
ಕುಂದಾಪುರ: ಕೇಂದ್ರದ ಸೂಚನೆಯಂತೆ ಸೆಟಲೈಟ್ ಮೂಲಕ ಸಮೀಕ್ಷೆ ನಡೆಸಿ ಸಿದ್ಧಪಡಿಸಿದ ಢಾ. ಕಸ್ತೂರಿರಂಗನ್ ನೇತೃತ್ವದ ಸಮಿತಿ ನೀಡಿದ ವರದಿಗೆ ಸಂಬಂಧಿಸಿ ಜಿಲ್ಲಾಡಳಿತ ತೋರಿದ ನಿರ್ಲಕ್ಷ್ಯ ಧೋರಣೆಯಿಂದಾಗಿ ಇಂದು ಅನಗತ್ಯ ಗೊಂದಲವುಂಟಾಗಿದೆ. ಈ ನಿಟ್ಟಿನಲ್ಲಿ ಜನಜಾಗೃತಿಯಾಗುವುದರ ಜೊತೆಗೆ ಸುಪ್ರೀ ಕೋರ್ಟಿನ ಅಂಗಳಕ್ಕೆ ಪ್ರಕರಣ ಹೋಗುವ ಮುಂಚೆಯೇ ಎಚ್ಚೆತ್ತು ಬಾಧಕಗಳ ಬಗ್ಗೆ ಚಿಂತಿಸಬೇಕು ಎಂಬುದಾಗಿ ಜಿಲ್ಲಾ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ವಕೀಲ ಸತ್ಯನಾರಾಯಣ ಉಡುಪ ಹೇಳಿದರು.
ಬುಧವಾರ ಆಲೂರಿನ ಗ್ರಾಮಸ್ಥರು ಹಮ್ಮಿಕೊಂಡ ಪ್ರತಿಭಟನೆಯ ನಂತರ ಆಲೂರು ಗ್ರಾಮ ಪಂಚಾಯಿತಿ ಶ್ರೀ ಮೂಕಾಂಬಿಕ ಸಭಾಭವನದಲ್ಲಿ ಕರೆದ ವಿಶೇಷ ಗ್ರಾಮಸಭೆಯಲ್ಲಿ ಮಾಹಿತಿ ನೀಡುತ್ತಾ ಮಾತನಾಡಿದರು.















ಡಾ.ಕಸ್ತೂರಿ ರಂಗನ್ ವರದಿಯಲ್ಲಿ ರಾಜ್ಯದಲ್ಲಿ ಒಂದು ಲಕ್ಷದ ಅರವತ್ತ ನಾಲ್ಕು ಸಾವಿರ ಚದರ ಕಿ.ಮೀ. ಪ್ರದೇಶವನ್ನು ಅರಣ್ಯ ಪ್ರದೆಶವೆಂದು ಗುರುತಿಸಲಾಗಿದ್ದು, ಅದರಲ್ಲಿ ಅರವತ್ತು ಸಾವಿರ ಚದರ ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲಾಗಿದೆ. ಗಾಡ್ಗೀಳ್ ವರದಿಗೆ ಹೋಲಿಸಿದರೆ ಇದು ಶೇ.30ರಷ್ಟು ಕಡಿಮೆ ಪ್ರದೇಶವಾದರೂ ಕುಂದಾಪುರದ 25 ಗ್ರಾಮಗಳು ಹಾಗೂ ಕಾರ್ಕಳದ 13 ಗ್ರಾಮಗಳು ಪಶ್ಚಿಮ ಘಟ್ಟ ಪ್ರದೇಶಕ್ಕೆ ಸೇರ್ಪಡೆಗೊಳ್ಲಲಿದೆ. ದುರಂತವೆಂದರೆ ಕೇರಳ ರಾಜ್ಯದಲ್ಲಿ 123 ಗ್ರಾಮಗಳನ್ನು ಸೇರಸಿಲ್ಪಟ್ಟಿರೆ ತಕ್ಷಣ ಕಸ್ತೂರಿ ರಂಗನ್ ವರದಿಯನ್ನು ಮಲಯಾಳಕ್ಕೆ ತರ್ಜುಮೆ ಮಾಡಿ ಎಲ್ಲಾ ಗ್ರಾಮಗಳಿಗೆ ಹಂಚಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಅಲ್ಲದೇ ಆಯ್ದ ಗ್ರಾಮಗಳಲ್ಲಿ ಡಾ. ಕಸ್ತೂರಿರಂಗನ್ ಅವರನ್ನೇ ಕರೆಯಿಸಿ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಈ ಬಗ್ಗೆ ಯಾವುದೇ ಸಭೆಗಳನ್ನಾಗಲೀ ಚರ್ಚೆಗಳನ್ನಾಗಲೀ ನಡೆಸಿಲ್ಲ ಎಂದು ಆರೋಪಿಸಿದ ಅವರು, ರಾಜ್ಯ ಸಮಿತಿ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಗೆ ವರದಿ ನೀಡುವಂತೆ ಸೂಚಿಸಲಾಗಿದ್ದರೂ ಯಾವುದೇ ರೀತಿಯ ಸಭೆಗಳನ್ನಾಗಲೀ ಚರ್ಚೆಗಳನ್ನಾಗಲೀ ನಡೆಸದೇ ನಿರ್ಲಕ್ಷ್ಯ ತೋರಿದ ಪರಿಣಾಮ ಇಂದು ರಾಜ್ಯದೆಲ್ಲೆಡೆ 1576 ಗ್ರಾಮಗಳು ಪಶ್ಚಿಮ ಘಟ್ಟ ಪ್ರದೇಶಕ್ಕೆ ಸೇರ್ಪಡೆಗೊಂಡಿದೆ ಎಂದವರು ಹೇಳಿದರು.









ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿಂಗಾರಿ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಸದಸ್ಯ ಹೆಚ್. ಮಂಜಯ್ಯ ಶೆಟ್ಟಿ ಆಲೂರು ಪ್ರಾಸ್ತಾವಿಕ ಭಾಷಣ ಮಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಇಂದಿರಾ ಶೆಟ್ಟಿ, ಗ್ರಾಮ ಪಂಚಾಯಿತಿ ಮಾಜೀ ಅಧ್ಯಕ್ಷ ಕುಶಲ ಶೆಟ್ಟಿ, ಸದಸ್ಯರಾದ ಸುಬ್ಬಣ್ಣ ಶೆಟ್ಟಿ, ಉಪಾಧ್ಯಕ್ಷ ಆನಂದ ಗಾಣಿಗ, ಜಯಶೀಲ ಶೆಟ್ಟಿ, ಚಂದ್ರ ದೇವಾಡಿಗ, ಬಾಬಿ ದೇವಾಡಿಗ, ಶ್ರೀಮತಿ ಪೂಜಾರಿ, ಸಾಕು ಆಚಾರ್ಯ, ಪ್ರಶಾಂತ್ ಕುಲಾಲ್, ಸೂರು, ಗುಲಾಬಿ, ಅಕ್ಕಣ್ಣಿ ಶೆಟ್ಟಿ, ಸ್ಥಳೀಯ ಮುಖಂಡರಾದ ಅಪ್ಪು ಕುಲಾಲ್, ಸುದರ್ಶನ್, ಸಿ.ಡಬ್ಲ್ಯೂ.ಸಿ ಕಾರ್ಯಕರ್ತ ಅರುಣಾಚಲ್ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಶೀಲ ಸ್ವಾಗತಿಸಿದರ್ಕ್ಪುಂಚಾಯಿತಿ ಸಿಬ್ಬಂದಿ ಸಂತೋಷ್ ವಂದಿಸಿದರು.
ಗ್ರಾಮಸಭೆಗೆ ಮುನ್ನ ಆಲೂರಿನ ಹಿರಿಯಣ್ಣ ಶೆಟ್ಟರ ಅಂಗಡಿಯಿಂದ ಹೊರಟ ಸಾವಿರಾರು ಜನರ ಪ್ರತಿಭಟನಾ ಮೆರವಣಿಗೆ ಗ್ರಾಮ ಪಂಚಾಯಿತಿ ಕಚೇರಿ ಸಮೀಪ ಡಾ. ಕಸ್ತೂರಿರಂಗನ್ ವರದಿ ಸುಟ್ಟು ಪ್ರತಿಭಟನೆ ನಡೆಸಿತು.