ಕರಾವಳಿ

ಚಿದು ಬರೆಯುವ ಪ.ಗೋ ಸರಣಿ- 4: ಬ್ರಾಹ್ಮಣ ಬಂಡಾಯ

Pinterest LinkedIn Tumblr

Pic of 1991

ಪ.ಗೋ ಅವರಿಗೆ ನೆನಪು ಶಕ್ತಿ ಅಪಾರ. ಯಾವುದೇ ಒಂದು ವಿಚಾರ ಅವರ ತಲೆಯೊಳಗೆ ಆಳಕ್ಕೆ ಬೇರೂರಿದರೆ ಮತ್ತೆ ಅದನ್ನು ಯಾವಾಗ ಬೇಕಿದ್ದರೂ ನೆನಪಿಸಿಕೊಂಡು ಹೇಳುವಂಥ ಸ್ಮರಣಶಕ್ತಿ ಅವರದು. ನಾನು ಮುಂಗಾರು ಪತ್ರಿಕೆಗೆ ಸೇರುವ ಮೊದಲೇ ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದೆ. ಅಂಥ ಲೇಖನಗಳ ಪೈಕಿ ನನ್ನನ್ನು ಒಂದಷ್ಟು ಜನ ಸಂಶಯ ಮತ್ತು ಕೌತುಕದಿಂದ ನೋಡುವಂತೆ ಮಾಡಿತ್ತು.

ಆ ಸಂದರ್ಭದಲ್ಲಿ ( ಸುಮಾರು 1980-81) ದಲಿತ, ಬಂಡಾಯ ಸಾಹಿತ್ಯ ಮತ್ತು ಸಂವೇದನೆಗಳು ಬಹುಚರ್ಚಿತವಾಗುತ್ತಿತ್ತು. ಉದಯವಾಣಿಯಲ್ಲಿ ನಮ್ಮ ಸಮಾಜದಲ್ಲಿ ದಲಿತರು ಯಾರು ? ಎನ್ನುವ ಪ್ರಶ್ನೆಯನ್ನು ಎತ್ತಿದ್ದೆ. ನನ್ನ ದೃಷ್ಠಿಯಲ್ಲಿ ದಲಿತ ಎನ್ನುವುದಕ್ಕೇ ಜಾತಿ ಸೂಚಕವೇ ಆಗಬೇಕಾಗಿಲ್ಲ. ಸಾಮಾಜಿಕ ಮತ್ತು ಆರ್ಥಿಕ ಎರಡೂ ಅನ್ವಯಿಸಿ ದಲಿತ ಎನ್ನುವುದನ್ನು ಗಣನೆಗೆ ತೆಗೆದುಕೊಳ್ಳುವುದು ಅಪರಾಧವಲ್ಲ. ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದ ಬ್ರಾಹ್ಮಣರು ಎಷ್ಟೋ ಜನರಿದ್ದಾರೆ. ಅವರು ಜಾತಿಯಲ್ಲಿ ಬ್ರಾಹ್ಮಣ ಎನ್ನುವುದನ್ನು ಬಿಟ್ಟರೆ ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಡುತ್ತಿದ್ದಾರೆ. ಆದ್ದರಿಂದ ಅಂಥ ಆರ್ಥಿಕ ದುಸ್ಥಿತಿಯಲ್ಲಿರುವ ಸಮುದಾಯಗಳನ್ನೂ ದಲಿತ ಎನ್ನುವುದರಲ್ಲಿ ತಪ್ಪೇನು ? ಎನ್ನುವುದು ನನ್ನ ವಾದವಾಗಿತ್ತು.

ನನ್ನ ಈ ವಾದವನ್ನು ಖಂಡತುಂಡವಾಗಿ ವಿರೋಧಿಸಿ ಉದಯವಾಣಿಯಲ್ಲಿ ವಾಚಕರವಾಣಿಯಲ್ಲಿ ದೀರ್ಘವಾದ ಪತ್ರ ಬರೆದು ವಾಚಾಮಗೋಚರವಾಗಿ ಟೀಕಿಸಿದ್ದರು ಸುರತ್ಕಲ್ ವಿದ್ವಾನ್ ವೆಂಕಟ್ರಾಯ ಆಚಾರ್. ನನಗೆ ಅವರ ಪರಿಚಯ ಇರಲಿಲ್ಲ, ಹೆಸರು ಕೇಳಿದ್ದೆ.

