ಮಂಗಳೂರು,ಮೇ.25 : ರಾಮಕೃಷ್ಣ ಮಿಷನ್ ಹಮ್ಮಿಕೊಂಡಿರುವ 40ವಾರಗಳ ಸ್ವಚ್ಛ ಮಂಗಳೂರು ಅಭಿಯಾನದ 17 ನೇ ವಾರದ ಸ್ವಚ್ಚತಾ ಕಾರ್ಯವನ್ನು ರವಿವಾರ ನಗರದ ವೆಲೆನ್ಸಿಯ ಪರಿಸರದಲ್ಲಿ ಕೈಗೊಳ್ಳಲಾಯಿತು. ಮಠದ ಮುಖ್ಯಸ್ಥರಾದ ಸ್ವಾಮಿ ಜಿತಕಾಮಾನಂದಜಿಯವರ ಉಪಸ್ಥಿತಿಯಲ್ಲಿ ಕೆನರಾ ಕಾಲೇಜಿನ ಪೂರ್ವ ಪ್ರಾಚಾರ್ಯರಾದ ಪ್ರೋ. ಸತೀಶ್ ಭಟ್ನೇ 17 ಸ್ವಚ್ಛ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸಿದರು.
ಸ್ವಾಮಿಜಿಯವರು ಹಾಗೂ ಬ್ರಹ್ಮಚಾರಿಗಳು ಬಾಲಕಾಶ್ರಮ ವಿದ್ಯಾರ್ಥಿಗಳ ಜೊತೆಗೂಡಿ ಫಾತಿಮಾ ರಿಟ್ರೀಟ್ ಹೌಸ್‌ಎದುರುಗಡೆ ಸ್ವಚ್ಛತಾ ಕೈಂಕರ್ಯ ನಡೆಸಿದರು. ಅಭಿಯಾನದ ಮಾರ್ಗದರ್ಶಿ ಕ್ಯಾ. ಗಣೇಶ್‌ಕಾರ್ಣಿಕ ನೇತೃತ್ವದಲ್ಲಿ ಯುವಾ ಬ್ರೀಗೇಡ್ ನ ಸದಸ್ಯರು ವೆಲೆನ್ಸಿಯ ವೃತ್ತದ ಸುತ್ತಮುತ್ತ ಶುಚಿಗೊಳಿಸಿದರು. ವಿಧಾನ ಪರಿಷತ್ ಸದಸ್ಯ ಶ್ರೀ ಐವನ್ ಡಿ ಸೋಜ ಅಭಿಯಾನದಲ್ಲಿ ಸ್ವಯಂ ಪ್ರೇರಿತರಾಗಿ ಭಾಗವಹಿಸಿದರು.
ನಿರುಪಯುಕ್ತ -ಅಪಾಯಕಾರಿ ಬಸ್ ತಂಗುದಾಣದ ನವೀಕರಣ- ವೆಲೆನ್ಸಿಯದ ಫಾತಿಮಾ ರಿಟ್ರೀಟ್ ಹೌಸ್‌ಎದುರಿಗಿರುವ ಬಸ್ ತಂಗುದಾಣನಕ್ಕೆ ಸರಿಯಾದ ಸಮತಟ್ಟು ನೆಲವಿಲ್ಲದೆ ತಗ್ಗು ಗುಂಡಿಯಾಗಿತ್ತು. ಮಳೆಯಲ್ಲಿ ನೀರು ತುಂಬಿ ಜನ ನಿಲ್ಲಲು ಆಗುತ್ತಿರಲಿಲ್ಲ ಅಲ್ಲದೇ ಸೊಳ್ಳೆ ಉತ್ಪತ್ತಿ ತಾಣವಾಗಿತ್ತು. ತಂಗುದಾಣದಲ್ಲಿದ್ದ ಕಬ್ಬಿಣದ ಫಲಕ ತಲೆಗೆ ತಾಗುವಂತೆ ಕೆಳಮಟ್ಟದಲ್ಲಿ ನೇತಾಡುತ್ತಿತ್ತು. ಈ ಎಲ್ಲ ಸಂಗತಿಗಳನ್ನು ಗಮನಿಸಿ ಸ್ವಚ್ಛ ಮಂಗಳೂರು ಅಭಿಯಾನದ ಕಾರ್ಯಕರ್ತರು ನಿನ್ನೆಯಿಂದಲೇ ಕಾರ್ಯಪ್ರವೃತ್ತರಾಗಿ ನವೀಕರಣಕೈಗೊಂಡರು. ಅಪಾಯಕಾರಿ ಫಲಕವನ್ನು ಶುಚಿಗೊಳಿಸಿ ಸ್ಥಳಾಂತರಿಸಿ ಸ್ವಚ್ಛತೆಯೇ ಮೂಲಮಂತ್ರ ಎಂಬ ಸಂದೇಶವನ್ನು ಬರೆದು ಹಾಕಲಾಗಿದೆ. ನೆಲವನ್ನು ಕಾಂಕ್ರೀಟಿನಿಂದ ನೆಲ ತುಂಬಿಸಿ ಸಮತಟ್ಟು ಗೊಳಿಸಿದ್ದಲ್ಲದೇ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ನಾಳೆ ಸುಣ್ಣಬಣ್ಣ ಬಳಿದು ಸುಂದರಗೊಳಿಸಲಾಗುವುದು.
