ಕರಾವಳಿ

ಮುಂದಿನ ವರ್ಷದ ಜನವರಿ ತಿಂಗಳ ಮೊದಲ ವಾರದಲ್ಲಿ ಸರ್ಕಾರಿ – ಖಾಸಗಿ ಅನುದಾನಿತ ಶಾಲೆಗಳ 7ನೇ ತರಗತಿ ವಿದ್ಯಾರ್ಥಿಗಳಿಗೆ ಅರ್ಹತಾ ಪರೀಕ್ಷೆ : ಸಚಿವ ಕಿಮ್ಮನೆ ರತ್ನಾಕರ

Pinterest LinkedIn Tumblr

kimma

ಬೆಂಗಳೂರು, ಜೂ.8: ಮುಂದಿನ ವರ್ಷದ ಜನವರಿ ತಿಂಗಳ ಮೊದಲ ವಾರದಲ್ಲಿ ರಾಜ್ಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಶಾಲೆಗಳ 7ನೆ ತರಗತಿ ವಿದ್ಯಾರ್ಥಿಗಳಿಗೆ ಕಲಿಕೆಯ ಅರ್ಹತಾ ಪರೀಕ್ಷೆ ನಡೆಸಲಾಗುವುದು. ಇದರಿಂದ ಷೋಷಕರಿಗೆ ತಮ್ಮ ಮಕ್ಕಳ ಕಲಿಕಾ ಸಾಮರ್ಥ್ಯ ಗೊತ್ತಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿಂದು ಕ್ಯಾಂಪಸ್ ಜಿಪ್ ಸಂಸ್ಥೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಜುಕೇಷನ್-2020 ಮೊಬೈಲ್ ಆಪ್ ಬಿಡುಗಡೆ ಮಾಡಿ ಅವರು ಮಾತನಾಡಿದರು. 7ನೆ ತರಗತಿಯ ಐದು ವಿಷಯಗಳಿಗೆ ನೂರು ಅಂಕಗಳಲ್ಲಿ ಈ ಪರೀಕ್ಷೆ ನಡೆಯಲಿದ್ದು, ಉತ್ತೀರ್ಣ ಅಥವಾ ಅನುತ್ತೀರ್ಣ ಇರುವುದಿಲ್ಲ. ಕೇವಲ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಯಾವ ಹಂತದಲ್ಲಿದೆ ಎಂಬುದನ್ನು ಅರಿತುಕೊಳ್ಳುವ ಉದ್ದೇಶದಿಂದ ಈ ಪರೀಕ್ಷೆ ನಡೆಸಲಾಗುವುದು. ಈಗಾಗಲೇ ಇದಕ್ಕೆ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ರಾಜ್ಯಾದ್ಯಂತ ಒಂದೇ ದಿನ ಈ ಪರೀಕ್ಷೆ ಎಲ್ಲಾ ಶಾಲೆಗಳಲ್ಲಿ ಬೆಳಗ್ಗೆ 11ರಿಂದ 1ಗಂಟೆವರೆಗೆ ನಡೆಯಲಿದೆ. ಈಗ ಒಂದರಿಂದ 10ನೆ ತರಗತಿವರೆಗೆ ವಿದ್ಯಾರ್ಥಿಗಳು ನೇರವಾಗಿ ಉತ್ತೀರ್ಣಗೊಳ್ಳುತ್ತಿರುವುದರಿಂದ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ, ಬರವಣಿಗೆ ಸಾಮರ್ಥ್ಯ ಪೋಷಕರಿಗೆ ತಿಳಿಯುತ್ತಿಲ್ಲ. ಎಸ್ಸೆಸ್ಸೆಲ್ಸಿಯಲ್ಲಿ ಇದು ಗೊತ್ತಾಗುತ್ತದೆ. ಇದಕ್ಕೂ ಮೊದಲು 7ನೆ ತರಗತಿಯಲ್ಲಿ ಅವರ ಕಲಿಕಾ ಸಾಮರ್ಥ್ಯವನ್ನು ತಿಳಿದರೆ ಅವರಿಗೆ ವಿಶೇಷ ತರಗತಿ ಮೂಲಕ ಕಲಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಎಲ್ಲಾ ವಿಷಯಗಳಲ್ಲೂ ಅರ್ಹತಾ ಪರೀಕ್ಷೆ ನಡೆಯಲಿದೆ. ಇದು ಅಂತಿಮ ಪರೀಕ್ಷೆಯ ಎರಡು ತಿಂಗಳು ಮೊದಲು ನಡೆಯುತ್ತದೆ. ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳ ಷೋಷಕರೊಂದಿಗೆ ಚರ್ಚಿಸಿ ಅವರಿಗೆ ವಿಶೇಷ ತರಗತಿ ನಡೆಸಲಿದ್ದಾರೆ ಎಂದು ತಿಳಿಸಿದರು. ವಿದೇಶದಲ್ಲಿ ವೈದ್ಯರು, ಶಿಕ್ಷಕರ ಅರ್ಹತಾ ಸಾಮರ್ಥ್ಯವನ್ನು ಎರಡು ವರ್ಷಕ್ಕೊಮ್ಮೆ ನಡೆಸಲಾಗುತ್ತದೆ. ಆದರೆ ನಮ್ಮಲ್ಲಿ ಅಂತಹ ಯಾವುದೇ ಪದ್ಧತಿಗಳಿಲ್ಲ. ಇಂದಿನ ಮುಂದುವರಿದ ಶಿಕ್ಷಣ ವ್ಯವಸ್ಥೆಗೆ ಮಕ್ಕಳನ್ನು ಸಜ್ಜುಗೊಳಿಸಬೇಕಾದುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕಿವಿಮಾತು ಹೇಳಿದರು.