ಆಚಾರ್ ಅವರ ಪತ್ರಕ್ಕೆ ಪ್ರತಿಕ್ರಿಯೆ ಬರೆದು ನಾನು ಮತ್ತೆ ನನ್ನ ವಾದವನ್ನು ಮತ್ತೂ ಸಮರ್ಥನೆ ಮಾಡಿಕೊಂಡಿದ್ದೆ ಮಾತ್ರವಲ್ಲ ಅವರನ್ನು ತೀಕ್ಷ್ಣವಾಗಿ ಟೀಕಿಸಿ ನಾನು ನಿಮ್ಮಂತೆ ಪುಸ್ತಕದ ಹುಳು ಅಲ್ಲ. ಜಗತ್ತನ್ನು ತೆರೆದ ಕಣ್ಣಿನಿಂದ ನೋಡಿ, ಸಂಕುಚಿತ ಮನಸ್ಥಿತಿಯಲ್ಲಿದ್ದರೆ ಹೀಗೇ ಆಗುತ್ತದೆ ಎಂದು ಬರೆದೆ. ಅದಕ್ಕೆ ಪ್ರತಿಯಾಗಿ ಆಚಾರ್ ಕೂಡಾ ತಿರುಗೇಟು ನೀಡಿದ್ದರು. ಹೀಗೆ ಸರಣಿ ದೀರ್ಘವಾಗಿ ಬೆಳೆದ ಮೇಲೆ ಉದಯವಾಣಿಯವರು ಈ ಚರ್ಚೆಯನ್ನು ಇಲ್ಲಿಗೆ ಮುಗಿಸಲಾಗಿದೆ ಎಂದು ತೀರ್ಪುಕೊಟ್ಟು ನಮ್ಮ ಬಾಯಿ ಮುಚ್ಚಿಸಿದರು.

ನಂತರ ಚಿತ್ರಾಪುರದ ಪುರುಷೋತ್ತಮ ಟೈಲರ್ ಮೂಲಕ ವೆಂಕಟ್ರಾಯಾಚಾರ್ ನನ್ನನ್ನು ಸುರತ್ಕಲ್ ಸಿಟಿಲಂಚ್ ಹೋಮ್ ಹೊಟೇಲ್ ಗೆ ಕರೆಸಿ ಪರಿಚಯ ಮಾಡಿಕೊಂಡು ಹೌದೇ ನೀನು ಮೂರ್ಖ, ಅಲ್ಲ ಬುದ್ಧಿವಂತ ಹೀಗೆ ಚೆನ್ನಾಗಿ ಬೆನ್ನಿಗೆ ಗುದ್ದಿ ಪ್ರೀತಿ ತೋರಿಸಿ ನಾನೇ ಹಣ ಕೊಟ್ಟು ಕಾಫಿ ಕುಡಿಸುತ್ತೇನೆಂದು ಕಾಫಿ ಕುಡಿಸಿ ಗೆಳೆಯರಾದರು. ಆ ಸ್ನೇಹ ಬಹುಕಾಲ ಇತ್ತು.

ಈ ದಲಿತ ಯಾರು ಎನ್ನುವ ಚರ್ಚೆಯನ್ನು ಪ.ಗೋ ಓದಿದ್ದರು ಮಾತ್ರವಲ್ಲ ನನ್ನ ಮತ್ತು ಆಚಾರ್ಯರ ನಡುವೆ ನಡೆದ ಮಾತಿನ ಸಮರದ ಪದ ಪದಗಳನ್ನೂ ಹೇಳಿದರು. ಇಂಥ ಅಗಾದ ನೆನಪುಶಕ್ತಿಯ ಪ.ಗೋ ನನ್ನನ್ನು ದಲಿತ ಎಂದೇ ಕರೆಯುತ್ತಿದ್ದರು. ನೀನೆ ಹೇಳಿದ್ದಿ ದಲಿತ ಎನ್ನುವುದಕ್ಕೆ ಜಾತಿಯೇ ಮಾನದಂಡವಾಗಬೇಕಿಲ್ಲವೆಂದು ಎಂದು ಹೇಳುತ್ತಿದ್ದರು.

