ಕರಾವಳಿ

ಚಿದು ಬರೆಯುವ ಪ.ಗೋ ಸರಣಿ-5: ಒಂದೇ ಪ್ರಶ್ನೆಗೆ ಕ್ಲೀನ್ ಬೌಲ್ಡ್

Pinterest LinkedIn Tumblr

telecom press conference

ಬ್ರಾಹ್ಮಣ ಬಂಡಾಯ ಡಾ.ಗುಂಡ್ಮಿ ಚಂದ್ರಶೇಖರ ಐತಾಳ ಅವರ ಕವನ ಸಂಕಲನ. ಅವರ ಕವನ ಸಂಕಲನ ಶೀರ್ಷಿಕೆಯಲ್ಲೇ ಅವರ ಆಕ್ರೋಷ ಗುರುತಿಸಬಹುದಾಗಿತ್ತು. ಇಂಥ ಒಂದು ವಿಪ್ಲವನನ್ನು ಪ.ಗೋ ನಿರೀಕ್ಷೆ ಮಾಡಿದ್ದರು. ಕನ್ನಡ ವಿಭಾಗದಲ್ಲಿ ಬೇಗುದಿಯ ಅರಿವಿರದ ನನಗೆ ಪ.ಗೋ ವಿವರಿಸಿ ಕಣ್ಣು ತೆರೆಸಿದರು.

ಕೆಳ ಸಮುದಾಯದ ಮೇಲೆ ಗುಂಡ್ಮಿ ಅವರಿಗೆ ಅಸಹನೆಯಿತ್ತೋ ಅಥವಾ ಅದು ಅವರ ಆ ಕ್ಷಣದ ಪ್ರತಿಕ್ರಿಯೆಯೋ ಗೊತಿಲ್ಲ, ಆದರೆ ಒಂದು ಕವನ ಸಂಕಲನ ಉಂಟುಮಾಡಿದ ಸಂಚಲನವನ್ನು ಅಲ್ಲಗಳೆಯುವಂತಿಲ್ಲ.

ಬ್ರಾಹ್ಮಣ ಬಂಡಾಯ ಕವನ ಸಂಕಲನಕ್ಕೆ ವ್ಯಾಪಕ ಪ್ರಚಾರ ಸಿಕ್ಕಿತು, ಏನೋ ಕುತೂಹಲ . ಏನಿದು ಬ್ರಾಹ್ಮಣ ಬಂಡಾಯ ಎನ್ನುವ ತವಕದಿಂದಲೇ ಕೃತಿಯನ್ನು ಜನ ಮುಗಿಬಿದ್ದು ಖರೀದಿಸುತ್ತಿದ್ದರು. ಈ ಕವನ ಸಂಕಲನದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಒಳ್ಳೆಯ ಟೇಸ್ಟ್ ನವಲ್ಲ. ಕೆಳವರ್ಗದ ಜನರನ್ನು ಕಟುವಾಗಿ ನಿಂದಿಸಿದ್ದು ಮಾತ್ರವಲ್ಲ ಇದರ ವಿರುದ್ಧ ಜನ ಬೀದಿಗಿಳಿಯುವ ಅನಿವಾರ್ಯತೆಯನ್ನು ಉಂಟು ಮಾಡಿತ್ತು.

ಆ ಕಾಲದಲ್ಲಿ ಡಾ.ಪುರುಷೋತ್ತಮ ಬಿಳಿಮಲೆ ಬಿಸಿರಕ್ತದ ತರುಣ ಅಧ್ಯಾಪಕರು. ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಶಿಕ್ಷಕ ಗುಂಡ್ಮಿ ಅವರು ಕೆಳಜಾತಿಯವರನ್ನು ಬ್ರಾಹ್ಮಣ ಬಂಡಾಯ ಕೃತಿಯಲ್ಲಿ ಕೀಳಾಗಿ ಚಿತ್ರಿದ್ದಾರೆಂದೂ ಈ ಪುಸ್ತಕವನ್ನು ಮುಟ್ಟುಗೋಲು ಹಾಕಬೇಕು ಮತ್ತು ಅವರನ್ನು ಬಂಧಿಸಬೇಕೆಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು

ಡಾ.ಅರವಿಂದ ಮಾಲಗತ್ತಿ, ಡಾ.ಕೇಶವ ಶರ್ಮಾ ಕೂಡಾ ಬ್ರಾಹ್ಮಣ ಬಂಡಾಯದ ವಿರುದ್ಧ ಸಿಡಿದರು. ಪೊಲೀಸ್ ಇಲಾಖೆ ಮುಸ್ಸಂಜೆ ಹೊತ್ತಿಗೇ ಕಾರ್ಯಾಚರಣೆಗಿಳಿದು ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡು ಕೇಸ್ ಜಡಿದರು.

