ಕರಾವಳಿ

ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಭೆ : ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ‘ಡೀಮ್ಡ್ ಫಾರೆಸ್ಟ್’ನ ಜಂಟಿ ಸರ್ವೇಗೆ ಸಚಿವ ರೈ ಸೂಚನೆ

Pinterest LinkedIn Tumblr

dc_offi_ce_1

ಮಂಗಳೂರು, ಅ.26: ಕಂದಾಯ ಮತ್ತು ಅರಣ್ಯ ಇಲಾಖೆಯು ಜಂಟಿಯಾಗಿ ಸಂರಕ್ಷಿತ ಅರಣ್ಯ (ಡೀಮ್ಡ್ ಫಾರೆಸ್ಟ್)ದ ಸರ್ವೇ ಮಾಡಿ ಶೀಘ್ರ ವರದಿ ಒಪ್ಪಿಸುವಂತೆ ಅಧಿಕಾರಿಗಳಿಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸೂಚಿಸಿದರು.

ದ.ಕ.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಡೀಮ್ಡ್ ಫಾರೆಸ್ಟ್ ಸಮಸ್ಯೆ, ಜನತಾ ದರ್ಶನ ಸಿದ್ಧತೆ, ಸ್ವಚ್ಛತಾ ಅಭಿಯಾನ, ಕಂದಾಯ ಅದಾಲತ್ ಮತ್ತಿತರ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

dc_offi_ce_2

ಡೀಮ್ಡ್ ಾರೆಸ್ಟ್ ಕುರಿತ ವಿವಾದ ಪರಿಹರಿಸಿಕೊಂಡು ಶೀಘ್ರ ವರದಿ ಸಲ್ಲಿಸಬೇಕು. ಆರು ತಿಂಗಳಲ್ಲಿ ಸಂಪುಟದಲ್ಲಿ ಮಂಡಿಸಿ ಸುಪ್ರೀಂ ಕೋರ್ಟ್‌ಗೆ ಅಫಿದಾವಿತ್ ಸಲ್ಲಿಸಬೇಕಿದೆ. ಹಾಗಾಗಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು. ಜಿಲ್ಲಾಧಿಕಾರಿ ಜತೆ ವಾರದಲ್ಲೊಂದು ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಳ್ಳಬೇಕು ಎಂದು ಸಚಿವ ರೈ ಸೂಚಿಸಿದರು.

dc_offi_ce_3

ಸರಕಾರಿ ಯೋಜನೆಗೆ ಸಂಬಂಧಿಸಿ ಜಮೀನು ಮೀಸಲಿಡುವ ಸಂದರ್ಭ ಜಿಲ್ಲೆಯ ಹಲವು ಕಡೆ ‘ಡೀಮ್ಡ್ ಫಾರೆಸ್ಟ್’ನ ತೊಡಕು ಉಂಟಾಗುತ್ತಿದೆ. ಇದರಿಂದ ಬಹುತೇಕ ಅಭಿವೃದ್ಧಿ ಯೋಜನೆಗಳಿಗೆ ತೊಡಕುಂಟಾಗುತ್ತದೆ. ಈ ನಿಟ್ಟಿನಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಯು ಜತೆಗೂಡಿ ಕೆಲಸ ಮಾಡಬೇಕು. ಕಂದಾಯ ಇಲಾಖೆಯ ಸಹಕಾರ ಪಡೆದು ಅರಣ್ಯ ಇಲಾಖೆಯು ಜಂಟಿ ಸರ್ವೇ ಅನಿವಾರ್ಯ. ಭವಿಷ್ಯದಲ್ಲಿ ‘ಡೀಮ್ಡ್ ಫಾರೆಸ್ಟ್’ ಭೂಮಿಯ ತೊಡಕುಂಟಾಗಬಾರದು ಎಂದು ಸಚಿವರು ನುಡಿದರು.

dc_offi_ce_4

ಸಂರಕ್ಷಿತ ಅರಣ್ಯ ಭೂಮಿ ಬಗ್ಗೆ ಸಾಕಷ್ಟು ಗೊಂದಲವಿದೆ. ಕಾಟಿಪಳ್ಳದ ಪ್ರದೇಶವೊಂದರಲ್ಲಿ ಮನೆಗಳಿದ್ದರೂ ದಾಖಲೆಗಳಲ್ಲಿ ಅದು ಅರಣ್ಯ ಭೂಮಿ ಎಂದು ನಮೂದಾಗಿದೆ. ಈ ಗೊಂದಲವನ್ನು ನಿವಾರಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದರು.

ಡೀಮ್ಡ್ ಫಾರೆಸ್ಟ್ ಬಗ್ಗೆ ಜಿಲ್ಲಾಧಿಕಾರಿ ಮತ್ತು ಉಪವಿಭಾಗ ಮಟ್ಟದ ಸಮಿತಿ ಇದೆ. ಅರಣ್ಯ ಭೂಮಿಯ ಗಡಿ ಗುರುತು ಹಚ್ಚಲು ತಂಡ ರಚಿಸಲಾಗಿದೆ. ಒಂದುವರೆ ತಿಂಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಡಿಎಫ್‌ಒ ಹನುಮಂತಪ್ಪ ಹೇಳಿದರು.

dc_offi_ce_5

ಸಭೆಯಲ್ಲಿ ಜಿ.ಪಂ. ಸಿಇಒ ತುಳಸಿಮದ್ದಿನೇನಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಹೆಚ್ಚುವರಿ ಎಸ್ಪಿ ಶಿವಕುಮಾರ್ ಉಪಸ್ಥಿತರಿದ್ದರು.