ಅವರ ಮನೆಗೆ ಹೋದಾಗಲೂ ಸ್ವಾತಿ ದಲಿತ ಬಂದಿದ್ದಾನೆ ಅವನಿಗೂ ಕಾಫಿ ಕೊಡು ಎಂದರೆ ಆಗ ಒಳಗಿನಿಂದ ನೀವು ಯಾಕೆ ಹಾಗೆಲ್ಲ ತಮಾಷೆ ಮಾಡುವುದು ಅವನಿಗೆ ಹೆಸರಿಲ್ಲವೇ ?, ಯಾವಾಗ ನೋಡಿದ್ರೂ ಕುಶಾಲು ಎಂದು ಗೊಣಗುತ್ತಿದ್ದರು.

ಆಗ ಪ.ಗೋ ಅಗೋ ಕೇಳಿಸ್ಕೋ ಅಶರೀರವಾಣಿಯಾಗುತ್ತಿದೆ ಎಂದು ನನ್ನನ್ನು ಛೇಡಿಸುತ್ತಿದ್ದರು.

ನಂತರ ಕಾಫಿ ತಂದುಕೊಟ್ಟು ಹೌದಾ ಮಾರಾಯ ನಿನಗೆ ಯಾಕೆ ಅವರು ಹೀಗೆ ತಮಾಷೆ ಮಾಡಬೇಕಲ್ವಾ ಎನ್ನುತ್ತಿದ್ದರು. ಅವನನ್ನು ದಲಿತ ಅಂದ್ರೆ ಏನಾತು, ಅವನೇ ಬರ್ಕೊಂಡಿದ್ದ, ಬೇಕಾದ್ರೆ ಅವನ್ನೇ ಕೇಳು ಪ.ಗೋ ಪತ್ನಿಗೆ ಮರುತ್ತರ. ಇವು ಅವರ ಮನಗೆ ಹೋದಾಗಲೆಲ್ಲ ಪೀಠಿಕೆ ಮಾತು ಅನ್ನಿ.

ದಲಿತ ಮತ್ತು ಬಂಡಾಯ ಸಾಹಿತ್ಯದ ಬಗ್ಗೆ ಗಂಭೀರ ಚರ್ಚೆಯಾಗುತ್ತಿದ್ದ ದಿನಗಳಾಗಿದ್ದ ಕಾರಣ ಮಂಗಳೂರು ವಿಶ್ವವಿದ್ಯಾನಿಲಯದಲ್ಲೂ ಈ ಸಾಹಿತ್ಯ ಚಳುವಳಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿತ್ತು. ಆಗ ಮಂಗಳೂರು ವಿಶ್ವವಿದ್ಯಾನಿಲಯ ಕನ್ನಡ ವಿಭಾಗದಲ್ಲಿ ಡಾ.ಬಿ.ಎ.ವಿವೇಕ ರೈ, ಡಾ.ಗುಂಡ್ಮಿಚಂದ್ರಶೇಖರ ಐತಾಳ, ಡಾ.ಪುರುಷೋತ್ತಮ ಬಿಳಿಮಲೆ, ಡಾ.ಕೇಶವ ಶರ್ಮಾ, ಡಾ.ಕೆ.ಚಿನ್ನಪ್ಪ ಗೌಡ, ಮಂಗಳೂರು ಸರ್ಕಾರಿ ಕಾಲೇಜಿನಲ್ಲಿ ಡಾ.ಅರವಿಂದ ಮಾಲಗತ್ತಿ, ಮಣಿಪಾಲದಲ್ಲಿ ಡಾ.ಆರ್ಕೆ ಮಣಿಪಾಲ್, ಸಾರಾ ಅಬೂಬಕ್ಕರ್, ವೈದೇಹಿ, ಫಕೀರ್ ಮುಹಮ್ಮದ್ ಕಟ್ಪಾಡಿ, ಬೊಳುವಾರು ಮಹಮದ್ ಕುಂಞ್ ಹೀಗೆ ಒಂದಷ್ಟು ಮಂದಿ ಈ ಸಾಹಿತ್ಯ ಚಳುವಳಿಯ ಮುಂಚೂಣಿಯಲ್ಲಿದ್ದರು.