ಇಂಥ ಸುದ್ದಿಯನ್ನು ಯಾರು ತಾನೆ ಸಪ್ರೆಸ್ ಮಾಡಲು ಬಯಸುತ್ತಾರೆ. ಕೂಡಲೇ ಪ.ಗೋ ಅವರಿಗೆ ಫೋನಾಯಿಸಿ ಬ್ರಾಹ್ಮಣ ಬಂಡಾಯದ ಮಾಹಿತಿ ಬೇಕೆಂದು ಕೇಳಿದ್ದಲ್ಲದೇ ತಕ್ಷಣ ಆಫೀಸಿಗೆ ಬಂದರೆ ಕೆಲಸ ಮುಗಿಸಿದ ಮೇಲೆ ನಾನೂ ನಿಮ್ಮ ಮನೆಗೆ ಬರುತ್ತೇನೆ ಎಂದೆ.

ಪ.ಗೋ ಅವರಿಗೆ ನಾನು ಮನೆಗೆ ಬರುತ್ತೇನೆ ಅಂದರೆ ಬಹಳ ಖುಷಿ. ಯಾಕೆಂದರೆ ಮನೆಯಲ್ಲಿ ಅವರು ಮತ್ತು ಪತ್ನಿ ಮಾತ್ರ. ಮಾತನಾಡಲು ಬೇರೆ ಯಾರೂ ಇಲ್ಲ. ಪತ್ನಿ ಜೊತೆಗೆ ವೃತ್ತಿಗೆ ಸಂಬಂಧಿಸಿ ಹೇಳಿಕೊಳ್ಳುತ್ತಿದ್ದರೋ ಏನೋ ಆದರೆ ರಾತ್ರಿಯೆಲ್ಲ ಇವರ ರಾಮಾಯಣ ಕೇಳಿಸಿಕೊಳ್ಳುವವರಂತೂ ಅಲ್ಲ. ನಾನು ಅವರಿಗೆ ಮಿಕ ಸಿಕ್ಕಂತೆ ಅಂದುಕೊಂಡರೂ ಹಾಗೆ ಅವರ ಮನೆಯಲಿ ಕಳೆಯುತ್ತಿದ್ದ ರಾತ್ರಿಗಳಿಂದ ನಾನು ನನ್ನ ವೃತ್ತಿಯಲ್ಲಿ ಪಕ್ವತೆ ಕಂಡುಕೊಳ್ಳಲು ಸಾಧ್ಯವಾಗುತ್ತಿತ್ತು ಎನ್ನುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.

ಯಾಕೆಂದರೆ ಪ.ಗೋ ಪತ್ರಿಕೆಯಲ್ಲಿ ನಾನು ಬರೆದ ಸುದ್ದಿಯನ್ನು ಓದಿ ಅದನ್ನು ಹೀಗೆ ಬರೆದಿದ್ದರೆ ಹೇಗಿರುತ್ತಿತ್ತು ಮತ್ತು ಯಾಕೆ ಎನ್ನುವ ವರದಿಗಾರಿಕೆಯ ಪಾಠ ಮಾಡುತ್ತಿದ್ದರು. ತಮಗೆ ಆಗದವರ ಬಗ್ಗೆ ಅಥವಾ ಅವರ ವರದಿಯ ಬಗ್ಗೆ ಚಕಾರ ಎತ್ತುತ್ತಿರಲಿಲ್ಲ. ಮತ್ತೆ ಮತ್ತೆ ಕಾಡಿದರೆ ನಿನ್ನ ಮಂಡೇಗೆ ಬಡೀತೇನೆ. ದೊಡ್ಡವರ ವಿಷಯ ನಮಗೆ ಬೇಡ ಎಂದಷ್ಟೇ ಹೇಳಿ ವಿಷಯಾಂತರ ಮಾಡುತ್ತಿದ್ದರು.