50 ಲಕ್ಷ ರೂ.ಬಿಡುಗಡೆ: ಡಿ.21ರಿಂದ ಜ.30ರೊಳಗೆ ಕರಾವಳಿ ಉತ್ಸವ ನಡೆಸಲು ನಿರ್ಧರಿಸಲಾಗಿದ್ದು, ರಾಜ್ಯ ಸರಕಾರವು 50 ಲಕ್ಷ ರೂ. ಬಿಡುಗಡೆ ಮಾಡಿದೆ ಎಂದು ಸಚಿವ ರಮಾನಾಥ ರೈ ತಿಳಿಸಿದರು.

dc_offi_ce_6

ಜನತಾ ದರ್ಶನಕ್ಕೆ ಬಂದ ಎಲ್ಲ ಅರ್ಜಿಗಳನ್ನು ಸಕಾಲಕ್ಕೆ ಇತ್ಯರ್ಥಪಡಿಸಬೇಕು. ಯಾವ ಅರ್ಜಿಗಳನ್ನು ವಿನಾಕಾರಣ ತಡೆಹಿಡಿಯಬಾರದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭರತ್ ಲಾಲ್ ಮೀನಾ ಸೂಚಿಸಿದರು.

ಕಂದಾಯ ಅದಾಲತ್: ತಿಂಗಳಲ್ಲಿ ಕನಿಷ್ಠ 4 ಅದಾಲತ್‌ಗಳನ್ನು ನಡೆಸಲು ಕಂದಾಯ ಸಚಿವರು ನಿರ್ದೇಶಿಸಿದ್ದರೂ ಜಿಲ್ಲೆಯಲ್ಲಿ ಕಂದಾಯ ಅದಾಲತ್ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಮಾಹಿತಿಯ ಕೊರತೆಯಿಂದಲೋ ಜನರು ಅದಾಲತ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಈ ನಿಟ್ಟಿನಲ್ಲಿ ತಹಶೀಲ್ದಾರರು ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಸೂಚಿಸಿದರು.

dc_offi_ce_7

ಜನತಾ ದರ್ಶನ: ಅ.29ರಂದು ಬೆಳ್ತಂಗಡಿಯಲ್ಲಿ ಜನತಾ ದರ್ಶನ ನಡೆಸಲು ನಿರ್ಧರಿಸಲಾಗಿದೆ. ಸಹಾಯಕ ಆಯುಕ್ತರು ನೋಡಲ್ ಅಧಿಕಾರಿ ಯಾಗಿ ಮತ್ತು ತಾ.ಪಂ.ಇಒಗಳು ಸಹಾಯಕ ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಇದರಲ್ಲಿ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳ ಸಹಿತ ಜಿಲ್ಲಾ ಮಟ್ಟದ 12 ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಪ್ರತಿಯೊಂದು ಗ್ರಾಮ ದಲ್ಲೂ ಮನೆ ಹಾಗೂ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ನಿವೇಶನ ಕಾಯ್ದಿರಿಸಬೇಕು. ಅದಲ್ಲದೆ ಘನತ್ಯಾಜ್ಯ ವಿಲೇವಾರಿಗೂ ಜಮೀನು ಗುರುತಿಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದರು.

dc_offi_ce_8

ದ.ಕ. ಜಿಲ್ಲೆಯಲ್ಲಿ ಸೆ.25ರಿಂದ ಅ.2ರ ವರೆಗೆ ಸ್ವಚ್ಛ ಭಾರತ ಸಪ್ತಾಹ ಯಶಸ್ವಿಯಾಗಿ ನಡೆದಿದೆ. ಅ.2ರಿಂದ ಸ್ವಚ್ಛ ಭಾರತ ಮಿಷನ್ ನಡೆಸಲಾಗುತ್ತಿದ್ದು, ಅ.31ರವರೆಗೆ ಇದು ಮುಂದುವರಿಯಲಿದೆ ಎಂದು ನಗರ ಯೋಜನಾಭಿವೃದ್ಧಿ ಕೋಶದ ಅಧಿಕಾರಿ ತಾಕತ್‌ರಾವ್ ತಿಳಿಸಿದರು.

ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯಂತೆ 3.16 ಲಕ್ಷ ಮಂದಿಗೆ ವಿಮೆ ಮಾಡಿಸುವ ಗುರಿ ಹಾಕಲಾಗಿದೆ. ಪ್ರಸಕ್ತ ಸಾಲಿನ ಯೋಜನೆಗೆ ನ.3ರಂದು ಚಾಲನೆ ಸಿಗಲಿದ್ದು,16 ಬಗೆಯ ನಾನಾ ಕಾಯಿಲೆಗಳಿಗೆ ವಾರ್ಷಿಕ 30 ಸಾವಿರ ರೂ. ಆರೋಗ್ಯ ವಿಮೆ ನೀಡುವ ಯೋಜನೆ ಇದಾಗಿದೆ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿ ನಾಗೇಶ್ ಹೇಳಿದರು. ಜನಧನ್ ಯೋಜನೆಯಡಿ 4.39 ಲಕ್ಷಗಳ ಪೈಕಿ 4.36 ಲಕ್ಷ ಬ್ಯಾಂಕ್ ಖಾತೆ ತೆರೆಯಲಾಗಿದೆ. 3300 ಖಾತೆ ತೆರೆಯಲು ಮಾತ್ರ ಬಾಕಿ ಇದೆ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಮ್ಯಾನೇಜರ್ ಅಮರನಾಥ ಹೆಗ್ಡೆ ತಿಳಿಸಿದರು.

Write A Comment