ಸಾಹಿತ್ಯದ ಕುರಿತು ಯಾವುದೇ ಕಾರ್ಯಕ್ರಮವಿದ್ದರೂ ಪ.ಗೋ ನನ್ನೊಂದಿಗೆ ಬರುತ್ತಿದ್ದರು. ಆದರೆ ಬರುವ ಮುನ್ನ ಬೈಯ್ಯುತ್ತಿದ್ದರು ನನಗೆ. ನಿನಗಾದರೆ ಪ್ರಯೋಜನ ನನಗೆ ಏನೂ ಪ್ರಯೋಜನವಿಲ್ಲ ಎಂದು. ಇಂಥ ಸುದ್ದಿಗೆ ಕನ್ನಡಲ್ಲಿ ಪ್ರಾಶಸ್ತ್ಯ ಸಿಗುತ್ತಿತ್ತು. ಪ.ಗೋ ಇಂಗ್ಲೀಷ್ ಪತ್ರಿಕೆಗೆ ವರದಿ ಮಾಡುತಿದ್ದ ಕಾರಣ ಒಂದೆರಡು ಪ್ಯಾರ ಹಾಕಿ ಬಿಸಾಡುತ್ತಿದ್ದರು.ದಲಿತ ನಿನ್ನ ಕಾರ್ಯಕ್ರಮಕ್ಕೆ ಬಂದರೆ ಎರಡು ಪ್ಯಾರ ಮಾತ್ರ ನನಗೆ ಲಾಭ ಎನ್ನುತ್ತಿದ್ದರು, ಆದರೂ ಆಸಕ್ತಿಯಿಂದ ಬರುತ್ತಿದ್ದರು ಕಿವಿಗೊಟ್ಟು ಕೇಳಿಸಿಕೊಂಡು ಅಲ್ಲಿಂದ ವಾಪಸ್ ಬರುವಾಗ ನನ್ನ ತಲೆ ತಿನ್ನುತ್ತಿದ್ದರು.

ಪ.ಗೋ ಅದೆಷ್ಟು ಸೂಕ್ಷ್ಮ ಮತಿಯೆಂದರೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಯಾವ ಡಿಪಾರ್ಟ್ ಮೆಂಟ್ ನಲ್ಲಿ ಏನಾಗುತ್ತಿದೆ ಎನ್ನುವುದನ್ನು ತಮ್ಮದೇ ಆದ ಮೂಲಕ ಮಾಹಿತಿ ಕಲೆ ಹಾಕುತ್ತಿದ್ದರು. ಹೀಗೆ ಕಲೆ ಹಾಕಿದ ಮಾಹಿತಿಗಳನ್ನು ಅವರು ಹಂಚಿಕೊಳ್ಳುತ್ತಿದ್ದುದು ನನ್ನೊಂದಿಗೆ ಮಾತ್ರ.