ಬಸ್ ತಂಗುದಾಣದ ಶುಚಿತ್ವ – ದಿನನಿತ್ಯ ನೂರಾರು ಜನ ಕುಳಿತುಕೊಳ್ಳುವ ವೆಲೆನ್ಸಿಯ ವೃತ್ತದ ಹತ್ತಿರವಿರುವ ಬಸ್ ತಂಗುದಾಣಕ್ಕೆಅಲ್ಲಲ್ಲಿ ಪೋಸ್ಟರ್ ಭಿತ್ತಿಚಿತ್ರಗಳನ್ನು ಅಂಟಿಸಿ ವಿರೂಪಗೊಳಿಸಿದ್ದರು. ಅಭಿಯಾನದ ಪ್ರಯುಕ್ತ ಅವುಗಳನ್ನೆಲ್ಲ ತೆರವುಗೊಳಿಸಿ ತೊಳೆದು ಇಡೀ ನಿಲ್ದಾಣಕ್ಕೆ ಬಣ್ಣ ಹಚ್ಚಿ ಅಂದಗೊಳಿಸಲಾಗಿದೆ.
ಮಾರ್ಗಸೂಚಿ ಫಲಕ ಮರುಬರವಣಿಗೆ- ಹತ್ತಾರು ವರುಷಗಳಿಂದ ಕುರೂಪಿಯಂತಿದ್ದ ಫಲಕವೀಗ ‘ಸೆಮಿನರಿ ವ್ಯೂ 1ನೇ ಅಡ್ಡರಸ್ತೆ ನಾಮದಿಂದ ಕಂಗೊಳಿಸುವಂತೆ ಮಾಡಲಾಗಿದೆ. ಹೊಸಬರಿಗೆ ಅನುಕೂಲವಾಗಲೆಂದೇ ಹಾಕಲಾದ ಇಂತಹ ನೂರಾರು ಫಲಕಗಳು ನಗರದಲ್ಲಿ ಬಣ್ಣ ಕಳೆದುಕೊಂಡು ವಿರೂಪವಾಗಿವೆ ಹಾಗೂ ಅನುಪಯುಕ್ತವಾಗಿವೆ. ಅವುಗಳನ್ನೆಲ್ಲ ಗುರುತಿಸಿ ನವೀಕರಿಸುವ ಕಾರ್ಯ ಕಳೆದ ನಾಲ್ಕಾರು ವಾರಗಳಿಂದ ಸಾಗಿದೆ.
ಫುಟ್‌ಪಾಥ್ ದುರಸ್ತಿ – ರೋಶನಿ ನಿಲಯಕ್ಕೆ ತಾಗಿಕೊಂಡಿರುವ ಫುಟ್ ಪಾಥ್ ಅಲ್ಲಲ್ಲಿ ಕಿತ್ತುಹೋಗಿ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಅದನ್ನಿಂದು ಸರಿಗೊಳಿಸಲಾಗಿದೆ. ಅಲ್ಲದೇ ತೋಡಿನಲ್ಲಿದ್ದ ಅಪಾರ ಪ್ರಮಾಣದ ತ್ಯಾಜ್ಯ ತೆಗೆದು ಸ್ವಚ್ಛಗೊಳಿಸಲಾಯಿತು. ವೆಲೆನ್ಸಿಯ ವೃತ್ತವನ್ನು ಶುಚಿಗೊಳಿಸಿ ಅಂದಗೊಳಿಸಲಾಗಿದೆ.
ಅಭಿಯಾನದ ನಿರ್ದೇಶಕ ಶ್ರೀ ರಾಮಕುಮಾರ್ ಬೇಕಲ್, ಶ್ರೀ ನಕ್ರೆ ಸುರೇಂದ್ರ ಶೆಟ್ಟಿಆಶ್ರಮದ ಭಕ್ತರಾದಶ್ರೀಮತಿ ಲತಾಮಣಿರೈ, ಶ್ರೀಮತಿ ಸತ್ಯವತಿ. ಸಮಾಜಸೇವಕಿ ಶ್ರೀಮತಿ ರತ್ನಾ ಆಳ್ವ, ಶ್ರಿ ಮತಿ ಶೀಲಾ, ಯುವಾ ಬ್ರೀಗೇಡ್ ಸದಸ್ಯ ಶ್ರೀ ವಿಕ್ರಮ್, ಸ್ವಚ್ಛ ಮಂಗಳೂರುಸಂಚಾಲಕ ಶ್ರೀದಿಲ್‌ರಾಜ್ ಆಳ್ವ ಮತ್ತಿತರು ಸ್ವಚ್ಛ ಅಭಿಯಾನದಲ್ಲಿ ಪಾಲ್ಗೊಂಡರು. ಎಂಆರ್‌ಪಿಲ್ ಈ ಅಭಿಯಾನಕ್ಕೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.






















