಆಚರಿಸಿಕೊಂಡು ಬಂದ ಹಿನ್ನೆಲೆಯನ್ನು ಅರ್ಥಮಾಡಿಕೊಂಡು ಸಂಪ್ರದಾಯವೂ ಮುರಿಯಬಾರದು, ಕಲಾವಿದರಿಗೂ ಮುಜುಗರವಾಗಬಾರದು ಎನ್ನುವ ಕಾರಣಕ್ಕೆ ಪ.ಗೋ ತಮ್ಮದೇ ಆದ ರೀತಿಯಲ್ಲಿ ಯಕ್ಷಗಾನ ಪ್ರದರ್ಶನ ಸಂಯೋಜಿಸಿದ್ದರು. ಈಗ ನಡೆಯುವ ಅಯ್ದ ಕಲಾವಿದರ ಕೂಡುವಿಕೆಯ ಯಕ್ಷಗಾನ ಪ್ರದರ್ಶನವನ್ನು ಪ.ಗೋ ಸುಮಾರು 55 ವರ್ಷಗಳ ಹಿಂದೆಯೇ ಆಯೋಜಿಸಿದ್ದರು ಎನ್ನುವುದನ್ನು ಗಮನಿಸಬೇಕು. ಇಷ್ಟು ಮಾತ್ರವಲ್ಲ ಧರ್ಮಸ್ಥಳ ಮೇಳ್ದ ಕಲಾವಿದರೂ ಮೇಳದ ಹೊರಗೆ ಹೋಗಬೇಕಾದರೆ ಧರ್ಮಾಧಿಕಾರಿಗಳ ಅಪ್ಪಣೆ ಬೇಕು. ಇದು ಅನೂಚಾನವಾಗಿ ನಡೆದುಕೊಂಡು ಬಂದಿರುವ ಸಂಪ್ರದಾಯ. ಇದನ್ನೂ ಗ್ರಹಿಸಿದ್ದ ಪ.ಗೋ ಧರ್ಮಾಧಿಕಾರಿಗಳನ್ನು ಒಪ್ಪಿಸಿ ಅವರ ಅಪ್ಪಣೆಯನ್ನು ಪಡೆದುಕೊಂಡೇ ಈ ಕಲಾವಿದರನ್ನು ಒಪ್ಪಿಸಿದ್ದರಂತೆ ಎನ್ನುವುದು ಆ ಕಾಲದಲ್ಲಿ ಊಹಿಸುವುದೂ ಕಷ್ಟವೇ ಸರಿ. ಅಂದರೆ ಪ.ಗೋ ಮಾಡಬೇಕೆನ್ನುವ ಹಠಕ್ಕೆ ಬಿದ್ದರೆ ಶತಾಯಗತಾಯ ಹೋರಾಟ ಮಾಡಿ ಅಂದುಕೊಂಡನ್ನು ಮಾಡಿ ತೀರಿಸುವ ಛಲಗಾರ ಎನ್ನುವುದಕ್ಕೆ ಇದಕ್ಕಿಂಥ ಒಳ್ಳೆಯ ಉದಾಹರಣೆ ಮತ್ತೊಂದಿಲ್ಲ.

ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ಆಯ್ದ ಕಲಾವಿದರ ಕೂಡುವಿಕೆಯಲ್ಲಿ ದಸರಾದಲ್ಲಿ ಯಕ್ಷಗಾನ ಕಲೆ ಜನಮನಸೂರೆಗೊಂಡ ವಿಚಾರ ಪತ್ರಿಕೆಗಳ ಮೂಲಕ ಪ್ರಸಾರವಾದಾಗ ಬೆಂಗಳೂರಲ್ಲಿ ಈ ಕಲೆ ಪ್ರದರ್ಶನ ಮಾಡುವುದಕ್ಕೆ ಆಹ್ವಾನ ಸಿಕ್ಕಿತು. ಆದರೆ ಈ ಬಾರಿ ಪ.ಗೋ ಅವರಿಗಿದ್ದ ಸವಾಲು ಕೂಡಾ ಬೆರಗುಗೊಳಿಸುವಂಥದ್ದು. ರಷ್ಯಾ ದೇಶದ. ಪ್ರಧಾನ ಮಾರ್ಶಲ್ ಬುಲ್ಗಾನಿನ್ ಮತ್ತು (ಸರ್ವೋಚ್ಛ ಮುಖಂಡ) ಕಾಮ್ರೇಡ್ ಕ್ರುಶ್ಚೇವ್ ಬೆಂಗಳೂರಿಗೆ ಭೇಟಿ ನೀಡುವ ಸಂದರ್ಭದಲ್ಲಿ ಅವರಿಗಾಗಿ ಆಯೋಜಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಯಕ್ಷಗಾನವೂ ಒಂದಾಗಿತ್ತು ಅದೂ ಕೂಡಾ ಪ.ಗೋ ಸಾರಥ್ಯದಲ್ಲಿ.

ಈ ಗಣ್ಯರಿಗಾಗಿ ದಕ್ಷಯಜ್ಞ ಯಕ್ಷಗಾನ ಪ್ರದರ್ಶನ ಮಾಡುವ ಅವಕಾಶ, ಆದರೆ ಇದು ಕೇವಲ 10 ನಿಮಿಷಗಳ ಅವಧಿಯದ್ದು. ಒಂದು ಯಕ್ಷಗಾನ ಪ್ರಸಂಗವನ್ನು ಕನಿಷ್ಟ 2 ಗಂಟೆಗಾದರೂ ಪರಿಷ್ಕರಿಸಬಹುದು, ಆದರೆ ಕೇವಲ ಹತ್ತು ನಿಮಿಷಗಳ ಅವಧಿಯಲ್ಲಿ ಯಕ್ಷಾಗನ ಕಲೆಯನ್ನು ಹಾಡು, ಕುಣಿತ, ವೇಷಭೂಷಣ, ಕಥಾವಸ್ತು ಎಲ್ಲವನ್ನೂ ಅಳವಡಿಸಿ ತೋರಿಸುವುದೂ ಊಹೆಗೂ ನಿಲುಕದ ಸಂಗತಿ. ಆದರೆ ಈ ಸವಾಲನ್ನೂ ಪ.ಗೋ ಒಪ್ಪಿಕೊಂಡರಂತೆ.

ಆ ರಸ ಸಂಜೆಯಲ್ಲಿನ ಕಾರ್ಯಕ್ರಮಗಳಲ್ಲಿ 10 ನಿಮಿಷದ ಕಾಲಾವಧಿ ವೀಣೆ ದೊರೆಸ್ವಾಮಿಯವರ ಪಂಚವೀಣಾವಾದನಕ್ಕೂ, ಜೌಡಯ್ಯನವರ ಪಿಟೀಲಿಗೂ ದೊರಕಿದ್ದು. ಹಾಗಿರುವಾಗ ಅಂಥ ಮೇಧಾವಿ ಕಲಾವಿದರಿಗೆ ಸಿಕ್ಕಿದಷ್ಟೇ ಸಮಯ ಯಕ್ಷಗಾನಕ್ಕೂ ಸಿಕಿತು ಎಂದ ಪ.ಗೋ ಹೇಗೆ ಅಲ್ಲೂ ಮಿಂಚಿದರು ಎನ್ನುವುದನ್ನು ಪೆರುವೋಡಿಯವರೇ ಬರೆದಿರುವ ಸಾಲುಗಳಲ್ಲಿದೆ ನೋಡಿ.

ಗೋಪಾಲಕೃಷ್ಣನಿಗಿದ್ದ ಸಿನಿಮಾ ತಯಾರಿಕೆಯ ಅನುಭವದಿಂದ ಒಂದು ಕ್ಷಣವನ್ನೂ ವ್ಯರ್ಥಗೊಳಿಸದೆ ಹತ್ತೇ ನಿಮಿಷಗಳ ಕಾಲಾವಧಿಯಲ್ಲಿ ದಕ್ಷಯಜ್ಞ ಕಥಾ ಭಾಗದ ಪ್ರಮುಖ ಘಟನೆಯನ್ನು ಆಡಿ ತೋರಿಸುವುದು ಸಾಧ್ಯವಾಯಿತು- ಅಷ್ಟೇ ಅಲ್ಲದೆ ಆಟದ ಪ್ರದರ್ಶನವನ್ನು ನೋಡಿ ವಿದೇಶೀ ಅತಿಥಿಗಳೂ, ಸಾವಿರಾರು ಪ್ರೇಕ್ಷಕರೂ ಸಂತೋಷ ಭರಿತರಾದರು. ವಿಠಲ ಶಾಸ್ತ್ರಿಗಳು ಈಶ್ವರನ ಪಾತ್ರದಲ್ಲಿ, ಕೋಳ್ಯೂರು ರಾಮಚಂದ್ರ ಪಾರ್ವತಿಯಾಗಿ, ಬಣ್ಣದ ಮಾಲಿಂಗ ವೀರಭದ್ರನಾಗಿ ನೀಡಿದ ಅಭಿನಯ, ಆ ಚೆಂಡೆಮದ್ದಲೆ, ತಾಳ-ಚಕ್ರತಾಳಗಳ ಹಿಮ್ಮೇಳ, ದೀವಟಿಗೆ, ದೊಂದಿ-ರಾಳದ ಹುಡಿಹಾರಿಸಿದ ಕುಣಿತ ಅದ್ಬುತವಾಗಿತ್ತು. ಅತಿಥಿ ಕ್ರುಶ್ಚೇವ್ ಕುಳಿತಲ್ಲಿಂದ ಎದ್ದು ರಂಗಸ್ಥಳದ ಮೇಲೆ ಬಂದು ಕಲಾವಿರ ಕೈಕುಲುಕಿ ಅಭಿನಂದಿಸಿದರು. ಫೋಟೋ ತೆಗೆಸಿದರು. (ದಿನಾಂಕ 29-11-55ರ ತಾಯಿನಾಡು ದಿನ ಪತ್ರಿಕೆಯಲ್ಲಿ ಈ ಚಿತ್ರ ಪ್ರಕಟವಾಯಿತು.)