ಆಗ ಕನ್ನಡ ವಿಭಾಗದಲ್ಲಿ ಶೀತಲಸಮರವಿತ್ತು ಎನ್ನುವುದನ್ನು ಮೊದಲು ನನಗೆ ಹೇಳಿದವರೇ ಪ.ಗೋ. ಸಾಹಿತ್ಯದಲ್ಲಿ ದಲಿತ ಮತ್ತು ಬಂಡಾಯ ಚಳುವಳಿ ಕಾವು ಪದೆದುಕೊಳ್ಳುತ್ತಿದ್ದ ಕಾಲಘಟ್ಟದಲ್ಲಿ ಪ್ರಗತಿಪರ ಚಿಂತಕರ ಕೂಟದ ಮೇಲೆ ಎಲ್ಲರ ಕಣ್ಣು. ನನಗೆ ನೆನಪಿದ್ದ ಹಾಗೆ ಆ ಹೊತ್ತಿಗೆ ವಿಭಾಗದ ಮುಖ್ಯಸ್ಥರ ಅಧಿಕಾರ ಈಗಿನಂತೆ ರೊಟೇಷನ್ ಪದ್ಧತಿಯಲ್ಲಿರಲಿಲ್ಲ. ಡಾ. ಗುಂಡ್ಮಿ ಚಂದ್ರಶೇಖರ ಐತಾಳ ಕನ್ನಡ ವಿಭಾಗದಲ್ಲಿದ್ದರೂ ಪ್ರಗತಿಪರ ವಿಚಾರಧಾರೆಯವರೇ ನಿರ್ಣಾಯಕ ಎನಿಸುತ್ತಿದ್ದರು. ಈ ಸೂಕ್ಷ್ಮುವನ್ನು ಪ.ಗೋ ನನಗೆ ಅಂದು ಹೇಳಿದ್ದರು.

ಪ.ಗೋ ಇಂಥ ಒಳರಾಜಕೀಯಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದಾಗ ಆಗಿನ್ನೂ ಎಳಸಾಗಿದ್ದ ನನಗೆ ಆಸಕ್ತಿಯಿಲ್ಲದಿದ್ದರೂ ಮರಿ ಸರಿಯಾಗಿ ಕೇಳಿಸ್ಕೋ ಮುಂದೊಂದು ದಿನ ನಿನಗೆ ಉಪಕಾರವಾಗುತ್ತೆ ಎನ್ನುತ್ತಿದ್ದರು. ಅವರ ಒತ್ತಾಯಕ್ಕೆ ಕಟ್ಟುಬಿದ್ದು ಕೇಳಿಸಿಕೊಳ್ಳುತ್ತಿದ್ದೆ.

ಅಂದಹಾಗೆ ಹಾಗೆ ಇಂಥ ವಿಚಾರಗಳೆಲ್ಲವೂ ನನಗೆ ಬೋಧನೆಯಾಗುತ್ತಿದ್ದುದು ಕಾಟೇಜ್ ನಲ್ಲಿ ನೀರವ ರಾತ್ರಿಯಲ್ಲಿ. ಅವರಿಗೆ ಏನನ್ನಾದರೂ ಹೇಳಿಕೊಳ್ಳಬೇಕು ಅಂತಾದರೆ ಸಂಜೆ ಹೊತ್ತಿಗೆ ನನ್ನ ಆಫೀಸಿಗೆ ಬಂದು ಇವೊತ್ತು ಒಂದು ರಾತ್ರಿ ನಮ್ಮ ಮನೆಯಲ್ಲಿ ಕಳೆಯುವಿರಾ?, ತಮಗೆ ಯಾವುದೇ ಅನಾನುಕೂಲ ಇಲ್ಲ ಎಂದಾದರೆ ಮಾತ್ರ ಅದರಲ್ಲೂ ಒಂದು ಷರಾ ಇರುತ್ತಿತ್ತು.

