ಕರಾವಳಿ

ಪ್ರವೀಣ್ ಬಾ ತೊಗಾಡಿಯಾ ನಿಷೇಧ ವಾಪಾಸು ಪಡೆಯಿರಿ ; ಯಡಿಯೂರಪ್ಪ ಒತ್ತಾಯ

Pinterest LinkedIn Tumblr

05gan3

ಗಂಗೊಳ್ಳಿ : ವಿಹಿಂಪ ನಾಯಕ ಪ್ರವೀಣ ಬಾ ತೊಗಾಡಿಯಾ ಅವರಿಗೆ ಉದ್ದೇಶಪೂರ್ವಕವಾಗಿ ಸರಕಾರ ಬೆಂಗಳೂರು ಪ್ರವೇಶಿಸದಂತೆ ನಿರ್ಬಂಧ ಹೇರಿದ್ದು, ಕುಂಟು ನೆಪ ಹೇಳಿ ವಿನಾಕಾರಣ ಗೊಂದಲ ಸೃಷ್ಟಿಸುತ್ತಿದೆ. ಸರಕಾರ ತಮ್ಮ ಹುಳುಕನ್ನು ಮುಚ್ಚಿಕೊಳ್ಳಲು, ನಡೆಯುತ್ತಿರುವ ಕಲಾಪದ ದಿಕ್ಕು ತಪ್ಪಿಸಲು ಈ ಷಡ್ಯಂತ್ರ ಮಾಡಿದೆ. ಸರಕಾರ ಪ್ರಜಾತಂತ್ರದ ವ್ಯವಸ್ಥೆಯಲ್ಲಿದೆಯೋ ಅಥವಾ ಸರ್ವಾಧಿಕಾರದ ವ್ಯವಸ್ಥೆಯಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ, ಸಾಂಸದ ಬಿ.ಎಸ್.ಯಡಿಯೂರಪ್ಪ ಸರಕಾರವನ್ನು ಪ್ರಶ್ನಿಸಿದ್ದಾರೆ.

ಗುರುವಾರ ಹೆಮ್ಮಾಡಿಯ ಖಾಸಗಿ ಹೊಟೇಲ್‌ನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ದಿಕ್ಕು ತಪ್ಪಿ, ಪ್ರಚೋದನಕಾರಿ ಭಾಷಣ ಮಾಡಿದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳವ ಅಧಿಕಾರ ಸರಕಾರಕ್ಕಿದೆ. ಸದನದಲ್ಲಿ ರಾಜ್ಯದ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕಿದೆ. ಆದರೆ ಪ್ರವೀಣ್ ಬಾ ತೊಗಾಡಿಯಾ ವಿಚಾರದದಲ್ಲಿ ಗೊಂದಲ ಮಾಡುವ ಪ್ರಯತ್ನವನ್ನು ಸರಕಾರವೇ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಸರಕಾರ ಒಣ ಪ್ರತಿಷ್ಠೆ ಇಲ್ಲದೆ ವಿಹಿಂಪ ನಾಯಕ ಪ್ರವೀಣ ಬಾ ತೊಗಾಡಿಯಾ ನಿಷೇಧವನ್ನು ವಾಪಾಸು ಪಡೆಯಬೇಕು ಎಂದು ಸರಕಾರವನ್ನು ಆಗ್ರಹಿಸಿದರು.