ಶಿಕ್ಷಕರಿಗೆ ಅರ್ಹತಾ ಪರೀಕ್ಷೆ ನಡೆಸುವ ಕುರಿತು ಅಂತಿಮ ನಿರ್ಧಾರವಾಗಿಲ್ಲ. ಒಂದು ವೇಳೆ ಪರೀಕ್ಷೆ ನಡೆದರೂ ಕೂಡ ಅದರ ಆಧಾರದ ಮೇಲೆ ಯಾವುದೇ ವರ್ಗಾವಣೆ, ಇನ್‌ಕ್ರಿಮೆಂಟ್‌ಗಳು ಇರುವುದಿಲ್ಲ. ಕೇವಲ ಅರ್ಹತೆ ಮಾಪನಕ್ಕಾಗಿ ಮಾತ್ರ ಪರೀಕ್ಷೆ ನಡೆಸಲಾಗುವುದು ಎಂದರು.

ಬದಲಾವಣೆ ಸಹಜ ಪ್ರಕ್ರಿಯೆ: ಜಗತ್ತಿನಲ್ಲಿ ಬದಲಾವಣೆ, ಪರಿವರ್ತನೆ ಸಹಜ ಪ್ರಕ್ರಿಯೆಗಳಾಗಿವೆ. ಇವುಗಳಿಗೆ ನಾವು ಕೂಡ ತೆರೆದುಕೊಳ್ಳಬೇಕು. ಶಿಕ್ಷಣ ಕ್ಷೇತ್ರದಲ್ಲೂ ಈ ಬದಲಾವಣೆ ಅನಿವಾರ್ಯ. ಐವರು ಇಂಜಿನಿಯರ್‌ಗಳು ಸೇರಿ ಮುಂದಿನ 2020ರ ಸಂದರ್ಭದಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಹೇಗಿರಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ರೂಪಿಸಿರುವ ಮೊಬೈಲ್ ಆಪ್ ಉತ್ತಮವಾಗಿದೆ. ಇವರ ಕೆಲಸ ಶ್ಲಾಘನೀಯ ಎಂದರು.

ಈ ಆಪ್‌ಅನ್ನು ಸರ್ಕಾರಿ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಬಳಸಿಕೊಳ್ಳಲು ನಿರ್ಧಾರ ತೆಗೆದುಕೊಳ್ಳಲಾಗುವುದು. ಪೋಷಕರು, ಶಿಕ್ಷಕರ ಪ್ರತಿಕ್ರಿಯೆ ಆಧರಿಸಿ ಅದನ್ನು ವಿಸ್ತರಣೆ ಮಾಡಲು ಪರಿಶೀಲಿಸುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸ್ಥಾಪಕ ಚೇತನ್ ರಾಜ್, ಮುಖಂಡರಾದ ಸಂಪತ್, ಗಿರೀಶ್, ಮಹಾಂತೇಶ್ ಮತ್ತಿತರರು ಹಾಜರಿದ್ದರು.

Write A Comment