ಆಗ ನನಗೆ ಮದುವೆಯಾಗಿಲ್ಲ. ಮನೆಗೆ ಇವೊತ್ತು ಬರುವುದಿಲ್ಲವೆಂದು ಫೋನ್ ಮಾಡಬಹುದಿತ್ತು ಈಗಲಾದರೆ ಆಗ ಮನೆಗೆ ಫೋನ್ ಕೂಡಾ ಇರಲಿಲ್ಲ. ಬಂದರೆ ಆಫೀಸ್ ಹೋದರೆ ಮನೆ ಎನ್ನುವುದು ಮನೆಯವರಿಗೂ ಗೊತ್ತಿತ್ತು. ರಾತ್ರಿ ಪ್ರೆಸ್ ನಲ್ಲೇ ಮಲಗಿ ಬರುವುದೂ ಮನೆಯವರಿಗೆ ಗೊತ್ತಿತ್ತು. ಆದ್ದರಿಂದ ಮನೆಯವರ ಚಿಂತೆ ನನಗೂ ಇಲ್ಲ, ಮನೆಯವರಿಗೂ ಇಲ್ಲ. ಬಂದಿದ್ದರೆ ಬರುತ್ತಿದ್ದ ಬಂದಿಲ್ಲ ನಾಳೆ ಬರುತ್ತಾನೆ ಎನ್ನುವ ಧೈರ್ಯ ಅವರಿಗೆ.

ಪ.ಗೋ ಕರೆದ ಮೇಲೆ ಆದಿನ ಕಾಟೇಜ್ ನಲ್ಲಿ ಹಾಲ್ಟ್ ಗ್ಯಾರಂಟಿ. ಮನೆಗೆ ಹೋಗಿದ್ದೇ ತಡ ಸ್ವಾತಿ ಬೈರಾಸ್, ಒಂದು ಲುಂಗಿ ಅವಂಗೆ ಎನಗಲ್ಲ. ಸ್ನಾನ ಮಾಡು ಎಂದೇನೂ ಹೇಳಬೇಕಾಗಿಲ್ಲ ಎಲ್ಲ ವ್ಯವಸ್ಥೆ ಇರುತ್ತಿತ್ತು ನನಗೂ ಅಭ್ಯಾಸವಾಗಿತ್ತು. ಊಟದ ಶಾಸ್ತ್ರ ಮುಗಿಸಿ ಚಾವಡಿಯಲ್ಲೇ ಅವರ ಟೆಲಿಪ್ರಿಂಟರ್, ಮೇಜು ಕುರ್ಚಿ ಸರಿಸಿ ಇಬ್ಬರಿಗೆ ಎರಡು ಚಾಪೆ ಹಾಸುವಷ್ಟು ಸ್ಥಳಾವಕಾಶ ಮಾಡಿಕೊಂಡು ದೀಪ ಆರಿಸಿ ಮಲಗಿದರೆ ಪ.ಗೋ ಕತೆ ಶುರು. ನಿದ್ದೆ ಬರುವಷ್ಟು ಹೊತ್ತೂ ಅವರು ಹೇಳುತ್ತಿದ್ದರು ನಾನು ಕೇಳಿಸಿಕೊಳ್ಳುತ್ತಿದ್ದೆ, ಎಚ್ಚರ ಇರುವಷ್ಟು ಹೊತ್ತು ಕೇಳಿಸಿಕೊಂಡು ಯಾವಾಗ ನಿದ್ದೆಹತ್ತುತ್ತಿತ್ತೋ ಗೊತ್ತೇ ಇಲ್ಲ. ಬಹುಷ ಆಗಲೇ ಪ.ಗೋ ಕತೆ ನಿಲ್ಲಿಸುತ್ತಿದ್ದರು. ಇಂಥ ನೀರವ ರಾತ್ರಿಯಲ್ಲೇ ಪ.ಗೋ ನನಗೆ ಗೊತ್ತಿರದ ತಾವು ಸಂಗ್ರಹಿಸುತ್ತಿದ್ದ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು, ಅವೆಲ್ಲವೂ ಗಂಭೀರ ಸ್ವರೂಪದವೇ ಆಗಿರುತ್ತಿದ್ದವು.