ಪ.ಗೋ ಬ್ರಾಹ್ಮಣ ಬಂಡಾಯದ ಒಳನೋಟ ಕೊಡಲು ಕಚೇರಿಗೆ ಬಂದವರೇ ನಾನು ಬರೆದಿದ ಸುದ್ದಿಯ ಮೇಲೆ ಕಣ್ಣಾಡಿಸಿ ನನ್ನಿಂದಲೇ ಕೆಲವು ತಿದ್ದುಪಡಿ ಮಾಡಿಸಿದರು.

ಬ್ರಾಹ್ಮಣ ಬಂಡಾಯದಲ್ಲಿನ ಕವನಗಳು ಆಕ್ಷೇಪಾರ್ಹವಾಗಿವೆ. ವಿ.ವಿಯಲ್ಲಿರುವವರು ಇಂಥ ಸಂಕಲನ ತಂದಿರುವುದು ಶೋಭೆಯಲ್ಲವೆಂದರು. ಈ ಕವನ ಸಂಕಲನಕ್ಕೆ ಪ್ರೇರಣೆ ದಲಿತ ಮತ್ತು ಬಲಿತರ ನಡುವಿನ ಅಧಿಕಾರದ ಕಸರತ್ತು ಎನ್ನುವ ಒಳಸುಳಿಯನ್ನು ಪ.ಗೋ ಬಿಡಿಸಿಟ್ಟರು. ಆದರೆ ಆಗ ಈ ವಿಚಾರವನ್ನು ಬರೆಯುವುದು ಬೇಡವೆಂದು ಹೇಳಿದರು.

ಬ್ರಾಹ್ಮಣ ಬಂಡಾಯದಿಂದಾಗಿ ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ. ನೀನು ವಿವರವಾಗಿ ಒಳಸುಳಿಯನ್ನು ಬರೆದರೆ ಮತ್ತೆ ಅನುಕಂಪ ಬ್ರಾಹ್ಮಣ ಬಂಡಾಯಕ್ಕೆ ಬರಬಹುದು. ಈಗ ಪೊಲೀಸ್ ಏನು ಕ್ರಮ ಜರಗಿಸುತ್ತಾರೆ ಅದನ್ನು ಮಾತ್ರ ಬರಿ ಎಂದವರೇ ತಾವೂ ನನ್ನ ಕಚೇರಿಯಲ್ಲೇ ಕುಳಿತು ಬ್ರಾಹ್ಮಣ ಬಂಡಾಯದ ಕುರಿತು ವರದಿ ತಯಾರಿಸಿದರು. ಆ ಕಾಲದಲ್ಲಿ ಮಂಗಳೂರು ಹೆಡ್ ಪೋಸ್ಟ್ ಆಫೀಸ್ ನಲ್ಲೇ ಪತ್ರಕರ್ತರಿಗೆ ಒಂದು ಕೋಣೆಯಿತ್ತು. ಅಲ್ಲೇ ಕುಳಿತು ಸುದ್ದಿ ಬರೆದು, ಟೈಪ್ ಮಾಡಿ ಟೆಲೆಕ್ಸ್ ಮಾಡುವ ಸೌಕರ್ಯವಿತ್ತು. ಪ.ಗೋ ಬ್ರಾಹ್ಮಣ ಬಂಡಾಯ ಸುದ್ದಿಯನ್ನು ಟೈಮ್ಸ್ ಪತ್ರಿಕೆಗೆ ಹೊತ್ತು ಹಾಕಲು ಪಾಂಡೇಶ್ವರಕ್ಕೆ ತೆರಳಿದರು. ನಾನು ಮುಂಗಾರು ಪ್ರೆಸ್ ಗೆ ಕೊನೆಯ ಸುದ್ದಿಯನ್ನು ಪಾರ್ಸೆಲ್ ಮಾಡಿ 2 ಸಿ ಬಸ್ಸಿಗೆ ಕೊಡಲು ಅಟೆಂಡರ್ ಗೆ ಒಪ್ಪಿಸಿ ಕಚೇರಿಗೆ ಬೀಗ ಹಾಕಿ ಪ.ಗೋ ಅವರಿಗಾಗಿ ಕಾದು ಕುಳಿತೆ.