ರಾಷ್ಟ್ರೀಯ ಹೆದ್ದಾರಿಯ ಮರವಂತೆ ಸಮೀಪ 6 ಎಕ್ರೆ ಸ್ಥಳದಲ್ಲಿ ವಾಹನಗಳ ನಿಲುಗಡೆಗೆ ರೆಸ್ಟ್ ಏರಿಯಾ ನಿರ್ಮಾಣ ಮಾಡುವುದರಿಂದ ಸುಮಾರು 45 ಮೀನುಗಾರ ಕುಟುಂಬಗಳಿಗೆ ತೊಂದರೆಯಾಗುತ್ತಿದ್ದು, ಈ ವಿಚಾರದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗಿದೆ. ಯಾವುದೇ ಕಾರಣಕ್ಕೂ ಮೀನುಗಾರರಿಗೆ ತೊಂದರೆಯಾಗದಂತೆ ಪರ್ಯಾಯ ಜಾಗ ಗುರುತಿಸುವಂತೆ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬೈಂದೂರು-ಯಡ್ತರೆ ಗ್ರಾಮದ ಕೊಂಕಣ ರೈಲ್ವೆ ನಿರಾಶ್ರಿತರ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದು, ಈ ಹಿಂದೆ ಮಂಜೂರು ಮಾಡಿದ ಜಾಗವನ್ನೇ ನೀಡುವಂತೆ ಸೂಚನೆ ನೀಡಲಾಗಿದೆ. ಉಪವಿಭಾಗಾಧಿಕಾರಿಯವರು ಸ್ಥಳಕ್ಕೆ ಭೇಟಿ ನೀಡಿದ್ದು, ಅರಣ್ಯ ಇಲಾಖೆಯ ತೊಂದರೆಯಿಂದ ಈ ಸಮಸ್ಯೆ ಸೃಷ್ಟಿಯಾಗಿದೆ. ಸಂತ್ರಸ್ತ ಕುಟುಂಬಗಳಿಗೆ ಅನ್ಯಾಯವಾಗದಂತೆ ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ ಎಂದು ಅವರು ಹೇಳಿದರು.