ಇದು ಪ.ಗೋ ಅವರಿಗಿದ್ದ ಅದ್ಭುತವಾದ ಕಲ್ಪನಾಶಕ್ತಿ ಮತ್ತು ಅದನ್ನು ಸಾಕಾರಗೊಳಿಸುವ ಚತುರತೆಯೆನ್ನದಿರಲು ಸಾಧ್ಯವೇ ?..ಪ.ಗೋ ಅಂದು ಮಾಡಿದ ಮೊದಲ ಸಾಹಸವೇ ಬೆಂಗಳೂರು, ಮೈಸೂರು ಆದಿಯಾಗಿ ಈಗಲೂ ಜಿಲ್ಲೆಯ ಹೊರಗೆ ಯಕ್ಷಗಾನ ಕಲೆ ಪ್ರದರ್ಶನವಾಗುವುದಕ್ಕೆ ಭೂಮಿಕೆಯಾಯಿತು ಎನ್ನುವುದೂ ಕೂಡಾ ನಿರಾಕರಿಸಲಾಗದ ಸತ್ಯ. ನಂತರ ಪ.ಗೋ ನೇತೃತ್ವದಲೇ ದೆಹಲಿಯಲ್ಲಿ ಯಕ್ಷಗಾನ ಪ್ರದರ್ಶನ ನಡೆಯಿತು ಎನ್ನುವುದು ಇತಿಹಾಸದಲ್ಲಿ ಹೂತುಹೋಗಿರುವ ಸತ್ಯ.

ಪ.ಗೋ ಅವರ ವ್ಯಕ್ತಿತ್ವವನ್ನು ಅಕ್ಷರಗಳಲ್ಲಿ ಹಿಡಿಟ್ಟುಕೊಡಲು ನಿಜಕ್ಕೂ ಕಷ್ಟವಾಗುತ್ತದೆ ಯಾಕೆಂದರೆ ಅವರನ್ನು ಅವರ ಪ್ರತಿಭೆಯನ್ನು ಸೀಮಿತಗೊಳಿಸುವುದಕ್ಕೆ ಸಾಧ್ಯವಾಗದಿರುವುದಕ್ಕೆ. ಅವರಿಗಿದ್ದ ಯಕ್ಷಗಾನ ಕಲೆಯ ಅನುಭವನ್ನು ಗಮನಿಸಿದರೆ ಒಬ್ಬ ಪತ್ರಕರ್ತ ಹೀಗೂ ಇರಬಲ್ಲನೇ ಎನ್ನುವ ಅಚ್ಚರಿಯಾಗದಿರದು. ಅಂಥ ಕೌತುಕಗಳ ಹಿರಿಜೀವ ನನ್ನೊಂದಿಗೆ ಅದೆಷ್ಟು ಸಲುಗೆಯಿಂದ ಇದ್ದು ವೃತ್ತಿಯಲಿ ಮುನ್ನಡೆಸಿತು ಎನ್ನುವುದನ್ನು ನಾನು ಮಾತ್ರ ಬಲ್ಲೆ.

Chidambara-Baikampady

-ಚಿದಂಬರ ಬೈಕಂಪಾಡಿ

1 Comment

Write A Comment