ಸ್ವಲ್ಪ ಹೊತ್ತಿನ ಬಳಿಕ ಬಂದ ಪ.ಗೋ ಸ್ಕೂಟರ್ ಹತ್ತಿ ಕಾಟೇಜ್ ಗೆ ತೆರಳಿ ರಾತ್ರಿಯೆಲ್ಲಾ ಬ್ರಾಹ್ಮಣ ಬಂಡಾಯದ್ದೇ ಪಾಠ ಮಾಡಿದರು. ಅವರ ಊಹೆಗಳು ಅದೆಷ್ಟು ನಿಜ ಎನ್ನುವುದಕ್ಕೆ ಕನ್ನಡ ವಿಭಾಗದಲ್ಲಿ ಆದ ಬದಲಾವಣೆಗಳೇ ಸಾಕ್ಷಿ. ಮುಂದೆ ಮಂಗಳೂರು ವಿ.ವಿ.ಕಾಲೇಜಿನಲ್ಲಿದ್ದ ಡಾ.ಅರವಿಂದ ಮಾಲಗತ್ತಿ ಕಾಲಕ್ರಮೇಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗಕ್ಕೆ ಬಂದರು. ಕೇಶವ ಶರ್ಮಾ, ಡಾ.ಬಿಳಿಮಲೆ ಅಲ್ಲಿಂದ ನಿರ್ಗಮಿಸಿದರು. ಇವೆಲ್ಲವೂ ಬ್ರಾಹ್ಮಣ ಬಂಡಾಯದ ನಂತರದ ದಿನಗಳಲ್ಲಿ ನಡೆದುಹೋದ ಬೆಳವಣಿಗೆಗಳು. ಇಂಥ ಸಾಧ್ಯತೆಗಳನ್ನು ಮುಂಚಿತವಾಗಿ ಊಹಿಸುವಂಥ ಮುನ್ನೋಟದ ಪತ್ರಕರ್ತ ಪ.ಗೊ ಆಗಿದ್ದರು, ಅದನ್ನು ನನ್ನಂಥ ಕಿರಿಯನಿಗೂ ಹೇಳಿಕೊಡುತ್ತಿದ್ದರು.

ವರದಿಗಾರಿಕೆ ಗುಮಾಸ್ತಗಾರಿಕೆಯಲ್ಲ ಎನ್ನುವುದು ವಡ್ಡರ್ಸೆ ರಘುರಾಮ ಶೆಟ್ಟಿಯವರ ಥಿಯರಿ. ವಾಚ್ ನೋಡಿ ಕೆಲಸ ಮಾಡಬಾರದು ಎನ್ನುವುದು ಅವರ ಮತ್ತೊಂದು ಸಂದೇಶ. ಪ.ಗೋ ಅವರ ಬಹುಮುಖ್ಯ ಟಿಪ್ಸ್ ಅಂದರೆ ವರದಿಗಾರಿಕೆಗೆ ಹೋಗುವ ಮುನ್ನ ನೀನು ಮಾನಸಿಕವಾಗಿ ಎಷ್ಟರಮಟ್ಟಿಗೆ ಸಿದ್ಧವಾಗುತ್ತಿ ಎನ್ನುವುದೇ ಮುಖ್ಯ.

ವಿಶ್ವವಿದ್ಯಾನಿಲಯಗಳಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಇಂಥ ಪಾಠ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ಪ.ಗೋ ಕಾಟೇಜ್ ನಲ್ಲಿ ರಾತ್ರಿ ಹೊತ್ತು ದೀಪ ಆರಿಸಿ ಚಾಪೆ ಮೇಲೆ ಮಲಗಿದರೆ ಕತ್ತಲೆಯಲ್ಲಿ ಅವರ ಸ್ವರ ಮಾತ್ರ ಕೇಳುತ್ತಿತ್ತು, ಅದು ಕೇವಲ ಮಾತಾಗಿರಲಿಲ್ಲ ನನಗೆ ಪತ್ರಿಕಾ ವರದಿಗಾರಿಕೆಯ ಪಾಠವಾಗಿರುತ್ತಿತ್ತು.