ಡಾ.ಗುಂಡ್ಮಿ ಚಂದ್ರಶೇಖರ ಐತಾಳ ನನ್ನೊಂದಿಗೆ ಆತ್ಮೀಯರಾಗಿದ್ದರು. ಮಂಗಳೂರು ಆಕಾಶವಾಣಿ ಅಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ ನಡೆದಿದ್ದ ಕವಿಗೋಷ್ಠಿಯ ಅಧ್ಯಕ್ಷರಾಗಿದ್ದರು ನಾನೂ ಕವಿಯಾಗಿ ಭಾಗವಹಿಸಿದ್ದೆ. ನನ್ನ ಕವಿತೆ ಕೇಳಲು ಪ.ಗೋ ಕೂಡಾ ಬಂದಿದ್ದರು. ಕವಿಗೋಷ್ಠಿ ಮುಗಿದ ಮೇಲೆ ನನ್ನೊಂದಿಗೆ ಬರ್ತೀಯಾ ಕೇಳಿದರು. ಅವರೊಂದಿಗೆ ಹೋದೆ. ಆ ದಿನ ರಾತ್ರಿ ಮಲಗುವಾಗ ಪ.ಗೋ ಹೇಳಿದರು ಬಂಡಾಯದೊಳಗೊಂದು ಬಂಡಾಯ ನಡೆಯುತ್ತೆ ನೋಡ್ತಾ ಇರು.
ಇವರು ಬಂಡಾಯ ಸಾಹಿತ್ಯ ಚಳುವಳುಯನ್ನು ಟೀಕಿಸುತ್ತಿದ್ದಾರೆಂದುಕೊಂಡು ಬಂಡಾಯದೊಳಗೆ ಬಂಡಾಯ ನಡೆಯುವುದು ಅಂಬಡೆ ಸುಮ್ಮನಿರಿ ಮಾರಾಯ್ರೇ, ನಿಮ್ಮದು ಇಂಥದ್ದೇ ಯೋಚನೆ ಎಂದೆ.

ಮರಿ ನೋಡ್ತಾ ಇರು ಬಂಡಾಯ ಹೇಗೆ ಸ್ಫೋಟ ಆಗುತ್ತೆ ಅಂತ ಎಂದರು. ನೋಡೇ ಬಿಡುವ ಏನಾಗುತ್ತೇ ಎಂದು ನಾನೂ ಸವಾಲು ಹಾಕಿದೆ ಹೀಗೇ ಲೋಕಾಭಿರಾಮವಾಗಿ ಮಾತನಾಡುತ್ತಾ ಮಲಗಿದೆವು. ಆ ದಿನ ಅವರು ಹೇಳಿದ್ದು ಅಷ್ಟನ್ನು ಮಾತ್ರ.

ಈ ಮಾತುಕತೆ ನಡೆದು ಒಂದು ವಾರ ಆಗಿರಬಹುದು, ಮುಸ್ಸಂಜೆ ಹೊತ್ತಿಗೆ ಎಲ್ಲಾ ಪೊಲೀಸ್ ಠಾಣೆಗಳಿಗೆ ಫೋನ್ ಮಾಡಿ ಸುದ್ದಿ ಸಂಗ್ರಹಿಸುವುದು ವಾಡಿಕೆ. ಹಾಗೇ ಕದ್ರಿ ಪೊಲೀಸ್ ಠಾಣೆಗೆ ಫೋನ್ ಮಾಡಿದೆ. ಆಗ ಎಸ್ ಐ ಆಗಿದ್ದವರು ಗಚ್ಚಿನಕಟ್ಟಿ ನೆನಪು. ಕರೆ ಸ್ವೀಕರಿಸಿದವರೇ ಬ್ರಾಹ್ಮಣ ಬಂಡಾಯ ಕಿರಿಕ್. ಅದನ್ನು ಬಿಟ್ಟರೆ ಬೇರೇನು ಇಲ್ಲವೆಂದರು. ಪ.ಗೋ ಹೇಳಿದ್ದು ನಿಜವಾಗಿತ್ತು, ಆಗ ಅಂದುಕೊಂಡೆ ಪ.ಗೋ ಸಿಐಡಿ ಪೊಲೀಸ್ ಆಗಿರಬೇಕಿತ್ತು, ತಪ್ಪಿ ಪತ್ರಕರ್ತರಾದರೆಂದು.

Chidambara-Baikampady

-ಚಿದಂಬರ ಬೈಕಂಪಾಡಿ

Write A Comment