ಕರಾವಳಿ

ಫೇಸ್‌ಬುಕ್‌ ಲವ್ ‌: ಅಪ್ರಾಪ್ತ ವಿದ್ಯಾರ್ಥಿನಿಯನ್ನು ಅಪಹರಿಸಿದ ಕೇರಳದ ಯುವಕನ ಸೆರೆ

Pinterest LinkedIn Tumblr

Jerry_Francis_arrest

ಮಂಗಳೂರು : ಫೇಸ್‌ಬುಕ್‌ ಮೂಲಕ ಪರಿಚಯವಾದ ಮಂಗಳೂರಿನ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ಕೇರಳದ ಆಲಪ್ಪುಯ ಜಿಲ್ಲೆಯ ಅಂಬಲಪುರ ತಾಲೂಕಿನ ಜೆರಿ ಫ್ರಾನ್ಸಿಸ್‌ (18) ಎಂಬತಾ ಅಪಹರಿಸಿದ್ದು, ಇದೀಗ ಆರೋಪಿಯನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಕಾಲೇಜು ಒಂದರಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ 16 ವರ್ಷ ಪ್ರಾಯದ ಹಾವೇರಿ ಮೂಲದ ವಿದ್ಯಾರ್ಥಿನಿ ಅ. 23ರಂದು ಆರೋಪಿ ಜೆರಿ ಫ್ರಾನ್ಸಿಸ್‌ ಜೊತೆ ತೆರಳಿದ್ದು, ವಿದ್ಯಾರ್ಥಿನಿಯ ಹೆತ್ತವರು ಯುವಕನ ವಿರುದ್ಧ ಅಪಹರಣ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕೇರಳಕ್ಕೆ ತೆರಳಿ ಆತನನ್ನು ಮತ್ತು ವಿದ್ಯಾರ್ಥಿನಿಯನ್ನು ಪತ್ತೆ ಹಚ್ಚಿ ಮಂಗಳೂರಿಗೆ ಕರೆ ತಂದಿದ್ದಾರೆ. ಪೊಲೀಸರು ಇಬ್ಬರ ಫೋನ್‌ ಕರೆಗಳ ಜಾಡು ಹಿಡಿದು, ಕಾರ್ಯಾಚರಣೆ ನಡೆಸಿ ಅ. 29 ರಂದು ಬಂಧಿಸಿದರು.

ಆರೋಪಿಯನ್ನು ಅ. 29 ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಫೇಸ್‌ ಬುಕ್‌ ಮೂಲಕ ವಿದ್ಯಾರ್ಥಿನಿ ಮತ್ತು ಆರೋಪಿಗೆ ಪರಸ್ಪರ ಪರಿಚಯವಾಗಿತ್ತು. ಈ ಪರಿಚಯ ಸ್ನೇಹವಾಗಿ ಬೆಳೆದು ಪ್ರೀತಿ- ಪ್ರೇಮಕ್ಕೆ ತಿರುಗಿದ್ದು, ವೈಯಕ್ತಿಕ ಭೇಟಿ ಹಾಗೂ ಅಂತಿಮವಾಗಿ ಇಬ್ಬರೂ ಊರು ಬಿಟ್ಟು ಹೋಗುವ ಹಂತಕ್ಕೆ ತಲುಪಿತ್ತು.

ಆರೋಪಿ ಜೆರಿ ಫ್ರಾನ್ಸಿಸ್‌ ಎಸ್‌.ಎಸ್‌.ಎಲ್‌.ಸಿ. ಫೇಲ್‌ ಆಗಿದ್ದು, ವೆಲ್ಡಿಂಗ್‌ ಕೆಲಸ ಮಾಡುತ್ತಿದ್ದನು. ಹಾಗೆ ಆತ ಎಸ್‌.ಎಸ್‌. ಎಲ್‌.ಸಿ. ಪರೀಕ್ಷೆಯಲ್ಲಿ ಫೇಲ್‌ ಆಗಿದ್ದರೂ ಪ್ರೇಮ ಪರೀಕ್ಷೆಯಲ್ಲಿ ಪಾಸಾಗಿದ್ದು, ವಿದ್ಯಾರ್ಥಿನಿಯನ್ನು ಅಪಹರಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದನು. ಆದರೆ ಆತನ ಊರಿನಲ್ಲಿ ಮನೆ ಮಂದಿ ಆತನನ್ನು ತಡೆದು ವಿದ್ಯಾರ್ಥಿನಿಯನ್ನು ಮನೆಯೊಳಗೆ ಸೇರಿಸದಂತೆ ಬುದ್ದಿವಾದ ಹೇಳಿದ್ದರು ಎನ್ನಲಾಗಿದೆ.

ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೇನಾದರೂ ನಡೆದಿದೆಯೇ ಎನುವುದನ್ನು ಖಚಿತಪಡಿಸಿಕೊಳ್ಳಲು ವಿದ್ಯಾರ್ಥಿನಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Write A Comment