ಸಾಮಾನ್ಯವಾಗಿ ಪತ್ರಕರ್ತರು ಅಂದರೆ ಕಾರ್ಯಕ್ರಮದ ವರದಿಗೆ ಹೋಗುವಾಗ ಆಹ್ವಾನ ಪತ್ರಿಕೆ ಹಿಡಿದುಕೊಂಡು ಬರೆಯಲು ಪ್ಯಾಡ್, ಪೆನ್ನು ತೆಗೆದುಕೊಂಡು ಹೋದರಾಯಿತು ಎನ್ನುವುದಷ್ಟೇ ಕಲ್ಪನೆ. ಆದರೆ ಇದು ಹೀಗಲ್ಲ ಒಬ್ಬ ವರದಿಗಾರ ಒಂದು ಕಾರ್ಯಕ್ರಮಕ್ಕೆ ಹೋಗುವ ಮೊದಲು ಮಾನಸಿಕವಾಗಿ ಸಿದ್ದನಾಗಬೇಕು. ನಾನು ಯಾವ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ, ಅದಕ್ಕೆ ಯಾರೆಲ್ಲ ಬರುತ್ತಾರೆ, ಯಾರ ಭಾಷಣ ಮುಖ್ಯವಾಗುತ್ತದೆ, ಯಾರು ಏನು ಮಾತನಾಡಬಹುದು ಇತ್ಯಾದಿ ವಿಚಾರಗಳನ್ನು ಆಹ್ವಾನ ಪತ್ರಿಕೆಯನ್ನು ನೋಡಿಯೇ ಪೂರ್ವ ನಿರ್ಧಾರಕ್ಕೆ ಬರಬೇಕು.

ಒಂದು ಪತ್ರಿಕಾಗೋಷ್ಠಿಗೆ ಹೋಗುವಾಗ ಅದು ಯಾರ ಪತ್ರಿಕಾಗೋಷ್ಠಿ, ಏನು ಮಾತನಾಡಬಹುದು?, ನಾನು ಏನು ಪ್ರಶ್ನೆ ಕೇಳಬೇಕು ?, ಅದಕ್ಕೆ ಅವರಿಂದ ಯಾವ ರೀತಿಯ ಉತ್ತರ ಬರಬಹುದು?, ಅದಕ್ಕೆ ಪ್ರತಿಯಾಗಿ ಏನು ಕೇಳಬಹುದು ? ಇತ್ಯಾದಿ ಇತ್ಯಾದಿಗಳು. ಪ.ಗೋ ಭಾಷೆಯಲ್ಲೇ ಹೇಳುವುದಾದರೆ ವರದಿಗಾರ ವರದಿಗಾರಿಕೆಗೆ ಹೋಗುವ ಮೊದಲು ಹೋಮ್ ವರ್ಕ್ ಮಾಡಿಕೊಳ್ಳಬೇಕು.

ಇಂಥ ಹೋಮ್ ವರ್ಕ್ ಮಾಡಿಕೊಂಡು ಪತ್ರಿಕಾಗೋಷ್ಠಿಗೆ ಹೋದಾಗ ಎದುರಾಳಿ ಎಷ್ಟೇ ಚತುರನಾದರೂ ನಾವು ಕಟ್ಟಿ ಹಾಕಬಹುದು ಮತ್ತು ಅವನನ್ನು ಸಿಕ್ಕಿಸಿ ಹಾಕಬಹುದು. ಪ.ಗೋ ಪ್ರಕಾರ ಡಿಕ್ಟೇಷನ್ ತೆಗೆದುಕೊಳ್ಳಲು ವರದಿಗಾರನೇ ಬೇಕಾಗಿಲ್ಲ, ಟೈಪಿಸ್ಟ್, ಕ್ಲಾರ್ಕ್ ಕೂಡಾ ಸಾಕಾಗುತ್ತದೆ ಎನ್ನುತ್ತಿದ್ದರು. ಇದನ್ನೇ ವಡ್ಡರ್ಸೆ ಗುಮಾಸ್ತನ ಕೆಲಸ ಎನ್ನುತ್ತಿದ್ದುದು. ತಲೆ ಬಗ್ಗಿಸಿ ದುಡಿಯುವುದು ಗುಮಾಸ್ತಗಿರಿ ಹೊರತು ಪತ್ರಿಕಾವೃತ್ತಿಯಲ್ಲ ಎನ್ನುತ್ತಿದ್ದ ವಡ್ಡರ್ಸೆ ಮತ್ತು ಹೋಮ್ ವರ್ಕ್ ಮಾಡಿಕೊಂಡು ಹೋಗಬೇಕು ಎನ್ನುವ ಪ.ಗೋ ಥಿಯರಿ ವೃತ್ತಿಯನ್ನು ಗಂಭೀರವಾಗಿ ಪರಿಗಣಿಸುವವರಿಗೆ ಅದೆಷ್ಟು ಉಪಯುಕ್ತ ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದು.