ರಾಜ್ಯ ಸರಕಾರ ಅಭಿವೃದ್ಧಿ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಎಲ್ಲಾ ಶಾಸಕರು ಪಕ್ಷಬೇಧ ಮರೆತು ಸರಕಾರಕ್ಕೆ ಸಲಹೆ ಸೂಚನೆ ನೀಡಿದರೂ ಸರಕಾರ ಗಮನ ನೀಡುತ್ತಿಲ್ಲ. ನೀರಾವರಿ, ಗ್ರಾಮೀಣಾಭಿವೃದ್ಧಿ, ಪಿಡಬ್ಲ್ಯುಡಿ ಸೇರಿದಂತೆ ಬೇರೆ ಬೇರೆ ಇಲಾಖೆಗಳಲ್ಲಿ ಬಜೆಟ್‌ನಲ್ಲಿ ಮೀಸಲಿರಿಸಿದ ಅನುದಾನದ ಶೇ.50 ರಷ್ಟು ಈವರೆಗೆ ಖರ್ಚಾಗಿಲ್ಲ. ಇದರಿಂದ ಸರಕಾರ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ ಮಾಡುತ್ತಿರುವುದು ಸ್ಪಷ್ಟವಾಗಿದೆ. ಅಭಿವೃದ್ಧಿಯಲ್ಲಿ ಸರಕಾರದ ಎರಡು ವರ್ಷ ಹಿಂದೆ ಸರಿದಿದೆ ಎಂದು ಅರೋಪಿಸಿದ ಅವರು ಜನರು ನೀಡುವ ತೆರಿಗೆ ಫಿಕ್ಸೆಡ್ ಡೆಪಾಸಿಟ್ ಇಡಲು ಅಲ್ಲ ಎಂದು ಮಾರ್ಮಿಕವಾಗಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ರಾಜ್ಯದಲ್ಲಿ ಲಾಟರಿ ಪುನರಾರಂಭದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಸರಕಾರ ಆರಂಭದಲ್ಲಿ ಹೇಳಿಕೆ ಕೊಟ್ಟು ಬಳಿಕ ಇದರ ಚಿಂತನೆ ಇಲ್ಲ ಎಂದು ಆ ವಿಷಯದಿಂದ ಹಿಂದೆ ಸರಿಯುತ್ತಿರುವುದು ಸಾಮಾನ್ಯವಾಗಿದೆ. ಮುಖ್ಯಮಂತ್ರಿ ಬಲಗೈ ಬಂಟ ಇಬ್ರಾಹಿಂ ಅವರು ಲಾಟರಿ ಆರಂಭಿಸಿ ಅದರಿಂದ ಬರುವ ಅನುದಾನದಿಂದ ಇಡ್ಲಿ ನೀಡುವ ಕುರಿತು ಮಾಡಿರುವ ಚಿಂತನೆಯನ್ನು ಯಾರೂ ಒಪ್ಪುದಿಲ್ಲ. ಸರಕಾರಕ್ಕೆ ಸಾಕಷ್ಟು ಆದಾಯವಿದೆ. ಆದುದರಿಂದ ಲಾಟರಿ ಪುನ: ಆರಂಭಕ್ಕೆ ಕೈ ಹಾಕಬಾರದು ಎಂದು ಎಚ್ಚರಿಕೆ ನೀಡಿದರು. ಜಾತಿ ಜನಗಣತಿ ಮಾಡುವುದರಿಂದ ಒಡೆದು ಆಳುವ ಪ್ರಯತ್ನ ನಡೆಯುತ್ತದೆ. ಇಂತಹ ಪ್ರಯತ್ನಗಳ ಬಗ್ಗೆ ಸಾರ್ವತ್ರಿಕವಾಗಿ ವಿರೋಧವಿದ್ದು, ಜಾತಿ ಗಣತಿಯನ್ನು ಸರಕಾರ ಕೈಬಿಡಬೇಕು ಎಂದು ಒತ್ತಾಯಿಸಿದರು. ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಪುನ: ಬಿಜೆಪಿಗೆ ಕರೆ ತರುವ ಪ್ರಶ್ನೆಯೇ ಇಲ್ಲ. ಅವರಿಗೆ ಅನೇಕ ಸಮಸ್ಯೆಗಳಿದೆ. ಅವರ ಚಿಂತನೆ ಏನಿದೆ ಎಂದು ಗೊತ್ತಿಲ್ಲ. ಅವರನ್ನು ಈವರೆಗೆ ಭೇಟಿ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಬೈಂದೂರು-ಹೊಸನಗರ-ರಾಣೆಬೆನ್ನೂರು ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ ಕೆರಾಡಿ ಗ್ರಾಮ ಪಂಚಾಯತ್‌ನ್ನು ಪ್ರಧಾನಿಯವರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಹೈಸ್ಕೂಲು ನಿರ್ಮಾಣದ ಬಗ್ಗೆ ಸರಕಾರದ ಗಮನ ಸೆಳೆದು ಪ್ರಯತ್ನ ನಡೆಸಲಾಗುವುದು. ಶೌಚಾಲಯ ರಹಿತ ಕುಟುಂಬಗಳಿಗೆ ಶೌಚಾಲಯ ನಿರ್ಮಾಣಕ್ಕೆ ಈಗಾಗಲೇ ಅನುದಾನ ಬಿಡುಗಡೆಯಾಗಿದೆ. ಸುವರ್ಣ ಗ್ರಾಮ ಯೋಜನೆಯಡಿ ಕೆರಾಡಿಗೆ 60 ಲಕ್ಷ ಬಿಡುಗಡೆಯಾಗಿದ್ದು, ಇನ್ನೂ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಸರಕಾರವನ್ನು ಒತ್ತಾಯಿಸುವುದಾಗಿ ಹೇಳಿದ ಅವರು, ಕೆರಾಡಿಯನ್ನು ಮಾದರಿ ಗ್ರಾಮವನ್ನಾಗಿ ರೂಪಿಸಲಾಗುವುದು ಎಂದರು.

ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ಎಂ.ಸುಕುಮಾರ್ ಶೆಟ್ಟಿ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ದೀಪಕಕುಮಾರ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುರಾಜ್ ಗಂಟಿಹೊಳೆ, ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಹರೀಶ ಮೇಸ್ತ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕರ್ತನ ಮನೆಗೆ ಯಡಿಯೂರಪ್ಪ ಭೇಟಿ

05gan4

ಗಂಗೊಳ್ಳಿ : ತೀವ್ರ ಅನಾರೋಗ್ಯದಿಂದ ಬಳಲಿ, ಚೇತರಿಸಿಕೊಳ್ಳುತ್ತಿರುವ ಕೊಡ್ಲಾಡಿ ಗ್ರಾಪಂ ಮಾಜಿ ಉಪಾಧ್ಯಕ್ಷ ಬಿಜೆಪಿಯ ಸಕ್ರೀಯ ಕಾರ್ಯಕರ್ತ ಪ್ರವೀಣಕುಮಾರ್ ಶೆಟ್ಟಿ ಅವರ ಮನೆಗೆ ಗುರುವಾರ ಮಾಜಿ ಮುಖ್ಯಮಂತ್ರಿ, ಸಾಂಸದ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.

ಪ್ರವೀಣಕುಮಾರ್ ಶೆಟ್ಟಿ ಅವರೊಂದಿಗೆ ಕೆಲಕಾಲ ಆರೋಗ್ಯ ಬಗ್ಗೆ ವಿಚಾರಿಸಿದ ಯಡಿಯೂರಪ್ಪನವರು, ಪ್ರವೀಣಕುಮಾರ್ ಶೆಟ್ಟಿ ಶೀಘ್ರ ಗುಣಮುಖವಾಗಲೆಂದು ಹಾರೈಸಿದರು. ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ಎಂ.ಸುಕುಮಾರ್ ಶೆಟ್ಟಿ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ದೀಪಕಕುಮಾರ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುರಾಜ್ ಗಂಟಿಹೊಳೆ, ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಬಿಜೆಪಿ ರಾಜ್ಯ ಪರಿಷತ್ ಸದಸ್ಯರಾದ ನಾರಾಯಣ ನಾಯಕ್ ನೇರಳಕಟ್ಟೆ, ಗೋಪಾಲ ಕಾಂಚನ್ ಸಿದ್ಧಾಪುರ, ಸ್ಥಳೀಯ ಪಕ್ಷದ ಮುಖಂಡರು ಮೊದಲಾದವರು ಉಪಸ್ಥಿತರಿದ್ದರು.

ತಲ್ಲೂರು ಕುಂತಿ ಅಮ್ಮನವರ ದೇವಸ್ಥಾನಕ್ಕೆ ಭೇಟಿ

05gan5

ಗಂಗೊಳ್ಳಿ : ತಲ್ಲೂರಿನ ಶ್ರೀ ಮಹಾದೇವಿ ಕುಂತಿ ಅಮ್ಮನವರ ದೇವಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ, ಸಾಂಸದ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿದರು.

ಶ್ರೀದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಅವರು ದೇವಳದ ಜೀಣೋದ್ಧಾರ ಕಾರ್ಯವನ್ನು ವೀಕ್ಷಿಸಿದರು. ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ಎಂ.ಸುಕುಮಾರ್ ಶೆಟ್ಟಿ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ದೀಪಕಕುಮಾರ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುರಾಜ್ ಗಂಟಿಹೊಳೆ, ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಬಿಜೆಪಿ ರಾಜ್ಯ ಪರಿಷತ್ ಸದಸ್ಯರಾದ ನಾರಾಯಣ ನಾಯಕ್ ನೇರಳಕಟ್ಟೆ, ಗೋಪಾಲ ಕಾಂಚನ್ ಸಿದ್ಧಾಪುರ, ನ್ಯಾಯವಾದಿ ಟಿ.ಬಿ.ಶೆಟ್ಟಿ, ದೇವಳದ ಆಡಳಿತ ಮಂಡಳಿ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.

Write A Comment