ಕರಾವಳಿ

ಆಹಾರ ಅರಸಿ ಬಂದು ಬಲೆಗೆ ಬಿದ್ದ ಚಿರತೆ | ಸಿದ್ದಾಪುರದ ಐರಬೈಲು ಎಂಬಲ್ಲಿ ಘಟನೆ

Pinterest LinkedIn Tumblr

ಕುಂದಾಪುರ : ಆಹಾರ ಅರಸಿ ಬಂದ ಚಿರತೆಯೊಂದು ಸಿದ್ದಾಪುರ ಗ್ರಾಮದ ಐರಬೈಲು ಹತ್ತಿರ ಬೇಲಿಗೆ ಅಳವಡಿಸಿದ್ದ ಬಲೆಯಲ್ಲಿ ಬಂದಿಯಾದ ಘಟನೆ ಬುಧವಾರ ಸಂಭವಿಸಿದೆ.

siddapura_cheeta_protect (1) siddapura_cheeta_protect

ಜಿಂಕೆ, ಕಾಡುಹಂದಿ ಇತ್ಯಾದಿ ಪ್ರಾಣಿಗಳಿಂದ ಬೆಳೆಯನ್ನು ರಕ್ಷಿಸಲು ಇಲ್ಲಿನ ರೈತರು ಬೇಲಿಯ ಹೊರಭಾಗಕ್ಕೆ ಬಲೆಯನ್ನು ಅಳವಡಿಸುತ್ತಿದ್ದು, ಚಿರತೆಯ ಕಾಲು ಈ ಬಲೆಯೊಳಗೆ ಸಿಲುಕಿಕೊಂಡಿತ್ತು. ರಾಜ್ಯ ಹೆದ್ದಾರಿಗೆ ತಾಗಿಕೊಂಡಿರುವ ಗದ್ದೆಯ ಬೇಲಿಗೆ ಮಂಗಳವಾರ ರಾತ್ರಿ ಅಥವಾ ಬುಧವಾರ ಬೆಳಗಿನ ಜಾವ ಈ ಚಿರತೆ ಸಿಲುಕಿಕೊಂಡಿದ್ದರೂ ಬುಧವಾರ ಮಧ್ಯಾಹ್ನದ ವೇಳೆಗೆ ಸಾರ್ವಜನಿಕರ ಗಮನಕ್ಕೆ ಬಂದಿದೆ. ತತ್‌ಕ್ಷಣ ಅರಣ್ಯ ಇಲಾಖೆಗೆ ತಿಳಿಸಲಾಗಿದ್ದು, ಅಪರಾಹ್ನ 4.30ರ ವೇಳೆಗೆ ಅರಣ್ಯಾಧಿಕಾರಿಗಳು ಚಿರತೆಯನ್ನು ಬಲೆಯಿಂದ ಬಿಡಿಸಿ ಚಿಕಿತ್ಸೆ ನೀಡಿದ್ದಾರೆ. ಚಿರತೆಯ ಆರೋಗ್ಯ ಉತ್ತಮವಾಗಿದೆ.

ಚಿರತೆಯನ್ನು ಶಂಕರನಾರಾಯಣ ವಲಯಾರಣ್ಯಾಧಿಕಾರಿ ಅವರ ಕಚೇರಿಯಲ್ಲಿ ಇಡಲಾಗಿದ್ದು, ಹಿರಿಯ ಅಧಿಕಾರಿಗಳ ಹಾಗೂ ವೈದ್ಯಾಧಿಕಾರಿಗಳ ಮಾರ್ಗದರ್ಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಶಂಕರನಾರಾಯಣ ವಲಯಾರಣ್ಯಾಧಿಧಿಕಾರಿ ಬ್ರಿಜೇಶ್‌ ವಿನಯ್‌ ಕುಮಾರ್‌  ತಿಳಿಸಿದ್ದಾರೆ.

ಸುಮಾರು 6 ವರ್ಷ ಪ್ರಾಯದ ಹೆಣ್ಣು ಚಿರತೆ ಇದಾಗಿದ್ದು, ಆಹಾರವನ್ನು ಹುಡುಕಿಕೊಂಡು ಸೂರಾಲು ಕಾಡಿನಿಂದ ಬಂದಿರಬಹುದೆಂದು ಶಂಕಿಸಲಾಗಿದೆ.

ಕಾರ್ಯಾಚರಣೆಯಲ್ಲಿ  ಶಂಕರನಾರಾಯಣ ಉಪ ವಲಯಾರಣ್ಯಾಧಿಕಾರಿ ನರಸಿಂಗ ಆರ್‌. ಕಾಂಬಳೆ, ಶಂಕರನಾರಾಯಣ ಅರಣ್ಯ ರಕ್ಷಕರಾದ ಆನಂದ ಬಳೆಗಾರ, ಬಾಳ್ಕಟ್ಟು ಶ್ರೀಕಾಂತ, ಹೆನ್ನಾಬೈಲು ಮಂಜುನಾಥ, ಸಿದ್ದಾಪುರದ ಗುರುರಾಜ, ಹೆನ್ನಾಬೈಲು ಅರಣ್ಯ ವೀಕ್ಷಕರಾದ ಕೃಷ್ಣಮೂರ್ತಿ, ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷ ಯು. ಸುಧಾಕರ ಶೆಟ್ಟಿ, ಕಾರ್ಯದರ್ಶಿ ಶ್ರೀಧರ ಕಾಮತ್‌, ಸದಸ್ಯ ರಾಮ ಪೂಜಾರಿ, ನಿವೃತ್ತ ಅಧ್ಯಾಪಕ ರಾಜೀವ ಶೆಟ್ಟಿ, ಸ್ಥಳೀಯರು ಮತ್ತು ಮುಂತಾದವರು ಉಪಸ್ಥಿತರಿದರು.

Write A Comment