ಮಂಗಳೂರು, ನ.7: ಸಮಾಜಕ್ಕೆ ವಿಮರ್ಶೆಯ ಅಗತ್ಯ ಇದೆ. ಪ್ರಶ್ನಿಸುವ ಮನೋಭಾವ ರೂಢಿಸಿಕೊಂಡರೆ ಮಾತ್ರ ಪ್ರಭಾವಿತರೆನಿಸುವವರು ನಿಯಂತ್ರಣಕ್ಕೆ ಬರುತ್ತಾರೆ ದುರದೃಷ್ಟವಶಾತ್ ಇಂದು ಸಾಂಸ್ಕೃತಿಕ ಲೋಕದಲ್ಲೂ ವಿಮರ್ಶಾಗುಣ ಕಾಣೆಯಾಗಿದೆ ಎಂದು ಕನ್ನಡ ಸಾಹಿತ್ಯ ವಿಮರ್ಶಕ ಡಾ.ಎನ್.ಬಾಲಸುಬ್ರಹ್ಮಣ್ಯ ಅಭಿಪ್ರಾಯ ಪಟ್ಟಿದ್ದಾರೆ.
ಕೊಡಿಯಾಲ್‌ಬೈಲ್‌ನಲ್ಲಿರುವ ಟಿ.ವಿ.ರಮಣ ಪೈ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಕೊಂಕಣಿ ಭಾಷಾ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಪ್ರಸಕ್ತ ಸಾಲಿನ ವಿಶ್ವ ಕೊಂಕಣಿ ಪುರಸ್ಕಾರ ಪ್ರಧಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕೊಂಕಣಿ ಕಲೆ ಸಾಹಿತ್ಯ ಮತ್ತು ಭಾಷೆಗೆ ನೀಡಿದ ಕೊಡುಗೆಗಾಗಿ ಫಾ. ಮಾರ್ಕ್ ವಾಲ್ಡರ್‌ರಿಗೆ ವಿಮಲಾ ಪೈ ವಿಶ್ವ ಕೊಂಕಣಿ ಜೀವನ್ ಸಿದ್ದಿ ಸಮ್ಮಾನ್, ಕಾಳೆ ಬಂಗಾರ್ ಕಾದಂಬರಿಗಾಗಿ ಎಡ್ವಿನ್ ಜೆ.ಎಫ್ ಡಿಸೋಜಾರಿಗೆ ವಿಮಲಾ ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರ, ಅಸ್ವಸ್ಥ ಸೂರ್ಯ ಕವನ ಸಂಕಲನಕ್ಕಾಗಿ ಸಂಜೀವ್ ವೆರೇಕರ್‌ರಿಗೆ ವಿಮಲಾ ಪೈ ವಿಶ್ವ ಕೊಂಕಣಿ ಕವಿತಾ ಕೃತಿ ಪುರಸ್ಕಾರ ಪ್ರದಾನ ಮಾಡಲಾಯಿತು.
ಬಸ್ತಿ ವಾಮನ್ ಶೆಣೈಯವರ ಹೆಸರಿನಲ್ಲಿ ನೀಡಲಾಗುವ ವಿಶ್ವ ಕೊಂಕಣಿ ಸೇವೆ ಪುರಸ್ಕಾರವನ್ನು ಕೊಂಕಣಿ ವಿದ್ವಾಂಸ ಮಂಡರ್ಕೆ ಮಾಧವ ಪೈ ಹಾಗೂ ಬಿಜಾಪುರ ಮಹಿಳಾ ವಿಶ್ವ ವಿದ್ಯಾನಿಲಯದ ಉಪಕುಲಪತಿ ಡಾ. ಮೀನಾ ಚಂದಾವರ್‌ಕರ್‌ರಿಗೆ ಪ್ರದಾನ ಮಾಡಲಾಯಿತು. ವಸಂತಿ ಆರ್ ಪೈ, ವಿಮಲಾ ವಿ. ಪೈ, ಪಯ್ಯನೂರ ರಮೇಶ್ ಪೈ, ಪೂಜಾ ಭಟ್ ಉಪಸ್ಥಿತರಿದ್ದರು.