ಕರ್ನಾಟಕ

ಪ್ರಿಯಾಂಕಾ ಎದೆ ಭಾಗ ಝೂಮ್ ಮಾಡಿ ನೋಡಿದ ಬೀದರ್ ಜಿಲ್ಲೆ ಔರಾದ್ ಕ್ಷೇತ್ರದ ಬಿಜೆಪಿ ಶಾಸಕ

Pinterest LinkedIn Tumblr

prabhu-chouhan

ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸದನದಲ್ಲಿ ರೈತರ ಸಮಸ್ಯೆ ಕುರಿತು ಗಂಭೀರ ಚರ್ಚೆ ನಡೆಯುತ್ತಿರುವ ವೇಳೆ ಬಿಜೆಪಿ ಶಾಸಕನೊಬ್ಬ ತನ್ನ ಮೊಬೈಲಿನಲ್ಲಿದ್ದ ಪ್ರಿಯಾಂಕಾ ಗಾಂಧಿ ಭಾವಚಿತ್ರದ ಎದೆ ಭಾಗ ಝೂಮ್ ಮಾಡಿ ನೋಡಿದ ಅಸಹ್ಯಕರ ದೃಶ್ಯ ಕಂಡು ಬಂದಿದೆ.

ಬೀದರ್ ಜಿಲ್ಲೆ ಔರಾದ್ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚೌಹಾಣ್ ಅವರೇ ಇಂತಹ ಅಸಹ್ಯಕರ ವರ್ತನೆ ತೋರಿದವರಾಗಿದ್ದು ಮಾಧ್ಯಮ ಗ್ಯಾಲರಿಯಲ್ಲಿದ್ದ ವಿಡಿಯೋ ಪತ್ರಕರ್ತರ ಕ್ಯಾಮರಾದಲ್ಲಿ ಈ ಅಸಹ್ಯಕರ ದೃಶ್ಯಗಳು ಸೆರೆಯಾಗಿವೆ.

ಸದನದಲ್ಲಿ ರೈತರ ಸಮಸ್ಯೆ ಕುರಿತು ಗಂಭೀರ ಚರ್ಚೆ ನಡೆಯುತ್ತಿದ್ದರೆ ಶಾಸಕ ಪ್ರಭು ಚೌಹಾಣ್ ಮಾತ್ರ ತನಗೂ ಅದಕ್ಕೂ ಸಂಬಂಧವೇ ಇಲ್ಲವೇನೋ ಎಂಬಂತೆ, ತಮ್ಮ ಮೊಬೈಲಿನಲ್ಲಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರ ಚಿತ್ರಗಳನ್ನು ತೆರೆದರು. ನಂತರ ಅವರ ಎದೆ ಭಾಗವನ್ನು ಝೂಮ್ ಮಾಡಿ ನೋಡುತ್ತಿದ್ದು ಈ ದೃಶ್ಯಗಳೆಲ್ಲ ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಯ್ತು. ಈ ಫೋಟೊವನ್ನು ಅವರ ಪಕ್ಕದಲ್ಲೇ ಕುಳಿತಿದ್ದ ಮತ್ತೊಬ್ಬ ಶಾಸಕ ರವಿ ಸುಬ್ರಮಣ್ಯ ಅವರೂ ಇಣುಕಿ ನೋಡಿದ್ದೂ ಕಂಡು ಬಂತು.

ಈ ಹಿಂದೆ ಸದನದಲ್ಲಿ ಬ್ಲೂ ಫಿಲಂ ವೀಕ್ಷಿಸಿದ್ದ ಬಿಜೆಪಿ ಸಚಿವರುಗಳು ರಾಜೀನಾಮೆ ನೀಡಿ ಮನೆಗೆ ಹೋಗಿದ್ದ ಘಟನಾವಳಿಗಳ ಮಧ್ಯೆ ಇಂದೂ ಅಂತಹುದ್ದೇ ಘಟನೆ ನಡೆದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಕ್ಷಮೆ ಯಾಚಿಸಿದ ಶಾಸಕ ಪ್ರಭು ಚೌಹಾಣ್

