ಕರಾವಳಿ

ಸಚಿವ ರಮಾನಾಥ ರೈ ಹಸ್ತಕ್ಷೇಪ ; ಶಾಸಕಾಂಗ ಸಭೆಯಲ್ಲೇ ಕಣ್ಣೀರಿಟ್ಟ ಶಾಸಕಿ ಶಕುಂತಲಾ ಶೆಟ್ಟಿ

Pinterest LinkedIn Tumblr

shakuntala-shetty

ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ವೇಳೆ ಶಾಸಕಿ ಶಕುಂತಲಾ ಶೆಟ್ಟಿ ಮುಖ್ಯಮಂತ್ರಿಗಳೆದುರೇ ಕಣ್ಣೀರಿಟ್ಟ ಘಟನೆ ನಡೆದಿದೆ.

ಸಚಿವ ರಮಾನಾಥ ರೈ ತಮ್ಮ ಕ್ಷೇತ್ರದ ಪ್ರತಿಯೊಂದು ವಿಷಯಗಳಲ್ಲೂ ಹಸ್ತಕ್ಷೇಪ ಮಾಡುತ್ತಾರೆಂದು ಮುಖ್ಯಮಂತ್ರಿಗಳ ಎದುರು ತಮ್ಮ ಅಳಲು ತೋಡಿಕೊಂಡ ಶಕುಂತಲಾ ಶೆಟ್ಟಿ ಒಂದು ಹಂತದಲ್ಲಿ ಕಣ್ಣೀರಿಟ್ಟರೆಂದು ತಿಳಿದುಬಂದಿದೆ. ಅವರನ್ನು ಸಮಾಧಾನಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ರಮಾನಾಥ ರೈ ಅವರೊಂದಿಗೆ ಮಾತನಾಡುವುದಾಗಿ ಹೇಳಿದರೆನ್ನಲಾಗಿದೆ.

ಸಭೆಯ ನಂತರ ಹೊರಗೆ ಬಂದ ಶಕುಂತಲಾ ಶೆಟ್ಟಿಯವರನ್ನು ಖುದ್ದು ಸಚಿವ ರಮಾನಾಥ್ ರೈ ಅವರೇ ಸಂತೈಸಿ ಇನ್ನು ಮುಂದೆ ಹಾಗಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು. ಶಾಸಕಾಂಗ ಪಕ್ಷದ ಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ ಶಾಸಕರುಗಳು, ಕಬ್ಬು ಬೆಳೆಗಾರರ ಸಮಸ್ಯೆ ಮುಂದಿಟ್ಟುಕೊಂಡು ಬಿಜೆಪಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ ಎಂದರಲ್ಲದೇ ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಕೊಡಬಾರದು. ಸರ್ಕಾರ ಸಕ್ಕರೆ ಕಾರ್ಖಾನೆ ಮಾಲೀಕರುಗಳ ಲಾಬಿಗೆ ಮಣಿಯಬಾರದೆಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಾವುದೇ ಲಾಬಿಗಳಿಗೆ ಸರ್ಕಾರ ಮಣಿಯುವ ಪ್ರಶ್ನೆಯೇ ಇಲ್ಲ. ಕಬ್ಬು ಬೆಳೆಗಾರರಿಗೆ ಮೊದಲ ಹಂತದ ಬಾಕಿ ಪಾವತಿಸುವುದಾಗಿ ಕಾರ್ಖಾನೆ ಮಾಲೀಕರು ತಿಳಿಸಿದ್ದಾರೆ. ಕಬ್ಬು ಅರೆಯುವ ಕಾರ್ಯ ಆರಂಭಿಸಲಿ ಎಂದು ಸರ್ಕಾರ ಸುಮ್ಮನಿದೆ ಎಂದು ಹೇಳಿದರೆನ್ನಲಾಗಿದೆ.

Write A Comment