ಇಂಥ ಪಾಠ ಹೇಳಿಸಿಕೊಂಡು ಮರುದಿನ ಒಂದು ಪತ್ರಿಕಾಗೋಷ್ಠಿಗೆ ಹೋಗಿ ಕಿಕ್ಕಿರಿದು ತುಂಬಿದ್ದ ಹೊಟೇಲ್ ವುಡ್ ಸೈಡ್ ಹಾಲ್ ಪತ್ರಿಕಾಗೋಷ್ಠಿಯಲ್ಲಿ ನಾನು ಕೇಳಿದ ಪ್ರಶ್ನೆಗಳು ಸಂಚಲನ ಮೂಡಿಸಿದ್ದು ಮಾತ್ರವಲ್ಲ ಸಂಘಟಕರು ಕ್ಲೀನ್ ಬೌಲ್ಡ್. ಮರುದಿನದಿಂದ ಯಾವ ಪತ್ರಿಕಾಗೋಷ್ಠಿಗೆ ಹೋದರೂ ನಾನೇನು ಕೇಳುತ್ತೇನೆ ಎನ್ನುವುದೇ ಪತ್ರಿಕಾಗೋಷ್ಠಿ ಆಯೋಜಿಸುತ್ತಿದ್ದವರ ಮತ್ತು ಸುತ್ತಲೂ ಕುಳಿತವರ ಕುತೂಹಲವಾದರೆ ರಾಜಕಾರಣಿಗಳು ಹತ್ತಿರದ ದೋಸ್ತ್ ಗಳಾಗಿ ಖಡಕ್ ಪ್ರಶ್ನೆ ಕೇಳಬೇಡಿ ಎನ್ನುವ ಮನವಿ ಮಾಡುವ ಹಂತಕ್ಕೆ ತಂದು ನಿಲ್ಲಿಸಿದವು.

ಆ ಪ್ರಶ್ನೆಯ ಹಿಂದಿದ್ದವರು ಪ.ಗೋ. ಅವರು ಕೇಳಬೇಕಾಗಿದ್ದ ಪ್ರಶ್ನೆಗಳನ್ನು ಪಾಠ ಮಾಡಿ ನನ್ನಿಂದ ಕೇಳಿಸಿದರು, ಮಯ್ಯ, ನರಸಿಂಹರಾವ್, ಉಭಯರಿಗೂ ಸೋಜಿಗ ನನ್ನ ದಿಢೀರ್ ಪ್ರಶ್ನೆಗಳ ಬೌಂಡರಿ, ಸಿಕ್ಸರ್ ಗೆ ಪತ್ರಿಕಾಗೋಷ್ಠಿ ಕರೆದವರೇ ಕಕ್ಕಾಬಿಕ್ಕಿ. ಪತ್ರಿಕಾಗೋಷ್ಠಿ ಮುಗಿದ ಮೇಲೆ ಭರ್ಜರಿ ಭೋಜನ.

ಆದರೆ ಪ.ಗೋ ಬಿಡಬೇಕಲ್ಲಾ… ಬಾ ಬಾ ಮನೆಗೆ ಹೋಗುವಾ ಸ್ವಾತಿ ಸಾಂಬಾರ್ ಮಾಡಿರ್ತಾಳೆ ಎಂದವರೇ ಬರೆಯುವ ಪ್ಯಾಡ್ ಮಡಚಿ ಕಿಸೆಗೆ ತುರುಕಿ ಸ್ಕೂಟರ್ ಸ್ಟಾರ್ಟ್ ಮಾಡಿದ್ರು ನಾನೂ ಸ್ಕೂಟರ್ ಹತ್ತಿ ರೈಟ್ ಎಂದೆ. ದಾರಿಯುದ್ದಕ್ಕೂ ಪ.ಗೋ ನೀನು ಆ ಪ್ರಶ್ನೆ ಕೇಳಿದ ತಕ್ಷಣ ಎಲ್ಲರ ಮುಖದಲ್ಲೂ ಬೆವರು ಇಳಿದು ಹೋಯ್ತು ಮಾರಾಯ, ಮುಖ ನೋಡಬೇಕಿತ್ತು ಎಂದು ಹೊಟ್ಟೆ ತುಂಬಾ ನಗುತ್ತಲೇ ಸ್ಕೂಟರ್ ಚಲಾಯಿಸಿದರು.

Chidambara-Baikampady
-ಚಿದಂಬರ ಬೈಕಂಪಾಡಿ

Write A Comment