ಕರಾವಳಿ

ಉತ್ತಮ ಕಾರ್ಯಗಳಿಗೆ ದೈವ ಶಕ್ತಿ ಪ್ರೇರಣೆ ನೀಡುತ್ತದೆ : ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ

Pinterest LinkedIn Tumblr

13gan 1

ಗಂಗೊಳ್ಳಿ : ನಾವು ಮಾಡುವ ಪ್ರತಿಯೊಂದು ಉತ್ತಮ ಕಾರ್ಯಗಳಿಗೆ ದೈವ ಶಕ್ತಿ ಪ್ರೇರಣೆ ನೀಡುತ್ತದೆ. ನಮಗೆ ಜನ್ಮ ನೀಡಿದ ತಾಯಿ 100 ಜನ ಶಿಕ್ಷಕರಿಗಿಂತ ಮೇಲು. ಹೀಗಾಗಿ ತಾಯಿಯದವಳು ನಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಉತ್ತಮ ಆಚಾರ, ವಿಚಾರ, ಆಹಾರ ಹಾಗೂ ಉಚ್ಛಾರಗಳನ್ನು ನೀಡಿದರೆ ಅವರು ಸಮಾಜದಲ್ಲಿ ಸದ್ಗುಣಗಳನ್ನು ಬೆಳೆಸಿಕೊಂಡು ಸತ್ಪ್ರಜೆಯಾಗಿ ಮೂಡಿಬರುತ್ತಾರೆ. ನಾವು ನಮ್ಮ ಮಕ್ಕಳಿಗೆ ನೀತಿ ಹಾಗೂ ಮರ್ಯಾದೆಯನ್ನು ಸರಿಯಾಗಿ ನೀಡಿದರೆ ಅವರು ತಮ್ಮ ಜೀವನವನ್ನು ಉತ್ತಮವಾಗಿ ನಡೆಸಲು ಸಹಾಯವಾಗುತ್ತದೆ ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.

ಅವರು ಮಂಗಳವಾರ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀಮದ್ ಸುಧೀಂದ್ರ ತೀರ್ಥ ಸಭಾ ವೇದಿಕೆಯಲ್ಲಿ ನಿನಾದ ಸಂಸ್ಥೆಯ ದಶಮಾನೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಪ್ರಮುಖವಾಗಿ ಭಜನೆಯ ಮೂಲಕ ನಮ್ಮ ಸಮಾಜದಲ್ಲಿ, ಮುಖ್ಯವಾಗಿ ಸಮಾಜದ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಲು ಹುಟ್ಟಿಕೊಂಡಿರುವಂತಹ ನಿನಾದ ಸಂಸ್ಥೆಯ ದಶಮಾನೋತ್ಸವದ ಪ್ರಯುಕ್ತ ಗೌಡ ಸಾರಸ್ವತ ಸಮಾಜದ ಮೂವರು ಪೀಠಾಧಿಪತಿಗಳ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ ಎಂದು ಹರಸಿದರು.

ಆಶೀರ್ವಚನ ನೀಡಿ ಮಾತನಾಡಿದ ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸುಧೀಂದ್ರ ತೀರ್ಥ ಶ್ರೀಪಾದರ ಪಟ್ಟ ಶಿಷ್ಯ ಶ್ರೀಮದ್ ಸಂಯಮೀಂದ್ರ ತೀರ್ಥರು, ಗುರುವಿನ ಅನುಗ್ರಹ ಆದರೆ ಮಾತ್ರ ನಮಗೆ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. ನಾವು ದೇವರ ಮೇಲೆ ಪ್ರೀತಿ ಇಟ್ಟಂತೆ ಗುರುವಿನ ಮೇಲೂ ಪ್ರೀತಿಯನ್ನಿಡಬೇಕು. ಗೌಡ ಸಾರಸ್ವತ ಬ್ರಾಹ್ಮಣ ಸಮಾಜದವರಾದ ನಾವು ವೈಷ್ಣವರು. ನಮ್ಮ ಗುರು ಹಿರಿಯರು ನಡೆದುಕೊಂಡು ಬಂದಂತೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ನಮ್ಮ ಸಂಪ್ರದಾಯಗಳಿಗೆ ಚ್ಯುತಿ ಬಾರದಂತೆ ನಡೆದುಕೊಂಡು ನಮ್ಮ ಜೀವನವನ್ನು ಪಾವನಗೊಳಿಸಬೇಕು. ನಮ್ಮಲ್ಲಿ ಧಾರ್ಮಿಕತೆಯನ್ನು ಬೆಳೆಸಿಕೊಂಡು ದೇವರ, ಗುರು ಹಿರಿಯರ ಆಶೀರ್ವಾದ ಅನುಗ್ರಹಕ್ಕೆ ಪ್ರಾಪ್ತಿಯಾಗಬೇಕು ಎಂದು ಹೇಳಿದರು.

ಶ್ರೀ ಕೈವಲ್ಯ ಮಠಾಧೀಶ ಶ್ರೀಮದ್ ಶಿವಾನಂದ ಸರಸ್ವತಿ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಬೈಲೂರು ಮಂಜುನಾಥ ಶೆಣೈ, ಎಂ.ಮಾಧವರಾಯ ಪೈ, ಗುಜ್ಜಾಡಿ ಪ್ರಭಾಕರ ನಾಯಕ್, ಎಂ.ರಾಮಕೃಷ್ಣ ಪೈ, ವೇದಮೂರ್ತಿ ಜಿ.ಅನಂತಕೃಷ್ಣ ಭಟ್ ಹಾಗೂ ಡಾ.ಕಾಶೀನಾಥ ಪೈ ಮೂವರು ಯತಿವರ್ಯರ ಪಾದಪೂಜೆ ನೆರವೇರಿಸಿದರು. ಜಿಎಸ್‌ಬಿ ಸಮಾಜದ ಪುರೋಹಿತರು, ವೈದಿಕರು, ನಿನಾದ ಸಂಸ್ಥೆಯ ಪದಾಧಿಕಾರಿಗಳು, ದಶಮಾನೋತ್ಸವ ಸಮಿತಿಯ ಪದಾಧಿಕಾರಿಗಳು, ವಿವಿಧ ದೇವಳದ ಆಡಳಿತ ಮಂಡಳಿ ಸದಸ್ಯರು, ಊರ ಪರ ಊರಿನ ಭಜಕರು ಉಪಸ್ಥಿತರಿದ್ದರು.

ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಮಂಜುನಾಥ ಶೆಣೈ ಸ್ವಾಗತಿಸಿದರು. ನಿನಾದ ಸಂಸ್ಥೆಯ ಎಂ.ಮುಕುಂದ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು.

Write A Comment