ಬೆಳಗಾವಿ: ಸದನ ನಡೆಯುತ್ತಿದ್ದ ವೇಳೆ ಮೊಬೈಲ್ ವೀಕ್ಷಿಸಿದ್ದಕ್ಕೆ ಕ್ಷಮೆ ಯಾಚಿಸಿರುವ ಬೀದರ್ ಜಿಲ್ಲೆ ಔರಾದ್ ಕ್ಷೇತ್ರದ ಶಾಸಕ ಪ್ರಭು ಚೌಹಾಣ್, ತಮಗೆ ಒಂದು ಮೆಸೇಜ್ ಬಂದಿತ್ತು. ಅದನ್ನು ನೋಡುತ್ತಿದ್ದೇನೆ ಹೊರತು ಯಾವುದೇ ಭಾವಚಿತ್ರಗಳನ್ನು ಅಸಹ್ಯಕರ ರೀತಿಯಲ್ಲಿ ನೋಡಿಲ್ಲವೆಂದು ಹೇಳಿದ್ದಾರೆ.

ಬೆಳಗಾವಿಯ ಸುವರ್ಣ ಸೌಧದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಶಾಸಕ ಪ್ರಭು ಚೌಹಾಣ್, ತಾವು ನರೇಂದ್ರ ಮೋದಿಯವರ ಭಾವಚಿತ್ರ ನೋಡಿದ್ದೆಂದು ಪ್ರತಿಪಾದಿಸಲು ನೋಡಿದರೂ ದೃಶ್ಯ ಮಾಧ್ಯಮಗಳಲ್ಲಿ ಇವರು ಯಾವ ಚಿತ್ರವನ್ನು, ಯಾವ ರೀತಿ ನೋಡುತ್ತಿದ್ದರೆಂಬುದು ಈಗಾಗಲೇ ಬಿತ್ತರವಾಗಿದ್ದ ಹಿನ್ನೆಲೆಯಲ್ಲಿ ಉತ್ತರಕ್ಕಾಗಿ ತಡಬಡಾಯಿಸಿದರು.

ಮೊಬೈಲಿನಲ್ಲಿ ತಮಗೆ ಬಂದಿದ್ದ ಸಂದೇಶವನ್ನು ತೋರಿಸುವುದಾಗಿ ಪತ್ರಕರ್ತರಿಗೆ ಪ್ರಭು ಚೌಹಾಣ್ ಹೇಳಿದರಾದರೂ ಅದನ್ನು ತೋರಿಸಲು ವಿಫಲರಾಗಿ ಅಲ್ಲಿಂದ ತರಾತುರಿಯಲ್ಲಿ ತೆರಳಿದರು.

ಶಾಸಕ ರವಿ ಸುಬ್ರಮಣ್ಯ ಸ್ಪಷ್ಟನೆ

ಪ್ರಭು ಚೌಹಾಣ್ ತಮ್ಮ ಮೊಬೈಲಿನಲ್ಲಿ ಭಾವ ಚಿತ್ರ ವೀಕ್ಷಿಸುತ್ತಿದ್ದ ವೇಳೆ ತಾವೂ ಅವರೊಂದಿಗೆ ಭಾಗಿಯಾಗಿದ್ದಾಗಿ ಕೇಳಿ ಬಂದ ಸುದ್ದಿಗೆ ಸ್ಪಷ್ಟನೆ ನೀಡಿರುವ ಶಾಸಕ ರವಿ ಸುಬ್ರಮಣ್ಯ, ಪ್ರಭು ಚೌಹಾಣ್ ತಮ್ಮ ಮಕ್ಕಳ ಫೋಟೋ ತೋರಿಸುತ್ತಿದ್ದರು. ಅದನ್ನು ನೋಡಿದ ನಂತರ ನಾನು ಸದನದ ಕಾರ್ಯ ಕಲಾಪದೆಡೆಗೆ ಗಮನ ಹರಿಸಿದೆ. ಈ ಘಟನೆಗೂ ತಮಗೂ ಯಾವುದೇ ಸಂಬಂಧವಿಲ್ಲವೆಂದು ತಿಳಿಸಿದ್ದಾರೆ.

Write A Comment